Monday, November 2, 2015

ಅಭಿಮಾನದ ಕೂಸು - ಟಿ ಎನ್ ಬಾಲಕೃಷ್ಣ - ಆರಂಭ


ಕನ್ನಡ ಚಿತ್ರಗಳನ್ನು ಮೊದಲಿಂದ ಆಸಕ್ತಿಯಿಂದ ನೋಡುತ್ತಾ ಬಂದ ನನಗೆ, ಅದನ್ನು ಇನ್ನಷ್ಟು ಆಸಕ್ತಿಯಿಂದ ನೋಡಲು ಪ್ರೇರೇಪಣೆ ನೀಡಿದವರಲ್ಲಿ ಮೊದಲಿಗರು ಅಂದರೆ ಟಿ ಎನ್ ಬಾಲಕೃಷ್ಣ. 

ಒಬ್ಬ ಕಲಾವಿದನ ಅದರಲ್ಲೂ ಪೋಷಕ ಪಾತ್ರದಲ್ಲಿ ಬರುವ ಕಲಾವಿದರು ನೆನಪಲ್ಲಿ ಉಳಿಯುವುದು ಬಲು ಅಪರೂಪದ ಸಂಗತಿ. ಆದರೆ ಅಂದಿನ ಆ ಕನ್ನಡ ಚಿತ್ರರಂಗದಲ್ಲಿ ಇದ್ದವರೆಲ್ಲಾ ದಿಗ್ಗಜರೆ. ಕುಮಾರ ತ್ರಯರು, ನರಸಿಂಹರಾಜು, ಜಿ ವಿ ಅಯ್ಯರ್, ಲೀಲಾವತಿ, ರಾಮಚಂದ್ರ ಶಾಸ್ತ್ರಿ, ಡಿಕ್ಕಿ ಮಾಧವರಾವ್, ಜಯಶ್ರೀ, ಪಂತುಲು, ಎಂ ವಿ ರಾಜಮ್ಮ, ಪಂಡರಿಬಾಯಿ, ಅಶ್ವತ್, ದ್ವಾರಕೀಶ್ ಹೇಳುತ್ತಾ ಹೋದ ಹಾಗೆ ಹನುಮನ ಬಾಲ ಬೆಳದಂತೆ ಬೆಳೆಯುತ್ತಲೇ ಇರುತ್ತದೆ. 

ಅಂದಿನ ಕಾಲದಲ್ಲಿ ಎಲ್ಲಾ ಕಲಾವಿದರ ಗುರಿ ಒಂದೇ.. ಈ ಚಿತ್ರದಲಿ ಚೆನ್ನಾಗಿ ಅಭಿನಯಿಸಿದರೆ, ಇನ್ನೊಂದು ಚಿತ್ರ ಸಿಗುತ್ತದೆ, ಕೆಲಸ ಸಿಗುತ್ತದೆ, ಹೊಟ್ಟೆಗೆ ಆಧಾರವಾಗುತ್ತದೆ. ಅಷ್ಟೇ ಅವರ ತಲೆಯಲ್ಲಿ ಇದ್ದುದ್ದು, ಅವರಿಗೆಲ್ಲಾ ಚೆನ್ನಾಗಿ ಗೊತ್ತಿತ್ತು ಕಲಾದೇವಿ ನಮ್ಮನ್ನು ಆರಿಸಿದ್ದಾಳೆ ಎಂದರೇ, ನಮ್ಮ ಬದುಕನ್ನು ಜೋಪಾನ ಮಾಡುತ್ತಾಳೆ ಎಂದು, 

ಅವರ ನಂಬಿಕೆ ಎಂದೂ ಸುಳ್ಳಾಗಿರಲಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ, ನಮ್ಮ ಕರುನಾಡಿನ ಅಭಿಮಾನದ ಕೂಸು ಬಾಲಕೃಷ್ಣ. ಆ ದಿಗ್ಗಜರಲ್ಲಿ ಎಲ್ಲರೂ ಒಂದೊಂದು ಮ್ಯಾನರಿಸಂ ಅಥವಾ ಅವರದೇ ಆದ ಒಂದು ವಿಶಿಷ್ಟ ಛಾಪು ಇದ್ದಿತ್ತು. ನಮ್ಮ ಬಾಲಕೃಷ್ಣ ತಮ್ಮ ಅಭಿನಯ ಚಾತುರ್ಯವನ್ನು ಕೊಂಡೊಯ್ದ ರೀತಿ ಶಭಾಶ್ ಎನ್ನಲೇ ಬೇಕು ಅನ್ನಿಸುವಷ್ಟು ತಾಜಾ ಆಗಿತ್ತು ಮತ್ತು ನಿಜವಾಗಿತ್ತು. 

ಅವರು ಮಾಡದ ಪಾತ್ರವೇ ಇರಲಿಲ್ಲ. ಆದರೆ ನೀರಿನ ತರಹ ಯಾವುದೇ ಆಕಾರಕ್ಕೆ ಹೋದರೂ ನೀರು ಅದೇ ಪಾತ್ರಕ್ಕೆ ಒಗ್ಗಿಕೊಳ್ಳುವ ಹಾಗೆ, ಬಾಲಕೃಷ್ಣ ಕೂಡ ಅವರು ಮಾಡಿದ ಪಾತ್ರದೊಳಗೆ ಹೊಕ್ಕುಬಿಡುತ್ತಿದ್ದರು. ನೋಡಿದವರಿಗೆ, ಈ ಪಾತ್ರವನ್ನು ಬೇರೆ ಯಾರೇ ಮಾಡಿದರೂ ಅದು ಬಾಲಕೃಷ್ಣ ಮಾಡಿದ ಹಾಗಿಲ್ಲ ಅನ್ನಿಸುವುವಷ್ಟು ಶಕ್ತಿಶಾಲಿಯಾಗಿರುತ್ತಿತ್ತು. 

ನನ್ನ ಜೀವನದಲ್ಲಿ ಮೂರು "ಅಣ್ಣ" ಬಂದೆ ಬರುತ್ತಾರೆ, ಮತ್ತು ನಾನು ಜೀವನವನ್ನು ನೋಡುವ ರೀತಿ ಮತ್ತು ಬದುಕುವ ರೀತಿಗೆ ಸ್ಫೂರ್ತಿ ತುಂಬಿದವರು ಇವರು 

ಮೊದಲು ನನ್ನ ಅಣ್ಣ, ಅಂದರೆ ನನ್ನ ಅಪ್ಪ - ಮಂಜುನಾಥ್. 

ಎರಡನೆಯವರು ಬಾಲಣ್ಣ ಅರ್ಥಾತ್ ಬಾಲಕೃಷ್ಣ 

ಮೂರನೆಯವರು ಅಣ್ಣ - ಕರುನಾಡಿನ ಅಣ್ಣಾವ್ರು. 

ಬಾಲಕೃಷ್ಣ ನನಗೆ ಬಲು ಇಷ್ಟ ಪಡಲು ಕಾರಣ ಅವರ ಸಂಭಾಷಣೆ ಹೇಳುವ ಶೈಲಿ. ಒಂದು ಸಾಮಾನ್ಯ ಪದಗಳು ಇವರ ಬಾಯಲ್ಲಿ ನುಸುಳಿ ಬಂದರೆ ಮಹಾನ್ ಶಕ್ತಿ ಪಡೆಯುತ್ತಿತ್ತು ಮತ್ತು ಅದಕ್ಕೆ ಒಂದು ತೂಕ ಬರುತ್ತಿತ್ತು. ಖಳನಾಯಕನ ಪಾತ್ರ ಕೂಡ ನಗೆ ಉಕ್ಕಿಸಬಲ್ಲುದು ಮತ್ತು ಅಷ್ಟೇ ರೋಷ ಉಕ್ಕಿಸಬಲ್ಲುದು ಎಂದು ತೋರಿಸಿಕೊಟ್ಟವರು. (ಉದಾಹರಣೆ ಕಣ್ತೆರೆದು ನೋಡು, ಸಂಪತ್ತಿಗೆ ಸವಾಲ್, ಗಂಧದ ಗುಡಿ, ಗಾಂಧಿನಗರ, ದೂರದ ಬೆಟ್ಟ ಹೀಗೆ ಹತ್ತಾರು ಚಿತ್ರಗಳ ಪಾತ್ರಗಳು)

ಇಂಥಹ ಒಂದು ಅದ್ಭುತ ಶಕ್ತಿಯ ಬಾಲಕೃಷ್ಣ ಅವರ ಹಲವಾರು ಚಿತ್ರಗಳಲ್ಲಿ ನನಗೆ ಇಷ್ಟವಾದ, ಮತ್ತು ಪರಿಣಾಮಕಾರಿ ಸಂಭಾಷಣೆ, ಅಭಿನಯ ಕೂಡಿರುವ ಒಂದಷ್ಟು ಚಿತ್ರಗಳ ಬಗ್ಗೆ ಬರೆಯುತ್ತ ಹೋಗುವೆ. ಎಲ್ಲಿ ಆರಂಭಿಸಲಿ, ಎಲ್ಲಿ ನಿಲ್ಲಿಸಲಿ ಗೊತ್ತಿಲ್ಲ ಕಾರಣ, ಬಾಲಕೃಷ್ಣ ಒಂದು ಕಡಲು. 

ಕಡಲಿನ ನೀರು ಆವಿಯಾಗುತ್ತದೆ, ಮೊಡವಾಗುತ್ತದೆ, ಮೋಡದಲ್ಲಿ ಸಾಂಧ್ರತೆ ಹೆಚ್ಚಾದಾಗ ಮಳೆ ಸುರಿಸುತ್ತದೆ. ಝರಿಗಳು ಹುಟ್ಟುತ್ತವೆ, ತೊರೆಯಾಗುತ್ತದೆ, ನದಿಯಾಗುತ್ತದೆ, ಕಡಲು ಸೇರುತ್ತದೆ.... ಮತ್ತೆ ಆವಿಯಾಗುತ್ತದೆ. 

ಹೀಗೆ ಬಾಲಕೃಷ್ಣ ಅವರ ಯಾವುದೇ ಚಿತ್ರವನ್ನು ನೋಡಿದರೂ ಮತ್ತೆ ಆರಂಭಕ್ಕೆ ಹೋಗಿ ನಿಲ್ಲಬಹುದು. ಎಲ್ಲಿಂದ ಬೇಕಾದರೂ ಆರಂಭಿಸಬಹುದು ಮತ್ತು ಎಲ್ಲಿ ಬೇಕಾದರೂ ಅಲ್ಪವಿರಾಮ ತೆಗೆದುಕೊಳ್ಳಬಹುದು. 

ಅಂಥಹ ಮಹಾನ್ ಶಕ್ತಿಯ ಚೇತನ ಭುವಿಗೆ ಬಂದು ೧೦೪ ವಸಂತಗಳು ಕಳೆದು ಹೋದವು. ಹೇಳಿದಷ್ಟು, ಬರೆದಷ್ಟು, ಗೀಚಿದಷ್ಟು ಹೊಸ ಹೊಸ ಅರ್ಥಗಳು ಹುಟ್ಟಿಕೊಳ್ಳುವ ಕನ್ನಡಾಂಬೆಯ ಅಭಿಮಾನದ ಕೂಸಿಗೆ ಇಂದು ಜನುಮ ದಿನದ ಸಂಭ್ರಮ. 

ಇದೆ ಸಂತಸದಲ್ಲಿ ಬಾಲಕೃಷ್ಣ ಅವರ ಚಿತ್ರಗಳ ಯಾತ್ರೆಯನ್ನು ನೋಡಲು, ಮತ್ತು ಅದರಿಂದ ಕೆಲವು ಪ್ರಭಾವಿ ಸನ್ನಿವೇಶಗಳನ್ನು, ನನಗೆ ಬಲು ಇಷ್ಟವಾದ ಕೆಲವು ಸ್ಪೂರ್ತಿದಾಯಕ ಅಥವಾ ಜೀವನಕ್ಕೆ ದಾರಿದೀಪವಾಗಬಲ್ಲಂಥಹ ಕೆಲವು  ಸಂಭಾಷಣೆಗಳನ್ನು ಬರೆಯಲು ಇಷ್ಟಪಡುತ್ತೇನೆ. 

ನನ್ನ ನಲ್ಮೆಯ ಓದುಗರ ಕಣ್ಣು ಮತ್ತು ಹೃದಯದ ಸಹಕಾರವಿರಲಿ... !

ಬಾಲಕೃಷ್ಣ ಅವರಿಗೆ ಜನುಮದಿನದ ಶುಭಾಶಯಗಳು. 

Sunday, November 1, 2015

ಬೋರ್ಡ್ ನಲ್ಲಿ ಕಾಣದೆ ಇರುವ - ಫಲಿತಾಂಶ (1976)

ಪಾಠ ಪ್ರವಚನಗಳು ಹಲವಾರು ಬಾರಿ ಹಳೆಯದಾಗಿಬಿಡುತ್ತದೆ, ಆದರೆ ಅವು ನಮಗೆ ದಾರಿ ತೋರಿಸಿದ ಬಗೆ ಯಾವತ್ತಿಗೂ ನೆನಪಿರುತ್ತದೆ. ಪುಟ್ಟಣ್ಣ ಕಣಗಾಲ್ ಚಿತ್ರಜಗತ್ತಿನಲ್ಲಿ ಸೃಷ್ಠಿ ಮಾಡಿದ ರತ್ನಗಳು ಹಲವಾರು.

ಒಂದೊಂದು ರತ್ನವೂ ಭಿನ್ನ ವಿಭಿನ್ನ. ಪ್ರತಿ ರತ್ನ ಮಣಿಯನ್ನು ಅರಸುತ್ತಾ ಅದನ್ನು ನೋಡಿ ಸಂಭ್ರಮಿಸುತ್ತಾ ಹೋಗುತ್ತಿದ್ದ ನನಗೆ, ಆ ಸಾಲಿನಲ್ಲಿ ಒಂದು ಅನರ್ಘ್ಯ ರತ್ನದ ಹೆಸರಿತ್ತು, ಆದರೆ ಆ ಜಾಗದಲ್ಲಿ ಖಾಲಿ ಖಾಲಿ. ಅದರ ಫಲಕ ನೋಡಿದೆ, ಅದರಲ್ಲಿ "ಫಲಿತಾಂಶ" ಎಂದಿತ್ತು.

ಯಾಕೋ ಕುತೂಹಲ ಕಾಡಿತು, ಆ ಜಾಗವನ್ನು ಮತ್ತೆ ಮತ್ತೆ ನೋಡಿದೆ ಕೆಳಕಂಡ ವಿವರಗಳು ಸಿಕ್ಕವು.

ಆ ಮಾಣಿಕ್ಯ ೧೯೭೬ ನೆ ಇಸವಿಯಲ್ಲಿ ಅನಾವರಣಗೊಂಡಿತ್ತು.

ಅರೆಗಲ್ ಬ್ರದರ್ಸ್ ತಮ್ಮ ಕಿಸೆಯಿಂದ ಹಾಕಿದ ಕಾಂಚಣ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿತ್ತು.

ಜೈ ಜಗದೀಶ್, ಆರತಿ, ಶುಭ ಜೊತೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಕಂಚಿನ ಕಂಠ ಅಮರೀಶ್ ಪುರಿ ಕನ್ನಡಕ್ಕೆ ಕಾಲಿಟ್ಟ ಹೆಮ್ಮೆಯ ಕ್ಷಣ ಅದು.

ಆರ್ ಏನ್ ಜಯಗೋಪಾಲ್ ರಚಿಸಿದ ಸುಂದರ ಹಾಡುಗಳನ್ನು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅಷ್ಟೇ ಸುಂದರವಾಗಿ ಜೀವ ತುಂಬಿ ಹಾಡಿದ್ದರು. ಇಂದಿಗೂ ನೆನಪಲ್ಲಿ ಉಳಿದಿರುವ ಅನೇಕ ಗೀತೆಗಳಲ್ಲಿ ಇವು ಕೂಡ ಒಂದು.

ಪುಟ್ಟಣ್ಣ ಚಿತ್ರಗಳು ಎಂದ ಮೇಲೆ ಸಂಗೀತದ ಮಾತು ಬಂದಾಗ ಮೊದಲ ಹೆಸರು ಬರುವುದು ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್. ಹೌದು ಈ ಚಿತ್ರವನ್ನು ವಿಜಯಭಾಸ್ಕರ್ ಸಂಗೀತ ಶರಧಿಯಲ್ಲಿ ಅದ್ದಿ ತೆಗೆದಿದ್ದಾರೆ.

"ಈ ಚೆಂಡಿನ ಆಟ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಸುಶೀಲ ಹಾಡಿದ್ದಾರೆ.



"ಲವ್ ಎಂದರೆ ಯಾರೂ ಬಿಡಿಸಿದ ಬಂಧನ" ಈ ಹಾಡು ಇಷ್ಟವಾಗುವುದು ವಾಣಿಜಯರಾಂ ಅವರ ಧ್ವನಿ ಮತ್ತು ಪಾಶ್ಚಾತ್ಯ ಸಂಗೀತದ ಅಚ್ಚಿನಲ್ಲಿ ಮೂಡಿರುವ ಹಿನ್ನೆಲೆ ಸಹ ಗಾಯಕರ ಧ್ವನಿ.


ಫಲಿತಾಂಶವನ್ನು ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದದ್ದು ಬಿ ಎನ್ ಹರಿದಾಸ್ ಅವರ ಕ್ಯಾಮೆರ. 

ಶ್ರೀನಿವಾಸ್ ಕುಲಕರ್ಣಿಯವರ ಕತೆಯನ್ನು ತೆರೆಗೆ ಅಳವಡಿಸಿ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಅನುಕೂಲ ಮಾಡಿಕೊಟ್ಟವರು ಪುಟ್ಟಣ್ಣ ಕಣಗಾಲ್.

ಹುಡುಕಿ ಹುಡುಕಿ ಸುಸ್ತಾಗಿ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಾಗ ಈ ಚಿತ್ರದ ಪುಟ್ಟ ಮಾಹಿತಿ ಫಲಕ ಅಲ್ಲಿ ನೇತು ಹಾಕಿದ್ದು ಬಿದ್ದು ಹೋಗಿತ್ತು .. :-)


ಫಲಿತಾಂಶ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಅರಗಲ್ ಸಹೋದರರು
ಕಥೆಶ್ರೀನಿವಾಸ ಕುಲಕರ್ಣಿ
ಪಾತ್ರವರ್ಗಜೈಜಗದೀಶ್ ಆರತಿ ವೈಶಾಲಿ,ಪದ್ಮಾಕುಮುಟಅರುಣ ಇರಾನಿ,ಶುಭಲೋಕನಾಥ್ಲೀಲಾವತಿ,ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎ.1 ಮೂವೀಟೋನ್
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರ ಎಲ್ಲೇ ಹುಡುಕಿದರೂ ಸಿಗದ ಕಾರಣ, ಪುಟ್ಟಣ್ಣ ಕಣಗಾಲ್ ಚಿತ್ರಸರಣಿಯಲ್ಲಿ ಕೊನೆಯಲ್ಲಿ ಬರೆಯೋಣ ಎಂದು ಇಟ್ಟುಕೊಂಡಿದ್ದೆ. ಚಿತ್ರವನ್ನು ಕೈ ಬಿಡಲು ಮನಸ್ಸು ಒಪ್ಪಲ್ಲಿಲ್ಲ. ಆದ್ದರಿಂದ ಈ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಕೈ ಎಟುಕಿದ ಮಾಹಿತಿಯನ್ನು ಓದಿ ನನಗೆ ಅನ್ನಿಸಿದ ಒಂದಷ್ಟು ಪದಗಳಲ್ಲಿ ಒಂದು ಲೇಖನ ಮಾಡಿದ್ದೇನೆ. ಈ ಚಿತ್ರವನ್ನು ಯಾವಾಗಲಾದರೂ ನೋಡಿಯೇ ನೋಡುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನೋಡಿದ ದಿನ ಆ ಚಿತ್ರವನ್ನು ನನ್ನ ಮೂಸೆಯಲ್ಲಿ ಅರಳಿಸಿ, ನನಗೆ ತಾಕಿದ ಅನುಭವದ ಬಗ್ಗೆ ಒಂದಷ್ಟು ಪದಗಳನ್ನು ಹರಿಯ ಬಿಡುತ್ತೇನೆ...

****

ಪುಟ್ಟಣ್ಣ ಕಣಗಾಲ್ ಗುರುಗಳೇ, ಕರುನಾಡಿನ ಭಾಷೆಯಲ್ಲಿ ನಿಮ್ಮ ದಿಗ್ದರ್ಶನದಲ್ಲಿ ಅರಳಿದ ೨೪ ಚಿತ್ರಗಳಲ್ಲಿ ೨೩ ಚಿತ್ರಗಳನ್ನು ನೋಡಿ ನನ್ನ ಅನುಭವಕ್ಕೆ ನಿಲುಕಿದ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಂದು ಚಿತ್ರದ ಬಗ್ಗೆ ಕೇವಲ ಲಭ್ಯವಾದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇನೆ. ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ಆನಂದಿಸಿಕೊಂಡು ಬಂದಿದ್ದ ನನಗೆ, ಆ ಚಿತ್ರಗಳ ಬಗ್ಗೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ನಾ ಏನೇ ಬರೆದಿದ್ದರೂ ಅದು ನಿಮ್ಮ ಆಶೀರ್ವಾದದ ಬಲ ನನ್ನೊಳಗೆ ಕೂತು ಬರೆಸಿದೆ. ಈ ಲೇಖನಮಾಲಿಕೆಗಳನ್ನೂ ಬರೆಯುವ ಸಾಹಸಕ್ಕೆ ಸ್ಫೂರ್ತಿ ನೀಡಿದವರು ನನ್ನ ಅಪ್ಪ (ಮಂಜುನಾಥ್), ಮತ್ತು ನನ್ನ ಸೋದರ ಮಾವ (ಶ್ರೀಕಾಂತ್ ಅಲಿಯಾಸ್ ರಾಜ),  ಇವರಿಬ್ಬರೂ ಹಲವಾರು ರೀತಿಯಲ್ಲಿ ನನಗೆ ಮಾರ್ಗದರ್ಶಿಗಳು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರೀ  ನೀವು ಬರೆಯಿರಿ ಖಂಡಿತ ನೀವು ಈ ಸುಂದರ ಮಾಲೆಯನ್ನು ಪೂರ್ಣ ಮಾಡುತ್ತೀರಿ ಎಂದು ಧೈರ್ಯ ತುಂಬಿದವರು ಶ್ರೀ ಬಾಲಸುಬ್ರಮಣ್ಯ ಅರ್ಥಾತ್ ಬಾಲೂ ಸರ್, ಶ್ರೀ ಪ್ರಕಾಶ್ ಹೆಗ್ಡೆ, ಶ್ರೀಮತಿ ರೂಪ ಸತೀಶ್, ಶ್ರೀಮತಿ ನಿವೇದಿತ ಚಿರಂತನ್, ಶ್ರೀಮತಿ ಸ್ವರ್ಣ ಪಿ, ಶ್ರೀಮತಿ ಹರಿಣಿ GNT, ಶ್ರೀಮತಿ ಸುಗುಣ ಮಹೇಶ್, ಬದರಿನಾಥ್ ಪಲವಳ್ಲಿ  ಮತ್ತು ನಿಮ್ಮ ದಿಗ್ದರ್ಶನದ ಬಗ್ಗೆ ಅಭೂತಪೂರ್ವ ಮಾಹಿತಿ ಕೊಟ್ಟ ನಿಮ್ಮಯ ಆತ್ಮೀಯ ಸ್ನೇಹಿತರಾದ ಶ್ರೀ ಮೋಹನ್ ಕಂಪ್ಲಾಪುರ್ ಅಥವಾ ಕಂಪ್ಲಾಪುರದ ಮೋಹನ್  ಮತ್ತು ಅನೇಕ ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು.

ಇಂದಿಗೂ ನನಗೆ ನೆನಪಿದೆ ನಿಮ್ಮ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ನಿರರ್ಗಳವಾಗಿ ಒಂದೂವರೆ ತಾಸು ನಿಮ್ಮ ಬೆಳ್ಳಿಮೋಡದ ಚಿತ್ರದ ತಯಾರಿಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದನ್ನು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ. ನಿಮ್ಮ ಮತ್ತು ನಿಮ್ಮ ಸಹೋದರರ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.

ಇದು ಖಂಡಿತ ನಾ ಬರೆದಿದ್ದಲ್ಲ, ನನ್ನೊಳಗೆ ಕೂತು, ನನಗೆ ಪ್ರೇರಣೆ ನೀಡಿ ನನ್ನ ಕೈಯಿಂದ ಬರೆಸಿದವರು.  ನೀವೇ ಹೇಳುವಂತೆ ಈ ಲೇಖನ ಮಾಲಿಕೆಯ ದಿಗ್ದರ್ಶನ ಜಗನ್ಮಾತೆ.

ಧನ್ಯವಾದಗಳು ಗುರುಗಳೇ ಮತ್ತು ಆರಂಭದಿಂದಲೂ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ನನ್ನ ಶಿರಸಾ ಪ್ರಣಾಮಿ.. !

Saturday, October 31, 2015

ಕಾಡುವ ಭಾವದೊಳಗೆ ಮಾಸದ ಮಸಣದ ಹೂವು (1984)

ಕೊಳವೆ ಬಾವಿ ತೋಡುವಾಗ ಆ ಯಂತ್ರ ಒಂದೇ ಸಮನೆ ನೆಲವನ್ನು ಕೊರೆಯುತ್ತಾ ಹೋಗುತ್ತದೆ ಎಡಬಿಡದೆ. ಹಾಗೆಯೇ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಅಂತಿಮ ಚಿತ್ರ ಕೂಡ. ಈ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ಈ ಲೇಖನ ಬರೆಯುವ ಮೊದಲು ನೋಡಲು ಕುಳಿತೆ. ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬಂದದ್ದು, ಈ ಚಿತ್ರದಲ್ಲಿ ಅನೇಕ ಉದ್ದುದ್ದ ದೃಶ್ಯಗಳು ಇವೆ (ಲಾಂಗ್ ಶಾಟ್ಸ್). ನನಗೆ ಅಚ್ಚರಿ ಆಯಿತು, ತಾಂತ್ರಿಕತೆ ಮತ್ತು ನಿರ್ದೇಶನದ ಮೇಲೆ ಮತ್ತು ಕತೆಯ ಮೇಲೆ ಹಿಡಿತ ಇದ್ದಾಗ ಎಂಥಹ ಜಾದೂ ಮಾಡಬಹುದು ಎಂದು.

ಈ ಚಿತ್ರ ಚೆನ್ನಾಗಿದೆ ಎಂದರೆ, ಮನುಕುಲದ ಮೇಲೆಯೇ ಒಂದು ರೀತಿಯಲ್ಲಿ ವಾಕರಿಕೆ ಬರುತ್ತದೆ, ಏಕೆಂದರೆ ಇದರ ಹುಟ್ಟಿಗೆ ಮನುಕುಲದ ವಿಷಮ ಮನಸ್ಥಿತಿಯೇ ಕಾರಣ. ಶ್ರೀ ತ ರಾ ಸುಬ್ಬರಾಯರು ರಚಿಸಿದ ಅನೇಕ ಕೃತಿಗಳು ಚಲನಚಿತ್ರಗಳಾಗಿವೆ. ಇದು ಒಂದು ರೀತಿಯ ವಿಚಿತ್ರ ಪರಿಸ್ಥಿತಿ. ಪುಟ್ಟಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ ರೀತಿ ನೋಡಿದಾಗ, ಮುಂದಿನ ಚಿತ್ರಗಳು ಹೇಗಿರಬಹುದು ಎನ್ನುವ ಒಂದು ಖುಷಿ ಮನಸ್ಸಿಗೆ ಬಂದಿದ್ದು ಸುಳ್ಳಲ್ಲ. 

ಕಾರಣ, ನಾ ಮಸಣದ ಹೂವು ಕಾದಂಬರಿಯನ್ನು ಓದಿದಾಗ ಅಕ್ಷರಶಃ ಮನಸ್ಸು ಗಲಿಬಿಲಿಗೊಂಡಿದ್ದು ಮತ್ತು ಮನಸ್ಸು ತಲ್ಲಣಗೊಂಡಿದ್ದು ನಿಜ. ಮನುಜ ತನಗೆ ಬೇಕಾದ ದೇಹದ ಬಯಕೆಗೆ ಅಥವಾ ತನ್ನ ಕೆಲಸ ಸಾಧಿಸಿಕೊಳ್ಳುವ ತವಕದಲ್ಲಿ ಸಮಾಜದಲ್ಲಿ ಒಂದು ಅಸಹ್ಯ ಎನಿಸುವ ಒಂದು ಮೂಲೆಯನ್ನು ಸೃಷ್ಠಿ ಮಾಡಿದ್ದಾನೆ ಎಂದು ಅರಿವಾದಾಗ ನಿಜಕ್ಕೂ ವಕರಿಕೆಯೇ ಬರುತ್ತದೆ. ಕಾದಂಬರಿ ಕತೃ, ಆ ಲೋಕದ ದೃಶ್ಯವನ್ನು ಅಷ್ಟು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. 

ಪುಟ್ಟಣ್ಣ ಕಣಗಾಲ್ ಅವರು ಅಕ್ಷರಶಃ ಪುಸ್ತಕದಲ್ಲಿ ಇರುವಂಥಹ ಕ್ರೌರ್ಯ, ಸಾಕಪ್ಪ ಎನ್ನಿಸುವಷ್ಟು ಮನಸ್ಸಿಗೆ ಹಿಂಸೆ ಅನ್ನಿಸುವ ದೃಶ್ಯಗಳನ್ನು ನವಿರಾಗಿ, ಮನಕ್ಕೆ ತಾಕುವಂತೆ ಚಿತ್ರೀಕರಿಸಿದ್ದಾರೆ. ಈ ರೀತಿಯ ಕಥೆಗಳನ್ನು ದೃಶ್ಯಕಾವ್ಯವಾಗಿ ಮಾಡಲು ಅದ್ಭುತ ಸೃಜನಶೀಲತೆ ಬೇಕು.  ಎಲ್ಲೇ ಮೀರಲು ಎಲ್ಲಾ ಅವಕಾಶಗಳು ಇದ್ದಾಗ್ಯೂ, ಸಹ್ಯವಾಗಿ ಚಿತ್ರವನ್ನು ಕೊಟ್ಟಿರುವುದು ಅವರ ಅಸಾಧಾರಣ ಪ್ರತಿಭೆಯ ವಿರಾಟ್ ರೂಪ ಎಂಬ ಮಾತು ನನ್ನದು. 

ಉತ್ತುಂಗದಲ್ಲಿದ್ದ ಅಂಬರೀಶ್ ಅಕ್ಷರಶಃ ತಮ್ಮ ಗುರುಗಳ ದಿಗ್ದರ್ಶನದಲ್ಲಿ ತಮ್ಮ ಇಮೇಜ್ ಬಿಟ್ಟು ಅಭಿನಯಿಸಿದ್ದಾರೆ. ಮೇಡಂ ನನಗೆ ಎರಡು ಸಾವಿರ ಕೊಡಿ, ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುವಾಗ ಅವರ ಕಣ್ಣುಗಳಲ್ಲಿ ಕಾಣುವ ನೋವು, ಜೀವನದ ಬಗ್ಗೆ ತಿರಸ್ಕಾರ ಜೊತೆಯಲ್ಲಿಯೇ, ಹೇಗಾದರೂ ಸರಿ ಬದುಕಬೇಕು ಎನ್ನುವ ಭಾವ ಎದ್ದು ಕಾಣುತ್ತದೆ. ತಮ್ಮ ತಾಯಿಗೆ ರಾತ್ರಿಯೊಳಗೆ ನಾ ಬರದಿದ್ದರೆ, ಇಲಿ ಪಾಷಾಣ ಮತ್ತು ನೀರು ಇದೆ ಎನ್ನುವ ಧ್ವನಿಯಲ್ಲಿ ನಿರಾಶೆ, ಹತಾಶೆ ಮತ್ತು ತನ್ನ ತಾಯಿಗೆ, ಬಡತನದಿಂದ ಮುಕ್ತಿ ನೀಡಲು ವಿಷ ತಿನ್ನು ಎಂದು ಹೇಳುವಂಥಹ ದೃಶ್ಯ. ಇದರಲ್ಲಿ ಅವರ ಅಭಿನಯ ಕಣ್ಣಲ್ಲಿ ನೀರು ಮೂಡಿಸುತ್ತದೆ. 

ಎರಡು ಸಾವಿರ ಕೊಡಿ ಎಂದಾಗ, ಅದಕ್ಕೆ ಕೆಲವು ನಿಯಮಗಳಿವೆ ಎಂದಾಗ, ಏನೇ ಆಗಲಿ, ನಾ ನೀವು ಹೇಳುವ ಕೆಲಸ ಮಾಡುತ್ತೇನೆ ಎಂದು ಎರಡು ಬೊಗಸೆಗಳನ್ನು ಒಡ್ಡಿ ನಿಂತಾಗ, ಯಾರ ಕಣ್ಣಲ್ಲೇ ಆದರೂ ಜೋಗದ ಹನಿ ಕಂಡೆ ಕಾಣುತ್ತದೆ. ತಲೆಹಿಡುಕನ ಪಾತ್ರದಲ್ಲಿ ಅದ್ಭುತ ಪರಕಾಯ ಪ್ರವೇಶ. ನಡೆ, ನುಡಿ, ಹಾವ ಭಾವ, ಅಬ್ಬಬ್ಬ ಎನ್ನಿಸುತ್ತದೆ. 

ಜಯಂತಿ, ಮಾತೆ ಬೇಡ, ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣುಗಳಲ್ಲೇ ಅಭಿನಯ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಅಂಗೀಕ ಅಭಿನಯ, ತಿರಸ್ಕಾರ, ಹಣಕ್ಕೆ ಮಾತ್ರ ಪ್ರಾಮುಖ್ಯತೆ ಮಿಕ್ಕವು ಗೌಣ ಎಂದು ಕೆಲವು ದೃಶ್ಯಗಳಲ್ಲಿ ಕಂಡು ಬಂದರೆ, ಇನ್ನೂ ಕೆಲವು ದೃಶ್ಯಗಳಲ್ಲಿ ನಂಬಿದವರನ್ನು ಸಲಹುವುದು, ಜೊತೆಯಲ್ಲಿಯೇ ಅವರನ್ನು ರಕ್ಷಿಸಲು ಮುಂದಾಗುವ ರೀತಿಯ  ಅಭಿನಯ ಅವರು ಮಾತ್ರ ಮಾಡಲು ಸಾಧ್ಯ. ತಾನು ಕಳಿಸಿದ ಹುಡುಗಿಯ ವರ್ತನೆ ಬಗ್ಗೆ ಕೇಳಿಬಂದಾಗ ಕೋಪಗೊಂಡು ಆ ಹುಡುಗಿಗೆ ದಂಡಿಸುತ್ತಾರೆ, ನಂತರ ನಿಜದ ಅರಿವಾದ ಮೇಲೆ, ಆಕೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾರೆ. ಇಂಥಹ ವೃತ್ತಿಯಲ್ಲಿ ಈ ರೀತಿಯ ಮಾನವೀಯತೆಯೂ ಇದೆ ಎಂದು ಕೂಗಿ ತೋರಿಸುವ ಅಭಿನಯ. ಇಡಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.  

