Saturday, September 13, 2014

ಮನೋವರ್ಣಮಯ - ಕಪ್ಪು ಬಿಳುಪು.. ! (1969)

ಕೆಲವು ಚಿತ್ರಗಳು ವರ್ಣಮಯ ಅಲ್ಲದೆ ಹೋದರು ಮನಸಲ್ಲಿ ಹಲವಾರು ಬಣ್ಣಗಳನ್ನು ಹುಟ್ಟು ಹಾಕುತ್ತದೆ. ಯೋಚಿಸುವುದೊಂದು ಆಗುವುದೊಂದು ಎನ್ನುವ ಮಾತು ಹೌದೆ ಆದರೂ.. ವಿಧಿ ವಿಪರೀತವಾಗಿ ಅಂದುಕೊಂಡದ್ದು ತಲೆಕೆಳಕು ಮಾಡಿಕೊಂಡು ವಿಕ್ರಮನ ಹೆಗಲ ಮೇಲೆ ಏರಿದ ಬೇತಾಳನಾಗಿ ಜೀವನದ ಉದ್ದಕ್ಕೂ ಕಾಡುತ್ತದೆ.. 

ಪುಟ್ಟಣ್ಣ ಕಣಗಾಲ್ ಒಂದು ವಿಭಿನ್ನ ದೃಶ್ಯಕಾವ್ಯವನ್ನು ೧೯೬೯ ರಲ್ಲಿ ಬಿಡುಗಡೆ ಕಂಡ ಕಪ್ಪು ಬಿಳುಪು ಚಿತ್ರದಲ್ಲಿ ಕೊಟ್ಟಿದ್ದಾರೆ. ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರ ಅದೇ ಹೆಸರಿನ ಕಾದಂಬರಿಯನ್ನು ಪರಿಣಾಮಕಾರಿ ಚಿತ್ರವಾಗಿ ಮೂಡಿಸಿದ್ದಾರೆ. 
ರವಿಕುಮಾರ್ ಮೂವೀಸ್ ಲಾಂಛನದಲ್ಲಿ ಒದಗಿಬಂದ ಈ ಚಿತ್ರದಲ್ಲಿ ಕಲ್ಪನಾ ಎರಡು ಪಾತ್ರದಲ್ಲಿ ಕಾಡುವುದು ವಿಶೇಷ. ಒಂದಕ್ಕೊಂದು ವಿಭಿನ್ನ ಪಾತ್ರ..


ಒಂದು ಪಾತ್ರ ನಾವೆಲ್ಲರೂ ಹಲವಾರು ಚಿತ್ರಗಳಲ್ಲಿ ನೋಡಿದ ಸೌಮ್ಯ ಮೂರ್ತಿ ಪಾತ್ರವಾದರೆ.. ಇನ್ನೊಂದು ಅದಕ್ಕೆ ತೀರ ವಿರುದ್ಧ ಗಡಸುಮಾತು.. ವಿಶಿಷ್ಟ ಅಂಗೀಕ ಅಭಿನಯ, ವಸ್ತ್ರ ವಿನ್ಯಾಸ ಹದವಾಗಿ ಅಭಿನಯಿಸಿದ್ದಾರೆ. ಕಲ್ಪನಾ ಅಭಿನಯ ಎರಡೂ (ಚಂದ್ರ ಮತ್ತು ವತ್ಸಲ) ಪಾತ್ರಗಳಲ್ಲೂ ಮಿಂಚಿದ್ದರೂ ಕಾಡುವುದು ವತ್ಸಲ ಪಾತ್ರವೇ. 

