Saturday, July 23, 2016

ರಜನಿ ನಟನೆಯ ಹಸಿವು... ಕಬಾಲಿ.. ಡಾ (2016)

ಉಫ್ ಉಫ್ ಉಫ್

ಕಬಾಲಿ ಚಿತ್ರ ನೋಡಿದ ಮೇಲೆ ನನಗೆ ಅನ್ನಿಸಿದ್ದು..

ಇಡೀ ಚಿತ್ರರಂಗ ಎದುರು ನೋಡುತಿದ್ದ ಚಿತ್ರ ಇದು.. ತಲೈವಾ ಎನ್ನುತ್ತಲೇ ಹೆಸರಾದ.. ರಜನಿಕಾಂತ್ ನನ್ನ ಮನಸ್ಸಿನ ಕೋಟೆಯಲ್ಲಿ ಇನ್ನಷ್ಟು ಭದ್ರವಾಗಿ ಕೂತದ್ದು ಸುಳ್ಳಲ್ಲ..

****
ಈ ಚಿತ್ರ ಚಿತ್ರಮಂದಿರದಲ್ಲೇ ನೋಡಲೇಬೇಕು ಎಂದು ಭೀಷ್ಮ ಶಪಥ ಮಾಡಿದ್ದೆ.. ಸರಿ ಎರಡನೇ ದಿನವೇ ಟಿಕೆಟ್ ಸಿಕ್ಕಿತು.. ನನ್ನ ತಮ್ಮ ಅವನ ಮನೆಯ ಹತ್ತಿರ ಇದ್ದ ಚಿತ್ರಮಂದಿರದಲ್ಲಿ ಟಿಕೆಟ್ ತೆಗೆದು ಇಟ್ಟಿದ್ದ..

ನಾನು, ಸವಿತಾ, ಶೀತಲ್, ಅಮ್ಮ ಮತ್ತು ಅಕ್ಕ ಚಿತ್ರಮಂದಿರದ ಹತ್ತಿರ ಹೋದೆವು.. ಎಲ್ಲರನ್ನು ಕಳಿಸಿ ನಿಧಾನವಾಗಿ ಒಳಗೆ ಹೊರಟೆ. ಯಾರೋ ನನ್ನ ಕರೆದ ಹಾಗೆ ಭಾಸವಾಯಿತು.. ತಿರುಗಿ ನೋಡಿದೆ.. ಅರೆ ರಜನಿಕಾಂತ್ ತನ್ನ ಬಿಳಿ ಗಡ್ಡ ನೀವಿಕೊಳ್ಳುತ್ತಾ ನಿಂತಿದ್ದರು..
"ಸರ್ಜಿ ನಮಸ್ಕಾರ.. "

"ಶ್ರೀ .. ಈ ಚಿತ್ರ ನೋಡಲೇ ಬೇಕು ಎಂದು ನಿರ್ಧರಿಸಿದ್ದು ಖುಷಿಯಾಯಿತು.. ನನ್ನ ಹೆಸರು ನಿನ್ನ ಹೆಸರು ಉತ್ತರಾರ್ಧ ಒಂದೇ ತರಹ ಇದೆ.. ಆ ಸಲುಗೆಯಿಂದ ಒಂದು ಮಾತು ಹೇಳುತ್ತೇನೆ.. ನೀ ನಿನ್ನ ಮೆದುಳಿಂದ, ಮನಸಿಂದ, ಹೃದಯದಿಂದ ನನ್ನ ನೆನಪನ್ನು ಪೂರ್ಣ ಅಳಿಸಿಕೊಂಡು ಹೋಗು.. "

"ಆಯಿತು ಸರ್ ನೀವು ಹೇಳಿದ ಹಾಂಗೆ ಮಾಡ್ತೀನಿ"
****************

ದೀಪವೆಲ್ಲಾ ಆರಿ ಹೋಯಿತು.. ಚಿತ್ರಮಂದಿರ ಪೂರ್ಣ ಕತ್ತಲಾಯಿತು..

ಶುರುವಾಯಿತು..