ಇನ್ನು ಉಳಿದ ಪಾತ್ರಗಳು ಚಿತ್ರಕ್ಕೆ ಬೇಕಾದ ಅಗತ್ಯ ಅಭಿನಯವನ್ನು ನೀಡಿದ್ದಾರೆ. ಇಡಿ ಚಿತ್ರದ ತುಂಬಾ ತುಂಬಿಕೊಂಡಿರುವುದು ಅಂಬರೀಶ್ ಮತ್ತು ಜಯಂತಿ. ಇವರಿಬ್ಬರಿಂದ ಹಿತಮಿತವಾಗಿ, ಪರಿಣಾಮಕಾರಿಯಾಗಿ ಅಭಿನಯ ತೆಗೆದಿರುವುದು ಪುಟ್ಟಣ್ಣ ಅವರ ಅದ್ಭುತ ಹಿಡಿತ ಹೊಂದಿರುವ ನಿರ್ದೇಶನದ ಕುರ್ಚಿ. 

ಪಂಚಾಮೃತದಲ್ಲಿ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ, ಮತ್ತು ಫಲಗಳು ಸೇರಿದಂತೆ, ಪ್ರತಿ ದೃಶ್ಯವನ್ನು ಕಲೆಯ ಹಾಲಿನ ಕಡಲಲ್ಲಿ ಅದಕ್ಕೆ ಬೇಕಾಗುವ ವಿವಿಧ ಭಾವಗಳನ್ನು ಬೆರೆಸಿ ಅದ್ದಿ ತೆಗೆದಂತೆ ಚಿತ್ರೀಕರಿಸಿದ್ದಾರೆ. ಚಿತ್ರವನ್ನು ನೋಡುತ್ತಾ ಹೋದಂತೆ, ಅಲ್ಲಿ ಚಿತ್ರಕಥಾವಸ್ತುಗಿಂತಲೂ ಪುಟ್ಟಣ್ಣ ಅವರ ನಿರ್ದೇಶಕನ ಜವಾಬ್ಧಾರಿ ಕೊಂಚವೂ ಅಲುಗಾಡದಂತೆ ಆದರೆ ಅವರ ಮೇಲೆ ಹೆಮ್ಮೆ ಬರುವಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. 

ಕೆಲವು ಅದ್ಭುತ ದೃಶ್ಯಗಳು 
೧) ಮೇಡಂ, ಎರಡು ಸಾವಿರ ಕೊಡಿ ಎಂದಾಗ, ನನಗೆ ಒಂದು ಮುತ್ತು ಕೊಡು ಎಂದು ಕೇಳುತ್ತಾರೆ. ಹಿಂದೆ ಮುಂದೆ ನೋಡುತ್ತಾ ನಿಂತ ನಾಯಕನಿಗೆ ಬಯ್ದು, ಒಂದು ಮುತ್ತು ಕೊಡಲು ಹಿಂದೆ ಮುಂದೆ ನೀಡುವ ನೀನು ಈ ಮನೆಯಲ್ಲಿ ಏನು ತಾನೇ ಕೆಲಸ ಮಾಡ್ತೀಯ, ಹೋಗು ಹೋಗು ಎಂದು ಅಟ್ಟುತ್ತಾರೆ. ಆಗ ಕೊಂಚವೂ ಗಲಿಬಿಲಿ ಗೊಳ್ಳದೆ ಮುತ್ತು ನೀಡುತ್ತಾರೆ, ಆದರೆ ಆ ದೃಶ್ಯವನ್ನು ತೋರಿಸುವ ರೀತಿ ಅದ್ಭುತ. ಅಶ್ಲೀಲತೆ ಇಲ್ಲವೇ ಇಲ್ಲ ಅಲ್ಲಿ.  ಬದುಕಲೇ ಬೇಕು  ಎಂಬ ಹಠ ಬಂದಾಗ, ಜೀವನ ತನಗೆ ತಾನೇ ದಾರಿ ತೋರಿಸುತ್ತದೆ, ಹಾಗೂ ಧೈರ್ಯ ತುಂಬುತ್ತದೆ. 

೨) ಮೇಡಂ, ಸುಮ್ಮನೆ ಎರಡು ಸಾವಿರ ಗೊತ್ತಿರದ ಅವನಿಗೆ ಕೊಟ್ಟು ಬಿಟ್ಟಿರಿ, ಅವನು ಬರದೆ ಹೋದರೆ "ನೋಡು ಅವನು ನಿಯತ್ತಿನ ಮನುಷ್ಯ ಅನ್ನಿಸುತ್ತದೆ, ಒಂದು ವೇಳೆ ಬರದೆ ಹೋದರೆ, ನನ್ನ ಕಾಲುಮುಟ್ಟಿ ನಮಸ್ಕರಿಸಿದ ಅವನ ಶ್ರದ್ಧೆ ವಜಾ ಮಾಡಿಕೊಳ್ಳುತ್ತೇನೆ". ಬಂಡೆಯಲ್ಲಿ ಕೂಡ ನಂಬಿಕೆ ಇದು, ಒಲಿದರೆ ದೇವರಾಗುತ್ತದೆ, ಇಲ್ಲವೇ ಮನೆ ಕಟ್ಟಲು ಕಲ್ಲಾಗುತ್ತದೆ ಎನ್ನುತ್ತದೆ ಸುಭಾಷಿತ. ಎಷ್ಟು ನಿಜ ಅಲ್ಲವೇ. 

೩) ಇದುವರೆಗೂ ಯಾರು ಯಾರಿಗೋ ಕೈ ಮುಗಿದೇ, ಆದರೆ ಇಂದು ಒಂದು ದೇವರ ಮೂರ್ತಿ ತರಹ ಇರುವ ನಿಮಗೆ ಕೈಮುಗಿಯುತ್ತೇನೆ ಎಂದು ಲೋಕನಾಥ್ ಪಾತ್ರಧಾರಿಗೆ ಕೈಮುಗಿಯುವ ಜಯಂತಿ ಅಭಿನಯ. ಆ ಮನೆಗೆ ಬರುವವರೆಲ್ಲ ಬರಿ ಸುಖಃ ಅರಸಿಕೊಂಡು ಬರುವವರಲ್ಲ, ಬದಲಿಗೆ ಮಾನವೀಯತೆಯನ್ನು ಅರಸಿಕೊಂಡು ಬರುವವರು ಇದ್ದಾರೆ ಎನ್ನುವ ನಿರೂಪಣೆ ಇಲ್ಲಿದೆ. 

ಈ ಚಿತ್ರದ ದೊಡ್ಡ ಆಸ್ತಿ ಚಿತ್ರದಲ್ಲಿ ಅದ್ಭುತವಾಗಿ ಚಿತ್ರೀಕರಣಗೊಂಡ ಹಾಡುಗಳು. ಇಂಥಹ ಚಿತ್ರದಲ್ಲೂ ಕರುನಾಡನ್ನು, ಅದರ ಸೊಬಗನ್ನು ತೋರಿಸುವ ಪುಟ್ಟಣ್ಣ ಅವರ ವಿಶಿಷ್ಟ ಭಾವ ಇಲ್ಲೂ ಇದೆ. ಬಹುತೇಕ ಕರಾವಳಿ ಪ್ರದೇಶಗಳಲ್ಲಿ ಚಿತ್ರಿತವಾಗಿರುವ "ಕನ್ನಡ ನಾಡಿನ ಕರಾವಳಿ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಜೇನಿನ ಕಂಠದಲ್ಲಿ ಮೂಡಿ ಬಂದಿದೆ. ಎಸ್ ಆರ್ ಎಕ್ಕುಂಡಿ ಅವರ ಅಮೋಘ ಸಾಹಿತ್ಯಕ್ಕೆ ಕರಾವಳಿಯ ಎಲ್ಲಾ ಪ್ರಕಾರದ ಸಂಗೀತ ಒದಗಿಸಿರುವ ವಿಜಯಭಾಸ್ಕರ್, ಮತ್ತು ನೃತ್ಯ ಸಂಯೋಜನೆ, ಕರುನಾಡಿನ ವಿಶಿಷ್ಠತೆಯನ್ನು ಎತ್ತಿ ತೋರಿಸುವ ಹಾಡಾಗಿ ಉಳಿದುಕೊಂಡು ಬಂದಿದೆ. 

ಪ್ರೀತಿ ಎಲ್ಲಿಂದ ಹುಟ್ಟುತ್ತೆ ಹೇಗೆ ಜೀವನವನ್ನು ಬೆಳಗಬಲ್ಲದು ಎನ್ನುವ ಅನೇಕ ಪ್ರಶ್ನೆಗಳಿಗೆ ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದಾರೆ "ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ" ಮತ್ತೊಮ್ಮೆ ಜಯಚಂದ್ರನ್ ಮತ್ತು ವಾಣಿ ಜಯರಾಂ ಮನಸ್ಸಿನ ಮೂಲೆ ಮೂಲೆಯನ್ನು ತಟ್ಟುತ್ತಾರೆ. ವಿಜಯನಾರಸಿಂಹ ಅವರ ಸರಳ ಆದರೆ ಪರಿಣಾಮಕಾರಿ ಸಾಹಿತ್ಯ ಇಷ್ಟವಾಗಲೇ ಬೇಕು. ಪ್ರೇಮಿಗಳ ಹಾಡಾಗಿ ಬರುತ್ತದೆ. 

ಒಂದು ಕ್ಷಣದ ಆದರೆ ಜೀವನದ ಗತಿಯನ್ನು ಬದಲಾಯಿಸಬಲ್ಲ ತಿರುವನ್ನು ಒಂದು ಹಾದಿ ಬಿಟ್ಟ ಹುಡುಗಿಗೆ ಕೊಡುವ ನಾಯಕನನ್ನು ಕನಸಿನಲ್ಲಿ ಮತ್ತು ಮನಸ್ಸಿನಲ್ಲಿಯೇ ಅಭಿನಂದಿಸುವ ಹಾಡಾಗಿ ಬಂದಿದೆ "ಓ ಗುಣವಂತ". ಈ ಹಾಡಿನ ಸಾಹಿತ್ಯ ಎಷ್ಟು ಬಾರಿ ಕೇಳಿದರೂ, ಹೊಸ ಹೊಸ ರೀತಿಯಲ್ಲಿ ಮನಸ್ಸಿಗೆ ತಾಕುತ್ತದೆ. ಕನಸ್ಸುಗಳ ಮೂಟೆಯನ್ನು ಹೊತ್ತು ಸಾಗುವಾಗ ಬರುವ ಒಂದು ವಿಚಿತ್ರ ತಿರುವು ಮತ್ತು ಆ ತಿರುವಿಗೆ ಒಂದು ಕೊಂಕು ಹಾಕಿ, ಮತ್ತೆ ಹಳಿಗೆ ಬರುವ ಜೀವನ ಪಥವನ್ನು ತೋರುವ ಆ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸುವ ಹಾಡನ್ನು ಎಸ್ ಜಾನಕಿಯಮ್ಮ ಆಪೋಶನ ಮಾಡಿ ಹಾಡಿದ್ದಾರೆ. ಸಂಗೀತ, ಅದಕ್ಕೆ ತಕ್ಕಂತೆ ಸಾಹಿತ್ಯ, ಅದಕ್ಕೆ ಬೇಕಾದ ಅದ್ಭುತ ಗಾಯನ... ನಾ ಹೇಳೋಲ್ಲ ನೀವೇ ಕೇಳಿ ಈ ಹಾಡನ್ನು ತಲೆದೂಗದೆ ಇರಲು ಸಾಧ್ಯವೇ ಇಲ್ಲ. 

ಚಂದ್ರ ತೋರಿಸಲೇ, ನಕ್ಷತ್ರಗಳನ್ನು ನಿನ್ನ ಮುಡಿಗೆ ಪೋಣಿಸಲೇ ಎಂದು ಇಲ್ಲದ ಆಸೆ ಹುಟ್ಟಿಸುವ ಪ್ರೇಮಿಗಳ ಆಶಾಪಾಶದ ಮಧ್ಯದಲ್ಲಿ, ನನ್ನ ಮಟ್ಟ ಹೀಗಿದೆ, ನನಗೆ ಅದು ತರಲು ಆಗೋಲ್ಲ, ಇದು ತರಲು ಅಸಾಧ್ಯ ಎಂದು ಹೇಳುತ್ತಲೇ, ನಿನಗಾಗಿ ಏನು ತರಲಿ ಹೇಳು ಎಂದು ಪ್ರೀತಿಯ ನಿವೇದನೆ ಮಾಡುವ ಹಾಡಿನಲ್ಲಿ ಎಸ್ ಅರ್ ಎಕ್ಕುಂಡಿ ವಿರಚಿತ "ಯಾವ ಕಾಣಿಕೆ ನೀಡಲಿ" ಎಂದು ಎಸ್ ಪಿ ಬಾಲಸುಬ್ರಮಣ್ಯಂ ಮನವನ್ನು ತಟ್ಟುತ್ತಾರೆ. 

ಕಸದ ಬಿದ್ದ ಹೂವಿಗೂ ಬೆಲೆಯಿದೆ, ಮುದುಡಿ ಹೋದ ಮಾಲೆಗೆ ಬೆಲೆ ಕಟ್ಟುವ ಮನಸಿದ್ದರೆ ಸಾಕು, ಅದು ಹೃದಯ ಕಮಲದ ಗುಡಿಯಲ್ಲಿ ಪೂಜೆಗೆ ಅರ್ಹವಾಗುವ ಮನಸ್ಸಿಗೆ ಅರ್ಪಿತವಾಗುತ್ತದೆ ಎನ್ನುವ ಒಂದು ಹೃದಯ ಹಿಂಡುವ ಸಾಹಿತ್ಯ "ಮಸಣದ ಹೂವೆಂದು ನೀನೇಕೆ ಕೊರಗುವೆ" ಹಾಡು, ಇಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ "ಪಾರ್ವತಿ" ಎಂದು ಕೂಗುವ ಶಬ್ದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. 

ಹಾಡುಗಳು ಚಿತ್ರದ ಅವಿಭಾಜ್ಯ ಅಂಗ ಮತ್ತು ಅದು ಕತೆಯನ್ನು ಮುಂದುವರೆಸಲು ಸಹಾಯವಾಗುತ್ತದೆ ಎಂದು ಬಲವಾಗಿ ನಂಬಿದ್ದ ಪುಟ್ಟಣ್ಣ ಕಣಗಾಲ್ ತಮ್ಮ ಅಂತಿಮ ಚಿತ್ರದಲ್ಲಿಯೂ ಕೂಡ ಹಾಡುಗಳನ್ನು ಸರಿಯಾದ ಜಾಗದಲ್ಲಿ ಅಳವಡಿಸಿಡಿಸಿ ಕಥೆಯ ಓಟಕ್ಕೆ ಒಂದು ನಿರ್ಧಿಷ್ಟ ವೇಗವನ್ನು ಕೊಟ್ಟಿದ್ದಾರೆ. 

ಇಡಿ ಚಿತ್ರ ಎಲ್ಲೂ ಒಂದಿನಿತು ಬೇಸರ ತರಿಸುವುದಿಲ್ಲ. ಒಬ್ಬ ಜಾದೂಗಾರ ಯಕ್ಷಿಣಿ ಮಾಡಿ ಮಾಡಿ ಜನರ ಮನಸ್ಸನ್ನು ಗೆಲ್ಲುವಂತೆ, ಪ್ರತಿ ದೃಶ್ಯಗಳನ್ನು ಜಾದೂಗಾರಿಕೆಯ ದಂಡದಿಂದ ಸ್ಪರ್ಶ ಮಾಡಿ, ಮರೆಯದ ಮಾಣಿಕ್ಯವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿದ್ದಾರೆ. 

ಅನುಗ್ರಹ ಮೂವಿ ಮೇಕರ್ಸ್ ಲಾಂಛನದಲ್ಲಿ ಬಿ ಎಸ್ ಗಾಯತ್ರಿ ಮತ್ತು ಎಸ್ ಆರ್ ಸರ್ವೋತ್ತಮ ಕಣಗಾಲ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರ ರತ್ನಕ್ಕೆ ಛಾಯಾಗ್ರಾಹಣ ಮಾಡಿದವರು ಎಸ್ ಮಾರುತಿರಾವ್.  ಸರಳ ಆದರೆ ಪರಿಣಾಮಕಾರಿ ಸಂಭಾಷಣೆ ನೀಡಿದವರು ಟಿ ಜಿ ಅಶ್ವತ್ ನಾರಾಯಣ. 

ತಮ್ಮ ಎಲ್ಲಾ ಕಾಯಕಕ್ಕೂ ಪ್ರೇರೇಪಣೆ ನೀಡಿದ ಜಗನ್ಮಾತೆಯನ್ನು ಸ್ಮರಿಸುತ್ತಾ  ಆ ಮಾತೆಯ ದಿಗ್ದರ್ಶನದಲ್ಲಿ ಈ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟವರು ಪುಟ್ಟಣ್ಣ ಕಣಗಾಲ್ ಅವರು. 

ತಾವು ಕಂಡ ರೀತಿಯಲ್ಲಿ ಚಿತ್ರವನ್ನು ಮುಗಿಸುವ ಮೊದಲೇ ಆ ಜವರಾಯನ ಕರೆಗೆ ಓಗೊಟ್ಟು ಇಹಲೋಕದಿಂದ ಹೊರನೆಡೆದ ಮೇಲೆ, ಅವರಿಗೆ ಗೌರವ ಸಲ್ಲಿಸುತ್ತಲೇ, ಉಳಿದ ಭಾಗವನ್ನು ಆದಷ್ಟು ಪುಟ್ಟಣ್ಣ ಅವರ ಕಲ್ಪನೆಯಲ್ಲಿ ಇರಬಹುದು ಎನ್ನುವ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ, ತಾವು ಚಿತ್ರೀಕರಿಸಿದ ಭಾಗದಲ್ಲಿ ತಪ್ಪಿದ್ದರೆ ಅದು ತಮ್ಮದೇ ಎಂದು ಹೇಳಿ ತಮ್ಮ ಗೆಳೆಯ ಪುಟ್ಟಣ್ಣ ಕಣಗಾಲ್ ಅವರಿಗೆ ವಂದನೆ ಅರ್ಪಿಸುವ ಇತ್ತೀಚಿಗಷ್ಟೇ ಪುಟ್ಟಣ್ಣ ಕಣಗಾಲ್ ಅವರನ್ನು ಸ್ವರ್ಗದಲ್ಲಿ ಭೇಟಿ ಮಾಡಲು ತೆರಳಿದವರು ರವಿ ಅಥವಾ ಕೆ ಎಸ್ ಎಲ್ ಸ್ವಾಮೀ. 



ಈ ಚಿತ್ರದ ಹೆಸರು ಮಸಣದ ಹೂವು ಎಂದಿದ್ದರೂ ಕನ್ನಡಿಗರ ಮತ್ತು ಚಲನ ಚಿತ್ರ ರಸಿಕರ ಹೃದಯ ಕಮಲದಲ್ಲಿ ಈ ಚಿತ್ರ ಎಂದೂ ಬಾಡದ ಪಾರಿಜಾತ ಹೂವಾಗಿ ಸದಾ ನಗುನಗುತ್ತಲೇ ಇರುತ್ತದೆ. 

ಪುಟ್ಟಣ್ಣ ಕಣಗಾಲ್ ಮತ್ತು ರವಿ ಅವರಿಗೆ ಈ ಲೇಖನ ಅರ್ಪಿತ. 

Thursday, October 29, 2015

ಸ್ನೇಹದ ಅಮೃತ ಸಿಂಚನ ಮಾಡುವ ಅಮೃತ ಘಳಿಗೆ (1984)

ಸಮುದ್ರದಲ್ಲಿ ತೇಲುವ ಅನುಭವ ಎಷ್ಟು ಸೊಗಸೋ ಅಷ್ಟೇ ಭಯನಕವಾಗಿರುತ್ತೆ ದೈತ್ಯ ಅಲೆಗಳು ಸುತ್ತ ಮುತ್ತಲ ಸೃಷ್ಠಿಯನ್ನು ಆಪೋಶನ ಮಾಡುವಾಗ. ಆದರೆ ಆ ದೈತ್ಯ ಅಲೆಗಳಿಗೆ ಶಕ್ತಿ ಕೊಡುವುದು ಯಾವುದು ಗೊತ್ತೇ, ಕಡಲಲ್ಲಿ ಇರುವ ನೀರು ಮತ್ತು ಅದರ ಮೇಲೆ ಬೀಸುವ ಗಾಳಿ.

ನಿಜ ಅದರ ಒಡಲೊಳಗೆ ಇರುವ ನೀರು ದೈತ್ಯಾಕಾರ ತಾಳುತ್ತದೆ ಎಂದರೆ, ಅದರೊಳಗಿನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. 

ಪುಟ್ಟಣ್ಣ ಕಣಗಾಲ್ ಅವರು ಮಾಮೂಲಿ ಎನ್ನುವ ಕಥೆಯನ್ನು ಕೂಡ ಅಸಾಧಾರಣ ರೀತಿಯಲ್ಲಿ ತೆರೆಯ ಮೇಲೆ ಬಡಿಸುತ್ತಿದ್ದುದು ಅವರ ಅಗಾಧ ಪ್ರತಿಭೆಯ ಶಕ್ತಿಯಿಂದ. ನಮ್ಮ ಕಣ್ಣಿಗೆ ಸಾಧಾರಣ ಎನ್ನಿಸುವುದನ್ನು ಅಷ್ಟೇ ವಿವರವಾಗಿ, ವಿಶಿಷ್ಟ ರೀತಿಯಿಂದ ಹೀಗೂ ನೋಡಬಹುದು ಎನ್ನುವುದನ್ನು ಕಳಿಸಿಕೊಟ್ಟ ಗುರುಗಳು ಅವರು. 

ಅಮೃತ ಘಳಿಗೆ ಈ ಚಿತ್ರದ ಕಥೆಯನ್ನು ಅವರ ಜೀವದ ಗೆಳೆಯ ಮೋಹನ್ ಕಂಪ್ಲಾಪುರ್ ಕೊಟ್ಟಾಗ ಅ ಪುಸ್ತಕದ ಮೇಲೆ ಇದ್ದ ಶಿರೋನಾಮೆ "ದೊಡ್ಡೇರಿ ವೆಂಕಟಗಿರಿ ರಾವ್ - "ಅವಧಾನ" ". ಅದನ್ನೇ ಸುಂದರ ಚಿತ್ರಕಥೆ ಮಾಡಿ, ಅದಕ್ಕೊಂದು ಸುಂದರ ತಾಣವನ್ನು ಹುಡುಕಿ, ಅಮೃತ ಘಳಿಗೆ ಎನ್ನುವ ಒಂದು ನಿತ್ಯ ನೂತನ ಚಿತ್ರವನ್ನು ನೀಡಿದರು. ಈ ಕಥೆ ಆ ಕಾಲದಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಪುಟ್ಟಣ್ಣ ಅವರ ಹುಡುಕಾಟದಲ್ಲಿ ಸಿಕ್ಕ ಇಂಥಹ ಕಥಾ ಮುತ್ತುಗಳು ಹೇರಳ. 

ಎಸ್ ಆರ್ ರಾಜನ್, ಭೀಮ ರಾವ್, ಕೆ ನಾಗರತ್ನ, ಪುಟ್ಟಣ್ಣ ಕಣಗಾಲ್ ತಂಡ ನಿರ್ಮಾಪಕರಾಗಿ ಈ ಚಿತ್ರವನ್ನು ಜಯಭೇರಿ ಫಿಲಂಸ್ ಲಾಂಛನದಲ್ಲಿ ತೆರೆಗೆ ತಂದರು. 

ಆರಂಭದಲ್ಲಿ ಪುಟ್ಟಣ್ಣ ಅವರ ಮಾತೃಶ್ರಿ ಅವರಿಗೆ ನಮನ ಸಲ್ಲಿಸುತ್ತಾ, ಶುರುವಾಗುವ ಈ ಚಿತ್ರದ ವಿಶೇಷ ಛಾಯಾಗ್ರಹಣ ಬಿ ಎಸ್ ಬಸವರಾಜ್ ಅವರದ್ದು. ಅದ್ಭುತ ಹಾಡುಗಳನ್ನು ಬರೆದದ್ದು ಜೀವದ ಗೆಳೆಯ ವಿಜಯನಾರಸಿಂಹ ಅದಕ್ಕೆ ಸಂಗೀತ ಕಿರೀಟ ತೊಡಿಸಿದವರು ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್. 

ಪುಟ್ಟಣ್ಣ ಅವರಿಗೆ ಕರುನಾಡಿನ ಪ್ರತಿಭೆಗಳನ್ನು, ಕರುನಾಡಿನ ಸುಂದರ ತಾಣಗಳನ್ನು ಪರಿಚಯಿಸುವ ಉತ್ಸಾಹ ಯಾವಾಗಲೂ ಇತ್ತು. ಅವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಕ್ಷತ್ರಗಳು ಅನೇಕ ಅನೇಕ. ಈ ಚಿತ್ರದ ಮೂಲಕ ಕರುನಾಡಿಗೆ ಕೊಟ್ಟ ಉಡುಗೊರೆ ಬಿ ಆರ್ ಛಾಯ ಎನ್ನುವ ಕರುನಾಡಿನ ಮನೆಮಗಳಾದ ಗಾಯಕಿ. 

ಚುರುಕು ಸಂಭಾಷಣೆ, ಹಿತಮಿತವಾದ ಪದಗಳು ಪುಟ್ಟಣ್ಣ ಚಿತ್ರಗಳ ಆಸ್ತಿ, ಈ ಚಿತ್ರಕ್ಕೆ ಪದಗಳನ್ನು ಜೋಡಿಸಿದವರು ಬಿ ಎಲ್ ವೇಣು. ಜಗನ್ಮಾತೆಯ ದಿಗ್ದರ್ಶನದಲ್ಲಿ ಚಿತ್ರಕಥೆ, ನಿರೂಪಣೆ ಮತ್ತು ನಿರ್ವಹಣೆ ಪೂಜ್ಯ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರದ್ದು. 

ಪುಟಿಯುವ ಯೌವನದ ಉತ್ಸಾಹ ಕೆಲವೊಮ್ಮೆ ಎಂಥಹ ಹಾದಿಯನ್ನು ಹಿಡಿಯುತ್ತದೆ ಎನ್ನುವುದರ ಆರಂಭ ಈ ಚಿತ್ರದ ಆರಂಭಿಕ ದೃಶ್ಯದಲ್ಲಿ ಕಾಣುತ್ತದೆ. ಬುಗ್ಗೆ ಬುಗ್ಗೆಯಾಗಿ ದೋಣಿಯ ಮೋಟಾರಿನ ಕೆಳಗೆ ಉಕ್ಕುವ ನೀರು ಈ ಮಾತಿಗೆ ಸಾಕ್ಷಿ. 
ಆಧುನಿಕ ಪ್ರಪಂಚ ದಾಪುಗಾಲು ಇಡುತ್ತಾ ಸಾಗಿದಾಗ ಪ್ರಕೃತಿಯನ್ನು ಮನುಷ್ಯ ಹೇಗೆ ಕಬಳಿಸುತ್ತಾ ಹೋಗುತ್ತಾನೆ ಎನ್ನುವುದಕ್ಕೆ ಶರಾವತಿ ಹಿನ್ನೀರಿನ ಬಗ್ಗೆ ನಾಯಕಿ ಮಾತಲ್ಲಿ ಬರುವ ಆರಂಭಿಕ ಸಂಭಾಷಣೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಶಾಲೆಯ ಕಡಿವಾಣದ ದಿನಗಳಿಂದ ಕಾಲೇಜು ಎನ್ನುವ ಸ್ವತಂತ್ರ ಎನ್ನುವ ಇನ್ನೊಂದು ಪರಿಧಿಯೊಳಗೆ ಹೋಗುವ ಹರೆಯದ ತುಡಿತವನ್ನು ಕೆಲವೇ ದೃಶ್ಯಗಳಲ್ಲಿ ಅಚ್ಚುಕಟ್ಟಾಗಿ ತಂದಿದ್ದಾರೆ. ನೋಡಿದ ತಕ್ಷಣ ರೂಪು, ವಯ್ಯಾರ ಅಥವಾ ಲಕ್ಷಣಗಳನ್ನು ಗಮನಿಸದೆ ಪ್ರೀತಿ ಎನ್ನುವ ಒಂದು ವಿಚಿತ್ರ ಭಾವಕ್ಕೆ ಬೀಳುವ ನಾಯಕ ಪಾತ್ರಧಾರಿ ರಾಮಕೃಷ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ಪದ್ಮಾವಾಸಂತಿ ಮತ್ತೆ ಅಭಿನಯವನ್ನು ಸಾಣೆ ಹಿಡಿದಂತೆ ನಟಿಸಿದ್ದಾರೆ. ಇನ್ನೂ ಮೊದಲ ಪರಿಚಯ ಶ್ರೀಧರ್ ಗಂಭೀರ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲೂ ಅತಿರೇಕದ ಅಭಿನಯ ಅಥವಾ ದೃಶ್ಯಗಳನ್ನು ಕಟ್ಟಿ ಕೊಡದಿರುವುದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಪ್ರಮುಖ ಆಕರ್ಷಣೆ. ಹದವಾಗಿ, ನವಿರಾದ ಸಂಭಾಷಣೆಗಳು ಮತ್ತು ಅದಕ್ಕೆ ಬದ್ಧವಾಗಿ ನಿಲ್ಲುವ ದೃಶ್ಯ ಜೋಡಣೆ, ಪರಿಸರ ಇದು ಈ ಚಿತ್ರದ ಮತ್ತೊಂದು ಆಕರ್ಷಣೆ. ರಾಮಕೃಷ್ಣ ಒಬ್ಬರನ್ನು ಬಿಟ್ಟರೆ ಮಿಕ್ಕೆಲ್ಲಾ ಕಲಾವಿದರು ಅಷ್ಟೇನೂ ಬೆಳಕಿಗೆ ಬಂದು ಮಿಂಚಿದ ಪ್ರತಿಭೆಗಳಲ್ಲ. ಆದರೆ ಪ್ರತಿಯೊಬ್ಬರಲ್ಲೂ ಕಥೆಗೆ ಬೇಕಷ್ಟು ಅಭಿನಯ ಹೊಮ್ಮಿಸಿರುವ ರೀತಿ ಇಷ್ಟವಾಗುತ್ತದೆ.

ಸೂರ್ಯಾಸ್ತದ ಅನೇಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಪುಟ್ಟಣ್ಣ, ಅದನ್ನು ಸರಿಯಾದ ದೃಶ್ಯಕ್ಕೆ ಒಪ್ಪವಾಗಿ ಜೋಡಿಸಿದ್ದಾರೆ.

ಮೊದಲ ಪ್ರೇಮವನ್ನು ನಿವೇದಿಸುತ್ತಾ ಮನಸ್ಸಲ್ಲೇ ರಮ್ಯ ಕಲ್ಪನೆ ಮಾಡಿಕೊಳ್ಳುವ ಹಾಡಾಗಿ "ಮಯೂರಿ ನಾಟ್ಯ ಮಯೂರಿ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಛಾಯ ಅವರ ಕಂಠ ಸಿರಿಯಲ್ಲಿ ಬರುತ್ತದೆ. ರಾಮಕೃಷ್ಣ ಅವರ ನೃತ್ಯ, ಪದ್ಮಾವಾಸಂತಿ ಅಭಿನಯ ಈ ಹಾಡಿನ ಮೆಚ್ಚತಕ್ಕ ಅಂಶ. ಶರಾವತಿ ಹಿನ್ನೀರಿನ ರಮ್ಯ ತಾಣವನ್ನು ಪರಿಚಯಿಸಿಕೊಡುತ್ತಾರೆ

ಪ್ರಣಯದ ಉತ್ತುಂಗ, ಮತ್ತು ಮನಸ್ಸಿನ ಮೇಲೆ ಹಿಡಿತ ಜಾರುವ ದೃಶ್ಯವನ್ನು ಹಾಡಾಗಿ "ಪಾರವತಿ ಪರಶಿವನ ಪ್ರಣಯ ಪ್ರಸಂಗ" ಹಾಡಿನಲ್ಲಿ ಮನಸ್ಸಿನ ಮೇಲೆ ಬೀರುವ ವಿಧ ವಿಧ ಭಾವಕ್ಕೆ ಒಪ್ಪುವಂತೆ ಬಣ್ಣ ಬಣ್ಣಗಳ ಬೆಳಕಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಇಕ್ಕೇರಿಯ ದೇಗುಲದಲ್ಲಿ. ಪುಟ್ಟಣ್ಣ ಅವರ ತಾಂತ್ರಿಕ ಜ್ಞಾನದ ಭವ್ಯ ಅನಾವರಣ.

ಮುಂದಿನ ವಿದ್ಯಾಭ್ಯಾಸಕ್ಕೆ ಹೊರಡುವ ನಾಯಕ, ಮೊದಲ ಕಾಗದವನ್ನು ತಲುಪಿಸಿದಾಗ ಅದನ್ನು ಓದುವ ನಾಯಕಿ, ಮತ್ತು ಆ ದೃಶ್ಯವನ್ನು ಉಯ್ಯಾಲೆಯಲ್ಲಿ ತೂಗಿದಂತೆ ಚಿತ್ರೀಕರಿಸಿದ್ದಾರೆ. ಅದನ್ನು ನಾಯಕಿಯ ದೇಹದಲ್ಲಿ ಆಗುವ ಬದಲಾವಣೆ ಮತ್ತು ನಾಯಕ ಹೊರಳಿದ ಪಥದಲ್ಲಿ ನಿಲ್ಲುವನು ಎನ್ನುವ ಉಪಮೆ ನೀಡಿದ್ದಾರೆ. ಬಿಸಿಗೆ ಕರಗಿದ ಮಂಜಿನಂತೆ ನಾಯಕನ ಪ್ರೇಮವೂ ಪ್ರೀತಿಯೂ ಅನುಮಾನಕ್ಕೆ ತಿರುಗುತ್ತೆ ಇದರ ಮುನ್ಸೂಚನೆ ಈ ದೃಶ್ಯದಲ್ಲಿ ಕಾಣುತ್ತದೆ.