ಈ ಚಿತ್ರದಲ್ಲಿ ಅವರ ಎಲ್ಲಾ ಚಿತ್ರಗಳಂತೆ ಸಂಭಾಷಣೆಗೆ ಯಾವಾಗಲು ಮಿಂಚು ಹರಿಸುತ್ತದೆ. ಅವರ ಪ್ರೀತಿಯ ಅರ್ ಎನ್ ಜಯಗೋಪಾಲ್ ಸಂಭಾಷಣೆ ಮತ್ತು ಹಾಡುಗಳು ಎರಡರ ಜವಾಬ್ಧಾರಿ ಹೊತ್ತು ಸಾಗಿದ್ದಾರೆ. ಅವರು ಬರೆದ ಹಾಡುಗಳಿಗೆ ಜೀವ ತುಂಬಲು ಪಿ ಬಿ ಎಸ್. ಪಿ ಸುಶೀಲ ಎಲ್ ಆರ್ ಈಶ್ವರಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ಕಾಮನಬಿಲ್ಲಿನಂತ ಸಂಗೀತ ಒದಗಿಸಿದ್ದು ಆರ್ ರತ್ನ.  ಚಿತ್ರದ ಪೂರ್ತಿ ಕಾಡುವುದು ಕಲ್ಪನಾ ಅಭಿನಯ ಮತ್ತು ಹಿನ್ನೆಲೆ ಸಂಗೀತ, 

"ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು"  ಎನ್ನುವ ಗಾಯಕಿ ಪಿ ಸುಶೀಲ ವೇಗವಾಗಿ ಹಾಡುವ ಹಾಡಿನಿಂದ ಶುರುವಾಗುವ ಈ ಚಿತ್ರ.. ಕನಸಿನ ಬೆನ್ನೇರಿ ಹೋಗುವಂತೆ ಚಿತ್ರೀಕರಿಸುವ ರೀತಿ ಇಷ್ಟವಾಗುತ್ತದೆ. ಹುಲ್ಲುಗಾವಲಿನಲ್ಲಿ ಡಿ ವಿ ರಾಜಾರಾಮ್ ಅವರ ಕ್ಯಾಮೆರ ಸಾಗುವ ಪರಿ ಇಷ್ಟವಾಗುತ್ತದೆ. ಪುಟ್ಟಣ್ಣ ಅವರ ಚಿತ್ರಗಳಲ್ಲಿ ಕ್ಯಾಮೆರ ಕೈಚಳಕವೇ ಒಂದು ದೃಶ್ಯ ಕಾವ್ಯ. 

ನನ್ನ ನೆಚ್ಚಿನ ಬಾಲಣ್ಣ ಈ ಚಿತ್ರದಲ್ಲಿ ವಿಶಿಷ್ಟವಾಗಿ ಮಾತಾಡುತ್ತ ಪ್ರತಿ ದೃಶ್ಯದಲ್ಲೂ ಒಂದು ಕಥೆ ಎಂದು ಹೇಳುತ್ತಾ ಆ ಘಟನೆಗೆ ತಕ್ಕಂತೆ ಒಂದು ಕಥೆ ಹೇಳುತ್ತಾ ಸಾಗುವ ರೀತಿಯಲಿ ಮಿಂಚುತ್ತಾರೆ. 

ಅವರ ಪಂಚಿಂಗ್ ಮಾತುಗಳು 

"ದನಾ ಅಲ್ಲಾ ದನ ಹೆಣ್ಣುಮಕ್ಕಳ ಬೆಳವಣಿಗೆ ಸುತ್ತಲಿರುವ ಪರಿಸರ ಅವಲಂಭಿಸಿರುತ್ತೆ ಕಣೋ" ಎನ್ನುವಾಗ ಅವರು ಹೊತ್ತು ತರುವ ಸಂದೇಶ "ಮನೆಯಲ್ಲಿ ಹಿತಕರ ವಾತಾವರಣ ಸೃಷ್ಟಿಯಾಗಿದ್ದರೆ ಮಕ್ಕಳು ಹಾಗೆ ಸಂಸ್ಕಾರ ಹೊತ್ತು ಬೆಳೆಯುತ್ತವೆ". 

"ಇದೆ ಓವಲ್ ಆಂಗಲ್ ಬಾಯಲ್ಲಿ ಸದಾ ನಗುತ್ತಿದ್ದಳು ನಿಮ್ಮ ಅಮ್ಮಾ"

"ಇಂಗು ತಿಂದ ಇಂಜಿನಿಯರ್ ನಾನು"

"ಈ ಇಂಜಿನಿಯರ್ ಥಾಟ್ ಎಲ್ಲಾ ಈ ಹ್ಯಾಟಲ್ಲೇ ಇರೋದು.. ಈ ಹ್ಯಾಟಿನ ಹೀಟು ನಿನ್ನ ತಲೆಯೊಳಗೆ ಇಳಿಯೋದು ಬ್ಯಾಡಮ್ಮ"