ವಾವ್.. ಆ ಹೃದಯವೇ ಚೀರುವಂತಹ ಹಿನ್ನೆಲೆ ಸಂಗೀತ.. ಹೃದಯ ಡಬ ಡಬ ಹೊಡೆದುಕೊಳ್ಳಲು ಶುರು..
S U P E R
R A J A N I 
S T A R

ಈ ಹೆಸರು ತೆರೆಯ ಮೇಲೆ ಬಂದಾಗ ಆ ವಿದ್ಯುತ್ ಸಂಚಾರ.. ಅನುಭವಿಸಿಯೇ ತೀರಬೇಕು..
ರಜನಿ ತೆರೆಯ ಮೇಲೆ ಆವರಿಸಿಕೊಳ್ಳುತ್ತಾ ಹೋದರು.. ಪ್ರತಿ ನಿಮಿಷವೂ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿ ಈ ಚಿತ್ರ ನೋಡಿದೆ.
ಕಬಾಲಿ ಡಾ ಎನ್ನುವ ದೃಶ್ಯ ಬಂದಾಗ.. ಅಕ್ಷರಶಃ ಹೃದಯ ಬಾಯಿಗೆ ಬಂದಿತ್ತು.. ಈ ಚಿತ್ರವನ್ನು ಬೆಂಗಳೂರಿನ ನಟರಾಜ ಅಥವಾ ಊರ್ವಶಿ ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜವೇ ಬೇರೆ.. ಇರಲಿ ಸಾಧ್ಯ ಆದರೆ ನೋಡುವೆ ಮತ್ತೊಮ್ಮೆ ಆ ಚಿತ್ರಮಂದಿರಗಳಲ್ಲಿ. ಕಾರಣ.. ಕೈಕಟ್ಟಿಕೊಂಡು ನೋಡುವ ಪ್ರೇಕ್ಷಕರು ಅಲ್ಲಿ ಬರುವುದಿಲ್ಲ.. ಚಿತ್ರವನ್ನು ಚಿತ್ರವನ್ನಾಗಿ ನೋಡಲು ಬರುತ್ತಾರೆ.

ರಜನಿ ಗಡ್ಡದಾರಿಯಾಗಿ ಸೊಗಸಾಗಿ ಕಾಣುತ್ತಾರೆ.. ಪ್ರತಿ ದೃಶ್ಯವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿರುವ ರೀತಿ ಅಮೋಘ. ನಿರ್ದೇಶಕರ ನಟ ಅವರು ಆದರೂ ತಮ್ಮ ಕೆಲವು ಟ್ರೇಡ್ ಮಾರ್ಕ್ ಶೈಲಿಗಳನ್ನು ಪೂರ್ಣ ಬದಿಗೊತ್ತಿ ಅಭಿನಯಿಸಿದ್ದಾರೆ. ಇತ್ತೀಚಿನ ಅವರ ಅನೇಕ ಚಿತ್ರಗಳಲ್ಲಿ ಅಭಿನಯ ಅನ್ನುವುದಕ್ಕಿಂತ ಅವರು ವಿಜೃಂಭಿಸಿದ್ದು ಹೆಚ್ಚು.. ಆದರೆ ಈ ಚಿತ್ರದಲ್ಲಿ ತಮ್ಮ ಹೃದಯವನ್ನೇ ಇಟ್ಟು ಅಭಿನಯಿಸಿದ್ದಾರೆ..

ಆರಂಭಿಕ ದೃಶ್ಯದಲ್ಲಿ ಕಾಣುವ ಆ ಗತ್ತು, ಸ್ಟೈಲ್, ಮೆಲ್ಲಗೆ ಹುಸಿ ನಗೆ..ಯಪ್ಪಾ ನಿಜಕ್ಕೂ ಚಿತ್ರರಂಗದ ನಾಯಕರೇ ಅವರು.
ಆ ಧ್ವನಿ, ಕಲ ಕಲ ಎಂದು ನಗುವ ಆ ಸ್ಟೈಲ್ ಸರೋವರದಲ್ಲಿ ಏಳುವ ಮೆಲ್ಲನೆ ಅಲೆಯಂತೆ ಆವರಿಸಿಕೊಳ್ಳುತ್ತಾರೆ.

