Sunday, November 6, 2016

ಜೀವನ ಪಥವನ್ನು ಬದಲಿಸುವ - ಭಕ್ತ ವಿಜಯ (1956) (ಅಣ್ಣಾವ್ರ ಚಿತ್ರ ೦೩ / ೨೦೭)

ಒಂದು ಚಿಕ್ಕ ಸನ್ನಿವೇಶ.. ಒಂದು ಬೇಸರದ ಧ್ವನಿ, ಮನಕಲಕುವ ಘಟನೆ ಮಾನವನ ಜೀವನವನ್ನು ಹೇಗೆ ತಿರುಗಿಸಿ ನಿಲ್ಲಿಸುತ್ತದೆ. ಆ ಕ್ಷಣಕ್ಕೆ ಎಲ್ಲವೂ ಸರಿ ಎನ್ನಿಸಿದರೂ, ಹಸು ಹುಲ್ಲನ್ನು ಗಬ ಗಬ ತಿಂದು, ನಂತರ ಅದಕ್ಕೆ ಬಿಡುವಾಗಿದ್ದಾಗ ಮತ್ತೆ ಅಗಿದು, ಜಗಿದು ರಸ ಹೀರಿ, ಸ್ವಾಧಿಷ್ಟ ಹಾಲು ಕೊಡುವ ಹಾಗೆ, ಈ ಚಿತ್ರವೂ ಕೂಡ ಸರಳವಾಗಿ ಹೇಳಬೇಕಾದ ಸಂದೇಶವನ್ನುಮುಟ್ಟಿಸುತ್ತದೆ .

ಸತತ ಮೂರನೇ ಬಾರಿಗೆ ರಾಜ್ ಮತ್ತು ಪಂಡರಿ ಬಾಯಿ ತೆರೆಯಮೇಲೆ ಮಿಂಚಿದ ಚಿತ್ರವಿದು.

ನಾಯಕ ನಾಯಕಿಯಾಗಿ ಸತತ ಮೂರನೇ ಚಿತ್ರ 
 ಜಗನ್ನಾಥ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಿ ಕೆ ಜನಾರ್ಧನ್ ನಿರ್ಮಾಪಕರಾಗಿ ಎ  ಕೆ ಪಟ್ಟಾಭಿ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರರತ್ನವಿದು. 

ಸಂತ ತುಕಾರಾಂ ತಮ್ಮ ಶಿಷ್ಯವೃಂದದ ಜೊತೆಯಲ್ಲಿ ಭಕ್ತಿ ಸಂದೇಶವನ್ನು ಹಂಚುತ್ತಾ ಊರೂರು ಸುತ್ತುತ್ತಾ ಸಂತೋಬಾ ಅವರ ಊರಿಗೆ ಬರುತ್ತಿರುತ್ತಾರೆ. ಆಗ ಕುದುರೆಮೇಲೆ ಬರುತ್ತಿದ್ದ ಸಂತೋಬಾ ಗುರುಗಳನ್ನು ನೋಡಿಯೂ, ಕೆಳಗೆ ಇಳಿಯದೆ, ತಮಗೆ ದಾರಿ ಬಿಡಲಿಲ್ಲ ಎನ್ನುವ ದರ್ಪ ತೋರುತ್ತಾರೆ. ಸಂತ ತುಕಾರಾಂ ಬಗ್ಗೆ ಕೇಳಿಯೂ ಕೂಡ ಗೌರವ ಸಲ್ಲಿಸದೆ ಅಧಿಕಾರ, ಹಣದ ದರ್ಪವನ್ನು ಮೆರೆದು ಹೋಗುತ್ತಾರೆ. 
ರಾಜ್ ಅವರ ಆರಂಭಿಕ ದೃಶ್ಯ
ಇಲ್ಲಿ ರಾಜ್ ಅವರ ಆರಂಭಿಕ ದೃಶ್ಯ ಚುಟುಕಾಗಿದೆ, ಮಾತಿಲ್ಲ ಆದರೆ, ಕಣ್ಣುಗಳು, ಆಂಗೀಕ ಅಭಿನಯ ಸೊಗಸು. 
ಅಭಿನಯದ ಒಂದು ಝಲಕ್ 
ಈ ಚಿತ್ರದಲ್ಲಿ ಬರೋಬ್ಬರಿ ಹನ್ನೆರಡು ಹಾಡುಗಳಿವೆ (ಚುಟುಕು ಹಾಡುಗಳು ಸೇರಿ). ಪಿ ಲೀಲಾ, ಮೈನಾವತಿ, ಎ ಎಂ ರಾಜಾ, ಎಂ ಪ್ರಭಾಕರ್, ಸಿ ಏನ್ ಸರೋಜಿನಿ, ಬಾಗೇಪಲ್ಲಿ ಸುಬ್ರಮಣ್ಯ ಅವರು ಪಿ ಶ್ಯಾಮ್ ಮತ್ತು ಆತ್ಮನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. 

ಆನಂದ್ ಅವರು ಕಥೆ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ.  ಕೆಲವು ಸನ್ನಿವೇಶಗಳನ್ನು ಸೆರೆಹಿಡಿದ ರೀತಿ ಅಭೂತವಾಗಿದೆ. ಆರ್ ಸಂಪತ್ ಅವರ ಛಾಯಾಗ್ರಹಣ ನಿರ್ದೇಶನದಲ್ಲಿ ಕೆ ಜಾನಕಿರಾಮ್ ಅವರ ನೆರಳು ಬೆಳಕಿನ ಕೈಚಳಕ ಸುಂದರವಾಗಿದೆ. 