"ಇವರು ಕೋಕ ಕೋಲಾ ಕುಂಭಾಭಿಷೇಕ ಶಾಸ್ತ್ರಿ.. ಯಾವುದೇ ಸಮಾರಂಭವಿರಲಿ ಇವರು ಕೇಳುವುದು ಕೋಕಾ ಕೋಲಾ"

ಪಕ್ಕದಲ್ಲಿ ಯಾರು ಇದ್ದಾರೆ ಎಂದು ಗಮನಿಸದೆ "ದನಾ ಅಲ್ಲಾ ಜನಾ.. ನಾನು ಇವರಮ್ಮನನ್ನು ಮದುವೆಯಾದಾಗ" ಎಂದು ಒಬ್ಬನ ಎದೆಯನ್ನು ತಟ್ಟಿ ಹೇಳಿದಾಗ ಪಕ್ಕದಲ್ಲಿದ್ದ ವ್ಯಕ್ತಿ ಹೌಹಾರುತ್ತಾನೆ.. .ತಕ್ಷಣ "ಕ್ಷಮಿಸಿ.. ನನ್ನ ಮಗಳ ಅಮ್ಮನನ್ನು ಮದುವೆಯಾದಾಗ" ಎಂದಾಗ ಉಸಿರು ಬಿಡುತ್ತಾನೆ.. ಈ ದೃಶ್ಯದಲ್ಲಿ ಬಾಲಣ್ಣ ಅವರ ಸಹಜ ಅಭಿನಯ ಸುಂದರ. 

"ಭಲೇ ಬ್ರಹ್ಮಚಾರಿ" ಎಲ್ ಆರ್ ಈಶ್ವರಿ ತಮ್ಮ ಮಾದಕ ಧ್ವನಿಯಲ್ಲಿ ಕಾಡಿದರೆ.. ಕಲ್ಪನಾ ಆ ಕಾಲದಲ್ಲಿಯೇ ಹುಡುಗರನ್ನು ಗೋಳು ಹುಯ್ಕೊಳೋದು, ಹಟಕ್ಕೆ ಬಿದ್ದು ಹುಡುಗರನ್ನು ಆಟ ಆಡಿಸೋದು ಹೇಗೆ ಎನ್ನುವುದನ್ನು ತೋರುತ್ತಾರೆ.. ಹಾಡಿನ ಉದ್ದಕ್ಕೂ ಸ್ಥಿತ ಪ್ರಜ್ಞರಂತೆ ಅಭಿನಯಿಸುವ ಸ್ಪುರಧ್ರೂಪಿ ಆರ್ ಎನ್ ಸುದರ್ಶನ ಹಾಡಿನ ಅಂತಿಮ ಘಳಿಗೆಯಲ್ಲಿ ಆ ಪಾತ್ರಧಾರಿಗೆ ಮನಸೋತು ಅವಳ ಹಿಂದೆ ಸುತ್ತುತ್ತಾರೆ.. ಪ್ರೇಮ ಪ್ರೀತಿ ಸದಾ ಕಾಡಿದರೆ ಎಂಥಹ ಕಲ್ಲು ಕರುಗುತ್ತದೆ ಎನ್ನುವ ಸಾಂಕೇತಿಕ ದೃಶ್ಯಾವಳಿ ಈ ಹಾಡಿನ ಶಕ್ತಿ. 

