Friday, December 12, 2014

ವಾಣಿಯ ಝೇಂಕಾರ.. "ತಣ್ಣನೆ"ಯ ಧ್ವನಿ ಅದೇ ಅದೇ ಉಪಾಸನೆ (1974)

ನನಗೆ ಮೊದಲಿಂದಲೂ ಕೆಲವು (ಅಲ್ಲ ಅಲ್ಲ ಅಲ್ಲ ಹಲವು ಎಂದರೆ ಸರಿ) ವಿಷಯಗಳ ಬಗ್ಗೆ ಹುಚ್ಚು.. ಕೆಲವು ಧ್ವನಿಗಳು, ಸ್ಥಳಗಳು, ಚಿತ್ರಗಳು, ಹಾಡುಗಳು ಹೀಗೆ.. ಯಾಕೆ ಇಷ್ಟ ಎಂದರೆ ಹೇಳೋಕೆ ಆಗೋಲ್ಲ.. ಆದರೆ ಅದರ ಬಗ್ಗೆ ಒಂದು ರೀತಿಯ ಹುಚ್ಚು ಮನಸಲ್ಲೇ ಆಲದ ಮರವಾಗಿ ಬೇರೂರಿಬಿಡುತ್ತವೆ..

ನನ್ನ ಬಾಲ್ಯದ ದಿನಗಳಲ್ಲಿ ಎಂಭತ್ತರ ದಶಕದ ಆರಂಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ "ಉಪಾಸನೆ" ಚಿತ್ರ ನೋಡಿ ಬೆಕ್ಕಸ ಬೆರಗಾಗಿದ್ದೆ. ಯಾಕೋ ಅರಿಯದೆ ನಾ ಪುಟ್ಟಣ್ಣ ಅವರ ಚಿತ್ರಗಳ ಹುಚ್ಚನ್ನು ಆಗಲೇ ಹತ್ತಿಸಿಕೊಂಡಿದ್ದೆ. 

ಹಾಗೆಯೇ.. ಈ ಚಿತ್ರದಲ್ಲಿ ಬರುವ ಕನ್ಯಾಕುಮಾರಿ ಸ್ಥಳದ  ಬಗ್ಗೆಯೂ ಕೂಡ.. ಆ ಜಾಗ ನೋಡಲೇ ಬೇಕು.. ಮತ್ತೆ ಹೋದಾಗ ಅಲ್ಲಿ ನನ್ನ ಮಡದಿ ಮತ್ತು ಮಗು ಇರಲೇ ಬೇಕು ಎನ್ನುವ ಹಠ ನನಗೆ ಸುಮಾರು ಹತ್ತು ವರ್ಷದ ಹುಡುಗನಾಗಿದ್ದಾಗಲೇ ಬಂದಿತ್ತು. (ಉತ್ಪ್ರೇಕ್ಷೆ ಖಂಡಿತ ಅಲ್ಲಾ.. ನನ್ನ ಆಸೆಗಳು....  ಹುಚ್ಚುಗಳು ಹೀಗೆಯೇ ಇರುತ್ತವೆ). 

ಈ ಚಿತ್ರ ಹಲವಾರು ಕಾರಣಗಳಿಗೆ ಮನಸ್ಸಿಗೆ ನುಗ್ಗುತ್ತದೆ. 