ನಾಯಕಿ ತನ್ನ ಬವಣೆಯನ್ನು ತನ್ನ ಆತ್ಮೀಯ ಸ್ನೇಹಿತ ಶ್ರೀಧರ್ ಗೆ ಹೇಳಲು ಹೊರ ಕರೆಯುತ್ತಾಳೆ, ಆದರೆ ಸ್ನೇಹಿತನ ಮುಂದೆ ತಾನು ಕಾಲು ಜಾರಿದ್ದೇನೆ ಎಂದು ಹೇಳಲು ತೊಳಲಾಡುವ ದೃಶ್ಯವನ್ನು ಅಷ್ಟೇ ಅದ್ಭುತವಾಗಿ ಕ್ಯಾಮೆರ ಓಡಾಡುತ್ತಲೇ ಇರುವಂತೆ ತೋರಿಸಿದ್ದಾರೆ. ಶ್ರೀಧರ್ ಹತ್ತಿರ ಬಂದು ಏನು ಸಮಾಚಾರ ಎಂದಾಗ, ಕ್ಯಾಮೆರ ನಿಲ್ಲುತ್ತದೆ, ಅಂದರೆ, ಜೀವದ ಗೆಳೆಯ ಆತ್ಮ ವಿಶ್ವಾಸ ತುಂಬುತ್ತಾನೆ ಮತ್ತು ತನ್ನ ಎಲ್ಲಾ ಕಷ್ಟಗಳಿಗೆ ಸ್ಪಂಧಿಸುತ್ತಾನೆ ಎನ್ನುವ ಭರವಸೆ ಮೂಡಿದಾಗ ತೂಗಾಡುವ ಮನಸ್ಸು ಒಂದು ತಹಬದಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಈ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಯಕಿಯ ಪರಿಸ್ಥಿತಿಗೆ ಪರಿಹಾರ ಎನ್ನುವಂತೆ ತಾನೇ ಮದುವೆ ,ಮಾಡಿಕೊಳ್ಳುವ ಶ್ರೀಧರ್, ತನ್ನ ತಾಯಿಗೆ ಹೇಳುವ ಮಾತು "ಯಾವತ್ತೂ ಯಾವ ಕಾರಣಕ್ಕೂ ಇವಳ ಮನಸ್ಸನ್ನು ನೋಯುವ ಮಾತನ್ನು ಆಡಬೇಡ" ಎಂದಾಗ ತಾಯಿ ಹೇಳುವ ಅದ್ಭುತ ಮಾತು "ಮಗ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವಷ್ಟು ಕೆಟ್ಟ ತಾಯಿಯಲ್ಲ" ಎನ್ನುತ್ತಾಳೆ.

ಇದಕ್ಕೆ ವಿವರಣೆಯೇ ಬೇಡವೇ ಬೇಡ.

ಕರುನಾಡಿನ ರಮ್ಯತಾಣ ಶ್ರೀಧರ ತೀರ್ಥ ಇರುವ ವರದಹಳ್ಳಿ. ಇಲ್ಲಿ ಚಿತ್ರೀಕರಣ ಮಾಡಿದ್ದಾರೆ ಒಂದು ಅದ್ಭುತ ಹಾಡನ್ನು "ಹಿಂದೂಸ್ಥಾನವು ಎಂದೂ ಮರೆಯದ" ಜಯಚಂದ್ರನ್ ಹಾಡಿರುವ ರೀತಿ, ಆ ಸಾಹಿತ್ಯ ಅದ್ಭುತ. ಶ್ರೀಧರ್ ಈ ಹಾಡಿಗೆ ಉತ್ತಮ ಅಭಿನಯ ನೀಡಿದ್ದಾರೆ. ಮುಂದೆ ಇದೆ ಹಾಡನ್ನು ಬಿ ಆರ್ ಛಾಯ ಹಾಡಿರುವ ರೀತಿಯೂ ಸೊಗಸಾಗಿದೆ.

ಶ್ರೀಧರ್ ಪಾತ್ರ ಮರಣಹೊಂದಿದಾಗ, ಮುಗ್ಧ ಮಗು ಸ್ಮಶಾನದಲ್ಲಿ ಏನೂ ಮಾತಾಡದೆ ಅಥವಾ ಅಳಲು  ಗೊತ್ತಾಗದೆ ನಿಂತಿರುತ್ತದೆ. ಇಲ್ಲಿ ಯಾವುದೇ ಭಾವನಾತ್ಮಕ ಸಂಭಾಷಣೆ ಇರುವುದಿಲ್ಲ, ನಿಶ್ಯಬ್ಧ... ಅತ್ಯುತ್ತಮ ದೃಶ್ಯ ಇಡಿ ಚಿತ್ರದಲ್ಲಿ.

ಕಡೆಯ ಕೆಲ ದೃಶ್ಯದಲ್ಲಿ ರಾಮಕೃಷ್ಣ ತನ್ನ ತಪ್ಪಿನ ಅರಿವಾಗಿ ನಾಯಕಿಯನ್ನು ನೋಡಲು ಬಂದಾಗ, ನಾಯಕಿಯ ಮೊಗದಲ್ಲಿ ತನ್ನ ಬಾಳನ್ನು ನಾಶ ಮಾಡಿದ ಅವನನ್ನು ನೋಡಿದ ತಕ್ಷಣ ಕೋಪ ಆದರೆ ಕೆಲವು ಕ್ಷಣಗಳಲ್ಲಿ ಶಾಂತ ಸ್ವಭಾವದ ಅಭಿನಯ ಸೂಪರ್ ಸೂಪರ್ ಎನ್ನಿಸುತ್ತದೆ.

ಶ್ರೀಧರ್ ಬರೆದಿಟ್ಟ ಪತ್ರ ಮತ್ತು ಉಯಿಲನ್ನು ಓದುವ ರಾಮಕೃಷ್ಣ ಕೂತಿರುವ ಶರಾವತಿ ಹಿನ್ನೀರಿನ ದಡದಲ್ಲಿ ದೃಶ್ಯವನ್ನು ಪದೇ ಪದೇ ಹಿಂದಕ್ಕೆ ಮುಂದಕ್ಕೆ ಜೂಮ್ ಮಾಡುತ್ತಲೇ ಇರುತ್ತದೆ ದೃಶ್ಯ ಸಂಯೋಜನೆ, ನಾಯಕ ತನ್ನ ಗತ ಜೀವನದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅದಕ್ಕೆ ಒಂದು ಅವಕಾಶವಿದೆ, ಮತ್ತೆ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲಿಕ್ಕೆ ಸಾಧ್ಯವಿದೆ ಎನ್ನುವ ಅಭಿಪ್ರಾಯ ಮೂಡಿಬರಲು ಸಹಾಯ ಮಾಡುತ್ತದೆ.


ಪುಟ್ಟಣ್ಣ ಕಣಗಾಲ್ ಮತ್ತೆ ತಮ್ಮ ಜಾದೂವನ್ನು ತೋರಿಸಿದ ಚಿತ್ರ ಇದು. ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ರೀತಿಗೆ ಮನಸ್ಸಲ್ಲೇ ನಮನ ಸಲ್ಲಿಸುತ್ತೇನೆ. 

Sunday, October 18, 2015

ಸಾವಿರ ಸಾವಿರ ಮನಸ್ಸಿನ ಭಾವದ ಉಗಮಸ್ಥಾನ "ಸಾವಿರ ಮೆಟ್ಟಿಲು" - ಪೂರ ಹತ್ತದ ಮೆಟ್ಟಿಲುಗಳು (2006)

ಕಲಾವಿದರ ಕಾಲು ಅಳತೆ ಒಬ್ಬರಿಂದ ಒಬ್ಬರದು ವಿಭಿನ್ನ ಎಂದು ಹೇಳುತ್ತಾರೆ. ಒಬ್ಬರ ಪರಿಶ್ರಮದ ಪಾದರಕ್ಷೆ ಇನ್ನೊಬ್ಬರ ಕಾಲಿಗೆ ಆಗೋಲ್ಲ ಎಂದು.

ಪುಟ್ಟಣ್ಣ ಕಣಗಾಲ್ ಒಂದು ಪ್ರತಿಭಾ ಪೆಟ್ಟಿಗೆ, ಅವರ ಮೆದುಳು ಒಂದು ಈಗಿನ ಕಾಲದ ಮಾಹಿತಿ ಕೇಂದ್ರ ಅಥವಾ ಕಂಪ್ಯೂಟರ್ ಇದ್ದ ಹಾಗೆ. ಅವರ ಬಗ್ಗೆ ಜನಜನಿತ ಮಾತು ಅಂದರೆ, ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದರಲ್ಲಿಯೇ ಮುಳುಗಿಬಿಡುತ್ತಿದ್ದರು ಎಂದು, ಹಾಗಾಗಿ ಕಥೆ ಚಿತ್ರಕಥೆ ಎಲ್ಲವೂ ಅವರ ತಲೆಯೊಳಗೆ ಇದ್ದುಬಿಡುತ್ತಿದ್ದವು, ಒಂದು ಮಾದರಿ ಅಥವ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಬ್ಲೂ ಪ್ರಿಂಟ್ ಅಥವಾ ನಕಾಶೆ ಇರುತ್ತಿದ್ದವು ಅನ್ನಿಸುತ್ತದೆ, ಅದನ್ನು ಚಿತ್ರಿಕರಿಸುವಾಗ ಅದಕ್ಕೆ ಮತ್ತಷ್ಟು ಹೊಳಪು ಕೊಟ್ಟು ಬೆಳಗಿಸುತ್ತಿದ್ದರು ಎನ್ನುವ ಅನುಭವ ಅವರ ಎಲ್ಲಾ ಚಿತ್ರಗಳನ್ನು ನೋಡಿದ ಅವರ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬನಾದ ನನ್ನದು. 

ಇದು ಒಂದು ಮಟ್ಟಿಗೆ ನಿಜ, ಕಲಾವಿದ ಎಂದಿಗೂ ತನ್ನ ಕಲೆಯನ್ನು ಅಥವಾ ತನ್ನ ಕೃತಿಯನ್ನು ಹೊಳಪಿನ ಮೂಸೆಗೆ ತಳ್ಳುತ್ತಲೇ ಇರುತ್ತಾನೆ. ಅದು ಪೂರ್ಣ ಕೃತಿಗೆ ಬರುವಷ್ಟರಲ್ಲಿ ಅವರ ತಲೆಯೊಳಗೆ ಮತ್ತು ಹೃದಯದ ಪರಿಷ್ಕರಣ ಪೆಟ್ಟಿಗೆಯೊಳಗೆ ಮಿಂದೆದ್ದು ಬರುತ್ತದೆ. 

ಅದನ್ನು ಮುಟ್ಟುವುದು ಅಥವಾ ಅದನ್ನು ಮುಂದುವರೆಸುವುದು ಸವಾಲಿನ ಸಂಗತಿಯೇ ಸರಿ. ಶ್ರೀ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಇಬ್ಬರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಪೂರ್ಣ ಚಿತ್ರಕಥೆಯಿಲ್ಲ, ಕಥೆಯನ್ನು ಎಲ್ಲಿಂದ ಆರಂಭಿಸಬೇಕು, ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಹೀಗೆ ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿನ ಜೊತೆಯಲ್ಲಿದೆ ಒಬ್ಬ ಕಲಾವಿದನ ಕುಂಚವನ್ನು ಮುಂದಕ್ಕೆ ಒಯ್ಯುವುದು ಸವಾಲಿನ ವಿಷಯ. ಇಂಥಹ ಪರಿಶ್ರಮ ಕೈಗೊಂಡ ಇಬ್ಬರೂ ಸಾಧಕರಿಗೂ ಮತ್ತು ಅದಕ್ಕೆ ಸಹಕರಿಸಿದ ಎಲ್ಲಾ ಕಲಾವಿದರಿಗೂ ಮತ್ತು ತಾಂತ್ರಿಕ ವರ್ಗಕ್ಕೆ ಅಭಿನಂದನೆಗಳು. 

ಈ ಚಿತ್ರದ ಬಗ್ಗೆಗಿನ ನನ್ನ ಬರಹವನ್ನು ಪುಟ್ಟಣ್ಣ ಅವರು ಚಿತ್ರೀಕರಿಸಿದ ಭಾಗಗಷ್ಟೇ ಸೀಮಿತಗೊಳಿಸುತ್ತೇನೆ, ಕಾರಣ ನಿಮಗೆ ಗೊತ್ತು. 

ಪುಟ್ಟಣ್ಣ ಕಣಗಾಲ್ ಅವರ ಮೊದಲ ಕೆಲ ಪ್ರಯತ್ನಗಳಲ್ಲಿ ಇದು ಒಂದು ಚಿತ್ರ ಎನ್ನಿಸುವ ಎಲ್ಲಾ ಸುಳಿವು ಇದರಲ್ಲಿ ಸಿಗುತ್ತದೆ. ವಜ್ರ ತನ್ನನ್ನೇ ತಾನು ಹೊಳಪಿನ ಪ್ರಖರತೆ ಒಡ್ಡಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳು ಇವೆ ಈ ಚಿತ್ರದಲ್ಲಿ. 

ಈ ಚಿತ್ರದಲ್ಲಿ ನಟಿಸಿರುವ ಸುಮಾರು ೮೦% ಕಲಾವಿದರು ಈ ಚಿತ್ರ ಬಿಡುಗಡೆಯಾದಾಗ ಇಲ್ಲ. ತಾರಾಗಣ ಪಟ್ಟಿಯಲ್ಲಿ ಅವರ ಹೆಸರಿನ ಹಿಂದೆ "ದಿ।।" ಎಂದು ನೋಡುವುದು ಮನಸ್ಸಿಗೆ ಬಹಳ ಹಿಂಸೆಯಾಗುತ್ತದೆ.ನಮ್ಮ ಕರುನಾಡಿನ ಚಿತ್ರರಂಗವನ್ನು ಬೆಳಗಲು ಶ್ರಮಿಸಿದ  ಅನೇಕ ಕಲಾರತ್ನಗಳ ಹೆಸರುಗಳ ಹಿಂದೆ ಆ ಅಕ್ಷರ ನೋಡುವುದು ನಿಜಕ್ಕೂ ಬೇಸರದ ಸಂಗತಿ. 

ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೇ ಚಿತ್ರಿಕರಣವಾಗಿದೆ. ಒಂದು ಪ್ರದೇಶವನ್ನು ಅದೇ ಅದೇ ಚೌಕಟ್ಟಿನಲ್ಲಿ ತರದೇ, ಪ್ರತಿದೃಶ್ಯವನ್ನು ಅರೆ ಇದು ಬೇರೆಯದೇ ತಾಣ ಇರಬಹುದೇನೋ ಅನ್ನುವಂತೆ ತೋರಿಸಿದ್ದಾರೆ ಛಾಯಾಗ್ರಾಹಕರು. 

"ಗಂಡು ಬೀರಿ ನಾನಲ್ಲ" ಹಾಡು ಎಲ್ ಆರ್ ಈಶ್ವರಿ ಅಬ್ಬರಿಸಿದ್ದಾರೆ, ಜೊತೆಯಲ್ಲಿಯೇ ನಿಜಕ್ಕೂ ಗಂಡು ಬೀರಿಯಂತೆಯೇ ಅಭಿನಯಿಸಿರುವ ಜಯಂತಿ.  
ಎಳನೀರು ಮಾರುವ ಪಾತ್ರದಲ್ಲಿ ನನ್ನ ಪ್ರೀತಿಯ ಅಶ್ವತ್ ಗಮನಸೆಳೆಯುತ್ತಾರೆ. 
ಆ ಕಾಲದ ಸುರಸುಂದರಾಂಗ ಕಲ್ಯಾಣ್ ಕುಮಾರ್ "ಕೈ ನೀಡಿದೇ ನೀನು ಅಂದು" ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ  ಹಾಡಿಗೆ ಸುಂದರ ನೃತ್ಯ ಮತ್ತು ಅಭಿನಯಯವರ ಜೊತೆಯಲ್ಲಿ ಜಯಂತಿ ಅವರದು 
"ನಮ್ಮೂರ ಬೆಟ್ಟದ" ಎನ್ನುವ ಹಾಡಿನಲ್ಲಿ ಮೈಸೂರನ್ನು ರಮ್ಯವಾಗಿ ತೋರಿಸುವ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಸಾಹಿತ್ಯಕ್ಕೆ ದನಿಯಾಗುತ್ತಾರೆ. 

ಅದ್ಭುತ ದೃಶ್ಯ ಸಂಯೋಜನೆ ಅಂದರೆ 
ವಜ್ರಮುನಿ, ಜಯಂತಿ ಮತ್ತು ಕಲ್ಯಾಣ್ ಕುಮಾರ್ ಒಂದು ದೃಶ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತಾರೆ. ಆ ದೃಶ್ಯದಲ್ಲಿ ಮೂವರು ಜೋರಾಗಿ ಮಾತಾಡಬೇಕು ಅಥವಾ ಬೇಡಿಕೊಳ್ಳುವ ದನಿ ಇರಬೇಕು ಇಲ್ಲವೇ ಅಥವಾ ಒಬ್ಬರಿಗೂಬ್ಬರು ತಮ್ಮ ತಮ್ಮ ಬಗ್ಗೆ ಸಮಜಾಯಿಷಿ ಕೊಡಬೇಕು. ಇವಿಷ್ಟನ್ನು ಕೇವಲ ಒಂದು ನಿಮಿಷದ ದೃಶ್ಯದಲ್ಲಿ ತೋರಿಸುತ್ತಾರೆ ಪುಟ್ಟಣ್ಣ ಅವರು. ಇಡಿ ದೃಶ್ಯವನ್ನು ಮೂರು ಜೊತೆ ಕಣ್ಣುಗಳಲ್ಲಿ ತೋರುತ್ತಾರೆ.. ಪ್ರತಿ ಐದು ಅಥವಾ ಹತ್ತು ಕ್ಷಣಗಳಿಗೆ ಒಂದೊಂದು ಜೊತೆ ಕಣ್ಣುಗಳಲ್ಲಿ ಭಾವ ಬದಲಾಗುತ್ತಾ ಹೋಗುತ್ತದೆ. ಅದ್ಭುತ ಅದ್ಭುತ ಎನ್ನಿಸುವ ದೃಶ್ಯ ಸಂಯೋಜನೆ. 

ಜಯಂತಿ ಪಾತ್ರವನ್ನು ಅತಿ ಅಲ್ಲಿಯ ತನಕ ಅತಿ ಎತ್ತರದಲ್ಲಿ ಕೂರಿಸಿದ್ದ ವಜ್ರಮುನಿ ಮನೆಯವರು (ಪಂಡರಿ ಬಾಯಿ ಮತ್ತು ಆಕೆಯ ಮಗಳು ಮತ್ತು ಮಗ), ಯಾವುದೇ ಕಾರಣಕ್ಕೆ, ಜಯಂತಿ ಅಪರಾಧಿನಿ ಎಂದುಅರಿವಾಗುತ್ತದೆ , ಮಹಡಿಯ ಕೆಳಗೆ ಇದ್ದ ವಜ್ರಮುನಿ ಮತ್ತು ಆತನ ತಾಯಿ ಪಂಡರಿಬಾಯಿ ಜಯಂತಿಯನ್ನು ಕರೆಯುತ್ತಾರೆ. ಜಯಂತಿ ಇಳಿದುಬರುತ್ತಿರುವಾಗ ಆಕೆಯ ಕಣ್ಣಲ್ಲಿ ಅಪರಾಧಿ ಭಾವ ಎದ್ದು ಕಾಣುತ್ತದೆ, ಜೊತೆಯಲ್ಲಿಯೇ ಕ್ಯಾಮೆರ ಚಾಲನೆ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. ವಜ್ರಮುನಿ ಮತ್ತು ಪಂದರಿಬಾಯಿಯವರ ಮುಖಭಾವವನ್ನೇ ತೋರಿಸುತ್ತಾ ಕ್ಯಾಮೆರಾ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. 

ಅಂದರೆ ಜಯಂತಿ ಪಾತ್ರ, ಆ ಮನೆಯವರ ಮುಂದೆ ಅಪರಾಧಿ ಭಾವದಿಂದ ಎತ್ತರದಲ್ಲಿದ್ದ ವ್ಯಕ್ತಿತ್ವ ಭೂಮಿಗೆ ಇಳಿಯುತ್ತಾ ಹೋದಂತೆ ತೋರಿಸುವ ದೃಶ್ಯ. 

ಗುರುಗಳೇ ಇವೆರಡು ದೃಶ್ಯಗಳು ಸಾಕು, ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಕರುನಾಡಿನ ರಂಗ ಪರದೆ ಕಾಯುತ್ತಿತು ಎಂದು ತಿಳಿದುಕೊಳ್ಳಲು. 

ಪುಟ್ಟಣ್ಣ ಅವರ ತಲೆಯಲ್ಲಿದ್ದ ಇಡಿ ಚಿತ್ರಕಥೆ ಸಿಕ್ಕಿದ್ದರೂ, ಅಥವಾ ಕಥೆಯ ಒಳ ಸುಳಿವು ಗೊತ್ತಿದ್ದರೂ ಪುಟ್ಟಣ್ಣ ಕಣಗಾಲ್ ಅವರ ಮನಪಟಲದಲ್ಲಿದ್ದ ಚಿತ್ರಕೃತಿಯನ್ನು ಇತರರಿಗೆ ಅಸಾಧ್ಯ ಎನ್ನಿಸುತ್ತಿತ್ತೋ ಏನೋ. ನನ್ನ ಉತ್ತರ ಅಸಾಧ್ಯ ಎಂದು. ಕಾರಣ ಗುರುಗಳು ಗುರುಗಳೇ. 

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾ ಪೂರ್ವಕ ನಮನಸಲ್ಲಿಸುವ ಕಾರ್ಯದಲ್ಲಿ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಮತ್ತು ಚಿತ್ರತಂಡದವರು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಟ್ಟಣ್ಣ ಕಣಗಾಲ್ ಮೇಲಿನ ಪ್ರೀತಿ ಮತ್ತು ಗೌರವ ಅವರ ಈ ಬೃಹತ್ ಕಾರ್ಯದಲ್ಲಿ ಜೊತೆ ನೀಡಿದೆ. 

ಪುಟ್ಟಣ್ಣ ಕಣಗಾಲ್ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು. 

Friday, October 16, 2015

ಋಣ ಮುಕ್ತಳು - ಒಂದು ವಿಭಿನ್ನ ಅನುಭವ (1984)

ಒಂದು ಮಹಾನ್ ಚೇತನ ಅಮೋಘ ಚಿತ್ರಗಳನ್ನು ನೀಡುತ್ತಾ ನೀಡುತ್ತಾ ಬಸವಳಿದಾಗ ಮತ್ತೆ ಅದಕ್ಕೆ ಚೈತನ್ಯ ನೀಡುವುದೇ ಮತ್ತೊಂದು ಪರಿಶ್ರಮ ಬೇಡುವ ಚಿತ್ರ.

ಹೌದು ಈ ಚಿತ್ರವನ್ನು ನಾ ಇದುವರೆಗೂ ನೋಡೇ ಇರಲಿಲ್ಲ. ಯಾವಾಗಲೂ ಈ ಚಿತ್ರ ದೂರದರ್ಶನದಲ್ಲಿ ಮೂಡಿ ಬಂದರೂ ಬರಿ ಅಂತಿಮ ಕ್ಷಣವನ್ನು ಮಾತ್ರ ನೋಡಿದ್ದೇ.  ಭಾರತಿ ತನ್ನ ಮೊಗದಲ್ಲಿ ಯಾವುದೇ ಭಾವನೆ ತೋರದೆ ನಿಧಾನವಾಗಿ ಆಶ್ರಮವಾಸಿಗಳ ಜೊತೆಯಲ್ಲಿ ನಿರ್ಮಲ ಎನ್ನಿಸುವ ಶ್ವೇತ ವಸ್ತ್ರಧಾರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದು, ಮತ್ತು ರಾಮಕೃಷ್ಣ ತನ್ನ ಹೆತ್ತ ತಾಯಿಯನ್ನು ನೋಡುತ್ತಾ ನಿಲ್ಲುವುದು ಅವರ ಮೊಗದ ಮೇಲೆ ಒಂದು ರೀತಿಯ ಆತಂಕ ಮತ್ತು ತನ್ನ ಮಾತೆ ತನಗೆ ನೆಮ್ಮದಿ ಸಿಗುವ ತಾಣವನ್ನು ಅರಸಿಕೊಂಡ ಒಂದು ಸಂತೋಷ. 

ಕಣಗಾಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಪುಟ್ಟಣ್ಣ ಕಣಗಾಲ್ ಪರಿವಾರದವರೊಡನೆ ಸೇರಿ ತಯಾರಿಸಿದ ಚಿತ್ರ ಇದು. ಶ್ರೀಮತಿ ಅನುಪಮ ನಿರಂಜನ್ ರವರ "ಋಣ" ಎನ್ನುವ ಕಾದಂಬರಿ ಆಧಾರಿತ ಈ ಚಿತ್ರ ಮೊದಲಿಂದ ಕಡೆಯತನಕ ಏರು ಪೆರಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. 

ಚಿತ್ರದ ಹೆಸರನ್ನು ತೋರಿಸುವಾಗ ಒಂದು ಪುಸ್ತಕದಲ್ಲಿ  ಪ್ರತಿ ಹಾಳೆಯನ್ನು ತಿರುವು ಹಾಕುತ್ತ ಹೋದಂತೆ ತಾರಾಗಣವನ್ನು ಪರಿಚಯ ಮಾಡಿಕೊಡುತ್ತಾರೆ. ನಮಗೆ ಕಾಣದ ನರಕಲೋಕದಲ್ಲಿ ಚಿತ್ರಗುಪ್ತ ಪ್ರತಿ ಜೀವಿಯ ತಪ್ಪು ಒಪ್ಪುಗಳನ್ನು ಅವಲೋಕಿಸುತ್ತಾ ಪಡೆದದ್ದು, ಕಳೆದದ್ದು ಇವುಗಳ ತುಲನೆ ಮಾಡಿ ಯಮಧರ್ಮ ಶಿಕ್ಷೆ ಕೊಡಲು ಅಹವಾಲು ನೀಡುವಂತೆ ತೋರುವ ದೊಡ್ಡ ಪುಸ್ತಕದ ಹಾಳೆಗಳಂತೆ ಈ ದೃಶ್ಯ ಗೋಚರಿಸುತ್ತದೆ. ಪುಟ್ಟಣ್ಣ ಪ್ರತಿ ಚಿತ್ರವನ್ನು  ಆರಂಭಿಸುವ ರೀತಿ ಯಾವಾಗಲೂ ವಿಭಿನ್ನ. 

ಸಂಭಾಷಣೆಯ ಜವಾಬ್ಧಾರಿಯನ್ನು ಕುಣಿಗಲ್ ನಾಗಭೂಷಣ್ ಜೊತೆ ಹಂಚಿಕೊಂಡು, ಚಿತ್ರಕಥೆ ಬರೆದು ನಿರೂಪಣೆ ಮಾಡಿ ಜಗನ್ಮಾತೆಯ ದಿಗ್ಧರ್ಶನದಲ್ಲಿ ಚಿತ್ರ ಮೂಡಿಸಿದ್ದಾರೆ. ಅವರ ಕನಸಿಗೆ ಕಣ್ಣಾಗಿ ಬರುವುದು ಎಸ್ ಮಾರುತಿರಾವ್ ಅವರ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಜೀವ ತುಂಬುವ ಸಂಗೀತ ಹೊಣೆ ವಿಜಯಭಾಸ್ಕರ್ ಅವರದ್ದು. 

ಮನುಜ ತಾನು ಮಾಡಿದ ಪಾಪ ಪುಣ್ಯ ಇವುಗಳನ್ನು ಇಲ್ಲೇ ಒಪ್ಪ ಮಾಡಿ ಹೋಗುತ್ತಾನೆ ಎನ್ನುವ ನೀತಿಯ ತಳಹದಿ ಈ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಹಾಯಾಗಿ ಇರಬಹುದಾದ ಮನೆಯ ಯಜಮಾನ ಹಣದ ಆಮಿಷಕ್ಕೆ ಒಳಗಾಗಿ ಪಟ್ಟಣಕ್ಕೆ ಬಂದು, ಆ ಪಟ್ಟಣದ ರೂಪು ರೇಶೆಗಳಿಗೆ ತಕ್ಕಂತೆ ಅನೈತಿಕತೆಯಿಂದ ಹಣ ಸಂಪಾದಿಸುವುದು, ಇದರ ಜೊತೆಯಲ್ಲಿ ಇವನ ಈ ಸಾಹಸ ಮಕ್ಕಳ ಮೇಲೆ ಪರಿಣಾಮ ಬೀರುವುದು ಸುಂದರವಾಗಿ ಚಿತ್ರಿಕೃತವಾಗಿದೆ. 

ಬುದ್ಧಿವಂತ ಮೊದಲನೇ ಮಗುವನ್ನು  ಎರಡನೇ ಮಗುವಿನ ಮುಂದೆ ಹೋಗಲಿ, ಈ ಚಿಕ್ಕ ಮಗುವಿನ ಮನದಲ್ಲಿ ರೋಷ ದ್ವೇಷ ತುಂಬಿ ಸಮಾಜಕ್ಕೆ ಒಂದು ರೀತಿಯ ಪಿಡುಗು ಎನ್ನಿಸುವಂತಹ ಪ್ರಜೆ ನೀಡುವುದರಲ್ಲಿ ಅಪ್ಪನ ಪಾತ್ರಧಾರಿ ಸಫಲ ಆಗುತ್ತಾರೆ. 
ಇದರ ಜೊತೆಯಲ್ಲಿ ಕ್ಷಣಿಕ ಆಸೆಗೆ ಬಲಿಯಾಗಿ ಮನೆಕೆಲಸದ ಹುಡುಗಿಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಒಂದು ಮಗುವಿನ ಜನನಕ್ಕೆ ಕಾರಣವಾಗುವಂಥಹ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಆ ಮನೆಗೆಲಸದ ಹುಡುಗಿ ಬೇರೆ ಮದುವೆ ಮಾಡಿಕೊಂಡರೂ, ಅಲ್ಲಿ ಸುಖ ಕಾಣದೆ ಗಂಡನನ್ನು ಕಳೆದುಕೊಂಡು, ಆ ದುಃಖದಲ್ಲಿಯೇ ತನ್ನ ಅನೈತಿಕ ಮಗುವನ್ನು ಜತನಮಾಡುವ ಪಾತ್ರ. 

ಮಗು ಒರಟು ಎಂದು ಗೊತ್ತಿದ್ದರೂ, ತಾಯಿ ಹೃದಯ ಮಿಡಿಯುತ್ತದೆ, ಬೇರೆಯವರ ಹತ್ತಿರ ಒರಟು ಒರಟಾಗಿ ಮಾತಾಡಿದರೂ ತನ್ನ ತಾಯಿಗೋಸ್ಕರ ಮಿಡಿಯುವ ಮಗು. ಇವರೆಡರ ಭಾವನಾತ್ಮಕ ತಾಕಲಾಟ ಸುಂದರವಾಗಿ ಕೆಲವು ದೃಶ್ಯಗಳಲ್ಲಿ ಭಿತ್ತರಗೊಂಡಿದೆ. 

ಅದರಲ್ಲೂ, ಜಗಳ ಮಾಡಿಕೊಂಡು ಮನೆಬಿಟ್ಟು ಹೋದ ಮಗನನ್ನು ನೆನೆದು, ಅಯ್ಯೋ ನಾ ತಪ್ಪು ಮಾಡಿದೆ, ಅವನನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹಲಬುವ ಅಪ್ಪ, ಮತ್ತು ಅಕಾಲ ಮರಣಕ್ಕೆ ತುತ್ತಾಗಿ, ಕಡೆಯಲ್ಲಿ ತನ್ನ ಮಗನನ್ನು ನೋಡಬೇಕು ಎಂದು ಬಯಸಿ, ಮಗ ಬರುವ ಮುನ್ನ ಇಹಲೋಕ ತ್ಯಜಿಸಿದ ಮೇಲೆ, ಸುಮಾರು ಒಂದು ಮೂವತ್ತು ಸೆಕೆಂಡ್ ಏಕದಂ ಮೌನ. ತಾಯಿ ನೋಡಿದೆಯ ಮಗನೆ ನಿನ್ನ ಅಪ್ಪನನ್ನು ಎಂದಾಗ, ಮಗ ದೊಡ್ಡದಾಗಿ ಬಾಯಿ ತೆಗೆದು ಅಳುವ ಮೂಕ ದೃಶ್ಯ, ಇಡಿ ಚಿತ್ರದಲ್ಲಿ ಪುಟ್ಟಣ್ಣ ಅವರ ಕೈಚಳಕ ಕಾಣಿಸುವ ದೃಶ್ಯ ಇದು. 

ಕೆಲವೇ ಕೆಲವು ಪಾತ್ರಗಳು, ಆದರೆ ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಭಾರತಿ, ಸುಂದರಕೃಷ್ಣ ಅರಸ್, ರಾಮಕೃಷ್ಣ, ಭರತ್ ಭಾಗವತರ್, ಆಶಾಲತ, ಮಾ, ಹಿರಣ್ಣಯ್ಯ, ರಾಜಾನಂದ್, ಪದ್ಮಾವಾಸಂತಿ ಎಲ್ಲರೂ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ. 

"ಆಕಾಶದುದ್ದಾದ ಮಾಮರವು ಚಂದ" ಮನುಜನ ಇಬ್ಬಗೆ ನೀತಿಯನ್ನು ಸುಂದರ ಹೋಲಿಕೆಗಳ ಮೂಲಕ ವಿಜಯನಾರಸಿಂಹ ಬರೆದ ಹಾಡನ್ನು ಎಸ್ ಜಾನಕಿ ಹಾಡಿದ್ದಾರೆ. 

"ದೇವರ ಒಲಿಸಲು" ತಾಯಿಯ ಮಹತ್ವವನ್ನು ಬಿಂಬಿಸುವ ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಜೀವ ತುಂಬಿದ್ದಾರೆ 

"ಕಣ್ಣಾರೆ ಕಂಡೆ ನಾ" ವಾಣಿ ಜಯರಾಂ ಅವರ ಕಂಚಿನ ಕಂಠ ಇಷ್ಟವಾಗುತ್ತದೆ. 



ಕಥಾವಸ್ತು ಆ ಕಾಲಕ್ಕೆ ಒಂದು ಚೂರು ಮುಂದಾಗಿತ್ತು ಅನ್ನಿಸುತ್ತದೆ. ಕೆಲವೊಮ್ಮೆ ಸಾಗರ ಪ್ರಶಾಂತವಾಗಿದ್ದ ಸಾಗರ ಚಂಡಮಾರುತದ ಮುನ್ಸೂಚನೆ ನೀಡುವಂತೆ, ಪುಟ್ಟಣ್ಣ ಕಣಗಾಲ್ ತಮ್ಮ ಮುಂದಿನ ಚಿತ್ರ ರತ್ನಕ್ಕೆ ಈ ಚಿತ್ರದಿಂದಲೇ ಅನಿಯಾಗುತ್ತಿದ್ದರೋ ಏನೋ ಎನ್ನಿಸಿತು ನನಗೆ. 