೧) ಶಿಸ್ತುಬದ್ಧವಾದ ಅವರ ಉಡುಪು
೨) ೭೫ ಪ್ರತಿಶತ ಕಪ್ಪು ಕನ್ನಡ ಧರಿಸಿಯೇ ಇದ್ದರೂ, ಅವರ ಮುಖಾಭಿನಯ ಅದ್ಭುತವಾಗಿ ಮೂಡಿ ಬಂದಿದೆ
೩) ನಿಧಾನಗತಿಯಲ್ಲಿ ನೆಡೆದುಬರುವ ಶೈಲಿ
೪) ಕಬಾಲಿ ಡಾ ಎನ್ನುವ ಸಂಭಾಷಣೆಯಲ್ಲಿನ ಅಭಿನಯ.. ಮತ್ತು ಆ ಸ್ಟೈಲ್.. ಮೈ ನವಿರೇಳಿಸುತ್ತದೆ
೫) ಕಬಾಲಿ ಥೀಮ್ ಮ್ಯೂಸಿಕ್ ನಲ್ಲಿ ಅವರ ಧ್ವನಿ.. ಮತ್ತು ಚಿತ್ರದ ಪ್ರತಿಹಂತದಲ್ಲಿಯೂ ಬರುವ ಆ ಹಿನ್ನೆಲೆ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್
೬) ಚಿತ್ರದ ಮಧ್ಯಂತರದಲ್ಲಿ ತಿರುವ ಸಿಗುವ ದೃಶ್ಯದಲ್ಲಿನ ಅವರ ಅಭಿನಯ.. ಮಾತಿಲ್ಲದೆ ಮುಖಭಾವ .. ವಾಹ್
೭) ತನ್ನ ಹೆಂಡತಿ ಬಗ್ಗೆ ವಿಷಯ ಹೇಳುವಾಗ. ..ದೃಶ್ಯದಲ್ಲಿನ ತೀವ್ರತೆ, ಉಗುರು ಕಡಿಯುವುದು, ಆತುರತೆ, ಕಾತುರತೆ.. ಕಣ್ಣಲ್ಲಿ ಹೊಳಪು .. ರಜನಿ ನಟ ಆಗಿ ಮನಸ್ಸಲ್ಲಿಯೇ ಕುಳಿತು ಬಿಡುತ್ತಾರೆ. .
೮)  ಮಗಳ್ಚಿ (magizhchi) ಎನ್ನುವ ಆ ಧ್ವನಿಯಲ್ಲಿನ ಏರಿಳಿತ, ಒಂದೇ ಪದ ಆದರೆ ಈ ಪದವನ್ನು ಚಿತ್ರ ಪೂರ್ತಿ ಅನೇಕ ದೃಶ್ಯದಲ್ಲಿ ಬಗೆ ಬಗೆಯಾಗಿ ಹೇಳುತ್ತಾರೆ
೯) ಗಡ್ಡದಾರಿಯಾಗಿ ತುಂಬಾ ಆಪ್ತರಾಗುತ್ತಾರೆ ಮನಸ್ಸಿಗೆ.
೧೦) ಒಟ್ಟಾರೆ.. ರಜನಿ ರಜನಿ ರಜನಿ ರಜನಿ ರಜನಿ ರಜನಿ.. ಪೂರ್ಣ ಅವರೇ ಅವರೇ.. ತಲೈವಾ


ರಾಧಿಕಾ ಆಪ್ಟೆ.. ಪುಟ್ಟ ಪುಟ್ಟ ಮಾತು.. ಚಿತ್ರದಲ್ಲಿ ಸಿಗುತ್ತಲೇ ಇರುತ್ತಾರೆ.. ಹೊಳೆಯುವ ಕಣ್ಣುಗಳು.. ರಜನಿಗೆ ಪ್ರತಿ ಹೆಗಲು ಕೊಟ್ಟಿದ್ದಾರೆ.. ಅವರ ಕಣ್ಣುಗಳ ಹೊಳಪು ರಜನಿ ಕಣ್ಣುಗಳ ತೀವ್ರತೆಗೆ ಜೊತೆಯಾಗಿ ನಿಂತಿದೆ.
ರಜನಿ ಹೇಳುತ್ತಾರೆ "ನೀ ಸತ್ತು ಹೋಗಿದ್ದೆ ಅಂತ ಅನ್ಕೊಂಡಿದ್ದೆ"
ಆಗ "ಹೌದು.. ಸತ್ತು ಹೋಗಿದ್ದೆ.. ಆದರೆ ನೀವ್ ಸಿಗುವವರೆಗೂ" ಪುಟ್ಟ ಮಾತು.. ಆದರೇ ನನಗರಿವಿಲ್ಲದೆ ಚಪ್ಪಾಳೆ ಹೊಡಿಸಿಬಿಟ್ಟಿತು.

