Saturday, October 25, 2014

ಒಂದೇ ಒಂದು ಅವಕಾಶ ಕೊಡಬೇಕಿತ್ತು - ಶರಪಂಜರ (1971)

ಒಂದು ಭಾನುವಾರದ ರಾತ್ರಿ.. ಉದಯ ವಾಹಿನಿಯಲ್ಲಿ ಶರಪಂಜರ ಚಿತ್ರ ಶುರುವಾಗಿತ್ತು.. ಎಲ್ಲರೂ ನೋಡುತ್ತಾ ಕೂತಿದ್ದೆವು..
ನೋಡುತ್ತಾ ನೋಡುತ್ತಾ ಒಬ್ಬೊಬ್ಬರೇ ನಿದ್ರಾದೇವಿಯ ಮಡಿಲಿಗೆ ಜಾರಿಕೊಂಡಿದ್ದೆವು..

ನನ್ನ ಸೋದರ ಮಾವ ರಾಜ (ಶ್ರೀಕಾಂತ) ಒಬ್ಬನೇ ಇಡಿ ಚಿತ್ರವನ್ನು ಜಾಹಿರಾತುಗಳ ಮಧ್ಯೆ ನೋಡಿ. ಮಲಗಿದಾಗ ಸರಿ ರಾತ್ರಿ ಯಾಗಿತ್ತು..

ಸೋಮವಾರ ಬೆಳಿಗ್ಗೆ ಯತಾವತ್ತು ನಮ್ಮ ನಿತ್ಯ ಕರ್ಮಗಳತ್ತ ಗಮನ ಹರಿಸುತ್ತಾ ಇದ್ದಾಗ.. ನಿಧಾನವಾಗಿ ಎದ್ದ ರಾಜ.. ರೂಮಿನ ಬಾಗಿಲಿನ ಹತ್ತಿರ ನಿಂತು ತನ್ನ ದೇಶಾವರಿ ನಗೆ ಕೊಡುತ್ತಾ.. "ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಬೆರಳು ತೋರಿಸುತ್ತಾ ಹೇಳಿದ.. ನಮಗೆ ಆ ಬೆಳಗಿನ ಪುರುಸೊತ್ತಿಲ್ಲದ ಹೊತ್ತಿನ ನಡುವೆಯೂ ಹೊಟ್ಟೆ ಹಿಡಿದುಕೊಂಡು ನಗಲಾರಂಬಿಸಿದೆವು..

ಅಲ್ಲಿನ ಮುಂದೆ ಅವನನ್ನು ಮಾತಾಡಿಸುವಾಗಲೆಲ್ಲಾ .. "ರಾಜ ನನಗೆ ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಶುರು ಮಾಡುತ್ತಿದ್ದೆ..

ಪುಟ್ಟಣ್ಣ ಚಿತ್ರಗಳನ್ನು ನೋಡುವ ಬಗೆ ಹೇಳಿಕೊಟ್ಟ ರಾಜ.. ನಿನಗೆ ಈ ಲೇಖನ ಅರ್ಪಿತ..

* * * * * * * * * * * * * * * 

ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು.. ಕಲಾವಿದನಿಗೆ ಸವಾಲು ಅಂದರೆ ಹುಚ್ಚನ ಪಾತ್ರ ಅಥವಾ ಮಾನಸಿಕ ಸ್ಥಿಮಿತವಿರದ ಪಾತ್ರ.. ಪ್ರೇಕ್ಷಕರಿಗೆ ಹುಚ್ಚು ಹಿಡಿಸದೆ.. ನಟನೆ ಎನ್ನುವ ಒಂದು ದಾರದ ನಡಿಗೆಯ ಮೇಲೆ ಜಾರದೆ ಬೀಳದೆ ಅಭಿನಯಿಸುವ ಒಂದು ಪಾತ್ರ. ಅಂಥಹ ಪಾತ್ರವನ್ನು ಸೃಷ್ಟಿಸಿ ಗೆದ್ದ ಶ್ರೀಮತಿ ತ್ರಿವೇಣಿಯವರ ಕಾದಂಬರಿಯನ್ನು ಬೆಳ್ಳಿ ಪರದೆಯ ಮೇಲೆ ಸ್ವಲ್ಪವೂ ಮಾಸದೆ ತಂದವರು ಪುಟ್ಟಣ್ಣ ಕಣಗಾಲ್.. ಗೆರೆದಾಟದೆ ಒಂದು ವೃತ್ತದ ಪರಿಧಿಯಲ್ಲೇ ಅಭಿನಯವನ್ನು ಹೊರಹೊಮ್ಮಿಸಲು ತಮ್ಮ ಸಾಮರ್ಥ್ಯವನ್ನೆಲ್ಲ ಧಾರೆ ಎರೆದು ಎರಕ ಮಾಡಿಕೊಂಡ ಪಾಕವನ್ನು ಕೊಟ್ಟವರು ಮಿನುಗುತಾರೆ ಕಲ್ಪನಾ. 



ಇಂದಿಗೂ ಮಾನಸಿಕ ತೊಳಲಾಟ ಅಂದ ಕೂಡಲೇ  "ಯಾಕೋ ಶರಪಂಜರ ಕಾವೇರಿ ತರಹ ಆಡ್ತೀಯ" ಎನ್ನುವ ಮಾತು ಈ ಚಿತ್ರ ರತ್ನ ತಂದಿಟ್ಟ ಪರಿಣಾಮ ಎಂದರೆ ಖಂಡಿತ ಇದು ಈ ಚಿತ್ರಕ್ಕೆ ಮತ್ತು ಪುಟ್ಟಣ್ಣ ಅವರಿಗೆ ಕೊಡುವ ದೊಡ್ಡ ಗೌರವ ಎನ್ನುವುದು ನನ್ನ ಅಭಿಮತ. 

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತೆರೆಗೆ ಬಂದ ಚಿತ್ರ ರತ್ನ ಇದು. ಶ್ರೀಮತಿ ತ್ರಿವೇಣಿಯವರ ಶರಪಂಜರ ಎನ್ನುವ ಕಾದಂಬರಿಯನ್ನು ತೆರೆಗೆ ಅಳವಡಿಸಿದ್ದು ನಿರ್ದೇಶಕ ರತ್ನ ಪುಟ್ಟಣ್ಣ. 

ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಚುಂಚನಕಟ್ಟೆಯ  ಸುಂದರ ಮಡಿಲಿನಲ್ಲಿ ಮೂಡಿ ಬಂದ ಚಿತ್ರಕ್ಕೆ ಛಾಯಾಗ್ರಹಣ ಡಿ ವಿ ರಾಜಾರಾಂ ಅವರದ್ದು, ಸಂಗೀತ ವಿಜಯಭಾಸ್ಕರ್ ಮತ್ತು ಸಾಹಿತ್ಯ ವಿಜಯನಾರಸಿಂಹ ಮತ್ತು ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರಶಾಸ್ತ್ರಿ ಅವರದ್ದಾಗಿತ್ತು,  ಉತ್ತಮ ಸಾಹಿತ್ಯಕ್ಕೆ ಅಷ್ಟೇ ಉತ್ತಮ ಕಂಠ ನೀಡಿದವರು ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ.  ಬಂಧನ ಶರಪಂಜರದಲಿ ಬಂಧನ ಎನ್ನುವ ಪುಟ್ಟ ಪುಟ್ಟ ಗೀತೆಯ ಸಾಲುಗಳು ಚಿತ್ರದ ಉತ್ತರಾರ್ಧದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅದನ್ನು ಹಾಡಿದವರು ಮೈಸೂರು ದೇವದಾಸ್. 

ಈ ಚಿತ್ರಮಾಡಿದಾಗ ಶ್ರೀಮತಿ ತ್ರಿವೇಣಿಯವರು ಇಹಲೋಕದಲ್ಲಿ ಇರಲಿಲ್ಲ.. ಆದರೂ ಸಂಭಾಷಣೆಯ ಫಲಕದಲ್ಲಿ  ತ್ರಿವೇಣಿ ಜೊತೆಯಲ್ಲಿ ಹಂಚಿಕೊಂಡದ್ದು ಸಾಹಿತಿಗಳಿಗೆ ಪುಟ್ಟಣ್ಣ ಅವರು ಕೊಡುತ್ತಿದ್ದ ಗೌರವ ಸೂಚಿಸುತ್ತದೆ. 