ಉಪಾಸನೆ ಸೀತಾರಾಮ್ ಎಂದೇ ಹೆಸರಾದ ಸೀತಾರಾಮ್ ಅವರ ಮೃದು ಮಾತು ಚಿತ್ರದ್ದುದ್ದಕ್ಕು ಕಾಡುತ್ತದೆ. ತಾಯಿ, ಮಗು, ಶಾರದೆ ಎನ್ನುವಾಗ ಅವರ ಧ್ವನಿಯಲ್ಲಿ ಬರುವ ಕಂಪನ, ಮಧುರ ಮಿಡಿತ, ತುಡಿತ ಬಹಳ ಕಾಡುತ್ತದೆ. ಅತ್ಯಮೋಘ ಅಭಿನಯ ನೀಡಿರುವ ಅವರು ಚಿತ್ರದ ಯಶಸ್ಸಿನ ಬಹು ಪಾಲನ್ನು ಆಕ್ರಮಿಸಿಕೊಳ್ಳುತ್ತಾರೆ. ಶರೀರ ಶಾರೀರ ಎರಡರ ಅಭಿನಯ ಸೊಗಸಾಗಿದೆ. ಅವರ ಮತ್ತು ಆರತಿಯ ಜುಗಲಬಂದಿ ಬಹುವಾಗಿ ಇಷ್ಟಪಡುವ ಹಾಗೆ ಅಭಿನಯಿಸಿದ್ದಾರೆ.
"ವಾಣಿ"ಜಯರಾಂ ಅವರ ತುಂಟ ಧ್ವನಿ ಇನ್ನೊಂದು ರೀತಿಯಲ್ಲಿ ಕಾಡುತ್ತದೆ. "ಭಾವವೆಂಬ ಹೂವು ಅರಳಿ" ಈ ಹಾಡಿನಲ್ಲಿ ಅವರು "ಅರಳಿ" ಎನ್ನುವಾಗ ಅವರ ಧ್ವನಿ ಕೇಳಲೇ ಒಂದು ಹಿತ. ಚಿ ಉದಯಶಂಕರ್ ಅವರ ಸರಳ ಸಾಹಿತ್ಯಕ್ಕೆ ಚಂದದ ಮೆರುಗು ವಾಣಿಯಮ್ಮ ಅವರ ಗಾಯನ.   "ಭಾವಯ್ಯ ಭಾವಯ್ಯ"   ಎನ್ನುವ ಎರಡು ಬಗೆಯ ಭಿನ್ನ ಹಾಡುಗಳಲ್ಲಿ ಬರುವ ತುಂಟತನದ ಧ್ವನಿ, ಆ ತಮಾಷೆ ಬೀರುವ ಪದಗಳ ಜೋಡಣೆ, ಅದಕ್ಕೆ ಜೀವ ತುಂಬಿರುವ ಇವರ ಗಾಯನ ಸೊಗಸಾಗಿದೆ. ಎರಡು ಹಾಡನ್ನು ರಚಿಸಿರುವ ಆರ್ ಏನ್ ಜಯಗೋಪಾಲ್ ಅವರ ಸಾಹಿತ್ಯ ಮನಸ್ಸೆಳೆಯುವುದು ಹಾಸ್ಯ ಮಿಶ್ರಿತ ಪದಗಳ ಪುಂಜಗಳಿಂದ. 

ನೀವು ಹಾಡುತ್ತಾ ಇರಿ ನಾ ಬರುತ್ತೇನೆ ಎಂದು ಕಾದು ಹೇಳಿ..  ನಂತರ ಬಂದು..  ಮೂರು ಹಾಡುಗಳಲ್ಲಿ ಇಡಿ ಚಿತ್ರವನ್ನೇ ನುಂಗಿ ಬಿಡುವ ಅತ್ಯುತ್ತಮ ಗಾಯಕಿ ಜಾನಕಿಯಮ್ಮ ಮನಸ್ಸನ್ನೇ ಕದ್ದು ಬಿಡುತ್ತಾರೆ. "ಆಚಾರವಿಲ್ಲದ ನಾಲಿಗೆ" ಪುರಂದರದಾಸರ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಹಾಡುವ ಇವರು.. ಭಾರತದ ತುತ್ತ ತುದಿ ಕನ್ಯಾಕುಮಾರಿಯ ಬಗ್ಗೆ ವಿಜಯನಾರಸಿಂಹ ಅವರ "ಭಾರತ ಭೂಶಿರ ಮಂದಿರ ಸುಂದರಿ" ಸುಮಧುರ ಸಾಹಿತ್ಯವನ್ನು ಹಾಡುವಾಗ ಸಾಕ್ಷಾತ್ ಶಾರದೆಯೇ ಆಗಿ ಬಿಟ್ಟಿದ್ದಾರೆ. ಎರಡು ಹಾಡನ್ನು ಉಚ್ಹ ಸ್ಥಾಯಿಯಲ್ಲಿ ಹಾಡಿರುವ ಜಾನಕಿಯಮ್ಮ ಅಬ್ಬಬ್ಬ ಎನ್ನಿಸಿಬಿಡುತ್ತಾರೆ.  ಅಮೋಘ ಗಾಯನದ ಪ್ರತಿಭೆ ಜಾನಕಿಯಮ್ಮ ಅವರ ಧ್ವನಿಯಲ್ಲಿ ಜೋಗದ ಜಲಪಾತದ ರಭಸ, ಲಾಲಿತ್ಯ, ಮಧುರತೆ ಎಲ್ಲವೂ ಬಂದಿಯಾಗಿಬಿಟ್ಟಿವೆ. 

ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಬಿ ಕೆ ಸುಮಿತ್ರ ಅವರ "ಸಂಪಿಗೆ ಮರದ ಹಸಿರೆಲೆ ನಡುವೆ" ಗೀತೆ ಸರಳ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಜೊತೆಯಲ್ಲಿ ಆರ್ ಏನ್ ಜಯಗೋಪಾಲ್ ಅವರು ಚಿಕ್ಕ ಚಿಕ್ಕ ಮಕ್ಕಳು ಉಲಿಯುವ ಪದಗಳನ್ನು ತಂದು ಜೋಡಿಸಿ ಹೆಣೆದಿರುವ ಈ ಹಾಡು ಇಷ್ಟವಾಗುತ್ತದೆ. 