ಧನ್ಸಿಕ.. ಮುದ್ದು ಮುದ್ದಾಗಿ ಕಾಣುತ್ತಾರೆ.. ಆ ಮುದ್ದು ಮೊಗದಲ್ಲಿಯೂ ಕ್ರೌರ್ಯ ಸೂಸೂವ ಕಣ್ಣುಗಳು.. ಹೊಡೆದಾಟದ ದೃಶ್ಯದಲ್ಲಿನ ರಭಸ ಈ ಮುದ್ದು ಮೊಗದ ನಟಿ.. ಇಷ್ಟು ಕ್ರೌರ್ಯ ಸೂಸುತ್ತಾರೆಯೇ ಅನ್ನಿಸುತ್ತದೆ. ಈ ನಟಿಯ ಸಂಪತ್ತು.. ಹೊಳೆಯುವ ಕಣ್ಣುಗಳು..ರಜನಿ ಮತ್ತು ಈಕೆಯ ನಡುವಿನ ದೃಶ್ಯಗಳನ್ನು ಕಟ್ಟಿ ಕೊಟ್ಟಿರುವ ರೀತಿ ಸೂಪರ್ ಸೂಪರ್.

ಉಳಿದ ಸಹಕಲಾವಿದರು ನಿಜಕ್ಕೂ ಭಾಗ್ಯವಂತರು..ಇಂತಹ ನಟನ ಜೊತೆಯಲ್ಲಿನ ಅಭಿನಯ, ಅವರ ಜೊತೆಯಲ್ಲಿನ ಮಾತುಗಳು, ಅವರ ಜೊತೆ ಕಳೆದ ಕ್ಷಣಗಳು.. ಬೆಲೆಕಟ್ಟಲಾಗದ್ದು.

ಕನ್ನಡ ಹುಡುಗರು ರಜನಿಕಾಂತ್ ಜೊತೆಯಲ್ಲಿ ಕಿಶೋರ್ ಅಬ್ಬರಿಸುತ್ತಾರೆ ಈ ಚಿತ್ರದಲ್ಲಿ.

ಚಿತ್ರದ ಛಾಯಾಗ್ರಹಣ ಅದ್ಭುತವಾಗಿದೆ.. ಎಲ್ಲೆಲ್ಲಿ ಕ್ಯಾಮೇರಾ ಇಟ್ಟಿದ್ದಾರೆ ಸಂಶಯ ಬರುತ್ತದೆ.. ಮೇಲಿನಿಂದ ತೋರುವ ಪಕ್ಷಿನೋಟದ ದೃಶ್ಯಗಳು, ಮಲೇಷಿಯಾದ ಗಗನಚುಂಬಿ ಕಟ್ಟಡಗಳು ಎಲ್ಲವೂ ಸೊಗಸಾಗಿ ಮೂಡಿ ಬಂದಿದೆ. ಸ್ಲೋ ಮೋಶನ್ ದೃಶ್ಯಗಳು ಈ ಚಿತ್ರದ ಹೈಲೈಟ್ ಅದರಲ್ಲೂ ರಜನಿ ಯನ್ನು ತೋರಿಸುವಾಗ ದೃಶ್ಯಗಳು.

ಸಂಗೀತ.. ಇಡೀ ಚಿತ್ರವನ್ನು ರಥದ ಕುದುರೆಯಂತೆ ಎಳೆದೊಯ್ದಿರುವುದು ಹಾಡುಗಳ ಸಂಗೀತ ಮತ್ತು ಹಿನ್ನೆಲೆ ಸಂಗೀತ. ನೇರ್ರುಪ್ಪು ಡಾ ಹಾಡು ಮೈ ಜುಮ್ ಎನ್ನಿಸುವಂತೆ ಇಡೀ ಚಿತ್ರದಲ್ಲಿ ಬರುತ್ತಲೇ ಇರುತ್ತದೆ. ಮತ್ತು ಕಬಾಲಿ ಥೀಮ್ ಮ್ಯೂಸಿಕ್ ಮನಸ್ಸೆಳೆಯುತ್ತದೆ.

ಸಂಕಲನ ಕೂಡ ಹಿತಮಿತವಾಗಿದೆ. ದೃಶ್ಯ ಜೋಡಣೆ ಇಷ್ಟವಾಗುತ್ತದೆ.