ಮುಂದಿನ ಸೀಟ್ ನಲ್ಲಿ ಕಿತ್ತಳೆ ಹಣ್ಣನ್ನು ಬಿಡಿಸಿ ತಿಂದರು.. ಸಿಪ್ಪೆಯ ರಸ ಹಿಂದಿನ ಸೀಟ್ ತನಕ ಹಾರಿತು ಎಂದು ಕೂಗುವ  ನಾಯಕನ ದೃಶ್ಯದಲ್ಲಿಯೇ ಚಿತ್ರದ ತಿರುಳನ್ನು ಬಿಡಿಸಿ ಇಟ್ಟಿದ್ದಾರೆ.  ಸಿಪ್ಪೆ ಸುಲಿದ ಮೇಲೆ ಹಣ್ಣನ್ನು ತಾನೇ ತಿನ್ನುವುದು ಸಿಪ್ಪೆಯ ಹಂಗೇಕೆ, ಸಿಹಿಯಾದ ವಸ್ತುವಿಗೆ ಯಾವಾಗಲೂ ಕಹಿಯಾದ ಒಂದು ಬೇಲಿ ಇರುತ್ತದೆ ಎನ್ನುವ ತರ್ಕದ ಅರಿವಿಲ್ಲದೆ, ನಾಯಕ ನಾಯಕಿಯನ್ನು ಚಿತ್ರದ ದ್ವೀತಿಯ ಭಾಗದಲ್ಲಿ ತಿರಸ್ಕಾರ ನೋಟದಿಂದ ನೋಡುವುದಕ್ಕೆ ಬುನಾದಿ ಹಾಕಿಕೊಡುತ್ತದೆ.. ಹಾಗೆಯೇ ಮದುವೆಗೆ ಆಹ್ವಾನ ನೀಡುವ ಮುಂಚೆ ನಾಯಕನ ಸ್ನೇಹಿತ ಹುಡುಗಿಯ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಕೇಳಿಲ್ಲ ಅಂದಾಗ ನಾಯಕನೇ "ಸೌಂದರ್ಯ ಇದ್ದ ಕಡೆ ಅಪವಾದ ಇದ್ದೆ ಇರುತ್ತದೆ" ಎನ್ನುತ್ತಾನೆ. 

ಆದರೆ ಕಡೆಗೆ ತರ್ಕವನ್ನೆಲ್ಲ ಬದಿಗಿಟ್ಟು ನಾಯಕಿಯ ಜೀವನದಲ್ಲಿ ಬಲವಂತವಾಗಿ ನಡೆದ ಒಂದು ಅಚಾತುರ್ಯವನ್ನೇ ಮನದಲ್ಲಿಟ್ಟುಕೊಂಡು ಸಿಹಿಯಾದ ಹಣ್ಣನ್ನು ತಿನ್ನದೇ ರಸ ಸಿಡಿಸಿ ಕಣ್ಣಿಗೆ ಉರಿ ಕೊಡುವ ಪರ ಸ್ತ್ರೀ ಬಗ್ಗೆ ಮಾತ್ರ ಗಮನ ಕೊಡುವ ಇಡಿ ಚಿತ್ರಣ ಮೊದಲ ದೃಶ್ಯದಲ್ಲಿ ಮೂಡಿ ಬಂದಿದೆ.  

ಇದೆ ತರಹದ ಮಾತನ್ನು ಪುಷ್ಟಿಕರಿಸುವ ನಾಯಕನ ಸ್ನೇಹಿತ ನೋಡೋ "ಬ್ಯೂಟಿ ಜಾಗದಲ್ಲಿ ಬೀಸ್ಟ್ ಇರುತ್ತೆ" ಎನ್ನುವ ಎಚ್ಚರಿಕೆ ಮಾತಿನಲ್ಲಿ ಚಿತ್ರದ ಇನ್ನೊಂದು ಮುಖವನ್ನು ತೆರೆದಿಡುತ್ತಾರೆ. 

ಈ ತರಹದ ಸಾಂಕೇತಿಕ ದೃಶ್ಯಗಳಿಗೆ ಪುಟ್ಟಣ್ಣ ಚಿತ್ರಗಳು ಅತ್ಯುತ್ತಮ ವೇದಿಕೆ. 

ಸಂಪ್ರದಾಯಗಳು ಎಂಬ ಮಾತು ಬಂದಾಗ ಪುಟ್ಟಣ್ಣ ಅದನ್ನು ಬೆಳ್ಳಿ ತೆರೆಗೆ ತರುವ ರೀತಿ ಖುಷಿ ಕೊಡುತ್ತದೆ. ಈ ಚಿತ್ರದಲ್ಲೂ ಮಡಿಕೇರಿಯ ಕೊಡವ ಸಂಸ್ಕೃತಿಯ ಮದುವೆಯ ಶಾಸ್ತ್ರ, ಹಾಗೆಯೇ ನಾಯಕ ನಾಯಕಿಯ ಮದುವೆಯ ಶಾಸ್ತ್ರ ಸಿಕ್ಕ ಪುಟ್ಟ ಪುಟ್ಟ ಘಳಿಗೆಯಲ್ಲಿ ಅನಾವರಣ ಮಾಡಿಬಿಡುತ್ತಾರೆ. 

ಹಾಗೆಯೇ ಸ್ಥಳ ವೈಶಿಷ್ಟ್ಯವನ್ನು ಸಾರುವ "ಇಡಿ ಎಪ್ಪತೆರಡು ಎಕರೆ ತೋಟದಲ್ಲಿ ಇನ್ನೂರ ಎಪ್ಪತೆರಡು ಬಗೆಯ ಕಿತ್ತಳೆ ಇದೆ" ಎನ್ನುತ್ತಾ ಮಡಿಕೇರಿಯ ಕಿತ್ತಳೆ ತೋಟದ ಬಗ್ಗೆ ಅರ್ಧ ನಿಮಿಷದಲ್ಲಿ ವಿವರ ಕೊಡುತ್ತಾರೆ. 

ನಾಯಕಿ ಕಾವೇರಿ ಅಪ್ಪನ ಪಾತ್ರದಲ್ಲಿ ಅಶ್ವತ್ ಮತ್ತು ಅಮ್ಮ ಆದವಾನಿ ಲಕ್ಷಿ ದೇವಿ ಇಬ್ಬರೂ ಅಪ್ಪ ಅಮ್ಮ ಅಂದರೆ ಹೀಗೆ ಇರಬೇಕು ಎನ್ನುವ ಮೇಲ್ಪಂಕ್ತಿಯನ್ನು ಹಲವಾರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. 
"ಅರೆ ಸುಂದರಮ್ಮ ಎಲ್ಲಾ ವಿಷಯವನ್ನು ಬರೆದಿದ್ದಾರೆ ಈ ಹಣ್ಣಿನ ವಿಚಾರವನ್ನೇ ಬಿಟ್ಟಿದ್ದಾರೆ"
"ಗುಡುಗು ಬಂದ ಮೇಲೆ ಮಳೆ ಬರುವುದು.. ನಾ ಕೂಗಿದಾಗಲೇ ನೀ ತಣ್ಣಗಾಗುವುದು"
"ನಾ ಅಜ್ಜ ಆದರೂ ಪರವಾಗಿಲ್ಲ.. ನೀ ಅಜ್ಜಿ ಆಗಬೇಡ ಕಣೆ" ಅಂದಾಗ ಆಕೆ "ಅರೆ ಇದೊಳ್ಳೆ ಚೆನ್ನಾಯಿತು.. ನೀವು ಅಜ್ಜ ಆದ ಮೇಲೆ ನಾ ಅಜ್ಜಿ ಆಗೋಲ್ವೇ"
"ಅಯ್ಯೋ ನೀ ನಮ್ಮ ಮೊಮ್ಮಗುವಿಗೆ ಅಜ್ಜಿ ಕಣೆ ನನಗಲ್ಲ"
"ನೋಡು ಹಿರಿಯರು ಒಂದು ಕಾಗದ ನೋಡಿದ ಕೂಡಲೇ ಈ ಅರಿಶಿನ ಬಣ್ಣ ನೋಡಿ ಶುಭ ಸಮಾಚಾರವೆ ಹೊರತು ಬೇರೆ ಏನೂ ಎಲ್ಲ ಎನ್ನುವುದನ್ನು ಎಷ್ಟು ಸುಂದರ ಸಂಪ್ರದಾಯ ಮಾಡಿದ್ದಾರೆ"

ಹೀಗೆ ಒಂದು ಸಂಭಾಷಣೆ ಸರಪಳಿಯ ಮೂಲಕ ಗಂಡ ಹೆಂಡತಿಯ ನಡುವೆ ಸೌಹಾರ್ಧ ಸಂಬಂಧ ಇರಬೇಕು ಎನ್ನುವುದನ್ನು ಪ್ರತಿಪಾದಿಸುತ್ತಾರೆ ನಿರ್ದೇಶಕರು. 

ಇನ್ನೂ ಸಂಭಾಷಣೆಯಲ್ಲಿ ಚುರುಕುತನ.. ಚಿಕ್ಕ ಚೊಕ್ಕ ಸಂದೇಶಗಳು ಕಾಣಸಿಗುತ್ತವೆ. 

"ಟೈಪ್ ರೈಟರ್ ನಲ್ಲಿ A ಒತ್ತಿದರೆ A ಬೀಳುತ್ತದೆ
ಆದರೆ ಹಣೆಬರಹದಲ್ಲಿ A ಒತ್ತಿದರೆ B ಬೀಳುವ ಸಂಭವವೇ ಹೆಚ್ಚು ಎನ್ನುವ ಮಾತಲ್ಲಿ ತಾನೊಂದು ನೆನದರೆ ದೈವ ಒಂದು ಬಗೆಯುತ್ತದೆ ಎನ್ನುವ ಮಾತು 

"ಕಾಫಿ ಬೇಡ,  ಕಾಫಿಯಲ್ಲಿ ಕಾ ಜೊತೆಗೆ "ವೇರಿ" ಬಂದರೆ ಫೀ ನಾ ಕೊಡುತ್ತೇನೆ" ಮದುವೆಯ ಹೊಸತರಲ್ಲಿ ಪತಿ ಪತ್ನಿಯರ ಸರಸ ಸಂಭಾಷಣೆಗೆ ಒಂದು ಝಲಕ್. 