ಆರತಿ ಗಂಧದ ಕೊರಡಿನ ಹಾಗೆ ಅಭಿನಯವನ್ನು ತೇಯ್ದು .. ಈ ಚಿತ್ರ ಗೆದ್ದರೆ ನಾ ಗೆಲ್ಲುವೆ ಎನ್ನುವಂತೆ ತಮ್ಮ ಅಭಿನಯದ  ಶಕ್ತಿಯನ್ನು ತೇಯ್ದು .. ಈ ಪಾತ್ರಕ್ಕೆ ಅಭಿನಯಿಸಲೆಂದೇ ನಾ ಹುಟ್ಟಿದ್ದೇನೆ ಎನ್ನುವಂತೆ ಛಲ ತುಂಬಿಕೊಂಡು ನಟಿಸಿದ್ದಾರೆ ,  ಅಲ್ಲ ಅಲ್ಲ ಆ ಪಾತ್ರವೇ ಆಗಿ ಹೋಗಿದ್ದಾರೆ. ಹಾಡುಗಳಲ್ಲಿ ಅವರು ತೋರುವ ಶ್ರದ್ಧೆ, ಸಂಭಾಷಣೆ ಹೇಳುವಾಗ ಅವರು ತೋರುವ ಚೈತನ್ಯ, ಕೆಲವೊಮ್ಮೆ ಮಾತೆ ಬೇಡ ಎನ್ನಿಸುವ ದೃಶ್ಯಗಳಲ್ಲಿ ಕಣ್ಣಲ್ಲೇ ತೋರುವ ಭಾವ (ತಂಗಿ ಮತ್ತು ಗಂಡನನ್ನು ಕೋಣೆಯ ಒಳಗೆ ಸೇರಿಸಿ.. ಬಾಗಿಲನ್ನು ಹಾಕಿ ಹೊರ ಬರುವ ದೃಶ್ಯದಲ್ಲಿ) ಆಹಾ ಆಹಾ ಹೇಳಿದಷ್ಟು ಸೊಗಸು. ಸಮುದ್ರದ ಅಲೆಗಳನ್ನು ನೋಡುವಾಗ ಒಂದು ಅಲೆ ಹೋದರೆ ಇನ್ನೊಂದು ಬರುವಂತೆ, ಒಂದು ದೃಶ್ಯದಲ್ಲಿ ಅಬ್ಬಾ ಎನ್ನಿಸುತ್ತ ಮುಂದಿನ ದೃಶ್ಯ ನೋಡಿದಾಗ ಅರೆ ಅರೆ ಇದು ಇನ್ನು ಸೊಗಸು ಅನ್ನಿಸುತ್ತದೆ. ಇಡಿ ಚಿತ್ರದಲ್ಲಿ ಸರಿ ಸುಮಾರು ಪ್ರತಿಯೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುವ ಆರತಿ ಅಭಿನಯ ಅವರ ಚಿತ್ರ ಜೀವನದಲ್ಲಿನ ಅತ್ಯುತ್ತಮ ಅಭಿನಯ ಎನ್ನುತ್ತೇನೆ.  (ರಂಗನಾಯಕಿ ಚಿತ್ರವಿದೆ!!!!)

ಚಿತ್ರಜ್ಯೋತಿ ಲಾಂಛನದಲ್ಲಿ ರಾಶಿ ಸಹೋದರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರ ದೇವಕಿ ಮೂರ್ತಿ ಎನ್ನುವವರ ಅದೇ ಹೆಸರಿನ ಕಥೆಯನ್ನು ಆಧರಿಸಿತ್ತು.  ಈ ಕಥೆಗೆ ಸಂಭಾಷಣೆಯ ಪೋಷಾಕು ತೊಡಿಸಿದವರು ನವರತ್ನರಾಂ ಅವರು. ಎಸ್ ವಿ ಶ್ರೀಕಾಂತ್ ಸುಂದರ ಭಾವುಕ ದೃಶ್ಯಗಳನ್ನು ಜೊತೆಯಲ್ಲಿ ಅದ್ಭುತ ಸ್ಥಳ ಕನ್ಯಾಕುಮಾರಿಯನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ. ಭಾರತ ಭೂಶಿರ ಹಾಡನ್ನು ಒಳಾಂಗಣದಲ್ಲಿ ಚಿತ್ರೀಕರಿಸಿ ಆರತಿಯವರ ಮುಖವನ್ನು ಹೊಳೆಯುವ ಪಾದರಸದಂತೆ, ಜೊತೆಯಲ್ಲಿ ಕ್ಯಾಮೆರ ಒಂದು ಚೂರು ಕದಲದೆ ಬರಿ ಮುಖವನ್ನು ತೋರಿಸುವ ಅದ್ಭುತ ಛಾಯಾಗ್ರಹಣ ಇವರದು. ಮತ್ತೆ ಭಾವುಕ ಸನ್ನಿವೇಶಗಳಿಗೆ ತಕ್ಕಂತೆ ಕ್ಯಾಮೆರ ಓಡಾಡುವ, ಇಲ್ಲವೇ ಸುತ್ತವ, ಇಲ್ಲವೇ ಜೋಕಾಲಿಯಂತೆ  ತೂಗುವ ವಿಭಿನ್ನ ತಂತ್ರ ಈ ಚಿತ್ರದಲ್ಲಿ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಕ್ರಿಯಾಶೀಲತೆಗೆ ಸಾಕ್ಷಿ. 

ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಈ ಚಿತ್ರದ ಆತ್ಮ ಎನ್ನಲೇ ಬೇಕು. ಪ್ರತಿ ಹಾಡಿಗೂ ವಿಭಿನ್ನ ಸಂಗೀತ, ಜೊತೆಯಲ್ಲಿ ಚಿತ್ರದುದ್ದಕ್ಕೂ ಬರುವ ಹಿನ್ನೆಲೆ ವೀಣೆಯ ನಾದ ಶ್ಯಾಮಲಾ ಸ್ವಾಮೀ ಅವರದು. ವಿಜಯಭಾಸ್ಕರ ಅವರ ರಾಗ ಸಂಯೋಜನೆ ಅಮೋಘ ಅದ್ಭುತ ಎನ್ನಲೇ ಬೇಕು. ಭಾರತ ಭೂಶಿರ ಎಷ್ಟು ಬಾರಿ ಕೇಳಿದರೂ ಹೊಸದು ಎನ್ನಿಸಲು ಅವರ ಸಂಗೀತವೆ ಕಾರಣ. 

ಹೊಟ್ಟೆಕಿಚ್ಚಿನ ಗುರುವಾಗಿ ಮುಸುರಿ ನಗೆ ಮೀಟುತ್ತಾರೆ. ಅವರು ಬಂದು ಹೋಗುವ  ಐದಾರು ದೃಶ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರತಂದಿದ್ದಾರೆ.
 "ಗೊತ್ರಿ ನನಗೆ ಗೊತ್ರಿ ನೀವು ಹೀಗೆ ಹೇಳ್ತೀರಾ ಅಂತ ನನಗೆ ಗೊತ್ರಿ" 
"ಭಾರತದ ತಮಟೆ ವಾದ್ಯದಿಂದ ಹಿಡಿದು ಪರದೇಶದ ಪಿಯಾನೋ ತನಕ ಬರುತ್ತೆ ಕಣಯ್ಯಾ"
"ತಂಬೂರಿಗೆ ಕಮಾನ್ ಹಾಕೋದು ಇದ್ದೆ ಇದೆ ಕಣಯ್ಯಾ.. ಮೊದಲು ಪಿಟೀಲಿಗೆ ಕಮಾನು ಹಾಕು.. ಆಮೇಲೆ ತಂಬೂರಿಗೆ  ಕಮಾನು ಹಾಕಿ ಕಮಾಲ್ ನೋಡೋಣ"
ಹೀಗೆ ಚಿಕ್ಕ ಚಿಕ್ಕ ಮಾತುಗಳು ಅಂಗೀಕ ಅಭಿನಯದಿಂದ ಮನಸ್ಸು ಗೆಲ್ಲುತ್ತಾರೆ ಮುಸುರಿ ಕೃಷ್ಣಮೂರ್ತಿ. 

ಸದಾ ಒಲಾಡುತ್ತಲೇ, ಹಿಪ್ಪಿ ಕೂದಲು ಬಿಟ್ಟು ವಿಚಿತ್ರ ಅಭಿನಯ ಕೊಡುವ ಶಿವಾರಂ, ನಗೆ ಮೀಟುತ್ತಾರೆ.  ಪುಟ್ಟಣ್ಣ ಅವರ ಹಲವಾರು ಚಿತ್ರದಲ್ಲಿ  ಪಾತ್ರ ಮಾಡಿರುವ ಶಿವರಾಂ, ಪ್ರತಿ ಚಿತ್ರದಲ್ಲೂ ಏನಾದರೂ ಹೊಸ ತರಹ ಅಂಗೀಕ ಅಭಿನಯ, ಒಂದು ಪಂಚಿಂಗ್ ಸಂಭಾಷಣೆ ತರುತ್ತಾರೆ. ಅವರ ಹಾಸ್ಯಭರಿತ ಸಂಭಾಷಣೆ ಕೇಳುವುದೇ ಒಂದು ಮಜಾ.  ಇದರ ಒಂದು ಒಂದು ಝಲಕ್ "ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್ "