ರಜನಿ ಅಂತ ಸೂಪರ್ ಸ್ಟಾರ್ ನನ್ನ ಇಂತಹ ಅದ್ಭುತ ಕತೆಯಲ್ಲಿ ನುಗ್ಗಿಸಿರುವುದು ಮತ್ತು ಅವರನ್ನು ಸರಿಯಾಗಿ ಬಳಕೆ ಮಾಡಿಕೊಂಡಿರುವುದು ಚಿತ್ರದ ನಿರ್ದೇಶಕ ಪಾ ರಂಜಿತ್ ಗೆ ಸೇರುತ್ತದೆ. ಈ ಚಿತ್ರದ ಯಶಸ್ಸಿನ ಸಿಂಹಪಾಲು ರಜನಿ ಜೊತೆಯಲ್ಲಿ ಅವರಿಗೂ ಸೇರುತ್ತದೆ.

ರಜನಿ ಒಂದು ಸಂದರ್ಶನದಲ್ಲಿ ಹೇಳಿದಂತೆ ಇದು ರಜನಿ ಚಿತ್ರವಲ್ಲ.. ರಂಜಿತ್ ಚಿತ್ರ..

ನಿಜಕ್ಕೂ ಹೌದು.. ರಜನಿಕಾಂತ್ ಅದ್ಭುತ ನಟನಾಗಿ ಮತ್ತೆ ತೆರೆಗೆ ಅಪ್ಪಳಿಸಿರುವ ಚಿತ್ರ ಇದು..

*********
ರಜನಿ(ಶ್ರೀ)ಕಾಂತ್ ಬಗ್ಗೆ ಕೆಲವು ವಿಚಾರಗಳು 
೧) ರಜನಿ ಎಂದಾಗ ವಿಚಿತ್ರವಾದ ಸ್ಟೈಲ್, ಸಿಗರೇಟ್ ಬಾಯಿಗೆ ಎಸೆದುಕೊಳ್ಳುವುದು, ಕನ್ನಡಕ ವಿಚಿತ್ರವಾಗಿ ಹಾಕಿಕೊಳ್ಳುವುದು, ಹೊಡೆದಾಟ, ಕೇಶ ವಿನ್ಯಾಸ.. ಕೋಟನ್ನು ಆಚೆ ಈಚೆ ಎಳೆದುಕೊಳ್ಳುವುದು, ನಾಣ್ಯವನ್ನು ವಿಚಿತ್ರವಾಗಿ ಎಸೆಯುವುದು ಹೀಗೆ.. ಒಬ್ಬ ಯಾವುದನ್ನು ಊಹಿಸಿಕೊಳ್ಳುವುದಿಲ್ಲವೋ ಆ ಸ್ಟೈಲ್ ರಜನಿ ಮಾಡುತ್ತಿದ್ದರು.. ಅದೆಲ್ಲಾ ನನಗೆ ತಮಾಷೆಯಾಗಿ ಕಾಣುತ್ತಿತ್ತು.. ಯಾಕೋ ರಜನಿ ಚಿತ್ರ ಅಂದರೆ.. ಮನೆಯಲ್ಲಿ ಟಿವಿ ಯಲ್ಲಿ ಬಂದರೆ.. ಹೊರಗೆ ಓಡುತ್ತಿದೆ..

ನನ್ನ ಅದ್ಭುತ ಗೆಳೆಯ ವಿಕ್ರಮಾದಿತ್ಯ ಅರಸ್ ಒಮ್ಮೆ ರಜನಿ ಬಗ್ಗೆ ಈ-ಮೈಲ್ ನಲ್ಲಿ ರಸಪ್ರಶ್ನೆ ಮಾಡಿದ್ದರು.. ಐದು ಚಿತ್ರಗಳನ್ನು ಕೊಟ್ಟ ಅದು ಯಾವ ರಜನಿ ಚಿತ್ರದ ಹೆಸರು ಹೇಳಬೇಕಿತ್ತು.. ನಾನು ಯಾವುದೋ ಅಸಾಧ್ಯ ನೆನಪಿನ ಶಕ್ತಿಯಲ್ಲಿ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ.. ಆದರೆ ಪಾಸಾಗಿರಲಿಲ್ಲ ಆ ರಸಪ್ರಶ್ನೆಯಲ್ಲಿ..