"ತುಲಾ ಮಾಸೇತು ಕಾವೇರಿ ಎನ್ನುವ ಶ್ಲೋಕದಿಂದ ಶುರುವಾಗುವ ಕೊಡಗಿನ ಕಾವೇರಿ ಹಾಡು ಮನಸ್ಸಿಗೆ ಮುದ ನೀಡುತ್ತದೆ, ಕೊಡಗಿನ ವೇಷಭೂಷಣಗಳಲ್ಲಿ ಮಿಂಚುವ ನಾಯಕ ನಾಯಕಿ ಇಷ್ಟವಾಗುತ್ತಾರೆ. ಈ ಹಾಡಿನ ಬಗ್ಗೆ ಮಣಿಕಾಂತ್ ಸರ್ ಅವರ ಹಾಡು ಹುಟ್ಟಿದ ಸಮಯ ಅಂಕಣದಲ್ಲಿ ಹೇಳಿದ್ದರು.. ನಾಯಕ ಕಾವೇರಿಯನ್ನು ಹೊಗಳಿದರೆ.. ನಾಯಕಿ ಕರುನಾಡಿನ ಜೀವನದಿ ಕಾವೇರಿ ಬಗ್ಗೆ ಹಾಡುತ್ತಾರೆ ,  ಎರಡರ್ಥ ಇರುವ ಹಾಡು ಇದು. ಪುಟ್ಟಣ್ಣ ಹೇಳಿ ಬರೆಸಿದರು ಈ ಹಾಡನ್ನು ತಮ್ಮ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ಹತ್ತಿರ ಎಂದು ಓದಿದ್ದೇನೆ.

ಈ ಚಿತ್ರ ಕೆಲವೊಮ್ಮೆ ಹಾಸ್ಯ ರಸ ಉಕ್ಕಿಸುತ್ತದೆ.. ಕೆಲವೊಮ್ಮೆ ದುಃಖದ ಛಾಯೆಯನ್ನು ಹೊದ್ದಿಸಿಬಿಡುತ್ತದೆ . 

ಅಶ್ವತ್ ಅವರ ಮಜ್ಜಿಗೆ ಹುಳಿ ಪುರಾಣ, "ಏನು ಅಳಿಯಂದಿರೆ ನೀವು ಹೊದ್ದಿರುವ ವಸ್ತ್ರ ಮಗುಟ ಮಾರುಕಟ್ಟೆಗೆ ಬಂದಿಲ್ವಾ", 
ನಾಯಕ ನಾಯಕಿಯನ್ನು ಹೆರಿಗೆಗೆ ತವರಿಗೆ ಬಿಡಲು ಬಂದಾಗ ಅಶ್ವತ್ ನಾಯಕನ ಮುಖವನ್ನು ನೋಡಿ ಒಮ್ಮೆ ನಗುತ್ತಾರೆ, ನಾಯಕ ಹಾಗೆ ನಕ್ಕಾಗ ಇನ್ನೊಮ್ಮೆ ನಗುತ್ತಾರೆ.. ಹೀಗೆ ಮುಂದುವರೆಯುತ್ತದೆ, ಕಡೆಗೆ ಮನೆಯಲ್ಲಿ ಇರುವ ಎಲ್ಲರೂ ನಗುತ್ತಾರೆ.. "ಅಂತೂ ಕಾವೇರಿಯನ್ನು ತವರಿಗೆ ಕರೆದುಕೊಂಡು ಬಂದ್ರಿ ಅಳಿಯಂದಿರೆ" ಎಂದಾಗ ಕಕ್ಕಾಬಿಕ್ಕಿಯಾಗುವ ನಾಯಕ.

ಗೆಜ್ಜೆ ಪೂಜೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶಿವರಾಂ ಈ ಚಿತ್ರದಲ್ಲಿ ಚಿಕ್ಕ ಚೊಕ್ಕ  ಭಟ್ಟರ ಪಾತ್ರವನ್ನು ಮಾಡಿರುವುದು ಆ ಕಾಲದ ಕಲಾವಿದ, ನಿರ್ಮಾಪಕ, ನಿರ್ದೇಶಕರ ನಡುವೆ ಇರುತ್ತಿದ್ದ ಸಾಮರಸ್ಯವನ್ನು ತೋರಿಸುತ್ತದೆ. 

ಅಡಿಗೆ ಭಟ್ಟರ ಪಾತ್ರದಲ್ಲಿ ಶಿವರಾಂ ನಗೆ ಉಕ್ಕಿಸುತ್ತಾರೆ.. ಕಿಟಕಿ ಕಾಮಾಕ್ಷಮ್ಮ, ಇವರು ಏಕೆ ನನ್ನನ್ನು ಹೀಗೆ ಹೀಗೆ ಪಡೆ ನೋಡುವುದು, ಸದಾ ಅಡಿಕೆ, ಎಲೆ, ಹೊಗೆಸೊಪ್ಪು ತಿನ್ನುತ್ತಾ ಅರ್ಧ ಅರ್ಧ ಮಾತಾಡುವುದು.. ಜೊತೆಯಲ್ಲಿ ನಾಯಕಿ ಮಾನಸಿಕ ಸ್ಥಿಮಿತವನ್ನು ಮತ್ತೆ ಕಳೆದುಕೊಳ್ಳಲು ಈ ಪಾತ್ರವು ಕಾರಣ ಆಗುವುದು ಇವೆಲ್ಲಾ ನೋಡುವಾಗ ಒಂದು ಪಾತ್ರದಲ್ಲಿ ಎಲ್ಲಾ ರಸಗಳನ್ನು ತುಂಬಬಲ್ಲರು ಎನ್ನುವುದಕ್ಕೆ ಉತ್ತಮ ನಿದರ್ಶನ., 

ಸಂಧರ್ಭಕ್ಕೆ ತಕ್ಕ ಹಾಡುಗಳು ಮನಸ್ಸೆಳೆಯುತ್ತದೆ 

"ಉತ್ತರ ಧ್ರುವಧಿಂ " ವರಕವಿ ದ ರಾ ಬೇಂದ್ರೆ ಯವರ ಸುಂದರ ಕವನವನ್ನು ದಂಪತಿಗಳ ಮಧುಚಂದ್ರದ, ಮಧುರ ಮೈತ್ರಿಗೆ ಧ್ಯೋತಕವಾಗಿ ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಬಂದರೆ 

ಉಪಮೆಗಳ ಮಹಾಪೂರ "ಬಿಳಿಗಿರಿ ರಂಗಯ್ಯ ನೀನೆ ಹೇಳಯ್ಯ" ಬಿಳಿಗಿರಿ ರಂಗನ ಬೆಟ್ಟದ ಸುಂದರ ತಾಣವನ್ನು ತೋರಿಸುತ್ತಲೇ, ಮನುಜನ ಭಾವನೆಗಳು ಆಸೆಗಳು ಎಲ್ಲವನ್ನು ಪದಗಳಲ್ಲಿ ತುಂಬಿ ಕೊಟ್ಟಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯ ಗಮನ ನೀಡುತ್ತದೆ. ಜೊತೆಯಲ್ಲಿಯೇ ಪಿ ಸುಶೀಲ ಅವರ ಸುಶ್ರಾವ್ಯ ಗಾಯನ.. ಆಹಾ 

ಹಾಡು ಮುಗಿದ ಮೇಲೆ.. ತನ್ನ ಕಚೇರಿಯ ಮಾದಕ ಬೆಡಗಿ ವಿಮಲಾ ಬಗ್ಗೆ ನಾಯಕ ಹೇಳುವ ಮಾತು ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ" ಎನ್ನುವ ನಾಯಕ ಕಡೆಗೆ ಆ ಮೂರು ಕಾಸಿಗೆ ಜೋತು ಬೀಳುವುದು ಮನುಜನ ಅವಕಾಶ ಅವಲಂಬಿತ ಮನಸ್ಸಿನ ಬಗ್ಗೆ ಹೇಳುತ್ತದೆ. 

ಇಡಿ ಚಿತ್ರವನ್ನು ಒಂದು ಬಂಗಾರದ ಚೌಕಟ್ಟಿನಲ್ಲಿ ಪುಟ್ಟಣ್ಣ ಕಟ್ಟಿಕೊಟ್ಟರೆ.. ಆ ಚೌಕಟ್ಟಿನೊಳಗೆ ಮುತ್ತು ರತ್ನಗಳ ಹಾಗೆ ಕೂತು ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿಸಿಕೊಂಡವರು ಈ ಚಿತ್ರದ ಎಲ್ಲಾ ಪಾತ್ರಧಾರಿಗಳು. ಪ್ರತಿ ಪಾತ್ರಕ್ಕೂ ಅದರದೇ ಆದ ಚೌಕಟ್ಟು, ಪ್ರಾಮುಖ್ಯತೆ ಇದೆ. 

ಗಂಗಾಧರ್ ಚೆಲುವಾಂತ ಚಿನ್ನಿಗನ ಹಾಗೆ ಕಂಗೊಳಿಸುತ್ತಾ, ಪ್ರೇಮಯಾಚನೆ ಮಾಡುವುದು, ಮಾವನ ಮನೆಯಲ್ಲಿ ಪಜೀತಿಗೆ ಒಳಗಾಗುವುದು, ನಾಯಕಿ ತನ್ನ ಮಿತಿಯನ್ನು ಕಳೆದುಕೊಂಡಾಗ ತೊಳಲಾಡುತ್ತಾ ಅದರಿಂದ ಹೊರಗೆ ಬರಲಾರದೆ ಅನ್ಯ ಮಾರ್ಗ ಹುಡುಕುವುದು ಈ ದೃಶ್ಯಗಳಲ್ಲಿ ಅಭಿನಯ ನಿಜವಾಗಿದೆ. 