ಸಂಗೀತದ ಎಲ್ಲಾ ಸಿದ್ಧ ಸೂತ್ರಗಳು ಗೊತ್ತು ಎಂದು ಜಂಬ ಕೊಚ್ಚುತ್ತಾ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಅಶ್ವಥ್ ಅವರ ಅಭಿನಯ ಚಿತ್ರದ ಹೈ ಲೈಟ್.  ತುಂಬಾ ಗಂಭೀರ ಪಾತ್ರ ಮಾಡುವ ಅಶ್ವಥ್ ಹಾಸ್ಯ ಪಾತ್ರಗಳಲ್ಲೂ ನಾ ಗೆಲ್ಲಬಲ್ಲೆ ಎಂದು ತೋರುತ್ತಾರೆ. ನಾಗರಹಾವಿನ ಚಾಮಯ್ಯ ಮೇಷ್ಟ್ರು, ಶುಭಮಂಗಳದ ಉಬ್ಬಸದ ವೈದ್ಯರು, ಇಲ್ಲಿ ತಮಾಷೆ ಬೀರುವ ಸಂಗೀತದ ಆರಾಧಕ.... ಆಶಾ ಎಷ್ಟು ವಿಭಿನ್ನ ಅಭಿನಯದ ನಟರು ಇವರು.  ಪ್ರತಿಯೊಂದು ಸಂಭಾಷಣೆಯಲ್ಲೂ "ಬೇಕಾದ್ರೆ ನನ್ನ ಹೆಂಡತೀನ ಕೇಳಿ" ಮಾತು ಇಷ್ಟವಾಗುತ್ತದೆ. ಅಂತಿಮ ದೃಶ್ಯಗಳಲ್ಲಿ ತೊಳಲಾಡುವ ಅವರ ಅಭಿನಯ ನಿಜಕ್ಕೂ ಇಷ್ಟವಾಗುತ್ತದೆ. 

ಆದವಾನಿ ಲಕ್ಷ್ಮೀದೇವಿ, ಲೀಲಾವತಿ ತಮ್ಮ ಪಾತ್ರಗಳಲ್ಲಿ ಲೀನವಾಗಿದ್ದಾರೆ.. ಆದವಾನಿ ಲಕ್ಷ್ಮೀದೇವಿ ತಾಯಿ ಮಮತೆ ತೋರುವ ಕರುಣಾಮಯಿ ಆದರೆ, ಲೀಲಾವತಿ ಕೆಲವೊಮ್ಮೆ ಅಮ್ಮನ ಕರುಣಾಳು ಪಾತ್ರ, ಹಲವೆಡೆ ಅತ್ತೆ ಎನ್ನುವ ಗತ್ತು ಎರಡನ್ನು ಮಿಶ್ರಣಗೊಳಿಸಿರುವ ಅಭಿನಯ ತಾಕುತ್ತದೆ. 

ವೆಂಕಟರಾವ್ ತಲಗೇರಿ ಅಪ್ಪನ ಪಾತ್ರದಲ್ಲಿ ಛಾಪು ಒತ್ತುತ್ತಾರೆ, ಉದ್ವೇಗವಿಲ್ಲದ ನಿಧಾನ ರೀತಿಯ ಸಂಭಾಷಣೆ,ಆ ಧ್ವನಿ, ಅಪ್ಪ ಎನ್ನುವ ಜವಾಬ್ಧಾರಿಯ ಗುಣ ಮೈ ಎತ್ತಿದಂತೆ ಅಭಿನಯ ನೀಡಿದ್ದಾರೆ. ಅದರಲ್ಲೂ ಕಡೆಯಲ್ಲಿ ಸಂಗೀತದ ಗುರುಗಳಿಗೆ ಅವರ ಶಿಷ್ಯೆ ಕಚೇರಿ ಮಾಡಬಾರದೆಂದು ಹೇಳಿ ಎಂದು ಕೇಳಿಕೊಳ್ಳುವ ದೃಶ್ಯ ಸೂಪರ್. 

ಚಿಕ್ಕ ಚೊಕ್ಕ ಪಾತ್ರದಲ್ಲಿ ಎಂ ಏನ್ ಲಕ್ಷ್ಮೀದೇವಿ ಮತ್ತು ವಜ್ರಮುನಿ ಗಮನಸೆಳೆಯುತ್ತಾರೆ. 

ಇಡಿ ಚಿತ್ರ ಸಂಗೀತದ ರಥದ ಮೇಲೆ ಸಾಗುತ್ತದೆ. ವಿಜಯಭಾಸ್ಕರ್ ಅವರು ತಮ್ಮ ಛಾಯೆಯನ್ನು ಈ ಚಿತ್ರದಲ್ಲಿ ಒತ್ತಿಬಿಟ್ಟಿದ್ದಾರೆ. ಅವರ  ಸಂಗೀತವನ್ನು ಹೊರಗೆ ತೆಗೆದು ಈ ಚಿತ್ರವನ್ನು ನೋಡಿದರೆ ಬಹಳ ಸಪ್ಪೆ ಎನ್ನಿಸುತ್ತದೆ. ಆದರೆ ಸಂಗೀತ ಕಲಾವಿದರ ಅಭಿನಯವನ್ನು ನುಂಗದೆ, ಅವರ ಅಭಿನಯಕ್ಕೆ ಹೊಳಪು ಕೊಡುವ ರತ್ನವಾಗಿರುವುದು ವಿಶೇಷ. 