Sunday, October 11, 2015

ಮನುಜನ ಭಾವಗಳನ್ನು ಮಧ್ಯೆ ಕೂರಿಸಿ ತೋರಿಸುವ ಧರಣಿ ಮಂಡಲ ಮಧ್ಯದೊಳಗೆ (1983)

ಕೆಲವೊಮ್ಮೆ ನಮ್ಮ ಮನಸ್ಸು ಗಲಿಬಿಲಿಯಾಗಿದ್ದಾಗ ಅಥವಾ ಕೆಲವೊಮ್ಮೆ ನಿರ್ಮಲವಾಗಿದ್ದಾಗ ಒಳಗಿನ ಬಿಳಿಯ ಮನ ಪಟಲದಲ್ಲಿ ವರ್ಣಮಯ ದೃಶ್ಯಗಳು ಕಾಣಸಿಗುತ್ತದೆ. ಆದರೆ ಅದು ಕ್ಷಣಿಕ ಮಾತ್ರ, ಆ ಪಟಲದಲ್ಲಿ ಮೂಡುತ್ತಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ರೂಪಿಸಿಕೊಳ್ಳಲು ಬಲು ಕಷ್ಟ.

ಅಳತೆಗೂ ಮೀರಿದ ಕೆಲವು ಭಾವನಾತ್ಮಕ ದೃಶ್ಯಗಳು ಹಾಗೆ ಬಂದು ಹೋಗುವುದು ಉಂಟು. ಅಂಥಹ ಸಹಜವಾದ, ಆದರೆ ಈ ವ್ಯಾವಹಾರಿಕ ಪ್ರಪಂಚದಲ್ಲಿ ನಾನು, ನನ್ನದು, ನನ್ನದೇ ಎನ್ನುವ ಸ್ವಾರ್ಥ ಭಾವಗಳೇ ನಮ್ಮನ್ನು ಕಪಿ ಮುಷ್ಠಿಯಲ್ಲಿ ಇರಿಸಿಕೊಂಡು, ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಾಂಸದ ಮುದ್ದೆಯನ್ನು ಮೂಲೆ ಗುಂಪು ಮಾಡುವ ಶಕ್ತಿ ಹೊಂದಿಬಿಡುತ್ತದೆ.

ಈ ರೀತಿಯ ಒಂದು ಕಥೆಯನ್ನು ಸಿನಿಮಾ ತೆರೆಗೆ ಒಪ್ಪುವ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಕಥೆ, ಚಿತ್ರಕಥೆ ಬರೆದು, ನಿರೂಪನೆಯನ್ನು ತಾಯಿ ಜಗನ್ಮಾತೆಯ ಅಭಯ ಹಸ್ತದ ವಾರದಲ್ಲಿ ಮೂಡಿಸಿರುವ ಚಿತ್ರವೇ "ಧರಣಿ ಮಂಡಲ ಮಧ್ಯದೊಳಗೆ" 

ಇದೊಂದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳಿಗಿಂತ ಭಿನ್ನ. ಇದುವರೆಗೂ ಅವರು ತುಳಿದಿದ್ದ ದಾರಿಯಲ್ಲಿ ತುಸು ಹೊರಳಿ ಈ ಚಿತ್ರವನ್ನು ಮೂಡಿಸಿದ್ದಾರೆ. 

ಮೊದಲ ಮೊದಲಿಗೆ ಅರೆ ಏನಿದು ಹೀಗಿದೆ ಚಿತ್ರ ಎಂದು ನನಗನ್ನಿಸಿದ್ದು ಪ್ರಾಮಾಣಿಕವಾಗಿ ನಿಜ. ಆದರೆ ನೋಡುವಾಗ ಮತ್ತು ನೋಡಿದ ಕೆಲಹೊತ್ತಿನ ಮೇಲೆ, ಕೆಸರಲ್ಲಿ ಮುಳುಗುವ ಮನುಜನಂತೆ ನಿಧಾನವಾಗಿ ಈ ಚಿತ್ರದ ಒಳ ಹೂರಣ ಅರ್ಥವಾಗುತ್ತಾ ಹೋಗುತ್ತದೆ. 
ನಾಲ್ಕು ಮುಖ್ಯ ಪಾತ್ರಗಳು, ನಾಯಕ್, ದಳವಾಯಿ, ಪಾಳೆಗಾರ, ಮತ್ತು ಪುರುಷೋತ್ತಮ.   ಸಮಾಜಕ್ಕೆ ಬೇಕಾದ ನಾಲ್ಕು ಮುಖ್ಯ ಆಧಾರ ಸ್ಥಂಭಗಳು. 

ಪುರುಷೋತ್ತಮ ಎನ್ನುವ ಪಾತ್ರ ಎಂದಿಗೂ ಸೇಡು, ದ್ವೇಷಗಳ ಬತ್ತಳಿಕೆಯೊಳಗೆ ಇಳಿಯಬಾರದು, ಆದರೆ ಈ ಸಮಾಜದಲ್ಲಿ ಸೇಡಿನ ಮನೋಭಾವ ಹೊತ್ತು, ಅಲ್ಪ ಸ್ವಲ್ಪ ಹದ್ದುಬಸ್ತಿಗೆ ಬರುತ್ತಿದ್ದ ಇತರ ಮೂರು ಆಧಾರಗಳನ್ನು ತನ್ನ ಕೈಯಾರೆ ತಾನೇ ಹಾಳು ಮಾಡಿ, ತನ್ನನ್ನು ತಾನೇ ಹಳಿದುಕೊಳ್ಳುವಂಥಹ ಸ್ಥಿತಿಗೆ ಇಳಿಯಬೇಕಾಗುತ್ತದೆ. 

ಇಡಿ ಸಮಾಜವನ್ನು ಮುನ್ನಡೆಸಬೇಕಾದ ನಾಯಕ್ ಪಾತ್ರ, ಪರಿಸ್ಥಿಯ ಆಳ ತಿಳಿಯದೆ ತೆಗೆದುಕೊಳ್ಳುವ ಆತುರದ ನಿರ್ಧಾರ, ಮತ್ತು ವ್ಯಾವಹಾರಿಕ ಜ್ಞಾನವಿಲ್ಲದೇ, ವಿವೇಚನೆ ಇಲ್ಲದೆ ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ತನ್ನನ್ನೇ ನಂಬಿಕೊಂಡು ನಿಲ್ಲುವ ತನ್ನ ಜನರಿಗೆ ಬರಿ ಬೇಡದ, ನಡೆಯದ ಆಶ್ವಾಸನೆ ಕೊಡುವಂತಹ ಪಾತ್ರವಾಗಿ ಬಿಡುತ್ತದೆ. 

ನಾಯಕ್ ತೆಗೆದುಕೊಳ್ಳುವ ನಿರ್ಧಾರವನ್ನು, ತೀರ್ಮಾನಗಳನ್ನು, ಸಲಹೆಗಳನ್ನು ಆಚರಣೆಗೆ ತರಬೇಕಾದ ಪಾಳೇಗಾರ್, ತನ್ನ ಆಸೆ ಆಮಿಷಗಳಿಗೆ, ತನ್ನ ಸ್ವಂತ ವಿಚಾರಗಳಿಗೆ, ಸೋತು, ಸಮಾಜಕ್ಕೆ ಆಘಾತ ಮಾಡುವ ಈ ಪಾತ್ರ ಕಡೆಗೆ ಕಾನೂನನ್ನು ಕೈಗೆ ತೆಗೆದುಕೊಂಡು ತಾನೂ ಬಾಳದೆ, ತನ್ನ ನಂಬಿದವರನ್ನು ಬಾಳಿಸದೆ, ಸಮಾಜಕ್ಕೆ ದೊಡ್ಡ ಆಘಾತ ನೀಡುವ ಪಾತ್ರವಾಗಿಬಿಡುತ್ತದೆ. 

ನಾಯಕ್ ಮತ್ತು ಪಾಳೇಗಾರ್ ಇಬ್ಬರಿಗೂ ಹೆಗಲು ಕೊಟ್ಟು ಸಮಾಜಕ್ಕೆ ರಕ್ಷಣೆ ನೀಡಬೇಕಾದ ದಳವಾಯಿ, ತಪ್ಪು ನಿರ್ಧಾರಗಳಿಂದ, ತನ್ನ ತೃಷೆಯನ್ನು ತಣಿಸಿಕೊಳ್ಳಲು ಅಮಾಯಕ ಪ್ರಜೆಯ ಮೇಲೆ ದಾಳಿ ಮಾಡಿ, ಕಡೆಗೆ ರಕ್ಷಣೆ ನೀಡುತ್ತೇನೆ ಎನ್ನುವ ಭರವಸೆ ನೀಡುತ್ತಾ, ತನ್ನ  ತಪ್ಪಿನ ಬಗ್ಗೆ ಪಶ್ಚಾತಾಪ ಪಟ್ಟು, ಅದನ್ನು ಸರಿಪಡಿಸಿಕೊಂಡು,  ಕೈ ಕೈ ಹಿಡಿದು ಸಾಗುವಾಗಲೇ, ನಾಯಕ್ ಮತ್ತು ಪಾಳೇಗಾರ್ ಅವರ ತಪ್ಪು ನಡೆಗಳಿಂದ ತನ್ನ ಪ್ರಾಣವನ್ನು ನೀಗಿ, ಕಡೆಗೆ ತಾನು ನೋಡಲಾಗದ ಉತ್ತಮ ಸಮಾಜವನ್ನು ತನ್ನ ಪ್ರಜೆ ನೋಡಲಿ ಎನ್ನುವ ಆಶಾವಾದದೊಡನೆ ಪ್ರಾಣ ನೀಗುತ್ತದೆ ಆ ಪಾತ್ರ. 

ಹೀಗೆ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸಬೇಕಾದ ಕಂಬಗಳೇ ತಮ್ಮದೇ ಆದ ತಪ್ಪು ನಡೆಗಳಿಂದ ಎಡವಿ, ಮತ್ತೆ ಅದನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿದ್ದಾಗ ಮತ್ತೆ ಅದೇ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಂಡು ಸಮಾಜದ ಆರೋಗ್ಯವನ್ನು ಸುಧಾರಿಸದೆ ಹಪಹಪಿಗೊಳ್ಳುವ ಹಂತಕ್ಕೆ ಚಿತ್ರ ನಿಲ್ಲುತ್ತದೆ ಮತ್ತು ಇಂದಿನ ಸಮಾಜದ ಗುಣಮಟ್ಟವನ್ನು ತೋರಿಸುತ್ತದೆ. 

ಅಚಾರವೇ ಬೇರೆ ವಿಚಾರವೇ ಬೇರೆ... ಆಚಾರ ವಿಚಾರವಾಗಿ ಬದಲಾಗಬೇಕಾದರೆ ಅಥವಾ ವಿಚಾರ ಆಚಾರವಾಗಿ ಬದಲಾಗಬೇಕಾದರೆ ಬರಿ ಅಕ್ಷರಗಳ (ಅ ಮತ್ತು ವಿ) ಬದಲಾವಣೆ ಆದರೆ ಮಾತ್ರ ಸಾಲದು ಬದಲಿಗೆ ಎಲ್ಲರೂ ಯೋಚಿಸುವ ರೀತಿಯು ಬದಲಾಗಬೇಕು. ಅದೇ ಈ ಚಿತ್ರದ ಉದ್ದೇಶ ಮತ್ತು ಅಡಗಿರುವ ಸಂದೇಶ. 

ಶ್ರೀನಾಥ್, ಜೈಜಗದೀಶ್, ಚಂದ್ರಶೇಖರ್  ತಮಗೆ ವಹಿಸಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುಂಡು ಹುಡುಗರಾಗಿ, ನಂತರ ಬದಲಾಗುವ ಹುಡುಗರಾಗಿ, ನಂತರ ಗೊಂದಲಕ್ಕೆ ಒಳಗಾಗುವ ಯುವ ಪೀಳಿಗೆಯನ್ನು ಪ್ರತಿನಿಧಿಸುವ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದಕ್ಕೆ ಬೇಕಾದ ಅಭಿನಯ, ಸಂಭಾಷಣೆ ಹೇಳುವ ಧಾಟಿ ಎಲ್ಲವೂ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸೊಗಸಾಗಿ ಅರಳಿದೆ.

ಟಿ ಎನ್ ಸೀತಾರಾಂ ಕೋಪತಾಪದ, ಮೈ ಪರಚಿಕೊಳ್ಳುವಂಥಹ ಸಂಧಿಗ್ಧ ಪಾತ್ರದಲ್ಲಿ ಮೊದಲು ನಂತರ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ನೈಜತೆಯಿಂದ ಅಭಿನಯಿಸಿದ್ದಾರೆ. ಇವರ ಪಾತ್ರ ಚಿತ್ರಕ್ಕೆ ಇನ್ನೊಂದು ತಿರುವನ್ನು ಕೊಡುತ್ತದೆ. 

ಪೋಷಕ ಪಾತ್ರದಲ್ಲಿ ಬರುವ ಪದ್ಮಾವಾಸಂತಿ, ರೇಖಾ ರಾವ್ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ಒಂದು ದಿಕ್ಕು ಕೊಡುವ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ತಮ್ಮ ಚೆಲುವಿಂದ, ಚಿನಕುರುಳಿ ಅಭಿನಯದಿಂದ ಚುಟುಕಾದ ಪಾತ್ರದಲ್ಲಿ ಮಿಂಚುತ್ತಾರೆ.  

ಈ ಚಿತ್ರದಲ್ಲಿ ಹಾಡುಗಳು ಮತ್ತೊಮ್ಮೆ ಮಿಂಚುತ್ತದೆ. 

ಸಿದ್ದಲಿಂಗಯ್ಯ ಅವರ ಸಾಹಿತ್ಯದ ಮೂರು ಹಾಡುಗಳು 
ಅ) "ಕಾಸನು ಬೀಸಿ ಒಲವಿನ ಬೆಲೆಯನು" ವಾಣಿಜಯರಾಂ ಅವರ ಸುಮಧುರ ಕಂಠದಲ್ಲಿ ಉತ್ತಮವಾಗಿ ಚಿತ್ರೀಕರಿಸಿದ್ದಾರೆ. 
ಆ) "ಗೆಳತಿ ಓ ಗೆಳತಿ" ಪ್ರಣಯಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಗಾಯನದಲ್ಲಿ ಸೊಗಸಾಗಿದೆ 
ಇ) "ಕಲಿಗಾಲವಯ್ಯ ಕಲಿಗಾಲ" ಎಂದಿನ ಇಂದಿನ ಮುಂದಿನ ಪರಿಸ್ಥಿತಿಯನ್ನು ಹೇಳುವ ಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಚಿತ್ರಿಕೃತವಾಗಿದೆ. 

ತನ್ನ ನೆಚ್ಚಿನ ಗೆಳೆಯ ವಿಜಯನಾರಸಿಂಹ ಅವರಿಂದ ಮೂಡಿಬಂದ "ಉಯ್ಯಾಲೆ ಆಡೋಣ ಬನ್ನಿರೋ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಉತ್ತಮ ಯುಗಳ ಗೀತೆಯಾಗಿದೆ. ಇಡಿ ಹಾಡನ್ನು ಉಯ್ಯಾಲೆಗಳ ಮಧ್ಯೆದಲ್ಲಿ ಚಿತ್ರಿಕರಿಸಿರುವುದು ವಿಶೇಷ. 

ಇಡಿ ಚಿತ್ರಕ್ಕೆ ಸಂಗೀತ ಮೆರುಗು ನೀಡಿರುವ ವಿಜಯಭಾಸ್ಕರ್, ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಆಣೆಕಟ್ಟು ಕಟ್ಟುವ ಪ್ರದೇಶವನ್ನು ತೋರಿಸುವಾಗೆಲ್ಲ ಬರುವ ಸಂಗೀತ ಅತ್ಯುತ್ತಮ. ಒಂದು ರೀತಿಯ ಆಶಾಭಾವವನ್ನು ಹೊತ್ತು ತರುತ್ತದೆ. 

ಬಿ ಎಸ್ ಬಸವರಾಜ್ ಭಾವುಕ ಸನ್ನಿವೇಶಗಳ ಛಾಯಾಗ್ರಹಣ ಮಾಡುತ್ತಲೇ ನಿಧಾನವಾಗಿ ನಮ್ಮ ಮನದೊಳಗೆ ಹೊಕ್ಕು ಸಾಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು, ಅಣೆಕಟ್ಟಿನ ಆಯಾತ ಪ್ರದೇಶವನ್ನು ತೋರಿಸುವ ರೀತಿ ಸೂಪರ್ ಸೂಪರ್. 

ಚಿತ್ರದ ಆರಂಭ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ವಿಶೇಷ. ಭೂಮಿ ತಿರುಗುತ್ತದೆ ಅದರ ಜೊತೆಯಲ್ಲಿಯೇ ಮನುಜ ಯೋಚಿಸುವ ಲಹರಿಯೂ ಸಹ ಎನ್ನುವ ಭಾವ ಹೊತ್ತು ತರುವ ರೀತಿಯಲ್ಲಿ ಚಿತ್ರದ ಹೆಸರು, ತಾರಾಗಣ, ತಾಂತ್ರಿಕವರ್ಗ ಎಲ್ಲವೂ ಒಂದೇ ಚೌಕಟ್ಟಿನೊಳಗೆ ಸಾಗುತ್ತಾ ಹೋಗುತ್ತದೆ. 

ಇಡಿ ಚಿತ್ರ ಒಂದು ಗುಟುಕಿಗೆ ಒಳಗೆ ಹೋದರೂ, ಅದರ ಪರಿಣಾಮ ನಿಧಾನವಾಗಿ ಮನದೊಳಗೆ ಇಳಿಯುತ್ತಾ ಹೋಗುತ್ತದೆ. 

ಒಂದು ಪೂರ್ತಿ ವಿಭಿನ್ನ ಎನ್ನಿಸುವ ಚಿತ್ರ ನೀಡಿರುವ ಪುಟ್ಟಣ್ಣ ಕಣಗಾಲ್ ಅವರು ಒಂದು ದೃಶ್ಯದಲ್ಲಿ ಬಂದು ಹೋಗುವುದು ವಿಶೇಷ. 

ಒಂದು ಮನದಾಳಕ್ಕೆ ಇಳಿಯುವ ಚಿತ್ರವನ್ನು ನೋಡಿದ,  ಅನುಭವಿಸಿದ, ಮತ್ತು ಯೋಚನಾಲಹರಿಗೆ ಕೆಲಸ ತಂದು ಕೊಟ್ಟ ತೃಪ್ತಿ ಈ ಚಿತ್ರ ನೋಡಿದ ಮೇಲೆ ನನಗೆ ದಕ್ಕಿತು. 


Saturday, October 3, 2015

ಮನದ ಸರೋವರವನ್ನು ಕೆದಕುವ ಮಾನಸ ಸರೋವರ (1982)

ಈ ಸಿನಿಮಾ ತುಂಬಾ ಕಾಡಿತ್ತು ಆ ಕಾಲದಲ್ಲಿಯೇ. ಮೊದಲ ಬಾರಿಗೆ ಈ ಚಿತ್ರವನ್ನು ದೂರದರ್ಶನದಲ್ಲಿ ನೋಡಿದಾಗ ನನಗೆ ಸುಮಾರು ಹದಿನೈದು ವರ್ಷಗಳು ಇರಬಹುದು. 

ಆ ವಯಸ್ಸು ಒಂದು ರೀತಿಯ ಬದಲಾವಣೆಯ ಪರ್ವವಾಗಿರುತ್ತದೆ. ಮೊದಲಿಂದಲೂ ಸಿನಿಮಾ ನೋಡುವ ಮತ್ತು ಅದರ ಒಳಗೆ ಕೂತು ನೋಡುವ ಒಂದು ವಿಚಿತ್ರ ರೋಗವಿದ್ದದರಿಂದ ಬಹುಶಃ ಈ ಚಿತ್ರ ಇನ್ನಷ್ಟು ಕಾಡಿತ್ತು ಎನ್ನಿಸುತ್ತದೆ.  

ಅದಾದ ಮೇಲೆ ಹಲವಾರು ಬಾರಿ ಈ ಚಿತ್ರವನ್ನು ನೋಡಿದ್ದೇನೆ. ಪ್ರತಿಬಾರಿಯೂ ನನಗೆ ಮೊಟ್ಟಮೊದಲು ನೋಡಿದ ಅನುಭವ ಹೇಗೆ ಇರುತ್ತದೆಯೋ ಅದೇ ಅನುಭವ. ಒಂದೂ ಚೂರು ಬದಲಾವಣೆ ಇಲ್ಲ. 
ಹಲವಾರು ಚಿತ್ರಗಳು ಪ್ರತಿ ಬಾರಿ ನೋಡಿದಾಗಲೂ ಹಲವಾರು ರೀತಿಯಲ್ಲಿ ಕೈಗೆ ಎಟುಕುತ್ತದೆ, ಆದರೆ ಈ ಚಿತ್ರ ಪ್ರತಿ ಸಾರಿ ನೋಡಿದ ಮೇಲೆ ಇನ್ನಷ್ಟು ಆಳಕ್ಕೆ ಇಳಿಯುತ್ತದೆ ಮತ್ತು ಅದೇ ಮೊದಲ ಅನುಭವವನ್ನು ಕಣ್ಣ ಮುಂದೆ ತಂದಿಡುತ್ತದೆ. 

ಚಿತ್ರದ ಆರಂಭ ನನಗೆ ಇನ್ನೂ ಕಾಡುತ್ತದೆ.  ಮನಸ್ಸಿನ ಬಗ್ಗೆ ಒಂದೆರಡು ವಾಕ್ಯಗಳು ಮನಸ್ಸಿಗೆ ತಾಕಿದರೆ, ಹೂವಿನ ಜೊತೆಯಲ್ಲಿ ಹೆಸರನ್ನು ತೋರಿಸುತ್ತಾ, ಪ್ರತಿ ಬಾರಿಯೂ ಅಲೆಗಳು ಬಂದು ಆ ಅಕ್ಷರಗಳನ್ನು ಅಳಿಸಿಹಾಕುವಂತಹದು, ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬರುತ್ತಾರೆ, ನೆನಪು ಉಳಿಸುತ್ತಾರೆ, ಅಳಿಸುತ್ತಾರೆ, ಆದರೆ ಕಾಲ ಮುಂದೆ ಸಾಗುತ್ತಲೇ ಇರುತ್ತವೆ, ಅಲೆಗಳು ಬರುತ್ತಲೇ ಇರುತ್ತವೆ ಎಂಬ ಸೂಕ್ಷ್ಮ ಸಂದೇಶ ಹೊತ್ತು ತರುತ್ತದೆ. 

ಹುಣ್ಣಿಮೆಯ ಚಂದ್ರ, ಆವ ಚೆಲ್ಲುವ ಬೆಳದಿಂಗಳು, ಪ್ರೀತಿ ಪ್ರೇಮ ಪ್ರಣಯ ಇವುಗಳ ಉಗಮಸ್ಥಾನ, ಚಂದ್ರನ ಕಿರಣಗಳು ಮನಸ್ಸಿನ ಮೇಲೆ ಬಲು ಪ್ರಭಾವ ಬೀರುತ್ತದೆ. ಕಾವ್ಯಮಯವಾದ ಮನಸ್ಸಿನ  ನಾಯಕ ಆ ಬೆಳದಿಂಗಳ ಚಂದ್ರನ ಬೆಳಕಲ್ಲಿ ಕೂತು, ತೂಗಾಡುವ ಮನಸ್ಸನ್ನು ಪ್ರತಿಬಿಂಬಿಸುವ, ಉಯ್ಯಾಲೆಯಲ್ಲಿ ಜೀಕುತ್ತಾ ಕೂತಿದ್ದಾಗ ಏನೋ ಒಂದು ಅದ್ಭುತ ವಿಷಯ ಹೊಳೆಯುತ್ತದೆ. 

ಅದನ್ನು ಅಷ್ಟೇ ಪ್ರೀತಿಯಿಂದ ತನ್ನ ಮಡದಿಗೆ ಹೇಳಬಂದಾಗ ಆಕೆ ಭಾವನಾತ್ಮಕವಾಗಿ ಸ್ಪಂದಿಸದೇ, ವ್ಯಾವಹಾರಿಕ ಜಗತ್ತಿನ ಸೂತ್ರದಲ್ಲಿ ಬಂಧಿಯಾಗಿ, ತನಗೆ ಲಾಭ ತರದ ಈ ಕಾವ್ಯಮಯ ಭಾಷೆ ಅನಗತ್ಯ ಎನ್ನುವ ಮಾತುಗಳನ್ನು ಹೇಳುತ್ತಾಳೆ. 

ಅಲ್ಲಿಂದ ಶುರು ನಾಯಕನ ಮನಸ್ಸು ಅವನ ಜೊತೆ ಮಾತಾಡಲು ಅನುವಾಗುತ್ತದೆ. ಅದ್ಭುತ ದೃಶ್ಯ ಕಲ್ಪನೆ. ನಮ್ಮ ಮನಸ್ಸು ನಮಗೆ ಮಾರ್ಗದರ್ಶಿ ಎನ್ನುವ ಮಾತು ಎಷ್ಟು ನಿಜ. 

ಮನಸ್ಸು ಒಂದು ಕಡೆಯಲ್ಲಿ ಸಹಾನುಭೂತಿ ತೋರಿದರೆ, ತನ್ನ ಮನದಲ್ಲಿ ಕೂತ ಮಡದಿಯಿಂದ ತಿರಸ್ಕಾರ ಸಾಕು ಎನ್ನಿಸಿ ಮನೆ ಬಿಟ್ಟು ಹೊರಡುತ್ತಾನೆ. ಆಗ ಇನ್ನೊಂದು ಅದ್ಭುತ ಜಗತ್ತು ನಾಯಕನ ಮನಸ್ಸಿಗೆ ಸಿಗುತ್ತದೆ. 

ಜಿ ಎಸ್ ಶಿವರುದ್ರಪ್ಪ ಅವರ ಅದ್ಭುತ ಕವಿತೆ "ವೇದಾಂತಿ ಹೇಳಿದನು" ಪಿ ಬಿ ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಕಾರಿನಲ್ಲಿ ಹೋಗುತ್ತಾ ಜೋರಾಗಿ ಈ ಹಾಡನ್ನು ಕೇಳಿದರೆ ಸಿಗುವ ಆನಂದ ಹೇಳಲಿಕ್ಕೆ ಆಗೋಲ್ಲ (ನಾ ಹಲವಾರು ಬಾರಿ ಒಬ್ಬನೇ ಪಯಣ ಮಾಡುವಾಗ.. ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಉಂಟು) 
ಈ ಹಾಡಿನಲ್ಲಿರುವ ಸತ್ವವನ್ನು ವಿಜಯಭಾಸ್ಕರ್ ಸಂಗೀತದಲ್ಲಿ ಅದ್ದಿ ಅದ್ದಿ ತೆಗೆದಿದ್ದಾರೆ. ಎಷ್ಟು ಬಾರಿ ಕೇಳಿದರೂ ಬೋರ್ ಅನ್ನಿಸಿದ ಅನೇಕ ಹಾಡುಗಳಲ್ಲಿ ಇದು ಒಂದು. ಈ ಹಾಡನ್ನು ಚಿತ್ರೀಕರಿಸಿದ ರೀತಿಯೂ ಸುಂದರ. 

ಒಂದು ರಕ್ಷಾ ಬೇಲಿ ಇರುವ ಮನೆಯಿಂದ ಹೊರಡುವ ನಾಯಕನ ಮನೆಯ ಎದುರು ದಾರಿಗಳು ಕವಲಾಗಿ ಎರಡಾಗುತ್ತವೆ. ನಾಯಕನ ಬಾಳಿನ ಪಥದಲ್ಲೂ ಇಬ್ಬಗೆಯ ಹಾದಿ ಎದುರಿಗೆ ಇದೆ ಎನ್ನುವ ಸೂಚ್ಯ ಅದು. 
ಅಲ್ಲಿಂದ ಹೊರಡುವ ಅವನ ಕಾರು, ತಂಪಾದ ಹಸಿರು ಕಾಡಿನ ಮಧ್ಯೆ ಸಾಗುವುದು, ಹಿನ್ನೆಲೆಯಲ್ಲಿ ಹಾಡು ಬರುವುದು ವಾಹ್ ಎನ್ನಿಸುತ್ತದೆ. ಎಂಥಹ ಸಮಸ್ಯೆಗೂ ಪ್ರಕೃತಿಯೇ ಅದ್ಭುತ ವೈದ್ಯ ಎನ್ನುವುದರ ಸುಂದರ ನಿರೂಪಣೆಯ ಭಾವ ಈ ಹಾಡಿನಲ್ಲಿ ಇದೆ. ಬೇಲಿಯಿರುವ ಮನೆಯಿಂದ, ವಿಹಂಗಮ ಪ್ರಕೃತಿಯ ಮಧ್ಯೆ ಯಾವುದೇ ಬಂಧನವಿರದ ಮುಕ್ತವಾಗಿರುವ ಮನೆಗೆ ಬರುತ್ತಾನೆ. ಈ ಹಾಡು ನೋಡಬೇಕು ಕೇಳಬೇಕು ಆಗಲೇ ಅದರ ಸತ್ವ ಅರಿವಾಗುವುದು. 

ಮಿತ್ರವೃಂದ ಲಾಂಛನದಲ್ಲಿ ತಯಾರಾದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ವಹಣೆ ಮತ್ತು ನಿರೂಪಣೆ ಪುಟ್ಟಣ್ಣ ಕಣಗಾಲ್ ಅವರದ್ದು. ತನ್ನ ಸಾಧನೆ ಏನೂ ಅಲ್ಲ, ಅದಕ್ಕೆಲ್ಲ ಕಾರಣ ಜಗನ್ಮಾತೆ ಎನ್ನುವ ತತ್ವವನ್ನು ದಿಗ್ದರ್ಶನ - ಜಗನ್ಮಾತೆ ಎಂದು ತೋರುವ ಮೂಲಕ, ತಾನು ಯಶಸ್ಸಿನ ಶಿಖರದಲ್ಲಿದ್ದರೂ ಅದಕ್ಕೆ ಕಾರಣ ಕಾಣದ ಆ ಮಹಾನ್ ಶಕ್ತಿ ಎಂಬ ಅರಿವು ಮೂಡಿಸುತ್ತಾರೆ. 

ಮೂರು ಮಂದಿ ಮಿತ್ರರ ಜೊತೆಗೂಡಿ (ವರ್ಗಿಸ್, ಕಮಲಾಕರ್, ಗೀತ ಶ್ರೀನಾಥ್) ನಿರ್ಮಿಸಿದ ಚಿತ್ರವಿದು. ಚುರುಕಾದ ಸಂಭಾಷಣೆ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಆಸ್ತಿ, ಈ ಚಿತ್ರದಲ್ಲಿ ಆ ಹೊಣೆ ಹೊತ್ತವರು ಟಿ ಎನ್ ಸೀತಾರಾಮ್. ಪುಟ್ಟಣ್ಣ ಅವರ ಅನೇಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಬಿ ಎಸ್ ಬಸವರಾಜ್ ಮತ್ತೊಮ್ಮೆ ಪುಟ್ಟಣ್ಣ ಅವರ ಭಾವಗಳಿಗೆ ತಕ್ಕಂತೆ ದೃಶ್ಯಗಳನ್ನು ಚಿತ್ರೀಕರಿಸಲು ಜೊತೆಯಾಗಿದ್ದರು.  

ಒಂದು ಅಡಿಗೆ ಸಿದ್ಧಮಾಡುವಾಗ, ಅಥವಾ ಯಾವುದೇ ಕೆಲಸ ಮಾಡುವಾಗ, ಅದರ ಬಗ್ಗೆ ಪುಟ್ಟ ಪುಟ್ಟ ವಿವರಗಳು, ವಿಧಾನಗಳು ಇವೆಲ್ಲಾ ಸರಿಯಾಗಿ ಸಿಕ್ಕಿ, ಅದನ್ನು ಹೇಳಿಕೊಡುವ ಒಬ್ಬರು ಜೊತೆಗಿದ್ದರೆ ಪವಾಡ ಸೃಷ್ಟಿಸಬಹುದು ಎನ್ನುತ್ತದೆ ಮಾತು. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಗಳಿಗೆ ಎಷ್ಟು ಬೇಕು ಅಷ್ಟೇ ಅಭಿನಯ ನೀಡಿದ್ದಾರೆ ಅಥವಾ ಪಾತ್ರ ಬೇಡುವಷ್ಟು ಅಭಿನಯ ನೀಡಿದ್ದಾರೆ. 

ಅಡಿಗೆ ಕೆಲಸಮಾಡಿಕೊಂಡು ಮನೆ ನೋಡಿಕೊಳ್ಳುವ ಪಾಂಡು ಅಂಕಲ್ ಪಾತ್ರ, ನಾಯಕನ ತೋಟವನ್ನು ತಮ್ಮ ತಂಗಿಯನ್ನು ಮುಂದೆ ಇಟ್ಟುಕೊಂಡು ಕಬಳಿಸಲು ಹೊಂಚು ಹೂಡುವ ಲಂಬಾಣಿ ಹುಡುಗರ ಪಾತ್ರ, ಲಂಬಾಣಿ ಹುಡುಗಿಯಾಗಿ ಅಭಿನಯಿಸಿರುವ ವೈಶಾಲಿ ಕಾಸರವಳ್ಳಿ, ನಾಯಕಿಯ ತಂದೆಯಾಗಿ ಬರುವ ಜಿ ವಿ ಶಿವಾನಂದ್.. ಹೀಗೆ ಎಲ್ಲರಲ್ಲಿಯೂ ತಮಗೆ ಬೇಕಾದಷ್ಟೇ ಅಭಿನಯ ಪಡೆಯುವಲ್ಲಿ ಯಶಸ್ವೀ ಆಗಿದ್ದಾರೆ ಪುಟ್ಟಣ್ಣ ಕಣಗಾಲ್. 

"ಹಾಡು ಹಳೆಯದಾದರೇನು" ಮತ್ತೊಮ್ಮೆ ಜಿ ಎಸ್ ಶಿವರುದ್ರಪ್ಪ ಅವರ ಕವಿತೆಯನ್ನು ಸಂಗೀತದಲ್ಲಿ ಅಳವಡಿಸಿರುವುದು ಇಷ್ಟವಾಗುತ್ತದೆ. ವಾಣಿ ಜಯರಾಂ ಭಾವ ತುಂಬಿ ಹಾಡಿದ್ದಾರೆ, ಈ ಹಾಡನ್ನು ಚಿತ್ರಿಸಿರುವ ರೀತಿ ಇಷ್ಟವಾಗುತ್ತದೆ. ಹಸಿರಿನ ಮಧ್ಯೆ ಕಂಗೊಳಿಸುವ ಹಿತ ಮಿತ ಬೆಳಕಿನಲ್ಲಿ ಸೂಪರ್ ಎನ್ನಿಸುತ್ತದೆ. 