ಚಂದ್ರ ಪಾತ್ರಧಾರಿ ಕೆಲ ಕಾರಣಗಳಿಂದ ಹಳ್ಳಿಗೆ ಹೊಗುವುದನ್ನು ತಪ್ಪಿಸಿಕೊಳ್ಳಲು ವತ್ಸಲಳನ್ನು ಹಳ್ಳಿಗೆ ಕಲಿಸಲು ಸಂಚು ಮಾಡಿ.. ಅವಳು ಒಳ್ಳೆ ಎಂದಾಗ ಬಟ್ಟೆ, ಒಡವೆ ಇವುಗಳ ಆಮೀಷ ಒಡ್ಡಿ ಸ್ವಲ್ಪ ದಿನವಾದರೂ ಚಿಕ್ಕಮ್ಮನ ಕಾಟದಿಂದ ದೂರಾಗಬಹುದು ಎನ್ನುತ್ತಾ ಅವಳನ್ನು ಉತ್ತೇಜಿಸುವಾಗ ವತ್ಸಲ ಅಭಿನಯ ಇಷ್ಟವಾಗುತ್ತದೆ..ಬಿಟ್ಟ ಬಾಯಿ ಬಿಟ್ಟಂಗೆ ಕೆಲ ಕ್ಷಣ ಇರುವ ಅಭಿನಯ.. ಸವಲತ್ತುಗಳಿಗೆ ಮನಸ್ಸು ಹೇಗೆ ಪ್ರತಿಕ್ರಯಿಸುತ್ತದೆ.. ಆಸೆ ಯಾರನ್ನೂ ಬಿಡದು ಎನ್ನುವ ಮಾತು ಎಷ್ಟು ನಿಜ ಅಲ್ಲವೇ.. 

"ಚೆಲುವಿನ ಚೆನ್ನಿಯೇ ಚಿನ್ನದ ಬೊಂಬೆಯೇ" ಹಾಡಲ್ಲಿ ಎಲ್ ಆರ್ ಈಶ್ವರಿ ಮತ್ತೆ ಕಾಡುತ್ತಾರೆ 

ಈ ಚಿತ್ರದ ನೀತಿ ಭೋದಕ ಹಾಡು "ಇಂದಿನ ಹಿಂದೂ ದೇಶದ ನವ ಯುವಕರೇ" ಈ ಹಾಡಿನಲ್ಲಿ ಪುಟ್ಟಣ್ಣ ಅವರ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ಮಿಂಚುತ್ತಾರೆ. ಹಾಡಿನ ಚಿತ್ರೀಕರಣ ಮಾಗಡಿಯ ಸಾವನ ದುರ್ಗದ ತಪ್ಪಲಲ್ಲಿ ಸಾಗುತ್ತದೆ.. ಚಟಕ್ಕೆ ಬಿದ್ದ ನವ ಪೀಳಿಗೆಗೆ ಕೊಡುವ ಸಂದೇಶದ ಜೊತೆಯಲ್ಲಿ ಹಿಂದೂ ಸನಾತನ ಧರ್ಮದ ಪ್ರತಿ ಪಾದಕರಲ್ಲಿ ಮೂರು ಹೊಳೆಯುವ ರತ್ನಗಳು ಶ್ರೀ ಶಂಕರಾಚಾರ್ಯ, ಶ್ರೀ ಸ್ವಾಮಿ ವಿವೇಕಾನಂದ ಮತ್ತು ಶ್ರೀ ಸುಭಾಶ್ ಚಂದ್ರ ಬೋಸ್ ಅವರ ಪ್ರತಿಕೃತಿಯನ್ನು ನೆರಳು ಬೆಳಕಿನ ಮೂಲಕ ಉತ್ತಮವಾಗಿ ತೋರಿದ್ದಾರೆ.. ಪ್ರಾಯಶಃ ಈ ರೀತಿಯ ದೃಶ್ಯ ಸಂಯೋಜನೆಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡದ್ದು ಪುಟ್ಟಣ್ಣ ಅವರ ತಂತ್ರಜ್ಞ ಮನಸ್ಸು. 

ಸಾಂಕೇತಿಕವಾಗಿ ದೃಶ್ಯಗಳನ್ನು ಹೆಣೆದು ಅದಕ್ಕೆ ವಿಭಿನ್ನ ಅರ್ಥ, ಮನುಷ್ಯನ ಮನಸ್ಥಿತಿ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ರೂಪಿಸುವ ದೃಶ್ಯಾವಳಿಗಳು ಪುಟ್ಟಣ್ಣ ಚಿತ್ರಗಳಲ್ಲಿ ಸದಾ ಇರುತ್ತದೆ. 