ಈ ಚಿತ್ರದಲ್ಲಿ ಸಂಗೀತವನ್ನು ಪ್ರಧಾನವಾಗಿ ಇಟ್ಟುಕೊಂಡು ರೂಪಿಸಿರುವ ಚಿತ್ರ. ಆರತಿಯೇ ಈ ಚಿತ್ರದ ಕೇಂದ್ರ ಬಿಂದು. ಅವರ ಸುತ್ತಲೇ ಇಡಿ ಚಿತ್ರ ಸುತ್ತುತ್ತದೆ.  ಬರುವ ಪಾತ್ರಗಳು ಅವರ ಸಂಗೀತದ ಆಸಕ್ತಿಯ ಬಗ್ಗೆ ಪುರಸ್ಕಾರ ಇಲ್ಲಾ ತಿರಸ್ಕಾರ  ತೋರುವಂತೆ ಅಭಿನಯಿಸಿವೆ. ರೇಡಿಯೋ ರಂಗಮ್ಮ, ಮುಸುರಿ, ವಜ್ರಮುನಿ, ಲಕ್ಷ್ಮೀದೇವಿ, ಕೊಂಚ ಹೊತ್ತು ಶಿವರಾಂ ಎಲ್ಲರೂ ಅವರ ಸಂಗೀತದ ಆಸಕ್ತಿಗೆ  ಬರೆ ಎಳೆಯುವಂತೆ ಮಾಡಿದರೆ, ಸೀತಾರಾಮ್, ವೆಂಕಟರಾವ್, ಲಕ್ಷ್ಮೀದೇವಿ, ಲೀಲಾವತಿ, ಅಶ್ವತ್, ಮತ್ತು ನಾಯಕನಾಗಿ ಅಭಿನಯಿಸಿರುವ ಗೋವಿಂದರಾವ್ ಮಣ್ಣೂರ್ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ ಸಂಗೀತಕ್ಕೆ ಪ್ರೋತ್ಸಾಹ ಕೊಡುವಲ್ಲಿ ಗಮನ ಸೆಳೆಯುವ ಕೊಡುಗೆ ಕೊಟ್ಟಿದ್ದಾರೆ. 

ಸಂಗೀತವನ್ನು ವೃತ್ತ ಎಂದು ಭಾವಿಸಿ ಅದನ್ನು  ಚಿತ್ರಿಸಲು ಹೊರಟರೆ ಅಲ್ಲಿ ಕೇಂದ್ರ ಬಿಂದು ಆರತಿ, ಪರಿಧಿಯಲ್ಲಿ ಕಾಣುವ, ಬರುವ ಪಾತ್ರಗಳೇ ಮಿಕ್ಕವು. ಗುರು ಪಾತ್ರ ಮಾತ್ರ ಪರಿಧಿಯೊಳಗೆ ಬರುತ್ತಾರೆ ಹೊರತು ಮಿಕ್ಕವರೆಲ್ಲಾ ಪರಿಧಿಯ ಹೊರಗೆ ನಿಲ್ಲುತ್ತಾರೆ,. ಇಂಥಹ ಒಂದು ಅನುಭವ ಕೊಡುವ ಈ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ಒಂದು ರತ್ನವಾಗಿ ನಿಲ್ಲಲು ಸಹಾಯ ಮಾಡಿವೆ. 

ಪುಟ್ಟಣ್ಣ ಕಣಗಾಲ್, ದೇವಕಿ ಮೂರ್ತಿಅವರ ಕಥೆಯನ್ನು ಅಚ್ಚುಕಟ್ಟಾಗಿ ಚಿತ್ರಕಥೆಗೆ ಅಳವಡಿಸಿಕೊಂಡು ಎಲ್ಲೂ ಬೇಸರಬಾರದಂತೆ, ಸಂಗೀತ ಬಲ್ಲವರೂ, ಬಾರದಿರುವವರು ಕೂಡ ನೋಡಿ ಮೆಚ್ಚಿ ತಲೆದೂಗುವಂತೆ ಚಿತ್ರಿಕರಿಸಿರುವುದು ಅವರ ಅದ್ಭುತ ಪ್ರತಿಬೆಗೆ ಸಾಕ್ಷಿ. 