ಅಶ್ವತ್ ಮತ್ತು ಆದವಾನಿ ಲಕ್ಷ್ಮೀದೇವಿ ತಮ್ಮ ಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತಾ ಅವರಿಬ್ಬರ ನಡೆಯುವ ಸರಸ ಸಂಭಾಷಣೆ 
ಮುದ ನೀಡುತ್ತದೆ. 

ಶರಪಂಜರ ಅಯ್ಯಂಗಾರ್ ಎಂದೇ ಹೆಸರಾದ ಪಾತ್ರಧಾರಿ ಹೇಳುವ ಮಾತು "ಪುರುಷ-ಪ್ರಕೃತಿ ಎರಡು ಒಂದೇ ಕಡೆ ಇದ್ದ ಮೇಲೆ ಸಮಸ್ಯೆ ಉದ್ಭವ" ಎಷ್ಟು ನಿಜ ಈ ಮಾತು 

ಮೋಹ ಪಾಶಕ್ಕೆ ತುತ್ತಾಗಿ ಒಮ್ಮೆಯಾದರೂ ನಾಯಕ ನನ್ನವನಾದರೆ ಸಾಕು ಎನ್ನುವ ವ್ಯಾಮೋಹಿ ಪಾತ್ರದಲ್ಲಿ ರಂಗಭೂಮಿಯ ಕಲಾವಿದೆ ಚಿಂದೋಡಿ ಲೀಲಾ ಗಮನ ಸೆಳೆಯುತ್ತಾರೆ. 



ಇನ್ನೂ ಇಡಿ ಚಿತ್ರವನ್ನು ಅಭಿನಯದಲ್ಲಿಯೇ ನುಂಗಿದ ಕಲ್ಪನಾ ಅವರ ಬಗ್ಗೆ ಹೇಳಲೇ ಬೇಕು
  • ಹಿತವಾದ ಮಧುರವಾದ ಸಂಭಾಷಣೆ ಆರಂಭಿಕ ದೃಶ್ಯಗಳಲ್ಲಿ 
  • ಹಣ್ಣು ಕೊಟ್ಟೆಯೋ ಹೃದಯ ಕೊಟ್ಟೆಯೋ ಅನ್ನುವಾಗ ನಡುಗುವ ಪ್ರೀತಿ ತುಂಬಿದ ಮಾತುಗಳು 
  • ತನ್ನ ಅಪ್ಪ ನಾಯಕ ನಾಯಕಿಯ ಪ್ರೇಮದ ಬಗ್ಗೆ ವಿಚಾರಿಸಿದಾಗ ಗಾಬರಿಗೊಳ್ಳುವ ಅಭಿನಯ 
  • ಮದುವೆಯಾಗಿ ಪತಿರಾಯನ ಮನೆಗೆ ಬಂದ ಮೇಲೆ ತನ್ನ ಅತ್ತೆಗೆ ಪ್ರೀತಿಯಿಂದ ತಂದು ಕೊಟ್ಟ ರೇಡಿಯೋ ಬಗ್ಗೆ ಹೇಳುವಾಗ ಪುಟ್ಟ ಮಗುವಿನ ಹಾಗೆ ಕುಣಿಯುವ ದೃಶ್ಯ
  •  ಶ್ರೀರಂಗಪಟ್ಟಣದ ನದಿ ತೀರದಲ್ಲಿನ ಅಭಿನಯ ಕಣ್ಣೀರು ತರೆಸುತ್ತದೆ. ಸ್ತ್ರೀಯರಿಗೆ ಪ್ರತಿ ತಿಂಗಳೂ ಒಂದು ಮರು ಹುಟ್ಟು ಜೊತೆಯಲ್ಲಿ ಗರ್ಭಿಣಿ ಸ್ಥಿತಿಯಿಂದ ಪಾರಾಗಿ ಹೊರಬರುವುದು ನಿಜಕ್ಕೂ ಇನ್ನೊಂದು ಮರು ಜನ್ಮವೇ ಎಂಬ ಮಾತು ಈ ದೃಶ್ಯದಲ್ಲಿದೆ. ಬರಿ ಭೋಗದ ವಸ್ತುವಾಗಿ ಬಿಂಬಿತವಾಗುವ ಹೆಣ್ಣಿನ ಪಾತ್ರವನ್ನು ಎಷ್ಟು ನಾಜೂಕಾಗಿ ಅವರ ಮನಸ್ಸು ಎಷ್ಟು ನವಿರು.. ಅದಕ್ಕೆ ಸ್ವಲ್ಪ ಘಾಸಿಯಾದರೂ ಮುಂದಿನ ಜೀವನ ನರಕ ಎನ್ನುವ ಭಾವನ್ನು ಈ ಚಿತ್ರ ಹೊರಹಾಕುತ್ತದೆ. 
  • ಅಡಿಗೆ ಭಟ್ಟನ ಜೊತೆಯಲ್ಲಿ ಸಂಭಾಷಣೆ, ಕಿಟಕಿ ಕಾಮಾಕ್ಷಮ್ಮ ತಮ್ಮನ್ನು ತಿರಸ್ಕಾರ ಮಾಡುವಾಗ, ಮಹಿಳ ಸಮಾಜ ಇವರನ್ನು ಹುಚ್ಚಿ ಎಂದಾಗ, ಶೆಟ್ಟರ ಅಂಗಡಿ, ಶಾಲೆಯಲ್ಲಿ ಕಡೆಗೆ ತನ್ನ ಅಪ್ಪ ಮಾತಿಗೆ "ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಾರಾ ಹುಚ್ಚಿ ಹುಚ್ಚಿ" ಎಂದಾಗ ಅವರ ಅಭಿನಯ ವಾಹ್ ಎನ್ನಿಸುತ್ತದೆ 
  • ಇನ್ನೂ "ಹದಿನಾಲ್ಕು ವರುಷ ವನವಾಸದಿಂದ" ವಿಜನಾರಸಿಂಹ ಅವರ ಸಾಹಿತ್ಯಕ್ಕೆ ಅಮೋಘ ಅಭಿನಯ, ತನ್ನ ಕಥೆಯನ್ನು ಸೀತೆಗೆ ಹೋಲಿಸಿಕೊಂಡು ಅಳುತ್ತಾ ಹಾಡುವಾಗ ಕಲ್ಲು ಕರಗುತ್ತದೆ 
  • "ಸಂದೇಶ ಮೇಘ ಸಂದೇಶ" ಹಾಡಿನಲ್ಲಿ ಮಕ್ಕಳ ಜೊತೆಯಲ್ಲಿ ಹಾಡುತ್ತಾ ಕುಣಿಯುತ್ತಾ ತಾನು ಮತ್ತೊಮ್ಮೆ ಹೊಸಬಾಳಿನತ್ತ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ವಿಜಯನಾರಸಿಂಹ ಅವರ ಸಾಹಿತ್ಯಕ್ಕೆ ತೋರುವ ಭಾವ ಪೂರ್ಣ ನಟನೆ 
  • ತನಗೆ ಹುಚ್ಚು ಹಿಡಿದಿದೆ ಎಂದು ನಿಂತು ಹೋಗುವ ತನ್ನ ತಂಗಿಯ ಮದುವೆಗೆ ಪ್ರಯತ್ನಿಸುವ ದೃಶ್ಯ 
  • ಬಹುಕಾಲ ನೆನಪಲ್ಲಿ ಉಳಿಯುವ ಚಿತ್ರದ ಅಂತಿಮ ದೃಶ್ಯ.. ಅಬ್ಬಾ ನೋಡುಗರ ಎದೆಯನ್ನು ಕಣ್ಣೀರಿನಿಂದ ತೋಯಿಸುತ್ತದೆ. ಎಲ್ಲೋ ಕೇಳಿದ ನೆನಪು.. ಆ ದೃಶ್ಯ ಮುಗಿದ ಮೇಲೂ ಸ್ವಲ್ಪ ಹೊತ್ತು ಅದೇ ಭಾವದಲ್ಲಿ, ಅದೇ ಗುಂಗಿನಲ್ಲಿ  ಕಲ್ಪನಾ ಇದ್ದರೆಂದು.. ಕೆಲವೊಮ್ಮೆ ನೋಡುಗರನ್ನೇ ತಲ್ಲಣ ಗೊಳಿಸುವ ಆಭಿನಯ ಮಾಡಿದ ಅವರನ್ನು ಕೆಲವು ಘಂಟೆಗಳು ಕಾಡಿದ್ದು ಸುಳ್ಳಲ್ಲ ಅನಿಸುತ್ತದೆ. 
ಈ ಚಿತ್ರದ ಸಂಗೀತಬಗ್ಗೆ ಎರಡು ಮಾತೆ ಇಲ್ಲ.. ಪುಟ್ಟಣ್ಣ ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್ ತಮ್ಮೆಲ್ಲ ಪ್ರತಿಭೆಯನ್ನು ಅವರ ಚಿತ್ರಗಳಿಗೆ ಮೀಸಲಿಟ್ಟಿದ್ದರು. ಪ್ರತಿ ಹಾಡು, ಹಿನ್ನೆಲೆ ಸಂಗೀತ ವಿಭಿನ್ನವಾಗಿರುತ್ತಿತ್ತು. ಈ ಚಿತ್ರದ ಎಲ್ಲಾ ಹಾಡುಗಳು ಇಷ್ಟವಾಗುತ್ತವೆ. 