ನಾಯಕಿಗೆ ಚಿಕಿತ್ಸೆ ನೀಡುವಲ್ಲಿ ಬೇಕಾದ ತಾಳ್ಮೆ, ಸಂಯಮ, ಹಿತ ಮಿತ ನುಡಿಗಳು, ಮಗುವನ್ನು ಪಾಲಿಸುವ ಅಮ್ಮನಂತಹ ಪಾತ್ರದಲ್ಲಿ, ಕೆಲವೊಮ್ಮೆ ಮುಗ್ಧ ಮಗುವೆ ಆಗುವ ಪಾತ್ರದಲ್ಲಿ ಶ್ರೀನಾಥ್ ಸ್ಮರಣೀಯ ಅಭಿನಯ ನೀಡಿದ್ದಾರೆ. ಮಾನಸಿಕ ರೋಗತಜ್ಞನ ಪಾತ್ರದಲ್ಲಿ ಅವರ ಅಭಿನಯ ಅದ್ಭುತ. ಆ ಪಾತ್ರಕ್ಕೆ ಬೇಕಾದ ಆಂಗೀಕ ಅಭಿನಯ, ವೇಷ ಭೂಷಣ, ತಾನು ಸರಿ ಎನ್ನುತ್ತಾ ಮಾತಾಡುವ ಶೈಲಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ನಿರ್ದೇಶಕರ ಅಣತಿಯಂತೆ ನಟಿಸಿರುವ ಈ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. 

ಕುಂಬಾರ ಒಂದು ಮಣ್ಣಿನ ಮುದ್ದೆಯನ್ನು ತಿರುಗುವ ಚಕ್ರದಮೇಲೆ ಹಾಕಿ, ಆ ಮಣ್ಣಿಗೆ ಸುಂದರ ರೂಪವನ್ನು ಕೊಡುವ ಹಾಗೆ ಪದ್ಮಾವಾಸಂತಿ ಅವರಿಂದ ಅಭಿನಯ ಕಲೆಯನ್ನು ಅನಾವರಣಗೊಳಿಸಿರುವುದು ಪುಟ್ಟಣ್ಣ ಅವರ ತಾಕತ್. ಬಹುಶಃ ಪದ್ಮಾವಾಸಂತಿ ಈ ಚಿತ್ರದಲ್ಲಿ ಅಭಿನಯಿಸಿರುವಂತೆ ಇನ್ಯಾವ ಚಿತ್ರಗಳಲ್ಲೂ ಅಭಿನಯಿಸಲಿಕ್ಕೆ ಅವಕಾಶ ಸಿಗಲಿಲ್ಲ ಅಂದರೆ ತಪ್ಪಿಲ್ಲ ಎನುವ ಅಭಿಪ್ರಾಯ ನನ್ನದು. 

"ಮಾನಸ ಸರೋವರ" ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಸುಂದರ ಪರಿಸರ, ಈ ಹಾಡು ಶುರುವಾಗುವ ಮುಂಚೆ ಬರುವ ವೇದ ಮಂತ್ರಗಳು ಈ ಹಾಡನ್ನು ನೋಡುವಾಗ ಒಂದು ಭಕ್ತಿ ಭಾವದ ಜೊತೆಯಲ್ಲಿ ಒಂದು ಮಧುರ ಭಾವ ನೀಡುತ್ತದೆ. 

"ಚಂದ ಚಂದ"  ಹಾಡು, ಅದರ ಆರಂಭಿಕ ಸಂಗೀತ ಹುಚ್ಚು ಹಿಡಿಸುತ್ತದೆ. ಜಯಚಂದ್ರನ್ "ಚಂದ ಚಂದಾ" ಎಂದು ಶುರು ಮಾಡುವ ರೀತಿ ವಾಹ್. ಸಾಹಿತ್ಯ ಎಂ ಎನ್ ವ್ಯಾಸರಾವ್ ಅವರದ್ದು, ಈ ಹಾಡು ಇಷ್ಟವಾಗಲು ಕಾರಣ, ಸರಳ ಸಂಗೀತ, ರಾಮಕೃಷ್ಣ ಅವರ ಹುಡುಗು ಹುಡುಗು ನೃತ್ಯ, ಸುಂದರ ಹೊರಾಂಗಣ. 

ಈ ಚಿತ್ರದ ಆರಂಭದಿಂದ ಈ ಹಾಡಿನ ತನಕ ಬಿರು ಬಿಸಿಲ ನಾಡು ಎಂದೇ ಖ್ಯಾತವಾದ ಬಳ್ಳಾರಿಯಲ್ಲಿ ಚಿತ್ರಿಕರಿಸಿದ್ದರೂ, ಆ ಬಿಸಿಲಿನ ತಾಪ ಎಲ್ಲೂ ಕಾಣದ ರೀತಿಯಲ್ಲಿ ಸುಂದರ ಹಸಿರಿನಲ್ಲಿ ಆಹ್ಲಾದಕರ ರೀತಿಯಲ್ಲಿ ಈ ದೃಶ್ಯದ ತನಕ ಚಿತ್ರೀಕರಿಸಿದ್ದಾರೆ. ಈ ಹಾಡು ಬರುವ ಹೊತ್ತಿಗೆ ನಾಯಕನ ಹೃದಯಕ್ಕೆ ಘಾಸಿಯಾಗಿರುತ್ತದೆ. ಮನಸ್ಸಿನ ಹಸಿರಿನ ಕಾಡು ಬೆಂಗಾಡಾಗಳು ಸಿದ್ಧವಾಗಿರುತ್ತದೆ. ಹೃದಯ ಒಡೆದು ಚೂರಾಗಿರುತ್ತದೆ. ಅಂಥಹ ಸಂದರ್ಭದಲ್ಲಿ ಬರುವ ಹಾಡು "ನೀನೆ ಸಾಕಿದ ಗಿಣಿ". 

ವಿಜಯನಾರಸಿಂಹ ಅವರ ಹೃದಯ ಹಿಂಡುವ ಸಾಹಿತ್ಯಕ್ಕೆ ಜೊತೆಯಾಗಿ ನಿಲ್ಲುತ್ತದೆ ಸಂಗೀತ ಮತ್ತು ಛಾಯಾಗ್ರಹಣ. ಕ್ಯಾಮೆರ ಚಾಲನೆ, ಕ್ಯಾಮೆರಾದ ಓಡಾಟ ಈ ಹಾಡಿನಲ್ಲಿ ನನಗೆ ಬಲು ಇಷ್ಟವಾಗುತ್ತದೆ. ಒಂದು ಹೃದಯ ಇನ್ನೊಂದು ಹೃದಯಕ್ಕೆ ಹತ್ತಿರವಾಗಬೇಕು ಎನ್ನುವಷ್ಟರಲ್ಲಿ ಮತ್ತೆ ದೂರ ಹೋಗುತ್ತದೆ. ಅದ್ಭುತವಾದ ರೀತಿಯಲ್ಲಿ ಚಿತ್ರಿಕರಣವಾಗಿದೆ. 

ನಾಯಕನ ಮನಸ್ಸು ಹೇಳುವ ಮಾತು "ಇವಳಿಗೆ ಬೇಕಾಗಿರುವುದು ಆನಂದ ಕಣೋ ಸಂತೋಷ ಅಲ್ಲ" ಅದ್ಭುತ ಮಾತುಗಳು. ಆನಂದ ನಿರಂತರದ ಭಾವ, ಸಂತೋಷ ಕೇವಲ ಕ್ಷಣ ಮಾತ್ರ ಸಿಗುವ ಸುಂದರ ಅನುಭವ. ಇಡಿ ಚಿತ್ರ ಈ ಮೇಲಿನ ಸಾಲಿನ ಮೇಲೆ ನಿಂತಿದೆ. 

ಈ ಚಿತ್ರದಲ್ಲಿ ಅಭಿನಯಿಸಿರುವ ಮೂವರು ಮೂರು ಆಧಾರ ಸ್ಥಂಭಗಳು. 

ಶ್ರೀನಾಥ್ : ಚಿತ್ರಜೀವನದಲ್ಲಿಯೇ ಒಂದು ಮೈಲಿಗಲ್ಲು, ಆನಂದನ ಪಾತ್ರದಲ್ಲಿ ಕೈಕಟ್ಟಿಕೊಂಡು ಓಡಾಡುವ, ಕನ್ನಡಕವನ್ನು ಆಗಾಗ ಸರಿಪಡಿಕೊಳ್ಳುವ ರೀತಿ, ಸಿಲ್ಲಿ ಫೆಲೋ ಸಿಲ್ಲಿ ಫೆಲ್ಲೋ ಎನ್ನುವ ಮಾತುಗಳು, ಅಪಾರ ಚಿಂತನೆ ನಡೆಸಿ ಮನಸ್ಸು ಹಣ್ಣಾಗಿದೆ ಎನ್ನುವಂಥಹ ಮನೋಜ್ಞ ಅಭಿನಯ ಈ ಪಾತ್ರದಲ್ಲಿ ಕಾಣಸಿಗುತ್ತದೆ 

ಪದ್ಮಾವಾಸಂತಿ: ವಾಸಂತಿ ಎನ್ನುವ ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಿ ಅತಿರೇಕಕ್ಕೆ ಹೋಗದೆ, ನಿಭಾಯಿಸಿರುವ ರೀತಿ, ತನ್ನ ಕಾಯಿಲೆ ಗುಣವಾದಮೇಲೆ ಹಿಂದಿನ ಪಾತ್ರದ ಪರಿಣಾಮ ಕೊಂಚವೂ ಇರದ ಹಾಗೆ ಅಭಿನಯ ಇಷ್ಟವಾಗುತ್ತದೆ. 

ರಾಮಕೃಷ್ಣ : ಚಿತ್ರ ಒಂದು ನಿಟ್ಟಿನಲ್ಲಿ ಓಡುತ್ತಿದೆ ಎಂದು ಅಂದುಕೊಂಡಾಗ ಪ್ರತ್ಯಕ್ಷವಾಗುವ ಪಾತ್ರ ಚಿತ್ರದ ದಿಕ್ಕನ್ನೇ ಬದಲಿಸಿಬಿಡುತ್ತದೆ. ತನಗೆ ಅರಿವಿಲ್ಲದೆ ವಾಸಂತಿ ಪಾತ್ರವನ್ನು ಪ್ರೀತಿಸುತ್ತಾ, ಅರಿವಿಲ್ಲದೆ ನಾಯಕನ ಭಾವಗಳಿಗೆ ಬರೆ ಎಳೆಯುವ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. 

ಈ ಮೂವರು ಈ ಮೇಲಿನ ಪಾತ್ರ ಮಾಡಲಿಕ್ಕೆ ನಟಿಸಿದ್ದಾರೆಯೋ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆ. 

ಈ ಪಾತ್ರಗಳ ಮತ್ತು ಮನೋಜ್ಞ ಕಥೆಯ ಕತೃ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ದೊಡ್ಡ ಸಲಾಂ ಈ ಲೇಖನದ ಮೂಲಕ!!!

Sunday, September 13, 2015

ಅಂತರಂಗವನ್ನು ಗುಪ್ತಗಾಮಿನಿಯಾಗಿ ಹರಿಸುವ - ರಂಗನಾಯಕಿ (1981)

ಪುಟ್ಟಣ್ಣ ಕಣಗಾಲ್ ಹತ್ತಿರ ಕ್ಷಮೆ ಕೇಳಿ ಕೇಳಿ ಸಾಕಾಯ್ತು.. ಇರಲಿ ಅವರು ಕ್ಷಮಿಸುವಂಥಹ ಧಾರಾಳ ಮನಸ್ಸಿನವರು.. ಅವರ ಕ್ಷಮೆಯಾಚನೆಯೊಂದಿಗೆ ಮತ್ತೆ ಅವರ ಚಿತ್ರರತ್ನಗಳ ಕಡೆಗೆ ನನ್ನ ಪಯಣ.

ದೂರದರ್ಶನ ಎಂಭತ್ತರ ದಶಕದ ಆರಂಭದಲ್ಲಿ ಮಾಯಾಜಾಲವನ್ನೇ ಸೃಷ್ಠಿಸಿತ್ತು.. ಪ್ರತಿ ಶನಿವಾರ ಚಲನಚಿತ್ರಗಳಿಗೋಸ್ಕರ ಕಾದು ಕುಳಿತಿರುತ್ತಿದ್ದೆವು. ರಂಗನಾಯಕಿ ಆ ರೀತಿಯಲ್ಲಿ ಯಾರದೋ ಮನೆಯ ದೂರದರ್ಶನದಲ್ಲಿ, ಕಿಟಕಿಯ ಮೂಲಕ ಅಥವಾ ಅವರ ಧಾರಾಳ ಮನಸ್ಸಿದ್ದರೆ ಅವರ ಮನೆಯೊಳಗೇ ಕೂತು ನೋಡುವ ಅವಕಾಶ.     

ಬಾಲ್ಯದಲ್ಲಿಯೆ ಈ ಚಿತ್ರ ನಾನಾ ಕಾರಣಗಳಿಂದ ಇಷ್ಟವಾಗಿತ್ತು. 

೧) ಎಂ ಏನ್ ವ್ಯಾಸರಾವ್ ಅವರ ಪಾನಿ ಪುರಿ ಗೀತೆ ಎನ್ನುವಂತೆ ರಚಿಸಿದ "ಪ್ರೇಮದಲ್ಲಿ ಸ್ನೇಹದಲ್ಲಿ" ಹಾಡು, ಎಂ ರಂಗರಾವ್ ಅವರ ಅದ್ಭುತ ಟಪೋರಿ ವಾದ್ಯ ಮೇಳ, ಅದಕ್ಕೆ ಸಂಗೀತ ಅದರಲ್ಲಿಯೂ " ಮೈ ಡಿಯರ್" ಎಂದು ಹಾಡಿದ ಕೂಡಲೇ ಬರುವ ಡ್ರಮ್ ಸಂಗೀತ ನನ್ನನ್ನು ಹುಚ್ಚನನ್ನಾಗಿ ಮಾಡಿಸಿತ್ತು. ಎಸ್ ಪಿ ಬಾಲಸುಬ್ರಮಣ್ಯಂ ಅವರ ಅದ್ಭುತ ಗಾಯನ, ಪ್ಲೇ ಬಾಯ್ ಎನ್ನುವ ಒಂದು ಇಮೇಜ್ ಸೃಷ್ಠಿಗೆ ಕಾರಣವಾದ ರಾಮಕೃಷ್ಣ ಅವರ ಪಾತ್ರ, 

೨) " ಮಂದಾರ ಪುಷ್ಪವು ನೀನು" ವಿಜಯನಾರಸಿಂಹ ರಚಿಸಿರುವ ಈ ಹಾಡಿನ್ನು ಜಯಚಂದ್ರನ್ ಶುರುಮಾಡುವ ರೀತಿ, ಧರ್ಮಸ್ಥಳದ ಉದ್ಯಾನವನದಲ್ಲಿ ರಾಧ ಕೃಷ್ಣರ ಮೂರ್ತಿಯ ಮುಂದೆ ಶುರುವಾಗುವ ಈ ಹಾಡು, ಮದ್ಯೆ ಮದ್ಯೆ ಎಸ್ ಪಿ ಶೈಲಜಾ ಸುರಿಸುವ ಜೇನು ಹನಿ ಒಂದು ಕಡೆಯಾದರೆ, ಸರಳ ಇಂಪಾದ ಸಂಗೀತ, ಸುಂದರ ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಿದ ರೀತಿ ಇಷ್ಟವಾಗಿತ್ತು. ನಾಯಕ ಅಶೋಕ್ ಅವರ ವೇಷಭೂಷಣ, ಅಂದಗಾರ್ತಿ ಆರತಿಯ ಸುಂದರ ಅಲಂಕಾರ ಒಂದು ರೀತಿಯಲ್ಲಿ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಎನ್ನಿಸಿತ್ತು. 

೩) ಶಕ್ತಿ ಸ್ಥಳ ಕೊಲ್ಲೂರಿನಲ್ಲಿ ಆರತಿ ಹಾಡಿ ಕುಣಿಯುವ "ಜೈ ಜಗದಂಬೆ" , ಎಸ್ ಜಾನಕಿ ಭಕ್ತಿ ಪೂರ್ವಕವಾಗಿ ಪರವಶರಾಗಿ ಹಾಡಿದ್ದಾರೆ, ಅದ್ಭುತ ಎನ್ನಿಸುವ ಸಾಹಿತ್ಯದ ರೂವಾರಿ ವಿಜಯನಾರಸಿಂಹ. ಸಂಗೀತದಲ್ಲಿ ಉಪಯೋಗಿಸಿರುವ ವಾದ್ಯ, ಚಿತ್ರೀಕರಣದಲ್ಲಿ ಅದಕ್ಕೆ ಹತ್ತಿರವಾಗುವಂತೆ ಉಪಯೋಗಿಸಿರುವ ವಾದ್ಯ ಇಷ್ಟವಾಗುತ್ತದೆ. ಆರತಿ ಈ ಹಾಡಿನಲ್ಲಿ ಇಷ್ಟವಾಗುವ ಕಾರಣ ಅವರು ಉಟ್ಟಿರುವ ಸೀರೆಯ ಬಣ್ಣ, ಹಣೆಯಲ್ಲಿ ದೊಡ್ಡದಾದ ಕುಂಕುಮದ ಕೆಳಗೆ ಒಂದು ಚಿಕ್ಕ ಬೊಟ್ಟು. 

೪) ಅಣ್ಣ ಎಂದರೆ ಹೀಗೆಯೇ ಇರಬೇಕು ಎನ್ನಿಸುವಷ್ಟು ಇಷ್ಟವಾಗುವ ಅಂಬರೀಶ್, ಕಣಗಾಲ್ ಪ್ರಭಾಕರ್ ಶಾಸ್ತ್ರೀ ರಚಿಸಿರುವ "ಕನ್ನಡ ನಾಡಿನ ರಸಿಕರ ಮನವ" ಹಾಡು ಮತ್ತೊಮ್ಮೆ ಎಸ್ ಪಿ ಬಾಲಸುಬ್ರಮಣ್ಯಂ ನಮಗೆ ಹತ್ತಿರವಾಗುತ್ತಾರೆ. ತುಮಕೂರು ಬಳಿಯ ಶಿವಗಂಗೆಯಲ್ಲಿ ಚಿತ್ರಿಕರಿಸಿರುವ ಹಾಡು ಮತ್ತೆ ಮತ್ತೆ ಕೇಳಬೇಕು ಮತ್ತು ನೋಡಬೇಕು ಎನ್ನಿಸುತ್ತದೆ. ಅದರಲ್ಲೂ ಈ ಹಾಡಿನ ಮದ್ಯೆ ಮದ್ಯೆ ರಂಗಭೂಮಿಯ ಚಿಕ್ಕ ಚಿಕ್ಕ ತುಣುಕುಗಳನ್ನು ಹೆಣೆದಿರುವುದು ಪುಟ್ಟಣ್ಣ ಹಾಡುಗಳನ್ನು ಚಿತ್ರೀಕರಿಸುವ ಅದ್ಭುತ ಶೈಲಿಯನ್ನು ತೋರಿಸುತ್ತದೆ. ಕಡೆಯಲ್ಲಿ ಹಾಡಿನ ಸಾಲನ್ನು ನಿಧಾನಗತಿಯಲ್ಲಿ ಹಾಡಿ ರಂಗಭೂಮಿಯ ಬ್ಯಾನರ್ ಇಂದ ಆರತಿ ಹೆಸರಿಗೆ ಬಣ್ಣವನ್ನು ಬಳೆದು ಅಳಿಸುವುದು ಬಣ್ಣದ ಬದುಕು ಎಷ್ಟು ಕ್ಷಣಿಕ ಎನ್ನುವಂತೆ ಭಾವ ತೋರುತ್ತದೆ. ಆದರೆ ಈ ಹಾಡು ಶುರುವಾಗುವಾಗ ರಂಗು ರಂಗಿನ ಪರದೆ, ಬೆಳಕು ಇವುಗಳ ಮದ್ಯೆ ನಾಯಕಿಯನ್ನು ತೋರಿಸಿ ರಂಗಭೂಮಿಯ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತಾರೆ. 

ಶ್ರೀ ಅಶೋಕ್ ಆರ್ಟ್ಸ್ ಲಾಂಛನದಲ್ಲಿ, ಬಿ ತಿಮ್ಮಣ್ಣ ಅವರ ನಿರ್ಮಾಣದಲ್ಲಿ , ಅಶ್ವತ್ಥ ಅವರ "ರಂಗನಾಯಕಿ" ಎನ್ನುವ ಕಥೆಯನ್ನ ಚಲನಚಿತ್ರವಾಗಿಸಿದರು ಪುಟ್ಟಣ್ಣ. ಚಿತ್ರದ ತಾರಾಗಣ, ತಾಂತ್ರಿಕವರ್ಗದ ಹೆಸರನ್ನು ತೆರೆಯ ಮೇಲೆ ತೋರಿಸುವಾಗ, ರಂಗಭೂಮಿಯ ಅಂದಿನ ಕಾಲದ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳ ಜೊತೆಯಲ್ಲಿ ತೋರಿಸುವುದು ಪುಟ್ಟಣ್ಣ ಒಂದು ವಸ್ತು ವಿಷಯಕ್ಕೆ ಎಷ್ಟು ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ಸಾಕ್ಷ್ಟಿಯಾಗಿದೆ. 
ಯೋಗಣ್ಣ ಅವರ ಜೊತೆಗೂಡಿ ಈ ಕಥೆಗೆ ಚಿತ್ರಕಥೆ ಬರೆದು ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಯಶಸ್ಸಿನ ಮಹಲಿಗೆ ಕೊಂಡೊಯ್ದರು. ಚಿತ್ರಕ್ಕೆ ತಕ್ಕ ತಾಂತ್ರಿಕ ವರ್ಗ ಎನ್ನುವ ಹಾಗೆ ಈ ಚಿತ್ರಕ್ಕೆ ಸಂಗೀತಕ್ಕೆ ಬಂದವರು ಎಂ ರಂಗರಾವ್. ಎಸ್ ಮಾರುತಿರಾವ್ ಪುಟ್ಟಣ್ಣ ಅವರ ಕಲ್ಪನೆಯನ್ನು ಹಾಗೆ ಕ್ಯಾಮೆರ ಕಣ್ಣಲ್ಲಿ ಸೆರೆ ಹಿಡಿಯಲು ನಿಂತರು. 

ಆ ಕಾಲಘಟ್ಟದ ಮುಖ್ಯ ಪ್ರತಿಭೆಗಳನ್ನು ಆಯ್ದು ಈ ಚಿತ್ರ ಮಾಡಿದ್ದರು. ಆರತಿ, ರಾಜಾನಂದ್, ಅಂಬರೀಶ್, ಅಶೋಕ್, ರಾಮಕೃಷ್ಣ, ಹಲವಾರು ರಂಗಭೂಮಿಯ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದರು. ಇಲ್ಲಿ ಬರುವ ಪ್ರತಿ ಪಾತ್ರಗಳು ಚಿಕ್ಕದೋ ದೊಡ್ಡದೋ ಚಿತ್ರದ ಕಥೆಯ ಮೇಲೆ ಮುಖ್ಯ ಪರಿಣಾಮ ಬೀರುತ್ತಲೇ ಇರುವಂಥವು. 

ಈ ಚಿತ್ರದ ಪ್ರಮುಖ ಪಾತ್ರ ರಂಗನಾಯಕಿ ಎನ್ನುವ ರಂಗಭೂಮಿ ಕಲಾವಿದೆಯದು. ಅವಳ ಬಾಲ್ಯವನ್ನು ಒಂದೆರಡು ದೃಶ್ಯಗಳಲ್ಲಿ ತೋರಿಸಿ, ಆ ಮಗುವಿಗೆ ಬಾಲ್ಯದಿಂದಲೂ ಸಂಗೀತ, ಅಭಿನಯ, ಬಣ್ಣ ಇವುಗಳ ಮೇಲೆ ಇರುವ ಆಸಕ್ತಿಯನ್ನು ರಂಗಭೂಮಿಯ ತಾಲೀಮನ್ನು ನೋಡುವಾಗ ಆ ಮಗುವಿನ ಕಣ್ಣು, ಕಿವಿ, ಕೈ, ಕಾಲುಗಳನ್ನು ಮಾತ್ರ ತೋರಿಸಿ ದೃಶ್ಯದ ಗಾಢತೆಯನ್ನು ಹೆಚ್ಹು ಮಾಡುತ್ತಾರೆ. 

ಅನಾಥ ಮಗುವಾದ ಅಂಬರೀಶ್ ಅವರನ್ನು ಸಾಕಿ ಸಲುಹಿದ ತನ್ನ ಸಾಕು ತಂದೆಯ ಬಗ್ಗೆ ಅಭಿಮಾನದಿಂದ ಹೇಳುವಾಗ ಅಂಬರೀಶ್ ಇಷ್ಟವಾಗುತ್ತಾರೆ, ಆ ಅಭಿಮಾನ, ಹೆಮ್ಮೆ ಅವರ ಧ್ವನಿ ಆಹಾ. 

ರಾಜಾನಂದ್ ಅವರ ಸ್ನೇಹಿತ ಕಷ್ಟ ಕಾಲದಲ್ಲಿ ಇವರ ಬಳಿ ಬರುತ್ತಾರೆ, ಮೊದಲೇ ಕಷ್ಟದಲ್ಲಿದ್ದರೂ, ತನ್ನ ಸ್ನೇಹಿತನಿಗೆ ಸಹಾಯ ಮಾಡಬೇಕು ಎಂದು ತಮ್ಮ ನಾಟಕದ ಮೂರು ದಿನದಲ್ಲಿ ಬರುವ ಪೂರ್ತಿ ಹಣವನ್ನು ಅವನಿಗೆ ಕೊಡುವ ಭರವಸೆ ಕೊಡುತ್ತಾರೆ. ಆಗ ಹೇಳುವ ಮಾತು "ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನ ಕಷ್ಟಕ್ಕೆ ಆಗದಿದ್ದರೆ ಕಲಾವಿದನ ಜನ್ಮ ಯಾಕೋ" ಎನ್ನುತ್ತಾರೆ. ಅದ್ಭುತ ನಟನೆ.  

ಕೆಲ ಹಣವುಳ್ಳ ಕಾಮುಕ ವ್ಯಕ್ತಿ ಹಣದ ದರ್ಪದಿಂದ ರಂಗಭೂಮಿ ಕಲಾವಿದರನ್ನು ಅವಮಾನಗೊಳಿಸುವ ಯತ್ನದಲ್ಲಿದ್ದಾಗ, ಅಂಬರೀಶ್ ಚೆನ್ನಾಗಿ ಹೊಡೆದು ಕಳಿಸುತ್ತಾರೆ, ಆಗ ಸಾಕು ತಂದೆ ರಾಜಾನಂದ್ ಅಂಬರೀಶ್ ಅವರಿಗೆ ಚೆನ್ನಾಗಿ ಹೊಡೆಯುತ್ತಾರೆ, 

"ನಾ ಮಾಡಿದ್ದು ತಪ್ಪಾ ಹೇಳಿ ಅಪ್ಪಾಜಿ, ನೀವು ತಪ್ಪು ಎಂದರೆ, ಆ ಸಾಹುಕಾರನ ಕಾಲಿಗೆ ಬಿದ್ದು ತಪ್ಪಾಯ್ತು ಎಂದು ಹೇಳಿ ಕರೆದುಕೊಂಡು ಬರುವೆ" 

"ಕಲಾವಿದರಿಗೂ ಸ್ವಾಭಿಮಾನ, ಮಾರ್ಯಾದೆ ಇದೆ ಎಂದು ತೋರಿಸಲು ನಿನ್ನಂಥವರು ಲಕ್ಷ ಲಕ್ಷ ಹುಟ್ಟಬೇಕು ಕಣೋ" ಎಂದು ರಾಜಾನಂದ್ ಅಂಬರೀಶ್ ಅವರನ್ನು ಅಪ್ಪಿಕೊಳ್ಳುತ್ತಾರೆ. ಅಲ್ಲಿ ರಾಜಾನಂದ್ ಅವರ ಮುಖಾಭಿನಯ, ಧ್ವನಿ ಮತ್ತು ಆ ಗತ್ತು ಅದ್ಭುತ. 

ಈ ಚಿತ್ರದಲ್ಲಿ ಅಭಿನಯ ನೀಡಿರುವ ಕಲಾವಿದರೂ ಈ ಚಿತ್ರಕ್ಕೊಸ್ಕರವೇ ಹುಟ್ಟಿದ್ದಾರೆನೋ ಅನ್ನುವಷ್ಟು ಅದ್ಭುತವಾಗಿ ನಟಿಸಿದ್ದಾರೆ. 

ರಾಜಾನಂದ್ 
ಮೇಲೆ ಹೇಳಿದ ಎರಡು ದೃಶ್ಯಗಳು, 
ಆರತಿಯ ಏಳಿಗೆಯನ್ನು ಕಂಡು ಖುಷಿಯಾಗುವ ದೃಶ್ಯ. 
ಆರತಿಯ ಅಂದವನ್ನು ಮೆಚ್ಚಿ ಬರುವ ಅಶೋಕ್ ಅವರಿಗೆ ರಂಗಭೂಮಿಯ ರಾತ್ರಿ ಹೊತ್ತಿನ ಜಗಮಗ ಬೆಳಕಿನ ಪ್ರಪಂಚ ಮತ್ತು ಬೆಳಗಿನ ಆರ್ಥಿಕ ಪರಿಸ್ಥಿತಿ ಬಿಂಬಿಸುವ ದೃಶ್ಯವನ್ನು ವಿವರಿಸುವ ರೀತಿ. 
ಮದುವೆ ಮಾಡಿಕೊಂಡು ಗಂಡನ ಜೊತೆಯಲ್ಲಿ ಹೋಗುವಾಗ, ಆಗಾಗ ಪತ್ರ ಬರಿ ಎಂದು ಆರತಿಗೆ ಹೇಳುವ ತುಣುಕು
ಆರತಿಯನ್ನು ಚಲನಚಿತ್ರದವರು ಅಭಿನಯಿಸಿ ಎಂದು ಕೇಳಿಕೊಂಡಾಗ, ಆರತಿಯನ್ನು ಒಪ್ಪಿಸುವ ದೃಶ್ಯ 
ದಶರಥನ ಪಾತ್ರದಲ್ಲಿ ಅಂತಿಮ ದೃಶ್ಯದಲ್ಲಿ ನೀಡಿರುವ ಅಭಿನಯ

ಅಂಬರೀಶ್
ಇಡಿ ಚಿತ್ರದಲ್ಲಿ ಆರತಿ ಪಾತ್ರಕ್ಕೆ ನೆರಳಂತೆ ರಕ್ಷಣೆ ನೀಡುವ ಪಾತ್ರ. ತಾನು ಚಿಕ್ಕ ವಯಸ್ಸಿನಲ್ಲಿ ಆಕೆಯನ್ನು ಇಷ್ಟಪಟ್ಟಿದ್ದರೂ, ರಂಗನಾಯಕಿ ಹೇಳುವ ನೀ ನನ್ನ ಅಣ್ಣ ಕಣೋ ಎಂದಾಗ ಒಂದು ಕಡೆ ನಿರಾಸೆ ಇನ್ನೊಂದು ಕಡೆ ಅಣ್ಣನಾದೆ ಎನ್ನುವ ಹೆಮ್ಮೆಯ ಅಭಿನಯ ಅದ್ಭುತ ಎನ್ನಿಸುತ್ತದೆ. ಈ ಕಲಾವಿದ ಎಲ್ಲೋ ಸಿದ್ಧ ಸೂತ್ರಗಳ ಚಿತ್ರಗಳಲ್ಲಿ ಕಳೆದು ಹೋದರೆನೋ ಅನ್ನಿಸುತ್ತದೆ. 

ಅಶೋಕ್
ಪ್ರೀತಿ, ಪ್ರೇಮಗಳು ನಿಜ ಜೀವನದ ಕಷ್ಟ ನಷ್ಟಗಳಲ್ಲಿ ಹೇಗೆ ಕರಗಿ ಹೋಗುತ್ತದೆ ಎನ್ನುವುದನ್ನು ಮುಖಭಾವ ಹಾಗೂ ಮಾತುಗಳ ಭರದಲ್ಲಿ ತೋರಿದ್ದಾರೆ
ನಟಿಮಣಿಯನ್ನು ಸತಿಮಣಿಯನ್ನಾಗಿ ಮಾಡಿ ಮೆರೆಸಲು ಹೊರಟ ನನ್ನ ಬುದ್ಧಿಗೆ ಚಪ್ಪಲಿಲಿ ಹೊಡೆದುಕೊಳ್ಳಬೇಕು ಎನ್ನುವ ದೃಶ್ಯ ಸೂಪರ್ 
ಕಡೆಯಲ್ಲಿ ಆರತಿಗೆ "ಈ ಮಗನಿಗೆ ಜನ್ಮ ಕೊಟ್ಟವಳು ಒಬ್ಬ ದೇವತೆ ಅನ್ನೋ ವಿಷಯವನ್ನು ಮುಚ್ಚಿಟ್ಟುಬಿಟ್ಟಿದ್ದೇನೆ" ಎನ್ನುವಾಗ ಅವರ ತಳಮಳದ ಅಭಿನಯ ಇಷ್ಟವಾಗುತ್ತದೆ. 
ಒರಟು, ಒಂದು ರೀತಿಯ ಪ್ರೀತಿ ಪ್ರೇಮ ಅನುಕಂಪ ಇವುಗಳನ್ನೆಲ್ಲ ಒಂದು ಲಾಭಕ್ಕಾಗಿ ಬಳಸುವ ಮನೋಭಾವದ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. 