೧. ಚಿತ್ರದ ಆರಂಭ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಯಾವಾಗಲು ವಿಶೇಷ, ಅಲ್ಲಿಯ ಚಿತ್ರದ ಸಂದೇಶದ ಒಂದು ಝಲಕ್ ಕೊಟ್ಟಿರುತ್ತಾರೆ.  ಸಂಗೀತ ಸಾಧಕರ ಚಿತ್ರಗಳ ಹಿನ್ನೆಲೆಯಲ್ಲಿ, ವಾದ್ಯಗಳ ಚಿತ್ರಗಳ ಜೊತೆಯಲ್ಲಿ ಆರಂಭವಾಗುವ ಟೈಟಲ್ ಕಾರ್ಡ್ ಗಮನ ಸೆಳೆಯುತ್ತದೆ. ಸಂಗೀತಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಮಹಾನ್ ಚೇತನಗಳ ದರ್ಶನ ಆರಂಭದಲ್ಲೇ ಮಾಡಿಸುತ್ತಾರೆ. 

೨. ಹಲವಾರು ದೃಶ್ಯಗಳಲ್ಲಿ, ಕಲಾವಿದರ ಅಭಿನಯದಲ್ಲಿ ತಳಮಳ, ಆತಂಕ, ಅನುಮಾನ, ಹುಯ್ದಾಟ ಇವನ್ನು ಚಿತ್ರಿಕರಿಸುವಾಗ ಕ್ಯಾಮೆರವನ್ನು ತೂಗಡಿಸಿ, ಅಲುಗಾಡಿಸಿ, ಇಲ್ಲವೇ ಅತ್ತಾ ಇತ್ತಾ ತೂರಾಡುವ ಶೈಲಿಯಲ್ಲಿ ಉಪಯೋಗಿಸಿದ್ದಾರೆ. ಕಲಾವಿದರ ಅಭಿನಯಕ್ಕೆ ಇನ್ನಷ್ಟು ಸಾಂಧ್ರತೆ ಹೆಚ್ಚಾಗಲು ಸಹಕಾರಿಯಾಗಿದೆ.  

೩. ಶಾರದೆಯ ಮದುವೆ ವಿಷಯ ಬಂದಾಗ.. ನೆರಳಿನಲ್ಲಿ ಅವಳ ವೀಣೆಯನ್ನು ಕಿತ್ತುಕೊಂಡು, ಅದನ್ನು ಬಿಸಾಡುವ ದೃಶ್ಯ, ಅವಳ ಮನಸ್ಸಲ್ಲೇ ನಡೆಯುತ್ತಿರುವ ತಳಮಳವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇದು ಅವರ ಜಾಣ್ಮೆಗೆ ಹಿಡಿದ ಕನ್ನಡಿ. ನೂರಾರು ಮಾತುಗಳಲ್ಲಿ ಹೇಳಬೇಕಾದ ದೃಶ್ಯವನ್ನು ಕೇವಲ ಕೆಲವೇ ಕ್ಷಣಗಳಲ್ಲಿ ತಲುಪಿಸುವ ಅವರ ಕ್ರಿಯಾಶೀಲತೆಗೆ ನಮನ. 

೪. ಸ್ವಾಮೀ ವಿವೇಕಾನಂದರ ಅಮರವಾಣಿಯ ಧ್ಯೋತಕವಾಗಿ ರೂಪಿಗೊಂಡಿರುವ ಕನ್ಯಾಕುಮಾರಿಯಲ್ಲಿನ ಅವರ ಸುಂದರ ದೇವಾಲಯದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿರುವುದು ಬಹಳ ಇಷ್ಟವಾಗುತ್ತದೆ. ಬಹುಶಃ ಈ ಚಿತ್ರವೇ ಮೊದಲು ಅಲ್ಲಿ ಚಿತ್ರೀಕರಣ ಮಾಡಿದ್ದು ಅನ್ನಿಸುತ್ತದೆ.

5. ಇಡಿ ಚಿತ್ರದಲ್ಲಿ ಒಂದು ಅಂಶ ಎದ್ದು ಕಾಣುತ್ತದೆ, ಆರಂಭದಿಂದಲೂ ತುಂಟಿ, ತರಲೆ ಮಾಡುವ ಪಾತ್ರದಲ್ಲಿ ಮೂಡಿಬರುವ ಶಾರದೆಯ ತಂಗಿ ಪಾತ್ರ (ಜಿ ವಿ ಶಾರದ) ಮದುವೆಯ ನಂತರ ಗಂಭೀರ ಪಾತ್ರಕ್ಕೆ ನುಗ್ಗುವುದು, ಹಾಗೆಯೇ ಅಶ್ವತ್ ಚಿತ್ರದುದ್ದಕ್ಕೂ ಶಾರದೆಯ ಪರವಾಗಿ ನಿಲ್ಲುವ ಅವರು ಕಡೆಯ ದೃಶ್ಯಗಳಲ್ಲಿ ಶಾರದೆಗೆ ವಿರುದ್ಧವಾಗಿ ನಿಲ್ಲುವುದು. ಇಂಥಹ ವೈರುಧ್ಯ ಪಾತ್ರಗಳಲ್ಲಿನ ಅಭಿನಯವನ್ನು ಹೊರತೆಗೆಯುವಲ್ಲಿ ಪುಟ್ಟಣ್ಣ ಅವರ ಯಾವಾಗಲು ಸಿದ್ಧ ಹಸ್ತರಾಗಿದ್ದರು.