ಆದರೆ ವಿಕ್ರಂ ಶ್ರೀಕಾಂತ್ ನಿಮಗೋಸ್ಕರ.. ಇನ್ನೊಂದು ಅವಕಾಶ ಕೊಡುತ್ತೇನೆ.. ಮತ್ತೆ ಸರಿ ಮಾಡಿ ಅಂದರು.. ಆದರೂ ನಾ ಎಡವಿದ್ದೇ.. ಆದರೆ ಅವರ ಸ್ನೇಹದ ಸಂಕೋಲೆಯಲ್ಲಿ ನನ್ನನ್ನು ಬಂಧಿಸಿ.. ಪಡೆಯಪ್ಪ ಚಿತ್ರವನ್ನು ಕೊಟ್ಟರು... ಈ ಚಿತ್ರವನ್ನು ನೋಡಿ ಎಂದು.. ನಾ ಅವಾಗಲೂ ಹಿಂದೆ ಮುಂದೆ ನೋಡಿದ್ದೇ.. ಕಾರಣ ಯಾಕೋ ಮನಸ್ಸಿಗೆ ರಜನಿ ನುಗ್ಗಿರಲಿಲ್ಲ..

ಅಂದು ಏನಾಗಿತ್ತೋ ಏನೋ.. ನೋಡಿಯೇ ಬಿಡುವ.. ಎಂದು ನೋಡಿದೆ.. ೨೦೧೦ ರ ಡಿಸೆಂಬರ್ ನಲ್ಲಿ ಅದಾದ ಮೇಲೆ ಈ ಆರು ವರ್ಷಗಳಲ್ಲಿ ೧೦೦ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ.. ಮತ್ತು ರಜನಿ ಅಭಿಮಾನಿಯಾಗಿದ್ದೀನಿ.

೨) ನನ್ನ ಚಾರಣದ ಗೆಳೆಯ ಯಶದೀಪ್ ಒಮ್ಮೆ ಕೇಳಿದ್ದ.. ಶ್ರೀಕಾಂತ್.. ನಿನಗೂ ರಜನೀಕಾಂತ್ ಗೂ ಏನಾದರೂ ಸಂಬಂಧ ಇದೆಯಾ..
ನಾ ಹೇಳಿದ್ದೆ.. ರಜನಿಕಾಂತ್ ಹೆಸರಿನಲ್ಲಿ ರಜನಿ ತೆಗೆದು ನಾ ಅಲ್ಲಿಗೆ ನುಗ್ಗಿದ್ದೇನೆ.. ಅಂದಿನಿಂದ ಅವನು ನನ್ನನು ರಜನಿಕಾಂತ್ ಅಂತಾನೆ ಕರೀತಿದ್ದ..  ಅಲೆಮಾರಿಗಳು ನನ್ನ ಚಾರಣದ ಗುಂಪು ಅದರಲ್ಲಿ ಅವನು ಯಾವಾಗಲೂ ಹೇಳುತ್ತಿದ್ದದು.. ನಮ್ಮ ಶ್ರೀ(ರಜನಿ)ಕಾಂತ್ ಇದ್ದ ಮೇಲೆ ನಮಗೇಕೆ ಭಯ.. ಹಹಹಹಃ

೩) ನನ್ನ ಅಕ್ಕನಿಗೆ ತಮಿಳ್ ಸಿನೆಮಾಗಳ ಹುಚ್ಚು.. ಅದರಲ್ಲೂ ರಜನಿ ಚಿತ್ರಗಳು..ನಮ್ಮ ಸಂಬಂಧಿ ಹಾಸನದ ಬಳಿಯ ಕಿತ್ತಾನೆ ಹಳ್ಳಿಯ ಸುರೇಶ್ ಶಿವಮೊಗ್ಗದಲ್ಲಿದ್ದಾಗ.. ಸಿಂಗಪೂರ್ ನಲ್ಲಿ ರಾಜಾಕುಳ್ಳ ಚಿತ್ರ ತೋರಿಸು ಎಂದರೆ.. ಅದು ಬೇಡ "ಪ್ರಿಯ" ಚಿತ್ರ ನೋಡು ಅದನ್ನು ಸಿಂಗಪೂರ್ ನಲ್ಲಿ ಚಿತ್ರಿಸಿದ್ದಾರೆ ಎಂದು ಅದಕ್ಕೆ ಕರೆದುಕೊಂಡು ಹೋಗಿದ್ದರು. ಅಂದಿನಿಂದ ಅಕ್ಕ ರಜನಿ ಅಭಿಮಾನಿ. ಈ ಚಿತ್ರ ನೋಡಿದ ಮೇಲೆ.. ರಜನಿ ಇನ್ನಷ್ಟು ಫೈಟ್, ಡಾನ್ಸ್, ಸ್ಟೈಲ್ ಮಾಡಬೇಕಿತ್ತು.... ಆಗ ನಾ ಹೇಳಿದೆ.. ಇದು ರಜನಿ ನಟನಾಗಿ ಅಭಿನಯಿಸಿರುವ ಚಿತ್ರ :-)