ಪುಟ್ಟಣ್ಣ ಈ ಚಿತ್ರವನ್ನು ತಮ್ಮ ಎಲ್ಲಾ ಚಿತ್ರಗಳಂತೆ ತಮ್ಮ ಮನಕ್ಕೆ ಹತ್ತಿರವಾಗಿ ಚಿತ್ರೀಕರಿಸಿದ್ದಾರೆ. ಪ್ರತಿಯೊಂದು ದೃಶ್ಯಕ್ಕೆ ಅವರು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ. ಯಾವುದನ್ನು ಅವರು ಗೌಣ ಮಾಡಿಲ್ಲ. ಸುಂದರ ಹೊರಾಂಗಣ, ಒಳಾಂಗಣ, ಮನೆಯಲ್ಲಿನ ಎಲ್ಲಾ ಪದಾರ್ಥಗಳು ಅವರ ಶ್ರಮಕ್ಕೆ ಜೊತೆಯಾಗಿ ನಿಂತಿವೆ. 

"ಸಂದೇಶ ಮೇಘ ಸಂದೇಶ" ಎನ್ನುವ ಹಾಡಿಗೆ ನಾಯಕ ನಾಯಕಿಯ ಪ್ರೇಮಾಂಕುರ ಮೂಡಲು ಸಹಾಯ ಮಾಡುವ ಕಿತ್ತಳೆ ಹಣ್ಣನ್ನೇ ರಾಶಿ ರಾಶಿಯಾಗಿ ಸುರಿಸಿ ಚಿತ್ರೀಕರಿಸುವ ಜಾಣ್ಮೆ ಪುಟ್ಟಣ್ಣ ಅವರದು. 

ಮೊದಲ ರಾತ್ರಿ ದೃಶ್ಯದಲ್ಲಿ ಹೂವು, ದೀಪ, ಅಗರಬತ್ತಿಯ ಧೂಪ ತೋರಿಸುವ ಜಾಣ್ಮೆ.. ಹೂವಿನಂತ ನಾಯಕಿಯ ಮನಸ್ಸು, ಒಂದು ಸಂಶಯ ಎನ್ನುವ ಧೂಪದ ಹೊಗೆಗೆ ಸಿಕ್ಕಿ, ದೀಪ ಜ್ವಾಲೆಯಾಗಿ ನಾಯಕಿಯ ಬಾಳನ್ನೇ ಸುಡುವ ಸಾಂಕೇತಿಕ ದೃಶ್ಯ. 


ಮಾನಸಿಕ ಚಿಕಿತ್ಸಾಲಯವನ್ನು ಪರಿಚಯಿಸುತ್ತಾ ಅವರು ಆಡುವ ಕೆಲ ಮಾತುಗಳು ಗಮನ ಸೆಳೆಯುತ್ತದೆ. 

"ನಿಮಗೆ ಕಾರಣ ಮುಖ್ಯವೋ ಅವಳು ಗುಣವಾಗುವುದು ಮುಖ್ಯವೋ" ಎನ್ನುವ ಮಾತುಗಳನ್ನು ವೈದ್ಯರ ಮೂಲಕ ಹೇಳಿಸಿ ಪ್ರತಿ ಘಟನೆಗೂ/ಸಮಸ್ಯೆಗೂ ಒಂದು ಕಾರಣ ಇರುತ್ತದೆ ಆದರೆ ಕಾರಣ ಹುಡುಕಿಕೊಂಡು ಹೋದಾಗ ಮೂಡುವ ಭಾವನೆ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಅದರ ಬದಲು ಅದಕ್ಕೆ ಉತ್ತರ ಹುಡುಕಿಕೊಂಡು ನಿವಾರಣೆ ಮಾಡಿಕೊಂಡು ಹೊಸ ಹೆಜ್ಜೆ ಇಡಿ ಎನ್ನುವ ಸಂದೇಶ ಸಾರುವ ಈ ಚಿತ್ರ.. ಚಿತ್ರಜಗತ್ತಿನಲ್ಲಿಯೇ ಒಂದು ಮಹೋನ್ನತ ಕೃತಿ, 

ಇದಕ್ಕೆ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿ ಅವರಿಗೂ ಮತ್ತು ಪುಟ್ಟಣ್ಣ ಕಣಗಾಲ್ ಅವರಿಗೂ ಸಹಸ್ರ ಧನ್ಯವಾದಗಳು. 

Monday, October 20, 2014

ಮನದಲ್ಲೇ ಹೆಜ್ಜೆ ಇಟ್ಟು ಕಾಡುವ "ಗೆಜ್ಜೆ ಪೂಜೆ"! (1969)

ಮೊದಲಿಗೆ ಪುಟ್ಟಣ್ಣ ಕಣಗಾಲ್ ಕ್ಷಮೆ ಕೇಳಬೇಕು.. ಅವರು ಚಿತ್ರಿಸಿದ ಎಲ್ಲಾ ಚಿತ್ರಗಳು ಮಾಣಿಕ್ಯವೇ ಆದರೂ, ನನಗೆ ತುಂಬಾ ಹಿಡಿಸಿದ ಚಿತ್ರಗಳನ್ನು ಮತ್ತೆ ಮತ್ತೆ ನೋಡಿ ಅವರ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಬೆಳೆಸಿಕೊಂಡಿದ್ದೆ. ಗೆಜ್ಜೆ ಪೂಜೆ ಚಿತ್ರ ಮಹಾನ್ ಕೃತಿ ಎಂದು ಎಲ್ಲರ ಮೆಚ್ಚುಗೆಗಳಿಸಿದ್ದರೂ, ಅನೇಕ ಬಾರಿ ಈ ಚಿತ್ರ ನೋಡಿದ್ದರೂ ಯಾಕೋ ನನಗೆ ಇಷ್ಟವಾದ ಚಿತ್ರಗಳೇ ಕಣ್ಣ ಮುಂದೆ ಕುಣಿಯುತ್ತಿದ್ದವು.  

ಅವರ ಕನ್ನಡದ ಎಲ್ಲಾ ಚಿತ್ರಗಳ ಬಗ್ಗೆ ಬರೆಯಲು ಶುರುಮಾಡಿದಾಗ, ಮಾಡಿಕೊಂಡ ಒಂದು ನಿಯಮ, ಬರೆಯುವ ಮೊದಲು ಮತ್ತೊಮ್ಮೆ ಆ ಚಿತ್ರವನ್ನು ನೋಡಬೇಕು, ಚಿಕ್ಕ ಪುಟ್ಟ ಟಿಪ್ಪಣಿ ಮಾಡಿಕೊಂಡು, ಆ ಚಿತ್ರದ ಬಗ್ಗೆ ಬರೆಯಬೇಕು.  

ಅಬ್ಬಾ, ಮೊದಲ ದೃಶ್ಯದಿಂದ ಕಡೆಯ ತನಕ ನೋಡಿದ ಮೇಲೆ, ಸೂಕ್ಷ್ಮವಾಗಿ ಗಮನಿಸು ಎನ್ನುತ್ತಾ ನನ್ನ ಮನಸ್ಸು ಇನ್ನಷ್ಟು ಒಳಹೋಗಲು ಅಣು ಮಾಡಿಕೊಟ್ಟಿತು. ಹಲವಾರು ದೃಶ್ಯಗಳಲ್ಲಿ ಕಣ್ಣಲ್ಲಿ ನೀರು ತುಂಬಿ, ಮೊದಲೇ ಕಪ್ಪು ಬಿಳುಪಿನ ಚಿತ್ರ ಇನ್ನಷ್ಟು ಮಂಜಾಯಿತು. 


ಗುರುಗಳೇ ಪುಟ್ಟಣ್ಣ ಕಣಗಾಲ್ ನಿಮಗೆ ನನ್ನ ಅನಂತ ಧನ್ಯವಾದಗಳು ಇಂತಹ ಸೂಕ್ಷ್ಮ ವಿಚಾರವನ್ನು ಅಶ್ಲೀಲತೆಯ ಸೊಂಕಿಲ್ಲದೆ, ಕೆಟ್ಟ ಪದಗಳ ಬಳಕೆಯಿಲ್ಲದೆ, ಎಲ್ಲಾರು ಒಟ್ಟಾಗಿ ಕೂತು ನೋಡುವ ಚಿತ್ರ ರತ್ನವನ್ನು ಕೊಟ್ಟಿದ್ದಕ್ಕೆ. 

ಒಂದು ವಿಚಿತ್ರ ವಿಚಾರವನ್ನು ಎರಡು ರೀತಿಯಲ್ಲಿ ಹೇಳಬಹುದು.. ಒಂದು ಹೇಳಬಾರದ ರೀತಿಯಲ್ಲಿ.. ಇನ್ನೊಂದು ಹೇಳಬಹುದಾದ ರೀತಿಯಲ್ಲಿ.. ಪುಟ್ಟಣ್ಣ ಯಾವಾಗಲು ಎರಡನೇ ದಾರಿಯಲ್ಲಿ ಹೊರಳಿದವರು ಮತ್ತು ತಮ್ಮ ಛಾಪನ್ನು ಮೂಡಿಸಿದವರು. 