ಈ ಚಿತ್ರದಲ್ಲೂ ತನ್ನ ಸಾವಿಗೆ ಕಾರಣ ಚಂದ್ರ ಎನ್ನುವ ಸಂದೇಶ ಸಿಕ್ಕ ಮೇಲೆ.. ಅವಳು ಕೊಟ್ಟ ಹೂವನ್ನು ನೀರಲ್ಲಿ ಹಾಕಿ ಅದನ್ನು ಕೋಲಿನಿಂದ ಚುಚ್ಚಿ ಮುಳುಗಿಸಲು ಪ್ರಯತ್ನ ಪಡುತ್ತಾನೆ. ಹೂವಿನಂತ ಮನಸ್ಸಿನ ಮನುಜನ ಮನಸ್ಸು ಆಕ್ರೋಶ ಮತ್ತು ಪ್ರತಿಕಾರಕ್ಕೆ ಹೇಗೆ ಗಲಿಬಿಲಿಗೊಳ್ಳುತ್ತದೆ.. ಎನ್ನುವ ಸಂಕೇತ ಈ ದೃಶ್ಯದಲ್ಲಿ.. ತಕ್ಷಣ ಮನಸ್ಸು ಬದಲಾಯಿಸಿ ಆ ಹೂವನ್ನು ದಡಕ್ಕೆ ತಂದು ಹುಲ್ಲಿನ ಮೇಲೆ ನಿಧಾನವಾಗಿ ಇತ್ತು ಸಾಗುತ್ತಾನೆ.. ಈ ದೃಶ್ಯದಲ್ಲಿ ಹೂವು ನೀರು ಕೋಲು ಮೂರೇ ಕಾಣುವುದು. 

ನಂತರ ಚಂದ್ರಳನ್ನೇ (ಬದಲಾದ ಪಾತ್ರ) ಸಾಯಿಸಲು  ನಾಯಕ, ಅದನ್ನು ತಪ್ಪಿಸಿಕೊಂಡು ನಾನು ಯಾರನ್ನು ಪ್ರೀತಿಸಿಲ್ಲ ನನ್ನಾಣೆ ನಿಮ್ಮನ್ನೇ ಪ್ರೀತಿಸಿದ್ದು ಎಂದು ಕಲ್ಪನಾ ಹೇಳುತ್ತಾ ಓಡಿ ಹೋಗುತ್ತಾ ಒಂದು ನೀರಿನ ಹೊಂಡದಲ್ಲಿ ಬಿದ್ದು ಬಿಡುತ್ತಾರೆ.. 

ಕೆಲವೇ ದೃಶ್ಯದ ಹಿಂದೆ ಅವಳು ಕೊಟ್ಟ ಹೂವನ್ನು ನೀರಲ್ಲಿ ಮುಳುಗಿಸಲು ಹೋರಾಟ ನಾಯಕ.. ಆದ್ರೆ ರೀತಿಯ ಹೊಂಡದಿಂದ ಚಂದ್ರಳನ್ನು ಕಾಪಾಡುತ್ತಾನೆ... ಎರಡು ದೃಶ್ಯ ಎರಡು ವಿಭಿನ್ನ ಪಾಠಗಳು, 

ಸಿಟ್ಟು ಸಿಡುಕು ರಾಗದ್ವೇಷ ಸೇಡು ಇವೆಲ್ಲಗಳ ಪರಿಣಾಮ ಘೋರ ಅದರ ಬದಲು ಪ್ರೀತಿ ಪ್ರೇಮ ಎಂಥಹ ವಿಷಮ ಸಂಬಂಧವನ್ನು ಗಟ್ಟಿ ಗೊಳಿಸುತ್ತದೆ.. ಪುಟ್ಟಣ್ಣ ಅವರ ಚಿತ್ರಗಳಲ್ಲಿ ಸಿಗುವ ಈ ಮಾತುಗಳೇ ನನಗೆ ಅವರ ಚಿತ್ರಗಳ ಸರಣಿಯ ಬಗ್ಗೆ ಬರೆಯಲು ಪ್ರೇರೇಪಿಸುತ್ತಿದೆ. 

"ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ " ಪಿ ಸುಶೀಲ ಹಾಡಲ್ಲೇ ನಮ್ಮನ್ನು ನೂರಾರು ಲೋಕಗಳಿಗೆ ಕರೆದೊಯ್ಯುತ್ತಾರೆ..ಮನೆಯಲ್ಲಿನ ಸಂಸ್ಕಾರ ಎಲ್ಲರ ಮನಸ್ಸನ್ನು ಎಷ್ಟು ಉಲ್ಲಸಿತ ಗೊಳಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ಹಾಡು ಮತ್ತು ಚಿತ್ರೀಕರಣ.. ಕನ್ನಡ ಚಿತ್ರರಂಗದ ಇನ್ನೊಬ್ಬ ತಾಯಿ ಆದವಾನಿ ಲಕ್ಷ್ಮೀದೇವಿಯವರ ಅಭಿನಯ ಈ ಹಾಡಿನ ಉತ್ತಮ ಅಂಶ. "ಅರಿಶಿನ ಕುಂಕುಮ ನಗು ನಗುತಿರಲಿ" ಹಾಡಿನ ಸಾಲಿನಲ್ಲಿ ಅವರ ಹೊಳೆಯುವ ಕಣ್ಣುಗಳು, ನಗು,. ತಾಯಿ ಮಮತೆಯ ಒಂದು ಝಲಕ್ ಜೋಗವಾಗುತ್ತದೆ. 

ತನ್ನ ತಪ್ಪು ಭಾವನೆ ಎಂಥ ಅನಾಹುತಕ್ಕೆ ದಾರಿ ಮಾಡಿಕೊಟ್ಟಿತು ಎಂದು ಪೇಚಾಡುವ ನಾಯಕ ಪಾತ್ರಧಾರಿ ರಾಜೇಶ್ "ಇದೆ ರೂಪ ಅದೇ ನೋಟ" ಹಾಡಿನಲ್ಲಿ ಇಡಿ ತನ್ನ ಮನಸ್ಸಿನ ತಾಕಲಾಟ, ಅಂದುಕೊಂಡಿದ್ದ ಭಾವ ಎಲ್ಲಾ ತಪ್ಪು ಎನ್ನುವ ಅಭಿನಯ ಇಷ್ಟವಾಗುತ್ತದೆ.. 

ಕೆಟ್ಟ ಮಕ್ಕಳು ಇರಬಹುದು ಕೆಟ್ಟ ತಾಯಿ ಇರೋಲ್ಲ ಎನ್ನುವ ಗಾದೆ ಮಾತಿದೆ.. ಹಾಗೆಯೇ ಕೆಸರಲ್ಲೂ ಕಮಲವಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಮಾತು.. 

ವತ್ಸಲ ತನ್ನ ಅಪ್ಪನ ಕಡು ಬಡತನ , ಚಿಕ್ಕಮ್ಮನ ಕಾಟ ಇದ್ದರೂ ತನ್ನ ಚಿಕ್ಕಮ್ಮನ ಮಗಳು ಪೆದ್ದು ಪೆದ್ದಾಗಿ ಆಡಿದರೂ ಆ ಮನಸ್ಸಲ್ಲಿ ಕೂಡ ಒಂದು ಒಳ್ಳೆಯ ಪ್ರಜ್ಞೆ ಇದೆ ಎನ್ನುವುದಕ್ಕೆ ಅಪ್ಪ ಸತ್ತ ಮೇಲೆ ಮನೆ ಪಾತ್ರೆ ಸಾಮಾನು ಎಲ್ಲವನ್ನು ಮಾರಿ ಬೇರೆ ಕಡೆಗೆ ಹೋಗಲು ಸೋದರಮಾವನ ಮಾತಿನಂತೆ ಸಿದ್ಧವಿದ್ದ ಚಿಕ್ಕಮ್ಮ ಮತ್ತು ಮಗಳ ಜೊತೆಯಲ್ಲಿ ಮಾರಿಬಂದ ಹಣದಲ್ಲಿ ತನ್ನ ಭಾಗವನ್ನು ಇಟ್ಟುಕೊಂಡು ನಿದ್ರಿಸಿರುತ್ತಾಳೆ.. 