ರಾಮಕೃಷ್ಣ
ಕನ್ನಡ ಚಿತ್ರಜಗತ್ತಿಗೆ ಟಪೋರಿ, ಪ್ಲೇ ಬಾಯ್, ಚಲ್ಲುಚಲ್ಲಾಗಿ ಆಡುವ ಪಾತ್ರದ ರೂಪನ್ನು ತಂದು ಕೊಟ್ಟವರು ಇವರು. ಪುಟ್ಟಣ್ಣ ಅವರ ಅದ್ಭುತ ಮಾರ್ಗದರ್ಶನದಲ್ಲಿ ಆ ರೀತಿಯ ಪಾತ್ರಗಳನ್ನೂ ತೆರೆಯ ಮೇಲೆ ಜೀವಂತ ಮಾಡಿದವರು ಇವರು. ಬೆಲ್ ಬಾಟಮ್ ಪ್ಯಾಂಟ್, ಕಪ್ಪು ಕನ್ನಡಕ, ಕುರುಚಲು ಗಡ್ಡ, ದೊಡ್ಡದಾದ ಬೆಲ್ಟ್, ಯಾವಾಗಲೂ ಒಂದು ರೀತಿಯಲ್ಲಿ ತೂಗಾಡುತ್ತಾ, ಪ್ರಪಂಚವನ್ನು ಉಡಾಫೆಯಿಂದ ನೋಡುವ ಪಾತ್ರದಲ್ಲಿ ಅಪ್ಪಟ ಪರಕಾಯ ಪ್ರವೇಶ ಮಾಡಿದ್ದಾರೆ. 
ಮೊದಲು ನೀವು ಅಭಿನಯ ಮಾಡೋದು ಕಲೀರಿ, ನಿಮ್ಮ ಕಣ್ಣಲ್ಲಿ ಕಾಮ ಎಲ್ಲ್ರಿ ಇದೆ, ತನ್ನ ಮಗುವನ್ನು ನೋಡುವ ತಾಯಿ ಪ್ರೇಮ ಇದೆ.. ನಿಮಗೆ ಕಾಮದ ಕಣ್ಣಲ್ಲಿ ನೋಡೋಕೆ ಬರೋಲ್ಲ.. ನನಗೆ ನಿಮ್ಮನ್ನು ತಾಯಿಯ ರೂಪದಲ್ಲಿ ನೋಡೋಕೆ ಬರೋಲ್ಲ ಎಂದು ಅಳುತ್ತಾ ಹೋಗುವಾಗ ಶಭಾಶ್ ಎನ್ನಿಸುತ್ತದೆ. 
ಆರತಿ 
ಈ ಪಾತ್ರ ಮಾಡೋಕೆ ಹುಟ್ಟಿದ್ದಾರೆನೋ ಅನ್ನುವಷ್ಟು  ಅದ್ಭುತ ಅಭಿನಯ ನೀಡಿದ್ದಾರೆ. ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣು, ಮುಖಭಾವಗಳಲ್ಲೇ ದೃಶ್ಯವನ್ನು ಉತ್ತುಂಗಕ್ಕೆ ಕರೆದೊಯ್ದಿದ್ದಾರೆ. 
ಮದುವೆ ಆದನಂತರ ಪ್ರೀತಿ ಪ್ರೇಮಗಳು ಬದುಕಿನ ನಿಜ ರೂಪದ ಮುಂದೆ ನಿಲ್ಲೋಲ್ಲ ಎನ್ನುವಂತಹ ದೃಶ್ಯಗಳಲ್ಲಿ ಆರತಿ ಪ್ರಪಂಚದಲ್ಲಿ ಪ್ರೀತಿ, ಪ್ರೇಮ ಇದೆ ಎನ್ನುವ ವಾದ ಒಪ್ಪಿಕೊಂಡರೆ, ಅಶೋಕ್ ವಸ್ತುಗಳು, ಅಂತಸ್ತು, ಹಣ,ಇವುಗಳು ಮಾತ್ರ ಖುಷಿ ನೀಡುತ್ತವೆ ಎನ್ನುವ ವಾದವನ್ನು ಒಪ್ಪಿಕೊಂಡವರು, ಇವುಗಳ ನಡುವೆ ಸಮರವಾದಗೆಲ್ಲ ಆರತಿ ಸಂಭಾಷಣೆ, ಕಣ್ಣಲ್ಲಿ ಕೊಡುವ  ಅಭಿನಯ ಇಷ್ಟವಾಗುತ್ತದೆ. 
ಅಭಿನಯ, ರಂಗ ಭೂಮಿ, ಕಲೆ ಸಾಧನೆ ಇದನ್ನೆಲ್ಲಾ ಅಶೋಕ್ ಅವರಿಗೆ ವಿವರಿಸುವಾಗ ಅವರ ಕಣ್ಣಲ್ಲೇ ಮಾತಾಡುತ್ತಾರೆ. 
ಸಾರಂಗಧರ ನಾಟಕದ ತಾಲೀಮಿನಲ್ಲಿ ಸಾರಂಗಧರ ಪಾತ್ರವನ್ನು ರಾಮಕೃಷ್ಣ ಅವರಿಗೆ ಹೇಳಿಕೊಡುವಾಗ ಮಸ್ತ್ ಮಸ್ತ್ ಅಭಿನಯ. 
ತಾನು ನಂಬಿಕೊಂಡಿರುವ ಕಲೆ ತನ್ನನ್ನು ಬೆಳೆಸಿದೆ ಎನ್ನುವ ಅರಿವು ಇಡಿ ಚಿತ್ರದ ತುಂಬಾ ಹರಿದಾಡಿದೆ. 
ಭಾವುಕ ಸನ್ನಿವೇಶಗಳಲ್ಲಿ, ಮಮತೆಯ ನಟಿಯಾಗಿ, ಮಗನಿಗೆ ಪರಿತಪಿಸುವ ತಾಯಿಯಾಗಿ, ಹತಾಶೆಗೊಳ್ಳುವ ಹೆಂಡತಿಯಾಗಿ ಪ್ರತಿ ಸನ್ನಿವೇಶಗಳಲ್ಲೂ ಆರತಿ ಅದ್ಭುತ ಅಭಿನಯ ನೀಡಿದ್ದಾರೆ. 


ತಾ ನಂಬಿದ ಸಿದ್ಧ ಸೂತ್ರಗಳ ಮೇಲೆ ನಂಬಿಕೆ ಸದಾ ಇರಬೇಕು ಎನ್ನುವ ಮಾತು ಆರತಿಯವರ ಪಾತ್ರದ ಮೂಲಕ ತಿಳಿದು ಬಂದರೆ, ಮಾಡುವ ಕೆಲಸದಲ್ಲಿ ಶ್ರಧ್ಹೆ, ಅಭಿಮಾನ ಇರಬೇಕು ಎನ್ನುವ ಮಾತು ರಾಜಾನಂದ್, ಅಂಬರೀಶ್ ಅವರ ಪಾತ್ರಗಳ ಮೂಲಕ ಅರಿವಾಗುತ್ತದೆ. 
ವಸ್ತು ಸುಖದ ಹಿಂದೆ ಹೋಗುವವರು ಪ್ರಪಂಚದಲ್ಲಿ ಬದುಕಿರುತ್ತಾರೆ ಹೊರತು ಜೀವಿಸಲು ಆಗೋಲ್ಲ ಎನ್ನುವ ನೀತಿ ಅಶೋಕ್ ಪಾತ್ರಧಾರಿ ಹೇಳುತ್ತಾರೆ. 
ಚೆಲ್ಲು ಚೆಲ್ಲು ಅಥವಾ ಉಡಾಫೆ ಇದೆ ಜೀವನವಲ್ಲ, ಸತ್ಯದ ಅರಿವಾಗಬೇಕು, ತಾಳ್ಮೆ ಇರಬೇಕು, ಯೋಚಿಸಬೇಕು ಎನ್ನುವ ಮಾತನ್ನು ರಾಮಕೃಷ್ಣ ಪಾತ್ರ ತೋರುತ್ತದೆ.. 

ಈ ಚಿತ್ರ ಹಲವಾರು ಮುತ್ತು ರತ್ನಗಳನ್ನು ಸುಂದರವಾಗಿ ಪೋಣಿಸಿ ಕನ್ನಡಾಂಬೆಗೆ ತೊಡಿಸಿದ ಅಮೂಲ್ಯ ರತ್ನ ಹಾರ. ಪ್ರತಿಯೊಂದು ದೃಶ್ಯವೂ ಕಲಾತ್ಮಕತೆಯಿಂದ ಕೂಡಿದೆ, ಯಾವುದು ಅತಿ ಎನ್ನಿಸುವುದಿಲ್ಲ. ಕೆಲವು ನಾಟಕದ ತುಣುಕುಗಳನ್ನು ಚಿತ್ರದ ಪರಿಣಾಮ ಹೆಚ್ಚು ಮಾಡುವುದಕ್ಕೆ ಉಪಯೋಗಿಸಿರುವ ಪರಿ ಇಷ್ಟವಾಗುತ್ತದೆ. ಪುಟ್ಟಣ್ಣ ಒಬ್ಬ ಮಾಂತ್ರಿಕ ಕಥೆಯನ್ನು ಹೇಗೆ ಬೆಳ್ಳಿ ಪರದೆಯ ಮೇಲೆ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ತರಬೇಕು ಎನ್ನುವ ಅದ್ಭುತ ಕಲ್ಪನೆ ಯಾವಾಗೂ ಅವರ ಬಳಿ ಚಿತ್ರದ ತಯಾರಿಕ ಹಂತಗಳಲ್ಲೇ ಇರುತ್ತಿತ್ತು ಮತ್ತು ಅದನ್ನು ಹಾಗೆ ಸಾಕ್ಷಾತ್ಕರಿಸಲು ತಮ್ಮ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದರು ಎನ್ನುವುದಕ್ಕೆ ರಂಗನಾಯಕಿ ಚಿತ್ರ ಅತ್ಯುತ್ತಮ ಉದಾಹರಣೆ. 

ಪುಟ್ಟಣ್ಣ ಗುರುಗಳೇ... ನಿಮ್ಮ ಮುಂದಿನ ಚಿತ್ರವನ್ನು ನೋಡಿ ಬಂದು ಮತ್ತೊಮ್ಮೆ ನಿಮ್ಮ ಚರಣಕಮಲಗಳಿಗೆ ಅರ್ಪಿಸುವೆ. 

Sunday, June 28, 2015

ಸಂಕಟದಲ್ಲಿ ಸೆರೆಯಾದ ಧರ್ಮ... ಧರ್ಮಸೆರೆ (1979)

ಒಳ್ಳೆಯ ರಸ್ತೆ ಎಂದೂ ಒಳ್ಳೆಯ ವಾಹನ ಚಾಲಕನನ್ನು ನೀಡುವುದಿಲ್ಲ ಎನ್ನುತ್ತಾರೆ ಹಿರಿಯರು..


ಸದಾ ಸವಾಲನ್ನು ಬೆನ್ನಿಗೆ ಹಾಕಿಕೊಂಡು, ಭಿನ್ನ ವಿಭಿನ್ನವಾದ ಕಥೆಗಳನ್ನು ಆಯ್ದುಕೊಂಡು.. ಇಂಥಹ ಕಥೆಗಳು ಬೆಳ್ಳಿ ತೆರೆಯ ಮೇಲೆ ಬರಲು ಸಾಧ್ಯವೇ ಎನ್ನುವ ತರ್ಕವನ್ನೇ ಬುಡಮೇಲು ಮಾಡಿ, ಅನೇಕ ಅದ್ಭುತ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟವರು ನಮ್ಮ ಅಚ್ಚುಮೆಚ್ಚಿನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು.

ಮತ್ತು ಅವರು ತುಳಿದ ಹಾದಿ. ಒಂದು ಚಿತ್ರ ನಂತರ ಇನ್ನೊಂದಕ್ಕೆ ಯಾವುದೇ ರೀತಿಯಲ್ಲಿ ತರ್ಕ ಬದ್ಧ ಲಯವಿರುತ್ತಿರಲಿಲ್ಲ.. ಅದೇ ಬೇರೆ ಇದೆ ಬೇರೆ ಎನ್ನುವ ರೀತಿಯಲ್ಲಿ ಅವರ ಚಿತ್ರಗಳು ಮೂಡಿ ಬರುತ್ತಿದ್ದವು. ಇಂದಿನ ಬೆಟ್ಟಿಂಗ್ ಯುಗದಲ್ಲಿ ಅವರ ಚಿತ್ರಗಳು ಬಂದಿದ್ದರೇ ಅವರ ಚಿತ್ರ ಕತೆಗಳ ಮೇಲೆ ಜೂಜು ಕಟ್ಟಿ ಸೋಲುತ್ತಿದ್ದವರು ಲೆಕ್ಕಕ್ಕೆ ಇರುತ್ತಿರಲಿಲ್ಲ.

ಹಿಂದಿನ ಚಿತ್ರ ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ದೈಹಿಕ ದಬ್ಬಾಳಿಕೆ, ಬಹಿಷ್ಕಾರ, ಉಸಿರು ಕಟ್ಟಿಸಿ ಗುಲಾಮಿ ಪದ್ದತಿಯನ್ನು ರೂಡಯಲ್ಲಿಟ್ಟುಕೊಂಡ ಹಳ್ಳಿ ಕಥೆಯನ್ನು ಹೇಳಿದರೆ, ಈ ಚಿತ್ರದಲ್ಲಿ ಮಾನಸಿಕ ಹಿಂಸೆ ಬಗ್ಗೆಯೇ ಒಂದು ಚಿತ್ರ ನೀಡುತ್ತಾರೆ.

ಶ್ರೀ ಜಡಭರತ ಅವರ ಅದೇ ಹೆಸರಿನ ಕಥೆಯನ್ನು ಕೈಗೆ ತೆಗೆದುಕೊಳ್ಳುವ ಇವರಿಗೆ ಜೊತೆಯಾಗಿ ನಿಂತದ್ದು ನಟಿ ಆರತಿ ನಿರ್ಮಾಪಕಿಯಾಗಿ. ಆ ಕಾಲದಲ್ಲಿ ಆರತಿ ಉತ್ತುಂಗ ತಲುಪಿದ್ದ ಕಾಲ, ಯಾವುದೇ ಕಾರಣಕ್ಕೂ ಈ ಚಿತ್ರವನ್ನು ಆರಿಸಿಕೊಳ್ಳಲು ಕಾರಣ ಬೇಕಿರಲಿಲ್ಲ. ಅವರು ಹೇಳಿದ ರೀತಿ ಕಥೆ ತಯಾರಾಗಬಹುದಿದ್ದ ಕಾಲ ಅದು.

ಕಿವುಡಿ ಮೂಕಿಯಾಗಿ ಮನೋಜ್ಞ ಅಭಿನಯ ನೀಡಿರುವ ಆರತಿ ಈ ಚಿತ್ರದಲ್ಲಿ ಒಂದು ವಿಭಿನ್ನ ನಾಯಕಿಯಾಗಿ ನೆಲೆ ನಿಲ್ಲುತ್ತಾರೆ. ನಿರ್ದೇಶಕರ ನಟಿ ಎಂಬ ಹೆಸರಿಗೆ ತಕ್ಕಂತೆ ಅಭಿನಯ ನೀಡಿದ್ದಾರೆ. ಮಾತಿಲ್ಲ, ಆದರೆ ಅವರ ಅಭಿನಯ ಮಾತಾಡುತ್ತದೆ ಇಡಿ ಚಿತ್ರದಲ್ಲಿ.  ಕಥಾಸಂಗಮದ ಮುನಿತಾಯಿ ಮತ್ತೆ ತೆರೆಯ ಮೇಲೆ ಅಪ್ಪಲಿಸಿದ್ದಾರೆ, ಆದರೆ ಇಲ್ಲಿ ಬರಿ ಕುರುಡಿಯಾಗಿ ಅಲ್ಲ, ಕಿವುಡಿ ಮತ್ತು ಮೂಕಿಯಾಗಿ.

ಈ ಚಿತ್ರ ಆರಂಭಿಕ ಹಂತದಲ್ಲಿ ಅರೆ ಆರತಿ ಏಕೆ ಈ ಚಿತ್ರಕಥೆಗೆ ಒಪ್ಪಿಕೊಂಡರು ಎಂಬ ಅನುಮಾನ ಕಾಡಿತ್ತು.. ಆದರೆ ಮೊದಲ ಅರ್ಧ ಅಥವಾ ಮುಕ್ಕಾಲು ಘಂಟೆ ಆದ ಮೇಲೆ ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತಾರೆ.

ತನ್ನ ತಂಗಿ ಮತ್ತು ಭಾವ ಭೂಮದೂಟಕ್ಕೆ ಕೂತಾಗ.. ತಾನು ಆ ಜಾಗದಲ್ಲಿದ್ದೇನೆ ಎನ್ನುವಂತೆ ಕಲ್ಪಿಸಿಕೊಂಡು ಅಭಿನಯ ಕಣ್ಣಿಗೆ ಕಟ್ಟುತ್ತದೆ. "ಮೂಕ ಹಕ್ಕಿಯು ಹಾಡುತಿದೆ" ಹಾಡು ಹಂತ ಹಂತವಾಗಿ ಮೂಡಿ ಬರುತ್ತದೆ, ಪ್ರತಿಹಂತದಲ್ಲೂ ಅವರ ಅಭಿನಯ ಅಬ್ಬಬ್ಬ ಎನ್ನಿಸುತ್ತದೆ.

ಆರತಿ ತನ್ನ ಮನೆಯಲ್ಲಿ ಇರಲಿ ಎಂದು ಶ್ರೀನಾಥ್ ಹೇಳಿದಾಗ, ಆ ಮೂಕವೇದನೆಯಲ್ಲೂ ಅಭಿನಯ ತೋರುವ ಆರತಿ ನಮ್ಮ ಹೃದಯದಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ.

ಅವರ ತಂಗಿ ಭಾವನ ಫೋಟೋ ತರಹವೇ ತನ್ನದು ಫೋಟೋ ಇರಬೇಕು ಎನ್ನುವಾಗ ಅವರು ತೋರುವ ಕಣ್ಣುಗಳ ಅಭಿನಯ ಸೂಪರ್.

ಮನಸ್ತಾಪ ಬಂದು ತನ್ನ ತಂಗಿ ಇವರನ್ನು ತನ್ನ ಕೋಣೆಯಿಂದ ಹೊರಗೆ ಹಾಕಿದಾಗ, ಕಣ್ಣಲ್ಲೇ ಮಡುವು ಗಟ್ಟಿದ ದುಃಖವನ್ನು ತೋರುತ್ತಾ.. ಕ್ಯಾಮೆರ ನಿಧಾನವಾಗಿ ಕಸದ ಕಡೆಗೆ ತೋರುತ್ತದೆ. ಪುಟ್ಟಣ್ಣ ಅವರ ಸೂಕ್ಷ್ಮ ನಿರ್ದೇಶಕನ ಮನಸ್ಸು ತೋರುವುದು ಆ ಪಾತ್ರದ ಬೆಲೆ ಕಸಕ್ಕಿಂತ ಕಡೆ ಎಂದು. ಸೂಪರ್ ಕಲ್ಪನೆ ಮತ್ತು ದೃಶ್ಯ ಸಂಯೋಜನೆ.

ತನ್ನ ತಂಗಿ ಮನೆಯಲ್ಲಿ ಇಲ್ಲದಾಗ, ಬಣ್ಣ ಬಣ್ಣದ ಕನಸ್ಸು ಕಾಣುತ್ತಾ, ತೋರಣವನ್ನು ಮುಟ್ಟಿ ಮುಟ್ಟಿ ನೋಡುವ ಆರತಿ ಅಭಿನಯ, ನಂತರ, ಶ್ರೀನಾಥ್ ಆರತಿ ಪಾತ್ರಕ್ಕೆ ಮನಸೋತು ಆಕೆಯನ್ನು ಒಪ್ಪಿಕೊಳ್ಳುವ ದೃಶ್ಯ, ನೆರಳು ಬೆಳಕಿನಲ್ಲಿ ಬಣ್ಣ ಬಣ್ಣದ ದೀಪದಲ್ಲಿ ತೋರುತ್ತಾರೆ. ಮತ್ತೊಮ್ಮೆ ಅದ್ಭುತ ದೃಶ್ಯ ಸಂಯೋಜನೆ ಪುಟ್ಟಣ್ಣ ಅವರದ್ದು.

ಶ್ರೀನಾಥ್.. ಗುರುಗಳೇ ನೀವು ಹೇಳಿ ನಾ ಅಭಿನಯಿಸುತ್ತೇನೆ ಎನ್ನುವ ದೃಷ್ಟಿಯಲ್ಲಿ ಇಡಿ ಚಿತ್ರದಲ್ಲಿ ನಿಲ್ಲುತ್ತಾರೆ. ಪ್ರತಿ ಮಾತನ್ನು ಅಳೆದು ತೂಗಿ ಮಾತಾಡುವ ಸಂಯಮದ ಪಾತ್ರ. ಒಮ್ಮೆ ಮಾತ್ರ ತನ್ನ ಮಡದಿಯ ಮಾತನ್ನು ಕೇಳಿ ಆರತಿಗೆ ಹೊಡೆಯುವ ದೃಶ್ಯದಲ್ಲಿ ಮಾತ್ರ ಸಂಯಮ ಕಳೆದುಕೊಳ್ಳುವ ಅಭಿನಯ ತೋರುತ್ತಾರೆ. ಆದರೆ ಇಡಿ ಚಿತ್ರದಲ್ಲಿ ಒಂದು ತೂಕಬದ್ಧ ಪಾತ್ರದಲ್ಲಿನ ಅಭಿನಯ ಶ್ರೀನಾಥ್ ಅವರಿಂದ ಮೂಡಿ ಬಂದಿದೆ.

"ಕಂದಾ ಓ ನನ್ನ ಕಂದಾ" ಹಾಡಿನಲ್ಲಿ ಶ್ರೀನಾಥ್ ಅವರ ಅಭಿನಯ ವಿಶೇಷ ಎನ್ನಿಸುತ್ತದೆ.. ಹಾಗೆಯೇ ಎಸ್ ಪಿ ಬಾಲಸುಬ್ರಮಣ್ಯಂ ಅವರು ಎದೆ ತುಂಬಿ ಹಾಡಿದ್ದಾರೆ. ಚಿತ್ರದ ಅಂತ್ಯದಲ್ಲಿ ಇದೆ ಹಾಡಿನ ತುಣುಕನ್ನು ಪುಟ್ಟಣ್ಣ ಅವರ ಮೆಚ್ಚಿನ ಗಾಯಕ ಪಿ ಬಿ ಶ್ರೀನಿವಾಸ್ ಹಾಡಿದ್ದಾರೆ.

ಕಳೆದ ದಶಕದ ಹಲಾವರು ಚಿತ್ರಗಳಲ್ಲಿ ಖಾಯಂ ಅಮ್ಮನ ಪಾತ್ರ ಮಾಡಿರುವ ಸತ್ಯಪ್ರಿಯ ಈ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ಶೋಭಿಸುತ್ತಾರೆ. ಪ್ರೀತಿ, ವಿಶ್ವಾಸ, ದ್ವೇಷ, ಅಸೂಯೆ ಎಲ್ಲವನ್ನು ಹೊರಹೊಮ್ಮಿಸುವ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ.

ಉಪಾಸನೆಯ ನಂತರ ಮತ್ತೊಮ್ಮೆ ಆರತಿ ಮತ್ತು ಸೀತಾರಾಂ ಅವರ ಜೋಡಿ ಅಭಿನಯ ಮನಸ್ಸು ತಾಕುತ್ತದೆ. ಅಪ್ಪ ಮಗಳಾಗಿ ಒಬ್ಬರನ್ನು ಇನ್ನೊಬ್ಬರು ಅನುಸರಿಸಿ ಅಭಿನಯ ನೀಡಿರುವುದು ವಿಶೇಷ. ಸೀತಾರಾಂ ತನ್ನ ಮಗಳು ಗರ್ಭಿಣಿ ಎಂದು ತಿಳಿದ ಮೇಲೆ, ತಾಳ್ಮೆ ಕೆಟ್ಟು ಕೂಗಾಡುವ ಅಭಿನಯ ಮನಸ್ಸನ್ನು ಕಲಕುತ್ತದೆ. ಅಲ್ಲಿವರೆಗೂ ತಾಳ್ಮೆ, ಅನುಭೂತಿ ಇಟ್ಟುಕೊಂಡು ತನ್ನ ಮಗಳನ್ನು ನೆರಳಾಗಿ ಕಾಯುವ ಅವರು ಅಚಾನಕ್ ಆವೇಶಕ್ಕೆ ಮನಸೋತು, ತನ್ನ ಮಗಳ ಮೇಲೆ ನಂಬಿಕೆ ಕಳೆದುಕೊಂಡು ರೌದ್ರಾವತಾರ ತಾಳುವ ದೃಶ್ಯ ಬೊಂಬಾಟ್.

ಮುಸುರಿ ಕೃಷ್ಣಮೂರ್ತಿ.. ಪ್ರಚಂಡ ಅಭಿನಯ ಹೊತ್ತ ಮಹನೀಯ ಇವರು. ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಇಡಿ ಚಿತ್ರವನ್ನು ಆವರಿಸಿಕೊಳ್ಳುವ ಇವರು, ಇಲ್ಲಿ ಮತ್ತೊಮ್ಮೆ ತಮ್ಮ ಅಭಿನಯದ ಛಾಪನ್ನು ಒತ್ತಿದ್ದಾರೆ. ಕ್ರೌರ್ಯ, ಉಪಟಳ ಕೊಡುವ ಸೋದರಮಾವನಾಗಿ ಆರತಿಗೆ ನಾನಾ ವಿಧದಲ್ಲಿ ಕಾಟ ಕೊಡುವ ಅಭಿನಯ ಆಹಾ ಎನ್ನಿಸುತ್ತದೆ. ಅದರಲ್ಲೂ ಆರತಿ ಮಾನಸಿಕ ಹಿಂಸೆ ಕೊಡುವ ದೃಶ್ಯದಲ್ಲಿ ಅವರ ಅಭಿನಯ, ಖಳ ಎಂದರೆ ಮಾಮೂಲಿ ವೇಷ ಭೂಷಣದಲ್ಲೂ ಮಿಂಚಬಹುದು ಎಂದು ತೋರಿದ್ದಾರೆ.

ಅವರ ಚುರುಕು ಸಂಭಾಷಣೆ
"ಯಾವ ಬ್ರಾಂಡ್ ಸಿಮೆಂಟ್ ಆದರೇನೂ.. ನೀರು ಬಿದ್ದ ಕೂಡಲೇ ಕಚ್ಚಿಕೊಳ್ಳುತ್ತೆ"

"ಗಂಡು ಹೆಣ್ಣು ಎರಡು ಇಟ್ಟಿಗೆ ಇದ್ದ ಹಾಗೆ, ಎರಡು ಇಟ್ಟಿಗೆ ಬಲವಾಗಿ ಕಚ್ಚಿಕೊಂಡು ಹಾರೆ ಹಾಕಿದರೂ ಬಿಡಬಾರದು ಅಷ್ಟು ಬಲವಾಗಿ ಇರಬೇಕಾದರೆ, ಪರಸ್ಪರ ಒಪ್ಪಿಗೆ ಎನ್ನುವ ಸಿಮೆಂಟ್ ಇರಬೇಕು"

"ದೇಹಕ್ಕೆ ಹಿಂಸೆ ಕೊಟ್ಟರೆ ಭಾವನಿಗೆ ಗೊತ್ತಾಗುತ್ತದೆ, ಮಾನಸಿಕವಾಗಿ ಹಿಂಸೆ ಕೊಟ್ಟರೆ, ಕಬ್ಬಿಣದ ಗುಂಡು ಕುಲುಮೆಯಲ್ಲಿ ಕರಗಿ ನೀರಾಗುವ ಹಾಗೆ ಅವಳೊಳಗೆ ಇರುವ ಪಿಂಡ ಹಾಗೆ ಕರಗಿ ನೀರಾಗಿ ಹೋಗುತ್ತದೆ"

ಬಾಯಲ್ಲಿ ಇರೋದು ನಾಲಿಗೆನೋ ಎಕ್ಕಡಾನೋ ಎನ್ನುವ ಮಾತಿಗೆ "ಎಕ್ಕಡಾನೆ ಅಂದುಕೋ" ಎಂದು ಹೇಳಿ ನಾಲಿಗೆಯನ್ನು ಹೊರಕ್ಕೆ ಹಾಕಿ "ಎಕ್ಕಡ ಆಗೊಯ್ತೋ" ಎನ್ನುತ್ತಾರೆ.. ತದನಂತರ ಸೀತಾರಾಂ ಮುಸುರಿಯನ್ನು ಹೊಡೆದು ದೂಕುತ್ತಾರೆ, ಜೋಕಾಲಿಯನ್ನು ದಾಟಿ ನೆಗೆದು ಬೀಳುತ್ತಾರೆ.. ಬಹಳ ನಿಜವಾಗಿ ಮೂಡಿ ಬಂದಿದೆ ಈ ದೃಶ್ಯ.

ಪುಟ್ಟಣ್ಣ ಅವರು ಈ ಚಿತ್ರಕಥೆಯನ್ನು ತುಂಬಾ ಚೆನ್ನಾಗಿ ಹೆಣೆದಿದ್ದಾರೆ. ಬೋರ್ ಅಥವಾ ಅಳುಮುಂಜಿ ಚಿತ್ರವಾಗಬಹುದಿದ್ದ ಚಿತ್ರವನ್ನು ಸಹ್ಯವಾಗಿ ಚಿತ್ರಿಸಿದ್ದಾರೆ.

ಧರ್ಮ ಸೆರೆ ಎಂದಾಗ ನಾವೇ ಸೃಷ್ಟಿಸಿಕೊಂಡಿರುವ ಈ ಜಗತ್ತಿನ ನಿಯಮದಲ್ಲಿ ನಾವೇ ಬಂಧಿಯಾಗಿ ನರಳುವುದನ್ನು ಎದಿ ಚಿತ್ರದ ಹೆಸರನ್ನು ಕಿಟಕಿಯ ಸರಳುಗಳನ್ನು ಸೆರೆಮನೆಯ ಸರಳುಗಳ ಹಾಗೆ ನೆರಳಲ್ಲಿ ತೋರಿಸಿರುವುದು ಅವರ ಜಾಣ್ಮೆಗೆ ಸಾಕ್ಷಿ
ಮದುವೆ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿರುವುದು.
ಧರ್ಮ ಜಿಜ್ಞಾಸೆಯನ್ನು ಕೆಲವೇ ಮಾತುಗಳಲ್ಲಿ ಮೂಡಿಸಿರುವುದು
ಆರಂಭಿಕ ದೃಶ್ಯದಲ್ಲಿಯೇ ನಾಯಕಿ ಮೂಗಿ ಮತ್ತು ಆಕೆಯ ಮೂಕ ಪ್ರಾಣಿಗಳ ಮೇಲಿನ ಮಮಕಾರ
ಈ ಚಿತ್ರದಲ್ಲಿ ಬರಿ ನಟರಿಂದ ಅಷ್ಟೇ ಅಲ್ಲದೆ ಪ್ರಾಣಿಗಳಿಂದ ಕೂಡ ಅಭಿನಯ ತೆಗೆದಿರುವುದು.
            ಬಳೆಗಾರನನ್ನು ಮತ್ತೆ ಕರೆದು ತರುವ ನಾಯಿ ಕೋತಿ
            ಮುಸುರಿ ಆರತಿಯ ಮೇಲೆ ಕಣ್ಣು ಹಾಕಿದಾಗ ಪರಕೆ ಸೇವೆ ಮಾಡುವ ಕೋತಿ
            ಆರತಿಯನ್ನು ಬಿಡದೆ ಹಿಂಬಾಲಿಸುವ ಕೋತಿ ಮತ್ತು ನಾಯಿ
ಕೈ ಹಿಡಿದ ಹೆಂಡತಿ ಕೋಪಗೊಂಡು ನಾಯಕನ ಜೊತೆಗಿನ ಫೋಟೋವನ್ನು ಒಡೆದು ಹಾಕಿದಾಗ.. ಆ ಫೋಟೋದಲ್ಲಿರುವ ವ್ಯಕ್ತಿಗಳು ಮಾತಾಡಿದಾಗ ಕ್ಯಾಮೆರ ಕೊಡ ಆ ಚಿತ್ರದಲ್ಲಿನ ವ್ಯಕ್ತಿಗಳ ಮೇಲೆ ಕೆಂದ್ರಿಕರಿಸಿರುವುದು.
ಗಂಡ ಹೆಂಡತಿ ಸಂಭಾಷಣೆಯನ್ನು ಒಡೆದ ಗಾಜಿನ ಫಿಲ್ಟರ್ ನಲ್ಲಿ ಚಿತ್ರಿಸಿರುವುದು.. ಗಂಡ ಹೆಂಡಿರ ಮಧ್ಯೆ ಸಂಬಂಧ ಒಡೆದಿದೆ ಎಂದು ತೋರಿಸುವ ತಾರ್ಕಿಕ ದೃಶ್ಯ
ಕ್ಷಮೆಯಾಚಿಸುವ ಗಂಡ ಮೇಲೆ ಕೋಪಗೊಂಡ ಹೆಂಡತಿ ತಾನು ಗಂಡನೊಡನೆ ಮಾತಾಡೋಲ್ಲ ಎಂದು ಬಾಗಿಲು ಹಾಕಿಕೊಂಡಾಗ, ಬಾಗಿಲ ಮೇಲಿನ ಸಿಮೆಂಟ್ ಗೋಡೆ ಬಿರುಕು ಬಿಟ್ಟುಕೊಳ್ಳುವುದು ಸಾಂಕೇತಿಕವಾಗಿ ಮೂಡಿಬಂದಿದೆ.

"ಈ ಸಂಭಾಷಣೆ" ಹಾಡಿನಲ್ಲಿ ಬಣ್ಣ ಬಣ್ಣದ ಕನಸ್ಸನ್ನು ಕಾಣುವ ನಾಯಕ ನಾಯಕಿಯ ಮನಸ್ಸನ್ನು ಚಿತ್ರಿಕರಿಸುತ್ತಲೇ ಫಿಲ್ಟರ್ ಮೂಲಕ ಬಣ್ಣ ಬಣ್ಣವನ್ನು ತೋರುವ ಜಾಣ್ಮೆ ಇಲ್ಲಿ ಪುಟ್ಟಣ್ಣ ಅವರದ್ದು.

ಹಿರಿಮಗಳಿಗೆ ಮದುವೆ ಮಾಡದೆ ಕಿರಿಮಗಳಿಗೆ ಮದುವೆ ಮಾಡಿದರೆ ಧರ್ಮಸೆರೆಗೆ ಸಿಕ್ಕಿದಂತಾಗುತ್ತದೆ.. ಎನ್ನುವ ಒಂದು ಚಿಕ್ಕ ಸೆಲೆಯನ್ನು ಸುಂದರ ಕಥೆಯನ್ನಾಗಿ ಮಾಡಿರುವುದು ಜಡಭರತರ ಪ್ರತಿಭೆಯಾದರೆ, ಅದೇ ಕಥೆಯನ್ನು ಚಿತ್ರಕ್ಕೆ ಒಗ್ಗುವಂತೆ ಮೂಡಿಸಿರುವುದು ಪುಟ್ಟಣ್ಣ ಅವರ ಜಾಣ್ಮೆ. ಮೊದಲ ಮಗಳು ಅಂಗವಿಹೇನೆ ಆಗಿದ್ದಾಗ ಎರಡನೇ ಮಗಳಿಗೆ ಮದುವೆ ಮಾಡಬಹುದು ಎಂದು ಗರುಡ ಪುರಾಣದಲ್ಲಿ ಹೇಳಿದ್ದಾರೆ ಎಂದಾಗ .. ಪುರಾಣ ಆ ಕಾಲದಲ್ಲಿ ಇತ್ತು, ನಡೆಯುತ್ತಿತ್ತು ಈಗ ನಡೆಯುತ್ತದೆಯೇ, ಸಮಾಜದಲ್ಲಿ ಹೀಗೆ ನಡೆಯಬಾರದು, ಈ ಮದುವೆ ನಡೆಯಬಾರದು ಎಂದಾಗ.. ಅದಕ್ಕೆ ಏನಾದರೂ ಪರಿಹಾರ ಬೇಕು ಎಂಬಲ್ಲಿಂದ ಈ ಚಿತ್ರ ಶುರುವಾಗುತ್ತದೆ. ಆರತಿ ಜೊತೆಯಲ್ಲಿ ಸಾಂಕೇತಿಕವಾಗಿ ಮದುವೆ ಅಷ್ಟೇ ಎಂದು ಶ್ರೀನಾಥ್ ಹೇಳುವ ದೃಶ್ಯದಲ್ಲಿ ಎಲ್ಲರೂ ಸೇರಿ ಹೇಳುವಾಗ ವಾಲಗದ ತಂಡವನ್ನು ತೋರುತ್ತಾರೆ.. ಶ್ರೀನಾಥ್ ಕಿವಿಗೆ ಇವರು ಹೇಳಿದ ಮಾತುಗಳು ಬಿದ್ದಿವೆ ಎನ್ನುವಾಗ ಬರಿ ವಾಲಗವನ್ನು ತೋರುತ್ತಾರೆ. ಅಂದರೆ ಹಲವಾರು ಜನರು ಹೇಳಿದರೂ ಕಿವಿಗೆ ಹೋಗಬೇಕಾದು ಒಂದೇ ಮಾತುಗಳು ಎನ್ನುವ ಸಾಂಕೇತಿಕ ದೃಶ್ಯ.