* * * * * * * * * * * * * * * * * * * * * * * * * * * *

ಒಂದು ಚಿತ್ರದ ಆರಂಭದಲ್ಲೇ ಎಷ್ಟು ನಾಜೂಕಾಗಿ ಹೇಳಬೇಕಾದ ವಿಷಯವನ್ನು ಮಾತಿನ ರೂಪದಲ್ಲಿಯೂ, ದೃಶ್ಯರೂಪದಲ್ಲಿಯೂ ಹೇಳಿ ತಮ್ಮ ಮುದ್ರೆಯನ್ನು ಒತ್ತಿ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಹೇಳಬಯಸುವ ಸಮಸ್ಯೆ ಮತ್ತು ಅದರ ಪರಿಣಾಮ ಎಲ್ಲವನ್ನೂ ಸ್ಥೂಲವಾಗಿ ಚಿತ್ರಿಸಿದ್ದಾರೆ. 

ಪುಟ್ಟಣ್ಣ ಅವರ ಮಧುರ ಧ್ವನಿಯಲ್ಲಿ ಪರಿಚಯ ಮಾಡಿಕೊಳ್ಳುವ ಚಿತ್ರ ಹಿನ್ನೆಲೆಯಲ್ಲಿ ಆ ಸಮಸ್ಯೆಯನ್ನು ಹೇಳುತ್ತಾ ಹೋಗಿ ಪಾತ್ರವರ್ಗವನ್ನು ತೋರಿಸುತ್ತಾ ಹೋಗುತ್ತಾರೆ. 

ಸಮಸ್ಯೆಯ ಮೇಲೆ ಬೆಳಕು ಚೆಲ್ಲಲು ತೆಗೆದ ಈ ಚಿತ್ರವನ್ನು ತಯಾರಿಸಿದ್ದು "ಚಿತ್ರಜ್ಯೋತಿ" ಲಾಂಛನದಲ್ಲಿ ಆಹಾ ಎಂಥ ಸುಂದರ ಲಾಂಛನ., ರಾಶಿ ಸಹೋದರರು ಎಂದೇ ಪ್ರಖ್ಯಾತರಾದ ರಾಮ ಮೂರ್ತಿ ಮತ್ತು ನಟ ಶಿವರಾಂ ಅವರ ಪಾಲುದಾರಿಕೆಯಲ್ಲಿ ಮೂಡಿಬಂತು ಈ ಚಿತ್ರ. 

ಶ್ರೀಮತಿ ಎಂ ಕೆ ಇಂದಿರಾರವರ ಇದೆ ಹೆಸರಿನ ಕಾದಂಬರಿ ಅಂದಿನ ಜನಪ್ರಿಯ "ಪ್ರಜಾಮತ" ವಾರ ಪತ್ರಿಕೆಯಲ್ಲಿ ಧಾರಾವಾಹಿ ಹರಿದು ಜನರ ಮನಸ್ಸನ್ನು ಸೂರೆಗೊಂಡಿತ್ತು. ಅವರ ಈ ಕಥೆಗೆ ನವರತ್ನ ರಾಮ್ ಅವರ ಸೊಗಸಾದ ಸಂಭಾಷಣೆ,  ಶ್ರೀಕಾಂತ್ ಅವರ ಸುಂದರ ಛಾಯಾಗ್ರಹಣ ಒದಗಿ ಬಂದರೆ, ವಿಜಯನಾರಸಿಂಹ, ಆರ್ ಏನ್ ಜಯಗೋಪಾಲ್, ಚಿ ಉದಯಶಂಕರ್ ಅವರ ಸುಲಲಿತ ಸಾಹಿತ್ಯ ಹೊಂದಿದ್ದ ಹಾಡುಗಳಿಗೆ ಸಂಗೀತದ ಚೌಕಟ್ಟು ಕೊಟ್ಟವರು ವಿಜಯಭಾಸ್ಕರ್.  ಇಂಥಹ ಒಂದು ಸುಂದರ ತಂಡದ ಸಾರಥ್ಯವಹಿಸಿ ಚಿತ್ರಕಥೆ ಬರೆದು ದಿಗ್ದರ್ಶನ ಮಾಡಿದ ಪುಟ್ಟಣ್ಣ ಸದಾ ಸ್ಮರಣೀಯರು. 

ಈ ಚಿತ್ರದಿಂದ ಲೋಕನಾಥ್ ಮತ್ತು ಆರತಿ ಬೆಳ್ಳಿತೆರೆಗೆ ಪರಿಚಯವಾಗುತ್ತಾರೆ.  

ಲೀಲಾವತಿ ಅಭಿನಯ, ನೋವನ್ನು ನುಂಗಿಕೊಂಡು, ನಗಲಾರದೆ, ಜೀವನ ದೂಕುವ ಶೋಷಿತೆಯ ಪಾತ್ರದಲ್ಲಿ ಮನ ಕಲಕುತ್ತಾರೆ. "ಮಗುವೆ ನಿನ್ನ ಹೂ ನಗೆ ಒಡವೆ ಎನ್ನ ಬಾಳಿಗೆ" ಎನ್ನುವ ಹಾಡಿನಲ್ಲಿ ಅವರ ಅಭಿನಯಕ್ಕೆ ಶಕ್ತಿ ತುಂಬುವುದು ಜಾನಕಿಯಮ್ಮನವರ ಗಾಯನ, ನೋವು ತುಂಬಿಕೊಂಡ ಮನಕ್ಕೆ ಪದಗಳನ್ನು ತುಂಬಿಕೊಟ್ಟ ವಿಜಯನಾರಸಿಂಹ ಅವರ ಸಾಹಿತ್ಯ ಆಹಾ ಮನಕ್ಕೆ ಛತ್ರಿ ಬೇಕೋ ಏನೋ ಅನ್ನಿಸುತ್ತದೆ. ಅಷ್ಟು ಗಾಢವಾಗಿದೆ  ಆ ಗೀತ ದೃಶ್ಯ. 

ಅವರು ಮಗುವಿಗೆ ಹೇಳುವ ಮಾತು "ನೀ ಬದುಕಲು.. ನಾ ಬದುಕಿದ್ದು ಸತ್ತಂತೆ ಬದುಕುತ್ತೇನೆ" ಎನ್ನುವಾಗ ನೋವಿದ್ದರೂ, ತನ್ನ ಮುಂದಿನ ಪೀಳಿಗೆಯನ್ನು ಉಳಿಸಲು ಸೋಲುವ ಮನಸ್ಸು, ಮತ್ತು "ಹಂಚಿ"ಕೊಂಡ ಸಾಹುಕಾರ ಸತ್ತಾಗ ಅಳದೆ ನಾ ಅಳೋಲ್ಲ ಎಂದು ಹೇಳುವಾಗ ಮುಖದಲ್ಲಿ ತೋರುವ ಭಾವನಾ ರಹಿತ ನೋಟ, ಬರಿ ತನುವನ್ನು ಮಾತ್ರ ಹಂಚಿಕೊಂಡ, ಆದರೆ ಮನವನ್ನು ಮುಟ್ಟದ ಆ ಸಾಹುಕಾರರ ಬಗೆಗಿನ ತಿರಸ್ಕಾರ ಸೂಪರ್ ಎನ್ನಿಸುತ್ತದೆ. 

ನೋವಿದ್ದರೂ, ತನ್ನ ಮಗಳ ಜನ್ಮಕ್ಕೆ ಕಾರಣವಾದ ಮನುಷ್ಯ ಸಿಕ್ಕರೂ, ಅವರ ಒಳಿತಿಗಾಗಿ, ಸಮಾಜದಲ್ಲಿ ಅವರಿಗಿರುವ ಹೆಸರಿಗೆ ಮಸಿಬಳಿಯಬಾರದು ಎನ್ನುವ ಮಾತು, ಅದರ ಜೊತೆಯಲ್ಲಿಯೇ ಆ ಮನುಷ್ಯ ಹೇಳುವ ಮಾತು "ನೋಡು ನಾವಿಬ್ಬರು ಅರ್ಧ ಆಯುಷ್ಯ ಕಳೆದಾಗಿದೆ ಇನ್ನೇನಿದ್ದರೂ ಮಕ್ಕಳ ಭವಿಷ್ಯದ ಕಡೆಗೆ ಮಾತ್ರ ನಮ್ಮ ಗಮನ" ಎನ್ನುವ ಮಾತಿನಲ್ಲಿ ಹಿಂದೆ ನಡೆದ ಘಟನೆಯನ್ನು ಅಳಿಸಿ, ಮರೆತು ಮುಂದಕ್ಕೆ ಹೆಜ್ಜೆ ಇಡಿ ಎನ್ನುವ ಸಂದೇಶ ತಾಕುತ್ತದೆ. 

ಕಥೆಗಾರ್ತಿ, ಸಂಭಾಷಣಕಾರ, ನಿರ್ದೇಶಕ ಇವರ ಸಮ್ಮಿಳಿತದಲ್ಲಿ ಮೂಡಿ ಬಂದ ಈ ದೃಶ್ಯ ಅಮೋಘ ಅಮೋಘ.