ಕಪಟಿ ಸೋದರಮಾವ ಅವಳ ಪೆಟ್ಟಿಗೆಯಲ್ಲಿದ್ದ ಹಣವನ್ನು ತೆಗೆದುಕೊಂಡು... ಈ ಪೀಡೆ ಎಲ್ಲಿಯಾದರೂ ಹಾಳಾಗಿ ಹೋಗಲಿ ಎಂದು ಶಪಿಸುತ್ತಾನೆ.,, ಇದನ್ನು ಕೇಳಿಸಿಕೊಂಡ ಆ ಪೆದ್ದು ಮಗಳು (ಆರ್ ಟಿ ರಮ).. ಅವರು ನಿದ್ದೆ ಮಾಡಿದಮೇಲೆ ಮತ್ತೆ ಆ ದುಡ್ಡನ್ನು ವತ್ಸಲಳ ಪೆಟ್ಟಿಗೆಯಲ್ಲಿಟ್ಟು ತನ್ನ ಟ್ರೇಡ್ ಮಾರ್ಕ್ "ಗುಡ್ ಮಾರ್ನಿಂಗ್" ಹೇಳಿ ಅಳುತ್ತಾ ಮುತ್ತು ಕೊಡುತ್ತಾಳೆ. ಸುಂದರ ದೃಶ್ಯ ಇದು. ಕಟುಕರ ಜೊತೆಯಲ್ಲಿ ಇದ್ದ ಮಾತ್ರಕ್ಕೆ ಮನಸ್ಸು ಕಟುಕತನ ಹೊಂದಿರಬೇಕಿಲ್ಲ ಎನ್ನುವ ಅಂಶ ಹೊಳೆಯುತ್ತದೆ. 

ವತ್ಸಲ ತನ್ನ ಚಿಕ್ಕಮ್ಮನ ಮೋಸದಿಂದ ಬೀದಿ ಪಾಲದ ಮೇಲೆ, ತನ್ನ ಪೆಟ್ಟಿಗೆಯನ್ನು ಹೊತ್ತು ಬೀದಿ ಬೀದಿ ಅಲೆಯುತ್ತಾ ಬರುವಾಗ ಅವಳನ್ನು ಮುಳ್ಳಿನ ಬೇಲಿಯ ಹಿನ್ನೆಲೆಯಲ್ಲಿ ತೋರಿಸಿರುವುದು.. ಮುಂದಿನ ಹಾದಿ ಮುಳ್ಳಿನ ಜೀವನ.. ಎಂದು ತೋರಿಸುತ್ತದೆ.. 

ಒಂದು ಚಿತ್ರದಲ್ಲಿ ಏನಿರಬೇಕು ಏನಿರಬಾರದು ಎನ್ನುದಕ್ಕಿಂತ.. ನೋಡುವ ಪ್ರೇಕ್ಷಕನಿಗೆ ಒಂದು ಸಂದೇಶ ಕೊಡಬೇಕು, ನಮ್ಮ ಮಣ್ಣಿನ ಗುಣವನ್ನು ಎತ್ತಿ ತೋರಬೇಕು ಎನ್ನುವ ತವಕ ಪುಟ್ಟಣ್ಣ ಅವರಿಗೆ ಸದಾ ಇತ್ತು.. ನಾಡಿನ ಸಂಸ್ಕೃತಿ, ಹೆಣ್ಣು ಮಕ್ಕಳ ಬೆಳವಣಿಗೆ, ಮನೆಯಲ್ಲಿನ ಸುಂದರ ಪರಿಸರ.. ಆಹಾ ಪ್ರತಿಯೊಂದನ್ನು ಹದವಾಗಿ ಬೆರೆಸಿದ್ದಾರೆ. ಚಿತ್ರಕಥೆ ಅವರ ಚಿತ್ರಗಳ ಶಕ್ತಿ.. 

ಅಂಥಹ ಒಂದು ಸುಂದರ ಕಥೆಯನ್ನು ಎರಡು ವಿರುದ್ಧ ಸ್ವಭಾವಗಳ ಮತ್ತು ಆ ಸ್ವಭಾವಗಳು ತಮ್ಮ ಜೀವನದಲ್ಲಿ ತರುವ ಬದಲಾವಣೆಗಳನ್ನು ಹಿಡಿದಿಡುವ ಒಂದು ಚಿಕ್ಕ ಚೊಕ್ಕ ಕಥೆಯನ್ನು ಅಷ್ಟೇ ಭಿನ್ನವಾಗಿ ಸುಂದರ ಹಾಡುಗಳು, ಸಂಭಾಷಣೆ, ದೃಶ್ಯಗಳ ಸಂಯೋಜನೆಯೊಂದಿಗೆ ನಮ್ಮ ಮುಂದೆ ತಂದು ಒಂದು ಅಪರೂಪದ ಚಿತ್ರ ಮಾಣಿಕ್ಯವನ್ನು ಕೊಟ್ಟಿದ್ದಾರೆ. 