೪) ನನಗೆ ದೇವರೇ ಕೊಟ್ಟ ಅದ್ಭುತ ಜೀವ "DFR" ಅವರು ಹೇಳಿದ್ದು.. ಶ್ರೀ ರಜನಿ ಸರ್ ಚಿತ್ರ ನೋಡಬೇಕೆಂದರೆ ಅವರ ಅದ್ಭುತ  ಅಭಿಮಾನಿಯಾಗಿರಬೇಕು.. ನಿಜವಾದ ಮಾತು ಇದು.
************
ಚಿತ್ರ ನೋಡಿ ಹೊರಬಂದೆ.. ಹೊರಗೆ ತಣ್ಣನೆ ಮಳೆ ಬಂದು.. ವಾತಾವರಣ ತಂಪಾಗಿತ್ತು.. ಕಣ್ಣು ಅತ್ತಿತ್ತ ಆಡಿಸಿದೆ.. ಮತ್ತೆ ಗಡ್ಡ ನೀವಿಕೊಳ್ಳುತ್ತಾ ರಜನಿ ಅಲ್ಲಿಯೇ ಇದ್ದರು.. 

"ತಲೈವಾ.. ನಮಸ್ಕಾರ"  
"ಶ್ರೀ.. ಹೇಗಿದೆ ಚಿತ್ರ"
"ನಿಮ್ಮ ಒಳಗಿನ ನಟನೆಯ ಹಸಿವನ್ನು ತೀರಿಸಿಕೊಂಡ ಚಿತ್ರ ಇದು"
"ಮಗಳ್ಚಿ (ನಿನ್ನ ಭೇಟಿ ಮಾಡಿದ್ದು ಖುಷಿಯಾಯಿತು).. " ಎಂದು ಹೇಳಿದರು..
"ರಜನಿ ಸರ್.. ನಿಮ್ಮ ಪಡೆಯಪ್ಪ ಸ್ಟೈಲ್ ನಲ್ಲಿ .. ಶಾರ್ಪ್ ಸಲ್ಯೂಟ್ ನೋಡಬೇಕಿನಿಸಿದೆ"
"ಅಷ್ಟೇ ತಾನೇ ಶ್ರೀ ... ನೋಡು ಇಲ್ಲಿ"


ಈ ಬರಹ ಮನಸ್ಸಲ್ಲಿಯೇ ಹೆಣೆದುಕೊಂಡು ಅವರಿಗೆ ಹಾಗೆ ಹೇಳಿದೆ.. ಆಗ ಅವರ ಪ್ರತಿಕ್ರಿಯೆ.. ಕೆಳಗಿನಂತಿತ್ತು..


***********

ಕಿರ್ ಟೀವ್ ಪೀಮ್ ಪೀಮ್ ಸದ್ದಾಯಿತು..

ಒಯೆ ರಸ್ತೆಯಲ್ಲಿ ವಾಲ್ ಪೋಸ್ಟರ್ ನೋಡ್ತಾ ಕನಸು ಕಾಣ್ತಾ ಇದ್ದೀಯ.. ಆ ಕಡೆ ಹೋಗಪ್ಪ ಎಂದಾಗ.. ಹಾಗೆ ಕಣ್ಣು ಅರಳಿಸಿದೆ.. ಕಬಾಲಿ ವಾಲ್ ಪೋಸ್ಟರ್ ಒಳಗಿಂದ  "ಭಯಮ.. " ಎಂದು ರಜನಿ ಹೇಳಿದ ಹಾಗೆ ಭಾಸವಾಯಿತು..

ನಾನು ಒಮ್ಮೆ ಅವರ ರೀತಿಯಲ್ಲಿಯೇ ಕಣ್ಣು ಹೊಡೆದು.. "ಮಗಳ್ಚಿ" ಎಂದೇ...