ಮಗಳು ಎದುರು ಮನೆಯ ಮಗಳ ಮದುವೆಯಲ್ಲಿ ಹಾಡುವ ಹಾಡು "ಪಂಚಮ ವೇದ ಪ್ರೇಮದ ನಾದ" ಜಾನಕಿಯಮ್ಮ ಅವರ ಅಮೋಘ ಧ್ವನಿಯಲ್ಲಿ ಕಿವಿಯಿಂದ ಹೃದಯಕ್ಕೆ ಬಂದು ನಿಂತರೆ, ಸರಳ ಸಾಹಿತ್ಯ ವಿಜಯನಾರಸಿಂಹ ಅವರ ಲೇಖನಿಯಿಂದ ಹೊರಮ್ಮುವ ಪದಗಳಿಗೆ ಸಂಗೀತ ಬರಸೆಳೆದು ಅಪ್ಪಿಕೊಳ್ಳುತ್ತದೆ. 

ಇದೆ ಹಾಡಿನಲ್ಲಿ ಮಗಳ ಭವಿಷ್ಯ ಎತ್ತರಕ್ಕೆ ಏರುತ್ತದೆ ಎನ್ನುವ ಒಂದು ಸಣ್ಣ ಭರವಸೆ ಲೀಲಾವತಿಗೆ ಸಿಕ್ಕಾಗ ಅದನ್ನು ದೃಶ್ಯದಲ್ಲಿ ತೋರಿಸಲು ಕ್ಯಾಮೆರಾ ಚಾಲನೆಯನ್ನು ಹಾಗೆ ಮೇಲಕ್ಕೆ ಏರಿಸುತ್ತಾರೆ. ಇದು ಒಂದು ಅದ್ಭುತ ದೃಶ್ಯ ಕಲ್ಪನೆ. 

ಈ ಹಾಡಿನ ನಂತರ ಕೆಲವೇ ದೃಶ್ಯಗಳ ಬಳಿಕ ಮತ್ತೊಮ್ಮೆ ಮೂಡಿ ಬರುತ್ತದೆ "ಪಂಚಮ ವೇದ ಪ್ರೇಮದ ನಾದ" ಈ ಬಾರಿ ಜೇನು ಸ್ವರದ ಪಿ ಬಿ ಎಸ್ ಸಿರಿ ಕಂಠದಲ್ಲಿ.. 

ಎಲ್ಲಾ  ಪರಿಸ್ಥಿತಿಯಲ್ಲೂ ಅತಿ ಕ್ರಮಣ ಮಾಡುವುದಿಲ್ಲ ಎನ್ನುವ ಧರ್ಮೇಚ ಅರ್ಥೆಚ ಕಾಮೇಚ ನಾತಿ ಚರಿತವ್ಯಃ ಶ್ಲೋಕಕ್ಕೆ   ಧರ್ಮೇಚ ಅರ್ಥೆಚ ಕಾಮೇಚ ನಾತಿಚರಾಮಿ ಎಂಬ ಉತ್ತರ, ಭರವಸೆ ನೀಡುವ ನಾಯಕನ ಮಾತಿಗೆ ಸಂತಸದಿಂದ ನಲಿದಾಡುವ ನಾಯಕಿ ಹಾಡುವ ಹಾಡೇ " ಗಗನವು ಎಲ್ಲೋ ಭೂಮಿಯೂ ಎಲ್ಲೋ" ಎರಡು ಕಾರಣದಿಂದ ಗಮನ 
ಸೆಳೆಯುತ್ತದೆ. 

೧. ಗಗನವು ಎಲ್ಲೋ ಭೂಮಿಯು ಎಲ್ಲೋ ಎನ್ನುವಾಗ ಕ್ಯಾಮೆರಾವನ್ನು ಗರ ಗರ ಎಂದು ಪೂರ್ತಿ ತಿರುಗಿಸಿ ತೋರಿಸುವ ರೀತಿ 
೨. ಆ ಆ ಆಆಅ ಆಆಅ ಆಆ ಆಆಆಅ ಎನ್ನುವಾಗ ಉಸಿರು ಕಟ್ಟಿ ಜಾನಕಿಯಮ್ಮ ಹೇಳುವ ತಾಕತ್.. ರೋಮಾಂಚನ ಗೊಳಿಸುತ್ತದೆ. 

ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಬೆಳೆಸಬೇಕು ಎನ್ನುವ ಅದಮ್ಯ ಉತ್ಸಾಹವಿದ್ದ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಮದುವೆ ಸಮಾರಂಭಗಳಲ್ಲಿ ಬರುವ ಆಚಾರ ವಿಚಾರಗಳನ್ನು ಶಾಸ್ತ್ರೋಕ್ತವಾಗಿ ತೋರಿಸುತ್ತಿದ್ದ ರೀತಿ ಇಷ್ಟವಾಗುತ್ತದೆ. ಈ ಚಿತ್ರದಲ್ಲಿಯೂ ಕೆಲವು ಸಂಸ್ಕೃತ ಮಂತ್ರಗಳಿಗೆ ಅದರ ಅರ್ಥವನ್ನು ಹೇಳಿಸುವುದು ಅವರ ಸಂಸ್ಕಾರ ಹೃದಯವನ್ನು ತೋರಿಸುತ್ತದೆ. 

ಒಂದು ಹಾಡನ್ನು ಬರಿಯ ಸಾಹಿತ್ಯ, ಸಂಗೀತ, ನೃತ್ಯಗಳ ಸಂಗಮ ಅನ್ನಿಸದೆ ಅದನ್ನು ಕೂಡ ಕಥೆಯನ್ನು ಮುಂದಕ್ಕೆ ತರಲು ಸಹಾಯ ಮಾಡುತ್ತಲೇ ತಮ್ಮ ಕಥಾದೃಶ್ಯಗಳನ್ನೂ ಹಾಡಿನಲ್ಲಿ ತೋರಿಸುವಲ್ಲಿ ಸಿದ್ಧ ಹಸ್ತರಾಗಿದ್ದರು ಪುಟ್ಟಣ್ಣ. ಅವರ ಸಾಮರ್ಥ್ಯ "ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ" ಹಾಡಿಗೆ ಜಾನಕಿಯಮ್ಮ ಮತ್ತೆ ಟೊಂಕ ಕಟ್ಟಿ ನಿಂತು ಹಾಡಿದರೆ, ಅದನ್ನು ಚಿತ್ರೀಕರಿಸಿದ ರೀತಿಗೆ ಪುಟ್ಟಣ್ಣ ಅವರಿಗೆ ಶ್ರೇಯಸ್ಸು ತಲುಪುತ್ತದೆ. ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಪದಗಳ ಬಳಕೆ ಬಹು ಇಷ್ಟವಾಗುತ್ತದೆ. 

ಚಿತ್ರದ ಅಂತಿಮ ಭಾಗದಲ್ಲಿ ವೇಶ್ಯ ಪದ್ಧತಿಯ ಗೆಜ್ಜೆ ಪೂಜೆಯನ್ನು ವಿಸ್ತೃತವಾಗಿ ತೋರಿಸುತ್ತಾ ಅದಕ್ಕೆ ಹಾಡಿನ ಪೋಷಾಕು ಹಾಕುವಲ್ಲಿ ಸುಗಮ ಸಂಗೀತದ ಪ್ರತಿಭೆ ಬಿ ಕೆ ಸುಮಿತ್ರ ಬರುತ್ತಾರೆ. ಅರ್ ಏನ್ ಜಯಗೋಪಾಲ್ ಅವರ ಸಾಹಿತ್ಯ  ಸಿರಿ ಈ ಹಾಡಿಗೆ ಜೀವ ತುಂಬುತ್ತದೆ. 

 ಈ ಚಿತ್ರದಲ್ಲಿ ನಾನು ಇದ್ದೇನೆ ಎಂದು ಸಾರಿ ಸಾರಿ ಹೇಳುವ ಅಭಿನಯ ನಾಲ್ವರದು. 

ನನ್ನ ಮೆಚ್ಚಿನ ಬಾಲಣ್ಣ ಒಂದು ಐದು ದೃಶ್ಯದಲ್ಲಿ ತಮ್ಮ ಟ್ರೇಡ್ ಮಾರ್ಕ್ ಛಾಪನ್ನು ಮೂಡಿಸುತ್ತಾರೆ. ಅವರ ಪಂಚಿಂಗ್ ಮಾತುಗಳು ಬಿಕ್ಕುವ ರೀತಿಯಲ್ಲಿ ಹೇಳುವ ಶೈಲಿ ಆಹಾ ಅದರ ಕೆಲವು ತುಣುಕುಗಳು

೧. ಹೋಟೆಲ್ ಗೆ ಹೋದರೆ ನಮಗೆ ಬೇಕಾಗಿದ್ದು ಅವನೆಲ್ಲೇ ಕೊಡ್ತಾನೆ.. ಅವನು ಮಾಡಿದ್ದು ನಾವು ತಿನ್ನಬೇಕು.. ಎಲ್ಲಯ್ಯ ರವೆ ಇಡ್ಲಿ ಅಂತ ಎಗರ್ಲಾಡಿದರೆ.. ಹೋಗಯ್ಯ ತೀರ್ಥಹಳ್ಳಿ ಜಾತ್ರೆಗೆ ಅಂತಾನೆ 

೨. ಈ ಸಿಗರೆಟ್ ಪ್ಯಾಕೆಟ್, ಅದನ್ನು ಬಿಟ್ಟು ಹೋದ ಆ ಕೈ, ಅದಕ್ಕೆ ಸಂಬಂಧ ಪಟ್ಟ ತಲೆ ಇದು ಯಾವುದು ಅಂತ ನನ್ನ ತಲೆಗೆ ಹೊಳಿತ ಇಲ್ಲವಲ್ಲ 