ಚಿತ್ರಕಥೆಯನ್ನು ಅತ್ಯಂತ ನಾಜೂಕಾಗಿ ನಿರೂಪಣೆ ಮಾಡಿರುವ ಅವರ ಯಶಸ್ಸಿಗೆ ಸಹಭಾಗಿಯಾಗಿ ಸಂಭಾಷಣೆ ಬರೆದವರು ಯೋಗಣ್ಣ ಮತ್ತು ಸೋರೆಟ್ ಅಶ್ವಥ್. ಚಿತ್ರಕ್ಕೆ ತಕ್ಕ ಸಾಹಿತಿ, ಸಾಹಿತ್ಯಕ್ಕೆ ತಕ್ಕ ಸಂಗೀತ ಎನ್ನುವ ಮನೋಭಾವ ಇದ್ದ ಪುಟ್ಟಣ್ಣ ಈ ಚಿತ್ರದ ಎಲ್ಲಾ ಹಾಡುಗಳನ್ನು ತಮ್ಮ ಆಪ್ತ ವಿಜಯನಾರಸಿಂಹ ಅವರಿಂದ ಬರೆಸಿದ್ದಾರೆ. ಇಡಿ ಚಿತ್ರಕ್ಕೆ ಬೆನ್ನೆಲುಬು ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ಇದರಲ್ಲಿ ಯಶಸ್ವಿಯಾದವರು ಉಪೇಂದ್ರ ಕುಮಾರ್.

ಇನ್ನು ಈ ಚಿತ್ರದ ಇನ್ನೊಂದು ಉತ್ತಮ ಅಂಶ ಎಂದರೆ.. ಪುಟ್ಟಣ್ಣ ಅವರ ಮನಸ್ಸೊಳಗೆ ಇರುವಂತೆಯೇ ನೆರಳು ಬೆಳಕಿನ ಆಟವನ್ನು ದೃಶ್ಯಕಾವ್ಯವಾಗಿ ಚಿತ್ರಿಕರಿಸಿರುವುದು ಛಾಯಾಗ್ರಾಹಕ ಎಸ್ ಮಾರುತಿರಾವ್.

ಒಂದು ಸಂಕೀರ್ಣ ವಿಷಯವನ್ನು ಅಷ್ಟೇ ಸುಲಭ ಎನ್ನುವ ರೀತಿಯಲ್ಲಿ ಸಂಭಾಷಣೆ, ದೃಶ್ಯ ಜೋಡಣೆ ಮತ್ತು ಹಾಡುಗಳು ಮತ್ತು ಹಿನ್ನೆಲೆ ಸಂಗೀತದಿಂದ ಜೊತೆಯಲ್ಲಿ  ಎಲ್ಲಾ ಕಲಾವಿದರ ಹದವರಿತ ಅಭಿನಯವನ್ನು ತೆಗೆದು ಒಂದು ಸಹ್ಯ ಚಿತ್ರವನ್ನಾಗಿ ಮಾಡಿದ್ದಾರೆ ನಮ್ಮ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್.

ಮತ್ತೆ ಮುಂದೆ ಅವರ ಚಿತ್ರರತ್ನ ರಂಗನಾಯಕಿಯನ್ನು ಬರ ಮಾಡಿಕೊಳ್ಳೋಣ! 

Friday, June 19, 2015

ಕನೆಕ್ಷನ್ ಪಾಂಡವರು... ಪಡುವಾರಹಳ್ಳಿ ಪಾಂಡವರು (1978)

ಅಡಿಗೆ ಮಾಡುವಾಗ ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಸಿಗದೇ ಇದ್ದಾಗ ಇರುವುದನ್ನೇ ಹದವಾಗಿ ಉಪಯೋಗಿಸಿ ಒಂದು ಸವಿರುಚಿ ಮಾಡಬಹುದು. ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಇದ್ದಾಗ ಅದನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿ ಸವಿ ಭೋಜನ ಮಾಡಬಹುದು..

ಇಂಥಹ ಒಂದು ಅದ್ಭುತ ಸಾಹಸಕ್ಕೆ ಕೈ ಹಾಕಿದ್ದು ಪುಟ್ಟಣ್ಣನವರು ಈ ಚಿತ್ರದಲ್ಲಿ... ಅಲ್ಲಿಯ ತನಕ ಕಥೆ, ಸಾಹಿತ್ಯ, ಸಂಭಾಷಣೆ, ಹೆಣ್ಣಿನ ಮನಸ್ಸಿನ ತುಮುಲಗಳು, ಅದ್ಭುತ ತಾಂತ್ರಿಕತೆ ಇದನ್ನೆಲ್ಲಾ ಇಟ್ಟುಕೊಂಡು ಪರಮಾದ್ಭುತ ಚಿತ್ರಗಳನ್ನು ಕೊಟ್ಟಿದ್ದ ಈ ಮಹಾನ್ ನಿರ್ದೇಶಕ.. ಅಚಾನಕ್ ಬೇರೊಂದು ಮಗ್ಗುಲಿಗೆ ಹೊರಳಿ.. ವ್ಯವಸ್ಥೆಯ ವಿರುದ್ಧ ಹೋರಾಡುವಂಥಹ ಚಿತ್ರ ಮಾಡಬಲ್ಲೆ ಎಂದು ತೋರಿಸಿದ ಚಿತ್ರ ಇದು. 

ಇದು ಅವರದೇ ನಿರ್ಮಾಣ ಲಾಂಛನದಲ್ಲಿ ಮೂಡಿ ಬಂದ ಕಲಾರತ್ನ. ಇಂದಿಗೂ ಈ ಚಿತ್ರ ಜನಮಾನಸದಲ್ಲಿ ಉಳಿದಿರುವುದು ಅದ್ಭುತ ಅಭಿನಯ, ಸಂಭಾಷಣೆ ಹಾಗೂ ಹಾಡುಗಳು. 

ತಮ್ಮ ಇಷ್ಟವಾದ ಪ್ರದೇಶ ಚಿಕಮಗಳೂರಿನ ಸುತ್ತಾ ಮುತ್ತಾ ಎನ್ ಮಾರುತಿ ರಾವ್ ಅವರ ಕ್ಯಾಮೆರಾದಲ್ಲಿ ಚಿತ್ರೀಕರಿಸಿದರು. ಸೊಂಪಾದ ಇಂಪಾದ ಸಂಗೀತ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಅವರದ್ದಾಗಿತ್ತು. ಪ್ರತಿ ಹಾಡಿಗೆ ಭಿನ್ನ ಭಿನ್ನವಾಗಿ ಸಂಗೀತ ನೀಡಿರುವ ಅವರು, ಹಿನ್ನೆಲೆ ಸಂಗೀತದಲ್ಲಿ ಪವಾಡವನ್ನೇ ಮಾಡಿದ್ದಾರೆ. 

ಚಿತ್ರಕ್ಕೆ ತಕ್ಕ ಹಾಗೆ ಸಾಹಿತಿಗಳನ್ನು ಕರೆತರುತ್ತಿದ್ದ ಪುಟ್ಟಣ್ಣ ಅವರು ಈ ಚಿತ್ರಕ್ಕೆ ಮೂವರು ಸಾಹಿತಿಗಳಿಂದ ಹಾಡುಗಳನ್ನು ಬರೆಸಿದರು.  

ಕಯ್ಯಾರ ಕಿಞಞಣ್ಣ ರೈ- 
ಮಹಾಕವಿ, ಸ್ವತಂತ್ರ ಹೋರಾಟಗಾರ, ಇಂತಹವರ ಕೈಯಿಂದ ಬಂದ ಸಾಹಿತ್ಯ ಬಳಸಿಕೊಂಡಿರುವ ಪುಟ್ಟಣ್ಣ ಸಾಧನೆಯನ್ನೇ ಮಾಡಿದ್ದಾರೆ. 
"ಸಾವಿರ ಸಾವಿರ ಯುಗಯುಗ ಕಳೆದರು ಸಾಗಿದೆ ಸಂಗ್ರಾಮ" ಎನ್ನುವ ಬಂಡಾಯ ಮಿಶ್ರಿತ ಹಾಡನ್ನು ಅದ್ಭುತವಾಗಿ ಹಾಡಿದವರು ಎಸ್ ಪಿ ಬಾಲಸುಬ್ರಮಣ್ಯಂ ಅವರು. ಜಿ ವಿ ಕೃಷ್ಣ ಅವರು ಸ್ವಾಮಿಗಳ ಪಾತ್ರದ ಅಭಿನಯ ನೆನಪಲ್ಲಿ ಉಳಿಯುತ್ತದೆ. 

"ಹಾಡೊಮ್ಮೆ ಹಾಡಬೇಕು" ಸಂಘಟಿತ ಮನೋಭಾವ ಬೇಕು ಎಂದು ಸಂದೇಶ ನೀಡುವ ಹಾಡು ಎಸ್ ಪಿ ಬಿ ಮತ್ತು ಪಿ ಬಿ ಎಸ್ ಅವರ ಅಮೋಘ ಧ್ವನಿಯಲ್ಲಿ ಮೂಡಿ ಬಂದಿತು. ಈ ಚಿತ್ರದ ಪಾಂಡವರು ಸೇರಿ ಹಾಡಿ ಕುಣಿಯುವ ಹಾಡಿನ ಚಿತ್ರೀಕರಣ ಸುಂದರವಾಗಿದೆ. 

"ಬಹಿಷ್ಕಾರ ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ದಿಕ್ಕಾರ" ಹಳ್ಳಿಗಳಲ್ಲಿ ನಡೆಯುವ ರಾಜಕೀಯ, ಒಳ ಸಂಚು ಇದನ್ನೆಲ್ಲಾ ಪದಗಳಲ್ಲಿ ಕೂಡಿ ಹಾಕಿ ಬರೆದಿರುವ ಸಾಹಿತ್ಯ ಸೂಪರ್ ಸೂಪರ್ ಎನ್ನಲೇ ಬೇಕು.. ಎಸ್ ಪಿ ಬಿ ಅದೇ ರೋಷ ವೇಷದಲ್ಲಿ ಹಾಡಿದ್ದಾರೆ. ಈ ಚಿತ್ರದ ಪಾಂಡವರ ಮೇಲೆ ಈ ಹಾಡು ಮೂಡಿ ಬಂದಿದೆ 

ಸೋರಟ್ ಅಶ್ವತ್ 
ಅದ್ಭುತ ಸಾಹಿತಿ ಇವರು.. ತಮ್ಮ ಇತಿಮಿತಿಗಳಲ್ಲಿಯೇ ಅನೇಕ ಪ್ರಬುದ್ಧ ಹಾಡುಗಳನ್ನು, ಸಂಭಾಷಣೆಗಳನ್ನು ಕೊಟ್ಟ ಕಲಾ ಪ್ರತಿಭೆ ಇವರು. 

"ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ"  ಪಿ ಬಿ ಎಸ್ ಹಳ್ಳಿಯ ಜೀತದ ಪದ್ಧತಿಯನ್ನು ನವಿರಾಗಿ ರೂಪಿಸಿರುವ ಈ ಹಾಡನ್ನು ಅಷ್ಟೇ ಸೂಕ್ಷಮತೆಯಿಂದ ಹಾಡಿದ್ದಾರೆ. ಜೈಜಗದೀಶ್ ಸುಂದರ ತರುಣ.. ಹಳ್ಳಿ ಮಕ್ಕಳಿಗೆ ಸಂದೇಶ ಹೇಳುತ್ತಾ, ಅಲ್ಲಿಯ ಹುಳುಕುತನವನ್ನು ಎತ್ತಿ ಹಿಡಿಯುವ ಅಭಿನಯ ಈ ಹಾಡಿನಲ್ಲಿ ಸೊಗಸಾಗಿದೆ. ಬೆಳಗಿನ ಹೊತ್ತನ್ನು ಬಿಂಬಿಸುವ ನಿಟ್ಟಿನಲ್ಲಿ ಆ ಸೂರ್ಯ ರಶ್ಮಿ, ಧೂಳು, ಬೆಳಕು ನೆರಳಿನ ಆಟ ಎಲ್ಲವನ್ನು ಅದ್ಭುತವಾಗಿ ತಂದಿದ್ದಾರೆ. 
"ಕಣ್ಣ ಮುಚ್ಚಿ ಕುಳಿತರೆ ಕಾಣ್ವರು ನೂರಾರು ಶಿವರು" ಮಠದ ಸ್ವಾಮೀಜಿಯ ಪಾತ್ರಧಾರಿ ಈ ಹಾಡನ್ನು ಹಾಡುತ್ತಾ ಇಡಿ ಹಳ್ಳಿಯನ್ನು ಸುತ್ತುತ್ತಾರೆ.. ಬಡವ, ಬಲ್ಲಿದ, ನೋವು, ನಲಿವು, ದೇವರು ಕೂಡ ಎಲ್ಲೋ ತಪ್ಪು ಮಾಡಿದ್ದಾನಾ ಎನ್ನುವ ಅರ್ಥದಲ್ಲಿ ಬರುವ ಈ ಹಾಡು ಉತ್ಕೃಷ್ಟ ಸಾಹಿತ್ಯದಿಂದ ಗಮನಸೆಳೆಯುತ್ತದೆ. 

ದೊಡ್ಡರಂಗೇಗೌಡ 
ಹಳ್ಳಿಸೊಗಡಿನ ಭಾಷೆಯನ್ನು ಉಪಯೋಗಿಸಿಕೊಂಡು ಹಾಡುಗಳನ್ನು ಬರೆಯುವುದರಲ್ಲಿ ಇವರದು ಪ್ರಚಂಡ ಪ್ರತಿಭೆ. ಅನೇಕ ಇಂಥಹ ಸುಮಧುರ ಹಾಡುಗಳನ್ನು ಬರೆದಿರುವ ಇವರ ಪ್ರತಿಭೆಯನ್ನು ಸಶಕ್ತರೀತಿಯಲ್ಲಿ ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಪುಟ್ಟಣ್ಣನವರು. 

"ಏಸು ವರ್ಸ ಆಯ್ತೆ ನಿಂಗೆ ನನ್ನ ಬಂಗಾರಿ"   ಸುಮಧುರ ಕಂಠದ ಒಡತಿ ಕಸ್ತೂರಿ ಶಂಕರ್ ಮತ್ತು ಎಸ್ ಪಿ ಬಿ ಅವರ ಹಾಡಿಗೆ ತಕ್ಕ ಹಾಗೆ ಅಂಬರೀಶ್ ಮತ್ತು ಸಹನಟಿ ನೃತ್ಯ ಮನಸ್ಸಿಗೆ ಹಿತ ನೀಡುತ್ತದೆ. ಹಳ್ಳಿಯ ಶೈಲಿಯಲ್ಲಿಯೇ ಚಿತ್ರೀಕರಣ, ನೃತ್ಯ, ಪದಗಳ ಬಳಕೆ ಈ ಹಾಡನ್ನು ಮೇಲಕ್ಕೆ ಒಯ್ಯುತ್ತದೆ. 

"ಶ್ರೀ ರಾಮ ಬಂದೌನೆ, ಸೀತೆಯ ಕಾಣಲಿಕ್ಕೆ" ಮತ್ತೆ ಕಸ್ತೂರಿ ಶಂಕರ್ ಗಾಯನ ಪ್ರತಿಭೆ ಅನಾವರಣಗೊಂಡಿದೆ. ಹಳ್ಳಿ ಭಾಷ ಪ್ರಯೋಗ, ಸಮರ್ಥವಾಗಿ ಉಪಯೋಗಿಸಿರುವ ರೀತಿ ಗಾಯನ ಶೈಲಿ ಹಿತನೀಡುತ್ತದೆ. 

"ಜನುಮ ನೀಡಿದ ಭೂತಾಯಿಯ" ಈ ಚಿತ್ರದ ಸಶಕ್ತ ಹಾಡು ಜೊತೆಯಲ್ಲಿಯೇ.. ಪರನಾಡಿನಲ್ಲಿರುವ ಎಲ್ಲರ ಮಂತ್ರವಾಗಿ ಹೋಗಿರುವ ಈ ಹಾಡಿನ ಪ್ರತಿ ಸಾಲುಗಳು ಜೀವಂತ. ರಾಮಕೃಷ್ಣ ಅದ್ಭುತ ರೀತಿಯಲ್ಲಿ ಅಭಿನಯಿಸಿದ್ದಾರೆ. ಹಳ್ಳಿಯ ಮೂಲೆ ಮೂಲೆಯನ್ನು ಪರಿಚಯಿಸಿರುವ ಈ ದೃಶ್ಯಗಾರಿಕೆ ಇಷ್ಟವಾಗುತ್ತದೆ.   

ರಾವ್ ಬಹದ್ದೂರ್ ಅವರ ಸತ್ವಯುಕ್ತ ಕಥೆಯನ್ನು ಪುಟ್ಟಣ್ಣನವರು ಇನ್ನಷ್ಟು ಬಿಗಿಗೊಳಿಸಿ ಅತ್ಯುತ್ತಮ ಚಿತ್ರಕಥೆ ಮಾಡಿದ್ದಾರೆ. ಇದಕ್ಕೆ ಕಳಶವಿಟ್ಟಂತೆ ಯೋಗಾನರಸಿಂಹ ಮತ್ತು ಬಾಬು ಕೃಷ್ಣಮೂರ್ತಿಯವರ ಸಂಭಾಷಣೆ ಇಡಿ ಚಿತ್ರವನ್ನು ಗಟ್ಟಿಯಾಗಿ ಹಿಡಿದಿಟ್ಟಿದೆ. ಸಂಭಾಷಣೆ ಈ ಚಿತ್ರದ ಅತ್ಯುತ್ತಮ ಅಂಶಗಳಲ್ಲಿ ಒಂದು. 

ಕೆಲವು ತುಣುಕುಗಳು 
"ಊರ ಮುಂದಿನ ಹಾದಿ ಅಂದರೆ ನೂರಾರು ಜನ ತಿರುಗಾಡಿರ್ತಾರೆ.. ಇರೋ ಹೆಜ್ಜೆ ಗುರುತೆಲ್ಲ ನಂದೇ ಅಂದ್ರೆ"
"ಜಾತ್ರೆಲಿ ಉಂಡ ಮೇಲೆ ಯಾರಾದ್ರು ಎಲೇನ ಮನೆಗೆ ತರ್ತಾರೆನೋ.."
"ಒಂದು ಬಾಟಲಿ ಬ್ರಾಂಡಿ ಕೊಡೊ ಸುಖ ಒಂದು  ಕೊಡ ನೀರು ಕೊಡುತ್ತೇನೋ"
"ಇವ್ರು ಅಂದ್ರೆ ಪಡುವಾರಹಳ್ಳಿ.. ಪಡುವಾರಹಳ್ಳಿ ಅಂದ್ರೆ  ಇವರು"
"ನಮ್ಮ ಹತ್ರ ನಗಾರಿ ಅಯ್ತೆ. ಒಂದು ಸಾರಿ ಬಾರಿಸಿದರೆ ಚಂಡಮಾರುತದಲ್ಲಿ ತರಗೆಲೆಗಳ ಹಾಗೆ ತೂರಿ ಹೋಗ್ತೀರಾ"
"ಕಸ ತುಂಬಿದ ಮನೆ ಅಂತ ಮನೆನ ಸುಟ್ಟು ಹಾಕು.. ಕೆಸರಾಗಿದೆ ಅಂತ ಕಾಲನ್ನೇ ಕಡಿದು ಹಾಕು.. ಊರು ಹೊಲಸಾಗಿದೆ ಅಂತ ಊರನ್ನೇ ಬಿಡು"
"ಮೀಸೇನೆ ಮೂಗು ತಿನ್ನೋಕೆ ಶುರು ಮಾಡಿದ್ರೆ"
ಬ್ಯಾಸ್ಗೆಲಿ ಬರ ಸಿಡಿಲು ಬಂದಂತೆ ಬಂದೆ"

ಈ ಚಿತ್ರದ ನಾಯಕರು ಅಂಬರೀಶ್, ರಾಮಕೃಷ್ಣ, ಜೈಜಗದೀಶ್, ಮಹದೇವ್, ಚಂದ್ರಹಾಸ.. ಆದರೆ ಇಡಿ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತು ನಿಂತವರು ಧೀರೇಂದ್ರ ಗೋಪಾಲ್, ಮತ್ತು ಕನೆಕ್ಷನ್ ಕಾಳಪ್ಪ ಪಾತ್ರದ ಮುಸುರಿ ಕೃಷ್ಣಮೂರ್ತಿ. 
ಕ್ರೌರ್ಯ, ಹಿಂಸೆ, ದಬ್ಬಾಳಿಕೆ, ದರ್ಪ, ಸಿರಿತನ ಎಲ್ಲವನ್ನು ಬರಿ ಮಾತುಗಳಿಂದಲೇ ವ್ಯಕ್ತ ಪಡಿಸುವ ಈ ಇವರಿಬ್ಬರ ಅಭಿನಯ ಅದ್ಭುತ. ಅವರಿಬ್ಬರ ಚಿತ್ರಜಗತ್ತಿನಲ್ಲಿ ಮೊದಲ ಸಾಲಲ್ಲಿ ನಿಲ್ಲುವ ಈ ಚಿತ್ರದ ಅಭಿನಯಕ್ಕೆ ಸಂಪೂರ್ಣ ಅಂಕಗಳು. 

ಬರಿ ಹೊಡೆದಾಟ, ಹಿಂಸೆ, ರಕ್ತಪಾತ ಬರಿ ಇವೆ ಖಳನಾಯಕನ ಆಸ್ತಿ ಎಂದು ತೆರೆಯ ಮೇಲೆ ನೋಡಿ ನೋಡಿ ಸಾಕಾಗಿದ್ದ ಪ್ರೇಕ್ಷಕನಿಗೆ ಅರೆ ಖಳ ನಾಯಕ ಹೀಗೂ ಇರಬಹುದು ಎಂದು ಆಶ್ಚರ್ಯ ಪಡುವಂತೆ ಅಭಿನಯವನ್ನು ತೆಗೆದಿದ್ದಾರೆ ಪುಟ್ಟಣ್ಣನವರು ಈ ಮಹಾನ್ ಪ್ರತಿಭೆಗಳಿಂದ. 

ಈ ಚಿತ್ರದ  ಬಗ್ಗೆ ಹೇಳಿದಷ್ಟು ಕಡಿಮೆಯೇ.. 

ಚಿತ್ರದ ಆರಂಭದಲ್ಲಿ ದರ್ಪ, ದಬ್ಬಾಳಿಕೆ, ಗುಂಡು, ಬಂದೂಕ ಇವೆಲ್ಲವೂ ಹಳ್ಳಿಯಲ್ಲಿ ಕಾಣುತ್ತಿದ್ದ ಈ ಕ್ರೂರ ಪದ್ದತಿಯನ್ನು ತೋರುವ ನಿಟ್ಟಿನಲ್ಲಿ ಫಲಕ ತೋರುವ ಆರಂಭದಿಂದ ಅಂತ್ಯದವರೆಗೂ ಪರದೆ ಎಡ ಬಲಕ್ಕೆ ಸರಿದಾಡುತ್ತಲೇ ಇರುತ್ತದೆ,  ಹಿನ್ನೆಲೆಯಲ್ಲಿ ಮದ್ದು, ಗುಂಡು, ಬಂದೂಕು, ಬೂಟು ಕಾಲಿನ ಸಪ್ಪಳ.. ಆರಂಭದಲ್ಲಿಯೇ ಅರಿವಾಗುತ್ತದೆ ಚಿತ್ರದ ಮೂಲ ಉದ್ದೇಶ ಏನು ಎಂದು. ಇದು ಪುಟ್ಟಣ್ಣ ಅವರ ಚಿತ್ರಗಳ ತಾಕತ್ತು. 

ಚಿತ್ರಕಥೆಯ ಅಮಲನ್ನು ಆರಂಭದಿಂದಲೇ ಏರಿಸಿ ಹಾಗೆ ಅದನ್ನು ಕಾಯ್ದುಕೊಂಡು ಕೊನೆಯವರೆಗೂ ಹಾಗೆ ಉಳಿಸಿ ತೋರಿಸುವುದು ಅವರ ನಿರ್ದೇಶಕನ ಸ್ಥಾನದ ಮೇಲೆ ಅವರಿಗಿದ್ದ ಪ್ರಬುದ್ಧತೆಯನ್ನು ತೋರಿಸುತ್ತಿತ್ತು. 

ಸಹಪಾತ್ರಗಳು ಮಚ್ಚೇರಿ, ಆರತಿ, ಶುಭ, ಮೈಸೂರು ಲೋಕೇಶ್, ಶ್ರೀ ಲಲಿತ,ಜಯಶ್ರೀ ಎಲ್ಲರ ಅಭಿನಯ ಹಿತಮಿತ. ಒಂದೇ ಒಂದು ಈ ಸನ್ನಿವೇಶ ಸರಿಯಿಲ್ಲ ಅನ್ನಿಸುವ ಮಾತೆ ಇಲ್ಲ. ಇಡಿ ಚಿತ್ರದ ಚಿತ್ರಕಥೆ ಅಷ್ಟು ಸಶಕ್ತವಾಗಿದೆ. 

ಪುಟ್ಟಣ್ಣ ಅವರ ಚಿತ್ರಗಳಲ್ಲಿಯೇ ಈ ಚಿತ್ರ ತೀರ ಭಿನ್ನ ವಿಭಿನ್ನ. ಅವರ ಶಕ್ತಿ ಹೆಣ್ಣಿನ ಅಂತರೀಕ ತುಮುಲಗಳನ್ನು ಉಪಯೋಗಿಸಿಕೊಂಡೆ ಒಂದು ಹಳ್ಳಿಯಲ್ಲಿನ ಸಂಪೂರ್ಣ ಚಿತ್ರ ಕೊಡುವುದು ಅವರಿಗೆ ಸಾಧ್ಯವಾಗಿದ್ದು ಅವರ ಅದ್ಭುತ ಕಲೆಗೆ ಒಂದು ಸಾಕ್ಷಿ. 


ಬರುತ್ತಲೇ ಇರುತ್ತಾರೆ.. ನೀವು ಓಡಿಸುತ್ತಲೇ ಇರಿ.. ಬರುತ್ತಲೇ ಇರುತ್ತಾರೆ ಓಡಿಸುತ್ತಲೇ ಇರಿ ಎನ್ನುವ ಶ್ರೀಲಲಿತ ಅವರ ಸಂಭಾಷಣೆಯೊಂದಿಗೆ ಈ ಚಿತ್ರ ಮುಗಿಯುತ್ತದೆ. ಹಾಗೆ ಸಮಸ್ಯೆಗಳು ಇದ್ದೆ ಇರುತ್ತವೆ.. ಧೈರ್ಯ ತುಂಬಿಕೊಂಡು ಎದೆಗುಂದದೆ ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವ ಸಂದೇಶ ಕೊಟ್ಟಿದ್ದಾರೆ ನಮ್ಮ ಗುರುಗಳು ಪುಟ್ಟಣ್ಣ ಕಣಗಾಲ್. 


ಅದ್ಭುತ ಅನುಭವ ಖಂಡಿತ ಕೊಡುತ್ತದೆ.. ಒಮ್ಮೆ ನೋಡಿ .. ಪಡುವಾರಹಳ್ಳಿ ಪಾಂಡವರು... !!!

Friday, May 15, 2015

ಗಿರ ಗಿರ ತಿರುಗಿಸುವ ಕಾಲೇಜು ರಂಗ (1976)

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.. ದಾಸರ ಪದ ನೆನಪಿಗೆ ಬರುತ್ತಿದೆ..

ಇಡಿ ಚಿತ್ರವನ್ನು ನೋಡಿದಾಗ ಅನ್ನಿಸುತ್ತದೆ ಇಲ್ಲಿ ಗುರು ಶಿಷ್ಯರ ಇಬ್ಬರ ಕೈಚಳಕವು ಆಳವಾಗಿದೆ ಎಂದು.

"ಕಾಲೇಜು ರಂಗ" ಈ ಚಿತ್ರ ಒಂದು ರೀತಿಯಲ್ಲಿ ಪುಟ್ಟಣ್ಣ-ಪಂತುಲು ಅವರ ಅಮೋಘ ಸಂಗಮ.. ಎಲ್ಲೋ ಓದಿದ್ದ ನೆನಪು, ಪುಟ್ಟಣ್ಣ ಅವರ ಗುರುಗಳು ಬಿ ಆರ್ ಪಂತುಲು ಈ ಚಿತ್ರವನ್ನು ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ, ಆ ಕಾಲನ ಸಾಮ್ರಾಜ್ಯದಿಂದ ಕರೆ ಬಂದ ಕಾರಣ ಹೊರಟು ಬಿಟ್ಟರು ಎಂದು.

ಗುರುಗಳಿಗೆ ದಕ್ಷಿಣೆ ನೀಡುವ ಒಂದು ಸುಸಂಧರ್ಭ ಪುಟ್ಟಣ್ಣ ಅವರಿಗೆ ಒದಗಿ ಬಂತು. ಹಾಗಾಗಿ ಈ ಚಿತ್ರವನ್ನು ಗುರುಗಳ ಕಣ್ಣಲ್ಲಿ ಮತ್ತು ತಮ್ಮ ಮನದಲ್ಲಿ ಮೂಡಿದಂತೆ ಚಿತ್ರಿಸಿದ್ದಾರೆ.

೧೯೭೬ ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಅತ್ಯುತ್ತಮ ಕಲಾವಿದರ ದಂಡೆ ನೆರೆದಿತ್ತು. ಕಲ್ಯಾಣ್ ಕುಮಾರ್, ಲೋಕನಾಥ್, ಗೋಡೆ ಲಕ್ಷ್ಮಿನಾರಾಯಣ, ಡಿಕ್ಕಿ ಮಾಧವರಾವ್, ಜಿ ಕೆ ಗೋವಿಂದರಾವ್, ಲೀಲಾವತಿ, ಮುಸುರಿ ಕೃಷ್ಣಮೂರ್ತಿ ಇನ್ನೂ ಅನೇಕರ ಜೊತೆಯಲ್ಲಿ ಹೊಸ ಮುಖವಾದ ಜಯಸಿಂಹ, ಪದ್ಮಶ್ರೀ ಮುಂಚೂಣಿಯಲ್ಲಿ ಅಭಿನಯಿಸಿದ್ದ ಈ ಚಿತ್ರ ಶ್ರೀ ಬಿ ಜಿ ಎಲ್ ಸ್ವಾಮೀ ಅವರ ಕಾಲೇಜು ರಂಗ ಎನ್ನುವ ಕಾದಂಬರಿ ಆಧರಿಸಿತ್ತು ಹಾಗೂ ಅವರೇ ಸಂಭಾಷಣೆಯನ್ನು ಒದಗಿಸಿದ್ದರು.


ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದ ಆರಂಭದಲ್ಲಿ ಪುಟ್ಟಣ್ಣ ತಮ್ಮ ಗುರುಗಳ ಬಗ್ಗೆ ಒಂದು ಸಂಕ್ಷಿಪ್ತ  ವಿವರ ಮತ್ತು ತಮ್ಮ ಮನದಾಳದ ಮಾತುಗಳಿಂದ ಗುರುದಕ್ಷಿಣೆಯ ಜೊತೆಗೆ ಆ ಮಹಾನ್ ಪ್ರತಿಭೆಗೆ ಒಂದು ಸುಂದರ ಚೌಕಟ್ಟನ್ನು ಹಾಕಿದ್ದಾರೆ.

ಪುಟ್ಟಣ್ಣ ಅವರು ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಅವರ ಕಲೆಗೆ ಬೆಲೆ ಕೊಡುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಚಿತ್ರಕಥೆ ಸಲಹೆ ಎಂದು ಯೋಗಾನರಸಿಂಹ ಮೂರ್ತಿ, ನರೇಂದ್ರಬಾಬು, ನವರತ್ನರಾಂ, ಎ ಎಸ್ ಮೂರ್ತಿ ಹೆಸರನ್ನು ಉಲ್ಲೇಖಿಸುತ್ತಾರೆ. ಹಾಡುಗಳು ಚಿ ಉದಯಶಂಕರ್, ಆರ್ ಎನ್ ಜಯಗೋಪಾಲ್ ಮತ್ತು ವಿಜಯನಾರಸಿಂಹ ಅವರ ಮೂಸೆಯಲ್ಲಿ ಅರಳಿದರೆ, ಅದಕ್ಕೆ ಸಂಗೀತ ಗುರುಗಳು ಪಂತಲು ಅವರ ಆಸ್ಥಾನ ಸಂಗೀತಗಾರರಾದ ಟಿ ಜಿ ಲಿಂಗಪ್ಪ ಅವರದ್ದು. ಚಿತ್ರವನ್ನು ಬಿ ಎನ್ ಹರಿದಾಸ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಗುರುಗಳಿಗೆ ಈ ಚಿತ್ರವನ್ನು ಅರ್ಪಿಸುತ್ತಾ ಚಿತ್ರಕಥೆ ನಿರ್ದೇಶನದ ಕುರ್ಚಿಯಲಿ ಪುಟ್ಟಣ್ಣ ಅವರ  ಕೂರುತ್ತಾರೆ.

ಬರಿ ಗೋದಾಮಿನಲ್ಲಿ ಮಾತ್ರ ಇಲಿಗಳು ಹೆಗ್ಗಣಗಳು ಇರೋಲ್ಲ ವಿದ್ಯಾ ಸಂಸ್ಥೆಗಳಲ್ಲೂ ನೆಲೆಸಿರುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಪಾತ್ರಗಳನ್ನ್ನು ಪರಿಚಯಿಸುತ್ತಾ ಆ ಪಾತ್ರಗಳ ಹೊಟ್ಟೆಬಾಕತನವನ್ನು ಮತ್ತು ಅನಾರೋಗ್ಯಕಾರಿ ಲಂಚಗುಳಿತನವನ್ನು, ತಮಗೆ ಅನ್ನ ನೀಡುತ್ತಿರುವ ಸಂಸ್ಥೆಗೆ ಕನ್ನ ಹಾಕುವ ಪರಿಯನ್ನು ವಿವರವಾಗಿ ತೋರಿಸುತ್ತಾ ಹೋಗುತ್ತಾರೆ.

ಎರಡು ವ್ಯಕ್ತಿಗಳ ಮನಸ್ಥಿತಿಯನ್ನು ಬಿಂಬಿಸುವ ಈ ಸಂಭಾಷಣೆಯ ಜಾದೂ ನೋಡಿ.