೬." ಭಾರತ ಭೂಶಿರ ಮಂದಿರ ಸುಂದರಿ" ಹಾಡನ್ನು ಗುರುಗಳ ಮನೆಯಲ್ಲಿ ಚಿತ್ರೀಕರಿಸಿರುವ ಶೈಲಿ, ಆರತಿ ಮುಖವನ್ನು ಮಾತ್ರ ಸ್ಟಡಿ ಕ್ಯಾಮೆರಾದಲ್ಲಿ ತೋರಿಸಿ, ಅದನ್ನು ಕೇಳಲೆಂದು ಬಂದ ಮಂದಿಯನ್ನು ತೋರಿಸುವಾಗ ಆ ದೃಶ್ಯಗಳು ತೂಗಾಡುತ್ತ ಇರುವಂತೆ ಚಿತ್ರೀಕರಿಸಿದ್ದಾರೆ. ಸಂಗೀತದ ಶಕ್ತಿಯನ್ನು ತೋರಿಸುವ ಒಂದು ವಿಭಿನ್ನ ರೀತಿ. ರಾಮಚಂದ್ರ ಶಾಸ್ತ್ರೀ ಅವರು ಆ ಹಾಡಿನಲ್ಲಿ ಬಂದು ಹೋದರೂ ಅವರು ಹೇಳುವ ಮಾತು "ಅನಂತ ಶಾಸ್ತ್ರಿಗಳೇ ಹೃದಯ ಹಿಂಡುವ ನಿಮ್ಮ ಶಿಷ್ಯಳ ಸಂಗೀತ ಎಲ್ಲರ ಮನವನ್ನು ತಣಿಸಲಿ.. " ಇಷ್ಟವಾಗುತ್ತದೆ.

೭. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇಂದಿಗೂ ಸಂಗೀತಮಯ ಚಿತ್ರ ಎಂದಾಗ ಮೊದಲಿಗೆ ಬಂದು ನಿಲ್ಲುತ್ತದೆ.

ಉಪಾಸನೆ ಒಂದು ಚಿತ್ರರತ್ನವಾಗಿ ನಿಲ್ಲಲು ಎಲ್ಲರ ಪರಿಶ್ರಮದ ಅಗತ್ಯ ಇದೆ. ಇಡಿ ಚಿತ್ರವನ್ನು ಹೆಗಲಿಗೆ ಜೋತು ಹಾಕಿಕೊಂಡು ಚಿತ್ರಿಸಿರುವ ಪುಟ್ಟಣ್ಣ ಕಣಗಾಲ್ ಧ್ವನಿ ಎಂಬ ಒಂದು ಚಿಕ್ಕ ಸಂಗತಿಯನ್ನು ಇಟ್ಟುಕೊಂಡು ತಣ್ಣನೆ ಮಧುರ ಅನುಭವ ಕೊಡುವ ಚಿತ್ರವನ್ನಾಗಿ ಕೊಟ್ಟಿದ್ದಾರೆ. ಅದಕ್ಕೆ ನಮ್ಮ ಅದ್ಭುತ ನಿರ್ದೇಶಕರಿಗೆ ಒಂದು ಸಲಾಂ ಹೇಳೋಣ.. !!!

2 comments:

  1. ಸರ್ವಾಂಗೀಣ ಮಹಾನ್ ಚಿತ್ರ ಉಪಾಸನೆ.
    ತಮ್ಮ ಈ ಬರಹ ಅದಕ್ಕೆ ಉತ್ತಮ ’ಬ್ರೋಚರ್’ನಂತಿದೆ...

    ReplyDelete
    Replies
    1. ಪುಟ್ಟಣ್ಣ ಅಂದರೆ ಉಪಾಸನೆ.. ಉಪಾಸನೆ ಅಂದರೆ ಪುಟ್ಟಣ್ಣ ಅನ್ನುವಷ್ಟು ಹುಚ್ಚು ಹಿಡಿಸಿದ ಚಿತ್ರ ಇದು. ನನ್ನ ಮೆಚ್ಚಿನ ಕನ್ಯಾಕುಮಾರಿ ತಾಣ, ಹಾಡು, ಶಿವರಾಂ ಮತ್ತು ಮುಸುರಿ ಸಂಭಾಷಣೆ ನನ್ನ ಬಾಲ್ಯದಲ್ಲಿ ಬಹುವಾಗಿ ಕಾಡಿತ್ತು.

      ಧನ್ಯವಾದಗಳು ಸರ್ ನಿಮ್ಮ ಅತಿ ಮಧುರ ಪ್ರತಿಕ್ರಿಯೆಗೆ

      Delete