ಒಂದು ಸುಂದರ ಚಿತ್ರದ ಬಗ್ಗೆ ಬರೆದ ತೃಪ್ತಿ ನನಗೆ.. ಮುಂದಿನ ಚಿತ್ರದೊಂದಿಗೆ  ಮತ್ತೆ ಬರುವೆ.. !!!

4 comments:

  1. Hi Sri,
    I have watched this movie too :) nimma maathugaLalli vimarshe odode ondu khushi :)
    "ಸಾಂಕೇತಿಕವಾಗಿ ದೃಶ್ಯಗಳನ್ನು ಹೆಣೆದು ಅದಕ್ಕೆ ವಿಭಿನ್ನ ಅರ್ಥ, ಮನುಷ್ಯನ ಮನಸ್ಥಿತಿ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ರೂಪಿಸುವ ದೃಶ್ಯಾವಳಿಗಳು ಪುಟ್ಟಣ್ಣ ಚಿತ್ರಗಳಲ್ಲಿ ಸದಾ ಇರುತ್ತದೆ...." Yes I agree, and ofcourse Kalpana's acting in both the roles Awesome!!!..... aa kaalakke ee chitra and avara modern paathra, ellakkoo Thumbs Upppp :)

    ReplyDelete
    Replies
    1. ಮನಕ್ಕೆ ತಟ್ಟಿದ್ದು ಮುಟ್ಟಿದ್ದು ಪದಗಳಾಗಿ ಬರಲು ಸಾಹಸ ಮಾಡುತ್ತವೆ ಅಂತಹ ಸಾಹಸ ಕಾರ್ಯ ಮಾಡೋದರಲ್ಲಿ ಏನೂ ಒಂದು ಆನಂದ.. ಆ ಸಾಹಸಕ್ಕೆ ನೀವೆಲ್ಲ ಬೆಂಬಲಿಗರೂ.. ನನ್ನ ಬೆನ್ನು ತಟ್ಟಿ ಬರೆಸಲು ನೀವೆಲ್ಲ ಇರುವಾಗ ಬರೆಯೋದು ನನಗೆ ಇಷ್ಟವಾಗುತ್ತದೆ.. ಹೌದು ಆ ಕಾಲಘಟ್ಟದಲ್ಲಿ ಆ ರೀತಿಯ ಚಿತ್ರ ಅಭಿನಯ ಎಲ್ಲವೂ ಹೊಸದು.. ಸುಂದರ ಅಭಿನಯ ಒಳಗೊಂಡ ಮನೋಜ್ಞ ಚಿತ್ರ

      ಸುಂದರ ಪ್ರತಿಕ್ರಿಯೆಗೆ ನಾ ಚಿರಋಣಿ ಡಿ ಎಫ್ ಆರ್

      Delete
  2. ಕಾದಂಬರಿಗಳನ್ನು ಚಿತ್ರ ರತ್ನಗಳನ್ನಾಗಿಸುವ ಅಪ್ರತಿಮ ಪ್ರತಿಭೆ ಪುಟ್ಟಣ್ಣನವರದು.
    ಅವರ ಪ್ರತಿ ಚಿತ್ರವೂ ಸಂಶೋಧನಾರ್ಹ.
    ಎಲ್.ಆರ್. ಈಶ್ವರಿಯವರ ಈ ಗೀತೆ ಈಗಲೂ ಜನಜನಿತವೇ.

    ReplyDelete
    Replies
    1. ಕಥೆ ಇಲ್ಲ ಎಂದು ಕೊರಗುವವರಿಗೆ ಚಾಟಿ ಮಾತಿನಲ್ಲಿ ಉತ್ತರ ಅವರದ್ದು.. ಕಾದಂಬರಿಗಳನ್ನು ಹುಡುಕಿ ಹುಡುಕಿ ಚಿತ್ರ ಮಾಡುತ್ತಿದ್ದ ಅವರ ಪ್ರತಿಭೆಗೆ ಶರಣು. ಧನ್ಯವಾದಗಳು ಬದರಿ ಸರ್

      Delete