ಕಲ್ಯಾಣಕುಮಾರ್ ಒಳ್ಳೆಯತನಕ್ಕೆ, ತನಗೆ ಹುದ್ದೆ ಕೊಟ್ಟಿರುವ ಸಂಸ್ಥೆಗೆ ಅಳಿಲು ಸೇವೆ ಮಾಡಬೇಕೆನ್ನುವ ಹಂಬಲ ಇಟ್ಟುಕೊಂಡವರು. ಕಾಲೇಜಿನ ಆಡಳಿತ ಮಂಡಳಿಯ ಪ್ರೆಸಿಡೆಂಟ್ ಜಿ ಕೆ ಗೋವಿಂದರಾವ್ ಅವರ ಮನೆಗೆ ಬರುತ್ತಾರೆ. ಅಲ್ಲಿನ ಸಂಭಾಷಣೆ

ಪ್ರೆಸಿಡೆಂಟ್ ಅವರ ಧರ್ಮಪತ್ನಿ ಲೀಲಾವತಿ  ಹೇಳುತ್ತಾರೆ "ನೋಡಿ ನೀವು ನಿಜ ಹೇಳಿದರೂ ನಂಬ್ತೀರಿ.. ಸುಳ್ಳು ಹೇಳಿದರೂ ನಂಬ್ತೀರಿ.. " ಎಂದಾಗ ಕಲ್ಯಾಣ್ ಕುಮಾರ್ ಹೇಳುತ್ತಾರೆ " ಅಮ್ಮ ನಾನು ನಿಜ ಹೇಳಿದರೆ ಮಾತ್ರ ನಂಬ್ತೀನಿ"

ಅದೇ ಮಾತನ್ನು ಎರಡು ಮುಖದ, ಅಧಿಕಾರದ ದುರಾಸೆ ಇಟ್ಟುಕೊಂಡು ಹೇಗಾದರೂ ಸರಿ ಪ್ರಿನ್ಸಿಪಾಲ್ ಹುದ್ದೆಯಲ್ಲಿ ಕೂರಬೇಕು ಎನ್ನುವ ಹಠ ತೊಟ್ಟ ಲೋಕನಾಥ್ ಅವರಿಗೆ ಲೀಲಾವತಿ ಇದೆ ಮಾತನ್ನು ಹೇಳಿದಾಗ "ನೋಡಿಮ್ಮ ನಿಜ ಯಾವುದು ಸುಳ್ಳು ಯಾವುದು ನನಗೆ ಗೊತ್ತಿಲ್ಲ.. ನೀವು ಏನು ಹೇಳಿದರೂ ನಂಬ್ತೀನಿ"

ಒಂದು ಚಿತ್ರವನ್ನು, ಪಾತ್ರಗಳನ್ನೂ, ಚಿತ್ರದ ಹೂರಣವನ್ನು ಒಂದು ಸಂಭಾಷಣೆಯ ಮೇಲೆ ನಿಲ್ಲಿಸುವುದು ಅಥವಾ ಬಿಂಬಿಸುವುದು ಸಂಭಾಷಣಕಾರ ಮತ್ತು ನಿರ್ದೇಶಕನ ತಾಕತ್ತು. ಅದರಲ್ಲಿ ಬಿ ಜಿ ಎಲ್ ಸ್ವಾಮೀ ಮತ್ತು ಪುಟ್ಟಣ್ಣ ಅವರು ಜಯಶಾಲಿಗಳಾಗಿದ್ದಾರೆ.

ಹಲವಾರು ಚುಟುಕು ಚಿನಕುರುಳಿ ಸಂಭಾಷಣೆಗಳು ಇವೆ.

"ಇಮೇಜ್ ಇಲ್ಲದಿದ್ದರೆ ಏನಂತೆ ಕರೇಜ್ ಇದೆ"

"ದಬ್ಬಳದಲ್ಲಿ ಬಾವಿ ತೋಡುತ್ತಿರೆನ್ರಿ"

"ಬೆಳಿಗ್ಗೆ ಕ್ಲಾಸ್ ಮೇಟ್ಸ್ ಸಂಜೆಗೆ ಗ್ಲಾಸ್ ಮೇಟ್ಸ್"

ಈ ಚಿತ್ರದಲ್ಲಿ ಗಮನ ಸೆಳೆಯುವುದು ಲೋಕನಾಥ್ ಅವರ ವೇಷ ಭೂಷಣ, ದಪ್ಪ ಹುಬ್ಬು, ಜೊಂಡು ಮೀಸೆ, ಕುಂಟು ನಡಿಗೆ, ವಿಶಿಷ್ಟ ಮಾತಿನ ಶೈಲಿ ಇವೆಲ್ಲ ಒಂದು ಕಡೆಯಾದರೆ, ಗುಳ್ಳೆ ನರಿ ವ್ಯಕ್ತಿತ್ವದ ಗೋಡೆ ಲಕ್ಷ್ಮಿನಾರಾಯಣ, ಅವರ ಸಹಚರ ಇವರಿಬ್ಬರ ನಾಟಕೀಯ ಶೈಲಿಯಲ್ಲಿ ಸಂಭಾಷಣೆ, ಜಿ ಕೆ ಗೋವಿಂದರಾವ್ ಡಿಪ್ಲೊಮಸಿ ಎನ್ನುತ್ತಾ ಉಡಾಫೆ ಸಂಭಾಷಣೆ, ಲೀಲಾವತಿ ಅವರ ದರ್ಪ, ಅಜ್ಞಾನ, ಮತ್ತು ಸೋಗು ಹಾಕುವ ರೀತಿಯಲ್ಲಿನ ಸಂಭಾಷಣೆ ಮನಸ್ಸೆಳೆಯುತ್ತದೆ.

ಇಡಿ ಚಿತ್ರದಲ್ಲಿ ಕಾಡುವುದು ಕಲ್ಯಾಣ್ ಕುಮಾರ್.. ತಮ್ಮ ಅದ್ಭುತ ಅಭಿನಯ, ಸಂಭಾಷಣೆ ಹೇಳುವ ತಾಳ್ಮೆಯ ರೀತಿ, ಆ ಧ್ವನಿ, ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮೋಸ ಆಗಬಾರದು, ಚೆನ್ನಾಗಿ ಕಲಿಯುವಂಥಹ ವಾತಾವರಣ ಮತ್ತು ಅನುಕೂಲತೆಗಳನ್ನು ಮಾಡಿಕೊಡಬೇಕು ಎನ್ನುವ ಕಾಳಜಿ ಎಲ್ಲವನ್ನೂ ಅರೆದು ಕುಡಿದಂತೆ ಅಭಿನಯಿಸಿದ್ದಾರೆ.

ಹಾಡುಗಳು ಮೂರೇ ಇದ್ದರೂ ಮನಸ್ಸಿಗೆ ನಾಟುವಂಥಹ ಹಾಡುಗಳು..

"ಉಪ್ಪ ತಿಂದ ಮೇಲೆ ನೀರಾ ಕುಡಿಯಲೇಬೇಕು" ಎಸ್ಪಿ ಮತ್ತು ರವಿ ಅವರ ಹಾಡುಗಾರಿಕೆ ಇಷ್ಟವಾಗುತ್ತದೆ.

"ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ" ಈ ಹಾಡಿನಲ್ಲಿ ಗಬ್ಬೆದ್ದು ನಾರುತ್ತಿರುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಚಾವಟಿ ಬೀಸುವ ಶಾಲಿಯಲ್ಲಿ ಎಸ್ಪಿ ಹಾಡಿದ್ದಾರೆ.

"ಭವ್ಯ ಭಾರತ ಪರಂಪರೆಯಲ್ಲಿ ಗುರುಕುಲ ಎಂಬುದು ಒಂದಿತ್ತು" ಹೇಗಿರಬೇಕು ಮತ್ತು ಹೇಗಿದೆ ಎನ್ನುವ ಹೋಲಿಕೆ ತುಂಬಿದ ಭಾವ ಇರುವ ಈ ಹಾಡನ್ನು ಎಸ್ಪಿ ಮತ್ತು ವಾಣಿಜಯರಾಂ ಹಾಡಿದ್ದಾರೆ.

ಈ ಚಿತ್ರದ ಇನ್ನೊಂದು ಪ್ರಮುಖ  ಅಂಶ ಸಂಗೀತ ಮತ್ತು ನೆರಳು ಬೆಳಕಿನ ಉಪಯೋಗ.

ಪ್ರತಿಯೊಬ್ಬರಿಗೂ ಅವರ ಭಾವಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಮೂಡಿ ಬರುತ್ತದೆ. ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವನ್ನು  ಅಳವಡಿಸಿದ್ದಾರೆ. ಉದಾಹರಣೆಗೆ ಕಾಲೇಜಿನಲ್ಲಿ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ತಕ್ಕಂತೆ ನಾಣ್ಯಗಳು ಬೀಳುವ ಸದ್ದು ಮೂಡಿ ಬರುವುದು ಅದ್ಭುತ ಎನ್ನಿಸುತ್ತದೆ.

ಹಾಗೆಯೇ ಅಂತಿಮ ದೃಶ್ಯಗಳಲ್ಲಿ ಲೋಕನಾಥ್, ಕಲ್ಯಾಣಕುಮಾರ್ ಅವರ ಲ್ಯಾಬ್ ನಲ್ಲಿ ಇರುವ ದೊಡ್ಡ ಕಪಾಟನ್ನು ಬೆಂಕಿಗೆ ಆಹುತಿ ಮಾಡುವಾಗ ಅವರ ಮೊಗದಲ್ಲಿ ಮೂಡಿ ಬರುವ ಕ್ರೌರ್ಯ ನೆರಳು ಬೆಳಕಿನಲ್ಲಿ ಎದ್ದು ಕಾಣುವಂತೆ ತೋರಿಸಿದ್ದಾರೆ ಪುಟ್ಟಣ್ಣ ಅವರು.

ಪುಟ್ಟಣ್ಣ ಅವರ ಮಿಕ್ಕ ಚಿತ್ರಗಳಿಗಿಂತ ಭಿನ್ನ ಆದರೆ ಅವರದೇ ಛಾಪು ಮೂಡಿಸುವಂತಹ ಚಿತ್ರ ರತ್ನ "ಕಾಲೇಜು ರಂಗ"

ಇದಕ್ಕೆ ಪುಟ್ಟಣ್ಣ ಅವರಿಗೆ ಮನದಾಳದ ನಮನಗಳು!!!

Friday, April 24, 2015

ನಗುವಿನ ಹೊಡೆದಾಟದಲ್ಲಿ ಅಣ್ಣಾವ್ರು !!!

ಬ್ರಹ್ಮ ಮಾಡಿದ ಒಂದು ಪರಿಪೂರ್ಣ ಕಲಾವಿದರ ಪಟ್ಟಿಯಲ್ಲಿ ಅಣ್ಣಾವ್ರು  ಅಣ್ಣಾವ್ರೆ..

ಬರಿ ಕನ್ನಡಾಭಿಮಾನ ಅಥವಾ ಕರುನಾಡಿನ ಕಲಾವಿದ ಎನ್ನುವ ಹೆಗ್ಗಳಿಕೆ ಅಥವಾ ಅಹಂ ಎನ್ನುವುದಕ್ಕಿಂತ ಒಂದು ಪಕ್ವ ರುಚಿಕರ ಭೋಜನ ಹೇಗೆ  ಸೊಗಸೋ ಹಾಗೆಯೇ ಇವರು ಕೂಡ. ಎಲ್ಲರಲ್ಲಿಯೂ ಸಲ್ಲುವವರು. ಪರಿಪೂರ್ಣತೆ ಎನ್ನುವುದು ಅವರಿಗೆ ದೇವರು ಕೊಟ್ಟ ಉಡುಗೊರೆಯೇ ಸರಿ.

ಅಭಿನಯ, ಗಾಯನ, ನೃತ್ಯ,ಹೊಡೆದಾಟ, ಪ್ರೇಮ ನಿವೇದನೆ, ಪರಿತಪಿಸುವಿಕೆ ಹೀಗೆ ಯಾವುದೇ ಭಾವ ಇರಲಿ ಅದಕ್ಕೆ ಅಣ್ಣಾವ್ರ ಹೆಸರೊಂದೆ ನನ್ನ ಮನಸ್ಸಲ್ಲಿ ಮೂಡಿ ಬರುವುದು.

ಇಂದು ಅವರ ಜನುಮದಿನ... ಹೀಗೆ ಅವರ ಚಿತ್ರಗಳ, ಪಾತ್ರಗಳ ಬಗ್ಗೆ,  ಹೊಡೆದಾಟದ ದೃಶ್ಯಗಳು ಬಗ್ಗೆ  ಯೋಚಿಸುತ್ತಿರುವಾಗ ಮನಕ್ಕೆ  ಬಂದ ಮಾತುಗಳು ಲೇಖನವಾಗಿದೆ

ಕಟ್ಟು ಮಸ್ತು ಶರೀರ, ಅದಕ್ಕೆ ಒಪ್ಪುವ ಅಭಿನಯ, ಮುಖ ಭಾವ, ರೋಷ, ಆವೇಗ  ಇವುಗಳ ಸಮಾಗಮ ಈ ಕೆಳಕೊಂಡ ಹೊಡೆದಾಟದ ದೃಶ್ಯಗಳು ನನಗೆ ಬಹಳ ಇಷ್ಟವಾಗಿವೆ!!!.

ಚಿತ್ರದ ಕಥೆಯ ಬಗ್ಗೆ ಬರೆಯೋಕೆ ಹೋಗೋಲ್ಲ.. ಆ ಹೊಡೆದಾಟದ ದೃಶ್ಯಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ!!

ದಾರಿ ತಪ್ಪಿದ ಮಗ 

ಕಳ್ಳ ಸಾಗಣಿಕೆಯ ತಂಡದ ನಾಯಕನ ಪಾತ್ರದಲ್ಲಿ ಅಣ್ಣಾವ್ರು.. ಬೆಲೆಬಾಳುವ ವಜ್ರಗಳನ್ನು ಕದಿಯಲು ಬಂದರಿಗೆ ಬರುತ್ತಾರೆ. ಅಲ್ಲಿ ಒಬ್ಬನನ್ನು ಆ ತಂಡದ ಸದಸ್ಯನ ಬಗ್ಗೆ ಕೇಳುತ್ತಾರೆ.. ನೀನು ಯಾರು ಎಂಬ ಪ್ರಶ್ನೆ ಬರುತ್ತದೆ.. ಆಗ ಶುರು ಹೊಡೆದಾಟ.
ಈ ಹೊಡೆದಾಟದ ದೃಶ್ಯದ ಅತ್ಯುತ್ತಮ ಅಂಶ ಅಂದರೆ ಹಿನ್ನೆಲೆ ಸಂಗೀತ. ಅಲ್ಲಿಯ ತನಕ ಡಿಶುಂ ಡಿಶುಂ ಸದ್ದು ಕೇಳಿಸುತ್ತಿದ್ದ ರೀತಿಗಿಂತ,  ಆಂಗ್ಲ ಶೈಲಿಯಲ್ಲಿ ಹಿನ್ನೆಲೆ ಸಂಗೀತ ನೀಡಿರುವುದು ಜಿ ಕೆ ವೆಂಕಟೇಶ್ ಅವರ ಕಲೆಗಾರಿಕೆ.  ಹಡಗಿನ ಮೇಲಿಂದ ಕೆಳಗೆ ನೆಗೆಯುತ್ತಾರೆ.. ಎದ್ದು ನಿಂತ ತಕ್ಷಣ.. ಅಲ್ಲಿದ್ದ ಒಬ್ಬ ಅಣ್ಣಾವ್ರಿಗೆ ಚಾಕು ತೋರಿಸುತ್ತಾನೆ.,. ಆಗ ಬರುವ ಹಿನ್ನೆಲೆ ಸಂಗೀತ.. ಆಹಾ ನೋಡಿಯೇ ನಲಿಯಬೇಕು .. ಮತ್ತು ಚಾಕು ನೋಡಿದ ತಕ್ಷಣ ಅಣ್ಣಾವ್ರ ಭಾವಾಭಿನಯ.. ಸೂಪರ್

ಸಮಯದ ಗೊಂಬೆ 

ಅಣ್ಣಾವ್ರು ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಮಗು ಕಾಣದಾಗಿರುತ್ತದೆ.. ಅದನ್ನ ಹುಡುಕಿಕೊಂಡು ಅವರ ತಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಮೈಸೂರು ಲೋಕೇಶ್ ಹತ್ತಿರ ಬರುತ್ತಾರೆ.. ನಿಧಾನವಾಗಿ ಕೇಳುತ್ತಾರೆ, ರೇಗುತ್ತಾರೆ, ಹೊಡೆಯುತ್ತಾರೆ.. ಬಾಯಿ ಬಿಡುವುದಿಲ್ಲ.. ಕಡೆಗೆ ತಮ್ಮ ಸ್ನೇಹಿತರಿಗೆ ಪೆಟ್ರೋಲ್ ಸುರಿಯಿರಿ ಇವನ ಮೇಲೆ.. ಎಂದು ಪೆಟ್ರೋಲ್ ಸುರಿದು ಕಡ್ಡಿ ಗೀರಬೇಕು.. ಅಷ್ಟರಲ್ಲಿ ಮೈಸೂರು ಲೋಕೇಶ್ ಹೇಳ್ತೀನಿ.. ಹೇಳ್ತೀನಿ.. ಎಂದು ಭಯ ಮಿಶ್ರಿತ ನುಡಿಯಲ್ಲಿ "ಮಾರಿಬಿಟ್ಟೆ" ಎಂದು ಹೇಳುತ್ತಾರೆ.. ಆಗ ಅಣ್ಣಾವ್ರು "ಮಾರಿಬಿಟ್ಟೆ" ಎಂದು ಜೋರಾಗಿ ಕೂಗುತ್ತಾ.. ತಮ್ಮ ತೋಳಿನಲ್ಲಿ ಲೋಕೇಶ್ ಅವರ ಕುತ್ತಿಗೆಯನ್ನು ಅಮುಕುತ್ತಾರೆ.. ಆ ರೌದ್ರಾವತಾರ ಆಹಾ ಆಹಾ..

ಕಾಮನಬಿಲ್ಲು 

ಊರಿನಲ್ಲಿ ದ್ವೇಷ ಅಸೂಯೆಯ ಫಲ.. ಅಣ್ಣಾವ್ರ ಮೇಲೆ ಕೆಟ್ಟ ಹೆಸರನ್ನು ತರಬೇಕು ಎಂದು ಮೈಸೂರು ಲೋಕೇಶ್ ಅವರನ್ನು ಪುಸಲಾಯಿಸಿ ಭತ್ತದ ಮೆದೆಗೆ ಬೆಂಕಿ ಇಡಲು ಹೇಳುತ್ತಾರೆ ತೂಗುದೀಪ ಶ್ರೀನಿವಾಸ್.. ಬೆಂಕಿ ಇಡುವಾಗ ಅದನ್ನು ನೋಡಿದ ಅಣ್ಣಾವ್ರು ಜೋರಾಗಿ ಕೂಗುತ್ತಾ ಒಬ್ಬೊಬ್ಬರನ್ನೇ ಬಡಿಯಲು ಶುರುಮಾಡುತ್ತಾರೆ.. ಒಬ್ಬನ ಕೈಯಿಂದ ಪಂಜನ್ನು ಕಸಿದುಕೊಳ್ಳಲು ಅವನ ಕೈಗಳಿಗೆ ಜೋರಾಗಿ ಒದೆಯುತ್ತಾರೆ.. ಆಕಾಶಕ್ಕೆ ಚಿಮ್ಮಿದ ಪಂಜಗಳನ್ನೂ ಎರಡು ಕೈಯಲ್ಲಿ ಹಿಡಿದು ಕೊಂಡು ಅಲ್ಲಿದ್ದವರ ಜೊತೆಯಲ್ಲಿ ಕಾದಾಡಲು ಶುರುಮಾಡುತ್ತಾರೆ. ಎರಡು ಪಂಜುಗಳನ್ನು ಹಿಡಿದು ನಿಂತ ಅಣ್ಣಾವ್ರ ನೋಟ.. ಬಿಡಿ ಆ ದೃಶ್ಯವನ್ನು ನೋಡಬೇಕು ನೀವು.

ಶಂಕರ್ ಗುರು 

ಈ ಚಿತ್ರದ ಬಗ್ಗೆ ಹೇಳಿದಷ್ಟು ಕಡಿಮೆಯೇ. ಮೂರು ಪಾತ್ರ.. ಅಂತಿಮ ದೃಶ್ಯಗಳಲ್ಲಿ ಮೂರು ಪಾತ್ರಗಳು ಹೊಡೆದಾಡುವ ರೀತಿ. ಒಬ್ಬೊಬ್ಬರದು ಒಂದು ವಿಭಿನ್ನ ಶೈಲಿ. ಶಂಕರ್ ಪಾತ್ರದಲ್ಲಿ ಗಂಭೀರ ಹೊಡೆದಾಟ ಇದ್ದರೆ.. ಗುರು ಪಾತ್ರ ಹಾಸ್ಯ ಲಾಸ್ಯ ಬೆರೆತ ಸಂಗಮ.. ಇನ್ನೂ ಹಿರಿಯ ಪಾತ್ರ ರಾಜಶೇಖರ್.. ಘನತೆ ಗಾಂಭೀರ್ಯ ಸಾರುವ ರೀತಿಯಲ್ಲಿ ಇದೆ. ಒಂದು ರೀತಿ ಮೂರು ಚಿತ್ರಗಳನ್ನು ಒಟ್ಟಿಗೆ ಮಲ್ಟಿಪ್ಲೆಕ್ಸ್ ಮಂದಿರಗಳಲ್ಲಿ ನೋಡಿದ ಹಾಗೆ.. ಕನ್ನಡ ಚಿತ್ರಗಳಲ್ಲಿಯೇ ಅಪರೂಪದ ಹೊಡೆದಾಟದ ದೃಶ್ಯಗಳು ಈ ಚಿತ್ರದ ಅಂತಿಮ ದೃಶ್ಯಗಳಲ್ಲಿದೆ.

ಜಗಮೆಚ್ಚಿದ ಮಗ 

ಅಣ್ಣಾವ್ರನ್ನು ಕಟ್ಟಿ ಹಾಕಿರುತ್ತಾರೆ.. ಮೈಗೆ ಅಂಟಿಕೊಂಡಂತಹ ಪ್ಯಾಂಟ್ ಬೂಟು ತೊಟ್ಟ ಅವರನ್ನು ಕಬ್ಬಿಣದ ಸರಪಳಿಗಳಿಂದ ಕೈಗಳನ್ನು ಕಟ್ಟಿರುತ್ತಾರೆ. ಅಣ್ಣಾವ್ರ ಕಟ್ಟು ಮಸ್ತಾದ ಶರೀರದ ಅಮೋಘ ಪ್ರದರ್ಶನ ಅದು. ಹೊಡೆಸಿಕೊಂಡು ಸೋತು ಸುಣ್ಣ ಆಗಿ ಕೈಗಳನ್ನು ಕಟ್ಟಿಸಿಕೊಂಡು ನಿಂತಿದ್ದ ಅಣ್ಣಾವ್ರಿಗೆ ಅವರ ತಾಯಿಯ ವಾಣಿ ಮೊಳಗುತ್ತದೆ "ಏಳು ಕಂದ.. ನಿನ್ನ ತೋಳಿನಲ್ಲಿ ಸಿಂಹಬಲವನ್ನು ತಂದುಕೋ.. ಸರಪಳಿಯನ್ನು ಮುರಿದು ಹೋಗು ಹೋಗು... ವೈರಿಯನ್ನು ಸದೆ ಬಡಿ ಎಂಬ ಅರ್ಥ ಬರುವ ಉತ್ತೇಜಿತ ಮಾತುಗಳು ಮೂಡುತ್ತವೆ.. ಆಗ .. ಅಣ್ಣಾವ್ರು ನಗುತ್ತ, ಗಹಗಹಿಸಿ ನಗುತ್ತ, ಅಟ್ಟಹಾಸ ಮಾಡುತ್ತಾ.. ಕೈಗಳನ್ನು ಸರಪಳಿಗಳಿಂದ ಬಿಡಿಸಿಕೊಳ್ಳಲು ಕೂಗಾಡುವ ದೃಶ್ಯ.. ಇಂದಿಗೂ ಆ ದೃಶ್ಯ ನೋಡಿದಾಗ ರೋಮಾಂಚನವಾಗುತ್ತದೆ.

ಮಯೂರ 

ವೇದ ಕಲಿಯುತ್ತಿದ್ದ ಬ್ರಾಹ್ಮಣ... ಗರಡಿ ಮನೆಯ ಜಟ್ಟಿಯು ತನ್ನ ಗ್ರಾಮಸ್ಥರನ್ನು ಹೀಯಾಳಿಸುವಂಥಹ ಮಾತುಗಳನ್ನು ಹೇಳಿದಾಗ... ತನ್ನ ಇರುವನ್ನೇ ಮರೆತು .. ಜಟ್ಟಿಯ ಜೊತೆಯಲ್ಲಿ ಹೋರಾಡಲು ಸಿದ್ಧರಾಗುತ್ತಾರೆ.. ಆದರೆ ಆ ಕಾಳಗಕ್ಕೆ ಬೇಕಾದ ಗರಡಿ ಮನೆಯಲ್ಲಿ ಧರಿಸುವ ವಸ್ತ್ರಗಳು ಅವರ ಬಳಿ ಇರುವುದಿಲ್ಲ.. ನಾನು ಹೀಗೆ ಕಾಳಗ ಮಾಡುತ್ತೇನೆ ಎಂದಾಗ ಅಲ್ಲಿದ್ದವರೆಲ್ಲ ನಗುತ್ತಾರೆ.. ಅದನ್ನು ಲೆಕ್ಕಿಸದೆ ಜನಿವಾರವನ್ನು ಸೊಂಟಕ್ಕೆ ಕಟ್ಟಿಕೊಂಡು ಸಿದ್ಧವಾಗುತ್ತಾರೆ.. ಆದರೆ ಅಲ್ಲಿದ್ದವರು ಅವರಿಗೆ ಗರಡಿಮನೆಯ ಉಡುಪನ್ನು ಕೊಡುತ್ತಾರೆ.. ಕಾಳಗಕ್ಕೆ ಸಿದ್ಧವಾಗಬೇಕಾದರೆ.. ಅವರ ಮುಖದಲ್ಲಿನ ಮುಗ್ಧತೆ.. ಜನರು ಎಷ್ಟೇ ನಕ್ಕರು, ಹೀಯಾಳಿಸಿದರು  ಲೆಕ್ಕಿಸದೆ ಹೋರಾಡುವ ದೃಶ್ಯ.. ಸೂಪರ್ ಸೂಪರ್ ಎನ್ನಲೇಬೇಕು.

ಸಿಪಾಯಿ ರಾಮು 

ಸಿಪಾಯಿಯಾಗಿದ್ದ ರಾಮು ಪಾತ್ರ.. ಕಾರಣಾಂತರಗಳಿಂದ ಡಕಾಯಿತರ ಗುಂಪಿಗೆ ಬಂದು ಸೇರುತ್ತಾರೆ.. ಅವರ ಶಕ್ತಿ ಪರೀಕ್ಷೆ ಮಾಡಲು.. ಡಕಾಯಿತರ ಪರಂಪರೆಯಂತೆ..ಬಂದೂಕಿನ ಗುರಿ , ಕತ್ತಿ ಕಾಳಗ, ಮತ್ತು ಪರಸ್ಪರ ಕೈಗಳನ್ನು ಕಟ್ಟಿಕೊಂಡು ಹೊಡೆದಾಡುವ ದೃಶ್ಯ.. ಅಣ್ಣಾವ್ರು ಪಾತ್ರಗಳಲ್ಲಿ ತೊಡಗಿಸಿಕೊಳ್ಳುವ ಪರಿಪೂರ್ಣತೆಗೆ ಒಂದು ಸಾಕ್ಷಿ

ಬಂಗಾರದ ಮನುಷ್ಯ 

ಅಣ್ಣಾವ್ರು ತಮ್ಮ ಜಮೀನನ್ನು ಬಿಟ್ಟು ಕೊಡಲು ಎಂ ಪಿ ಶಂಕರ್ ಬಳಿ ಕೇಳಿದಾಗ.. ಎಂಪಿ ಶಂಕರ್  "ಯಾರಪ್ಪನ ಜಮೀನು" ಎಂದು ಬಯ್ದು ಹೊಡೆದೆ ಬಿಡುತ್ತಾರೆ.. ಆಗ ಶುರುವಾಗುತ್ತದೆ ಕೆಸರು ಗದ್ದೆಯಲ್ಲಿ ಹೊಡೆದಾಟ.. ಮೈಗೆ ಅಂಟಿಕೊಳ್ಳುವ ಕೆಸರು.. ಯೋಚಿಸದೆ ಹೊಡೆದಾಡುವ ರೀತಿ.. ಅದಕ್ಕೆ ತಕ್ಕ ಅಭಿನಯ.. ಅಣ್ಣಾವ್ರೆ ಇದಕ್ಕೆ ಸರಿಯಾದ ಪಾತ್ರಧಾರಿ.

ಪ್ರೇಮದ ಕಾಣಿಕೆ 

ತನ್ನ ಪ್ರೇಯಸಿಯನ್ನು ಕೆಣಕುತ್ತ ಬರುವ ವಜ್ರಮುನಿ ಪಾತ್ರಧಾರಿ.. ಅಣ್ಣಾವ್ರನ್ನು ಹೀಯಾಳಿಸುತ್ತಾರೆ, ಬಯ್ಯುತ್ತಾರೆ.. ತನ್ನ ಪ್ರೇಯಸಿ ಬಿಡಿ ಇವರ ಸಹವಾಸ ನಮಗೇಕೆ ಎಂದಾಗ ಸರಿ ಎಂದು ಕೋಣೆಯ ತನಕ ಹೋಗಿ ತನ್ನ ಪ್ರೇಯಸಿಯನ್ನು ಕೋಣೆಯಲ್ಲಿ ಕೂಡಿ ಹಾಕಿ. ತಾವು ಹಾಕಿಕೊಂಡ ಜರ್ಕಿನ್ ತೆಗೆಯುವ ದೃಶ್ಯದಲ್ಲಿ ಅವರ ಮುಖಭಾವ.. ತನ್ನ ಪ್ರೇಯಸಿಯನ್ನು ಹೊಡೆದದ್ದು, ತಮಗೆ ಹೀಯಾಳಿಸಿದ್ದು, ಹೊಡೆದದ್ದು ಎಲ್ಲಾವುದಕ್ಕೆ ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ ಎನ್ನುವ ಅಭಿನಯ.. ಸೂಪರ್ ಸೂಪರ್..

ಅನುರಾಗ ಅರಳಿತು 

"ಆ ಬಡ್ಡಿ ಮಗ ಯಾರ ಮಾತನ್ನು ಕೇಳುವುದಿಲ್ಲ" ಎಂದ ಫ್ಯಾಕ್ಟರಿ ಮ್ಯಾನೇಜರ್ ಮಾತಿಗೆ.. ಬಡ್ಡಿ ಮಗನ ಅರ್ಥ ಇದೆ ಎಂದು ಕಪಾಳಕ್ಕೆ ಬಿಗಿಯುತ್ತಾರೆ ಅಣ್ಣಾವ್ರು.. ಅದರಿಂದ ಕ್ರೋಧಗೊಂಡ ಮ್ಯಾನೇಜರ್ ಸಂಜೆ ಕೆಲವು ಬಾಡಿಗೆಗೆ ಗೂಂಡಗಳನ್ನು ಕರೆಸಿ  ಸೈಕಲ್ ನಲ್ಲಿ ಕಳಿಸುತ್ತಾರೆ.. ಒಂದು ವಿಭಿನ್ನ ಸಾಹಸ ಸಂಯೋಜನೆ ಈ ದೃಶ್ಯದಲ್ಲಿದೆ .. ಅಣ್ಣಾವ್ರು ಕೂಡ ಸೈಕಲ್ ಮೇಲೆ ಕೆಲವು ಸಾಹಸಗಳನ್ನು ಮಾಡಿದ್ದಾರೆ .. ಅಷ್ಟೊತ್ತಿಗೆ ಆಗಲೇ ಸುಮಾರು ಐವತ್ತು ವರ್ಷಗಳು ದಾಟಿದ್ದರೂ ಆ ಹುರಿಗಟ್ಟಿದ ದೇಹ, ಆ ಶಿಸ್ತು ಹೊಡೆದಾಟದಲ್ಲಿ ಎದ್ದು ಕಾಣುತ್ತದೆ.

ಕತ್ತಿ, ಕಠಾರಿ, ಭರ್ಜಿ, ಕೋಲು, ದೊಣ್ಣೆ, ಹಗ್ಗ, ಬಿಲ್ಲು ಬಾಣ ಇವುಗಳ ಬಗ್ಗೆ ನಾ ಮಾತಾಡುವುದೇ ಇಲ್ಲ ಕಾರಣ ಈ ಆಯುಧಗಳ ಜೊತೆಯಲ್ಲಿ ಹೋರಾಡಲು ಕಾದಾಡಲು ಭಾರತೀಯ ಮತ್ತು ಪ್ರಪಂಚದ ಎಲ್ಲಾ ಸಿನಿಮಾರಂಗದಲ್ಲಿ ಅಣ್ಣಾವ್ರು ಮಾತ್ರ ಅದಕ್ಕೆ ತಕ್ಕ ನೈಜತೆ ಕೊಡುತ್ತಿದ್ದುದ್ದು. ಹಾಗಾಗಿ ಮಾಮೂಲಿ ಹೊಡೆದಾಟ ಎನ್ನಬಹುದಾದ ದೃಶ್ಯಗಳನ್ನು ಅಪರೂಪದ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದುದ್ದು ಅಣ್ಣಾವ್ರ ಹೆಗ್ಗಳಿಕೆ.

ಆ ಕಟ್ಟು ಮಸ್ತಾದ ಶರೀರಕ್ಕೆ ಮತ್ತು ಅದರ ಆರೈಕೆಗಾಗಿ ಅವರು ಪ್ರತಿದಿನ ಪಡುತ್ತಿದ್ದ  ಪರಿಶ್ರಮಕ್ಕೆ ಈ ಲೇಖನ ಸಮರ್ಪಿತ. ಜೊತೆಯಲ್ಲಿಯೇ ಈ ಎಲ್ಲಾ ಸಾಹಸಗಳನ್ನು ಸಂಯೋಜಿಸುತ್ತಿದ್ದ ಆ ಸಾಹಸ ನಿರ್ದೇಶಕರಿಗೂ ಅಭಿನಂದನೆಗಳು.

ಅಣ್ಣಾವ್ರೆ ನಿಮಗೆ ಜನುಮದಿನದ ಕೊಡುಗೆಯಾಗಿ ಈ ಲೇಖನ.. ಇಷ್ಟವಾಯಿತೆ..?

ಕನಸಲ್ಲಿ ಬಂದು ಹೇಳಿ.. !!!