೩. ನನ್ನ ಸಾವಿತ್ರ್ಹಿ ಹಣೆಯ ಮೇಲೆ ಕ್ವೆಶ್ಚನ್ ಮಾರ್ಕು 
     ತುಟಿಯ ಮೇಲೆ ಡೇಂಜರ್ ಮಾರ್ಕು 
     ಕಣ್ಣಲ್ಲಿ ಹೊಸ ಸ್ಪಾರ್ಕು 
     ಇದೆಲ್ಲ ನನ್ನ ತಲೇಲಿ ಆಗಿದೆಯೋ ಕ್ವೆಶ್ಚನ್ ಮಾರ್ಕು  

೩. ದ್ವಾಪರ ಯುಗದಲ್ಲಿ ದುಶ್ಯಾಸನ ದ್ರೌಪದಿ ಸೀರೆ ಎಳೆದು ಎಳೆದು ಬೆವತು ಹೋದನಂತೆ.. ಈ ಕಲಿಯುಗದಲ್ಲಿ ನನ್ನ ಮೂರನೇ ಹೆಂಡತಿ ಸೀರೆ ಕುಪ್ಪುಸ ಇಸ್ತ್ರಿ ಮಾಡಿ ಕೈ ಸೋತು ಹೋಗಿದೆ 
೪. ತಾಳಿ ಕಟ್ಟಿದೊಳು ಗಾಳಿಲಿ ಬಿಟ್ಟು ಹೋದಳು 
     ಟೈ ಕಟ್ಟಕೊಂಡವ್ನ ಕಂಕುಳಲ್ಲಿ ಇಟ್ಕೊಂಡು ಹೋದಳು 

ಕುಲ ಯಾವುದಾದರೂ ಜ್ಞಾನಕ್ಕೆ ಪರದೆಯಿಲ್ಲ ಎನ್ನುವ ತರ್ಕದ ಅಶ್ವಥ್ ಪಾತ್ರ ಗಮನ ಸೆಳೆಯುತ್ತದೆ. ಪಂಡರಿಬಾಯಿ ಅವರ ಜೊತೆ ಜಗಳ ಬಂದಿ, ಆವಾಗ ಅವರ ಸಂಭಾಷಣ ಶೈಲಿ, ಅಂಗೀಕ ಅಭಿನಯ, ಮುಖದಲ್ಲಿ ಮಾಸದ ನಗು.. ಧರ್ಮೇಚ ಅರ್ಥೆಚ ಮತ್ತು ತೀರ್ಥ ಕೊಡುವಾಗ ಹೇಳುವ ಮಂತ್ರಗಳ ಅರ್ಥ ಅದನ್ನ ಹೇಳುವ ಶೈಲಿ ಆಹಾ ಸೂಪರ್ ಸೂಪರ್.  ವೇಶ್ಯೆ ಕುಲದ ಹೆಣ್ಣು ಮಗಳನ್ನು  ಗೌರವ ಕೊಟ್ಟು ತನ್ನ ಮಗಳಷ್ಟೇ ಪ್ರೀತಿಸುವ ಆ ಪಾತ್ರದಲ್ಲಿ ನುಗ್ಗಿ ಬಿಟ್ಟಿದ್ದಾರೆ. 

ನವಿರಾದ ಅಭಿನಯ, ಹಿತವಾದ ಮಾತು, 
"ಅಮ್ಮ ಅವರು ನಿನಗೆ ಬೆಲೆ ಕೊಟ್ಟಿದ್ದಾರೆಯೇ ಹೊರತು ನಿನ್ನ ಭಾವನೆಗಳಿಗೆ, ನಿನ್ನ ಕಣ್ಣೀರಿಗೆ ಅಲ್ಲಾ"

"ಅಮ್ಮ ಅಪ್ಪಾಜಿ ಸತ್ತು ಹೋದರು ಎನ್ನುವ ಸುದ್ಧಿ ಕೇಳಿದರೂ ... " 

"ಪಂಚಮವೇದ ಪ್ರೇಮದ ನಾದ" ಹಾಡಿನಲ್ಲಿನ ಅಭಿನಯ 

"ಗಗನವು ಎಲ್ಲೋ ಭೂಮಿಯು ಎಲ್ಲೋ" ಹಾಡಿಗಿಂತ ಮುಂಚೆ ಗಂಗಾಧರ್ ಜೊತೆಯಲ್ಲಿ ನಡೆವ ಸಂಭಾಷಣೆಯಲ್ಲಿ ತನಗೆ ಹೊಸ ಜೀವನದ ರಹದಾರಿ ಸಿಗುತ್ತಿದೆ ಎಂಬ ಭಾವ ಸಿಕ್ಕಾಗ ಅವರ ಅಭಿನಯ.. 

ತನ್ನ ಜನ್ಮಕ್ಕೆ ಕಾರಣವಾದ ಮನುಷ್ಯನ ಬಳಿ ನಿಂತು "ನಿಮ್ಮನ್ನು ಅಪ್ಪಾ ಎನ್ನಬಹುದೇ.. ನಿಮ್ಮನ್ನು ಮುಟ್ಟಬಹುದೇ" ಈ ದೃಶ್ಯ ಈ ಚಿತ್ರದ ಹೈ ಲೈಟ್. 

ಇಂತಹ ಒಂದು ಸುಂದರ ಅಭಿನಯ ಕೊಟ್ಟ ಕಲ್ಪನಾ ಈ  ಚಿತ್ರದಲ್ಲಿ ಮಿನುಗುತ್ತಾರೆ. 

ಕಾಮ ನೋಡುವ ದೇಹದಲ್ಲಲ್ಲ.. ನೋಡುವ ನೋಟದಲ್ಲಿ ಎನ್ನುವ ಮಾತಿನಂತೆ ಇಡಿ ಚಿತ್ರದಲ್ಲಿ ಕಣ್ಣಲ್ಲೇ ಬೆರಗುಗೊಳಿಸುವ ಮೂಗೂರು ಸುಂದರಮ್ಮ ಅವರ ಅಭಿನಯ ವಾಹ್ ವಾಹ್ ಎಂದು ಹೇಳಿಸುತ್ತದೆ. 

ಹೆಣ್ಣು ಈ ಮನೆಗೆ ಹೊನ್ನು ತರುತ್ತದೆ.. ಗಂಡು ಈ ಮನೆಗೆ ಬರಬೇಕು ಹೊರತು, ಹುಟ್ಟ ಬಾರದು ಅಪರ್ಣ ಎನ್ನುವಾಗ ಕಣ್ಣಲ್ಲಿ ತೋರುವ ಮಿಂಚು, ಗೆಜ್ಜೆ ಪೂಜೆ ಮಾಡಿಸ್ತೀನಿ, ಗೆಜ್ಜೆ ಪೂಜೆ ಮಾಡಿಸ್ತೀನಿ ಎನ್ನುವಾಗ ಕಣ್ಣಲ್ಲೇ ತೋರಿಸುವ ಭಾವ ಅಬ್ಬಾ ಅನ್ನಿಸುತ್ತದೆ. ಇಡಿ ಚಿತ್ರವನ್ನು ನುಂಗಿ ಬಿಡುವ ಸಾಮರ್ಥ್ಯ ಇರುವ ಈ ಕಲಾವಿದೆಯಿಂದ ತೆಗಿಸಿರುವ ಅಭಿನಯ ಪುಟ್ಟಣ್ಣ ಅವರ ತಾಕತ್.  

ಮನದಲ್ಲಿ ಅಶ್ಲೀಲವೆನಿಸುವ ಯೋಚನೆಯನ್ನು ಬೆಳ್ಳಿ ತೆರೆಯ ಮೇಲೆ ಸಹ್ಯವಾಗಿ ತಂದು ಒಂದು ಪುಟ್ಟ ಮಗುವಿನ ಜೊತೆಯಲ್ಲಿ ಕೂಡ ನೋಡಬಹುದು ಎನ್ನಿಸುವ ಚಿತ್ರವನ್ನು ಕೊಟ್ಟಿರುವ ಪುಟ್ಟಣ್ಣ ಚಿತ್ರದುದ್ದಕ್ಕೂ ಕಾಡುತ್ತಾರೆ. ಒಂದೇ ಒಂದು ಅಶ್ಲೀಲ ಸಂಭಾಷಣೆ, ದೃಶ್ಯ ಇರದ ಆದರೆ ಹೇರಳವಾಗಿ ತುಂಬಲು ಎಲ್ಲಾ ಸಾಧ್ಯಗಳಿರುವಂಥಹ  ಕಥಾವಸ್ತುವನ್ನು ಅಷ್ಟೇ ನವಿರಾಗಿ ಮಾತಿನಲ್ಲೇ ಕಟ್ಟಿ ಕೊಟ್ಟಿರುವ ಈ ಸುಂದರ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದದ್ದು ಈ ಚಿತದ ಹೆಗ್ಗಳಿಕೆ. 

ಅಬ್ಬಬ್ಬ ಎನ್ನಿಸುವ ಈ ಚಿತ್ರವನ್ನು ನೋಡುತ್ತಾ ಹಲವಾರು ದೃಶ್ಯಗಳಲ್ಲಿ ಮನ, ಕಣ್ಣು ಅಶ್ರು ಧಾರೆಯನ್ನು ಸುರಿಸಿತು. 

ಪುಟ್ಟಣ್ಣ ಗುರುಗಳೇ ಹಾಟ್ಸ್ ಆಫ್ ನಿಮಗೆ!!!