ಈ ಚಿತ್ರದಲ್ಲಿ ಮುಖ್ಯ ಕಥೆಯ ಜೊತೆ ಜೊತೆಯಲ್ಲಿ ಹಾಸ್ಯಕ್ಕೂ ಅವಕಾಶ ಕೊಟ್ಟು, ಆ ಪಾತ್ರಗಳು ಕೂಡ ಮುಖ್ಯ ಕಥೆಗೆ ಸಾಥ್ ಕೊಡುತ್ತಾ ಸಾಗುವುದು ವಿಶೇಷ.  
ಆಸೆಬುರುಕ ಅವಕಾಶವಾದಿ ದಂಪತಿಗಳು ಎತ್ತುಗಳು ಇಲ್ಲದ ಗಾಡಿಯನ್ನು ತರುವುದು 
 ಕೆಲವೇ ಕೆಲವೇ ಮುಖ್ಯ ಪಾತ್ರಗಳು ರಾಜ್ ಅವರು ಸಂತೋಬಾನ ಪಾತ್ರದಲ್ಲಿ ಮಿಂಚಿದ್ದಾರೆ, ಸ್ಪುಟವಾದ ಕನ್ನಡ, ಸನ್ನಿವೇಶಕ್ಕೆ ತಕ್ಕ ಹಾಗೆ ಕಣ್ಣುಗಳಲ್ಲಿ ಅಭಿನಯ, ಮೊದಲು ದರ್ಪ ತುಂಬಿದ ಪಾತ್ರ, ನಂತರ ಮನಸ್ಸು ಮಾಜಿ ಭಕ್ತ ಪಥಕ್ಕೆ ತಿರುಗಿದಾಗ, ಸಂತರ ಮುಖಭಾವ ಅಚ್ಚುಕಟ್ಟಾಗಿದೆ.

ಪಂಡರಿ ಬಾಯಿ ಹೇಮಾಳ ಪಾತ್ರದಲ್ಲಿ ಅವರ ಟ್ರೇಡ್ ಮಾರ್ಕ್ ಅಭಿನಯ, ಪತಿಗೆ ನೆರಳಾಗಿ ನಿಲ್ಲುವ ಪಾತ್ರದಲ್ಲಿ ಸಲೀಸಾಗಿ ಅಭಿನಯ ನೀಡಿದ್ದಾರೆ. 

ಕನ್ನಡ ಚಿತ್ರರಂಗದ ಘಟವಾಣಿ ಅತ್ತೆ ರಮಾದೇವಿ ಈ ಚಿತ್ರದಲ್ಲಿ ಸಂತೋಬಾನ ಅಮ್ಮನಾಗಿ, ಹೇಮಾಳ ಅತ್ತೆಯಾಗಿ, ಮನೋಜ್ಞ ಅಭಿನಯ ನೀಡಿದ್ದಾರೆ. ತನ್ನ ಮಗ ಇರುವ ಧನ ಕನಕಗಳನ್ನು ಆಸ್ತಿಯನ್ನು ದಾನ ಮಾಡಿ ಬರಿಗೈಯಲ್ಲಿ ನಿಂತಿರುವುದನ್ನು ಕಂಡು, ತಮ್ಮ ಜೀವನಕ್ಕೆ ತೊಂದರೆ ಇರುವುದನ್ನು ಒಪ್ಪಿಕೊಂಡು ಹಲುಬುವ ಪಾತ್ರ, ಜೊತೆಯಲ್ಲಿಯೇ ಮಗನನ್ನು ಖಂಡಿಸುತ್ತಲೇ, ತಾನು ಪಾಪಿ ಇಂತಹ ಸನ್ನಿವೇಶವನ್ನು ಎದುರಿಸುವ ಕರ್ಮಾ ತನಗೆ ಎಂದು ಹೇಳುವ ದೃಶ್ಯಗಳಲ್ಲಿ ಮನಕ್ಕೆ ನುಗ್ಗುತ್ತಾರೆ. 
ಕರುನಾಡಿನ ಶ್ರೇಷ್ಠ ನಟಿಮಣಿಗಳು - ಆದವಾನಿ ಲಕ್ಷ್ಮೀದೇವಿ, ರಮಾದೇವಿ, ಪಂಡರಿಬಾಯಿ 

ಕನ್ನಡ ಚಿತ್ರರಂಗ ಕಂಡ ಇನ್ನೊಬ್ಬ ಶ್ರೇಷ್ಠ ತಾಯಿ ಪಾತ್ರದ ನಟಿ ಆದವಾನಿ ಲಕ್ಷ್ಮೀದೇವಿ ಸಂತೋಬಾನ ತಂಗಿಯಾಗಿ ಚಿಕ್ಕ ಪಾತ್ರದಲ್ಲಿ ಅಭಿನಯ ನೀಡಿದ್ದಾರೆ. ಅವರ ಪತಿರಾಯನಾಗಿ ಗಣಪತಿ ಭಟ್ ಅವರ ಅಭಿನಯ ಕಥೆಗೆ ಅವಶ್ಯಕವಾದಷ್ಟು ಇದೆ. 

ಹೇಮಾಳ ತಂದೆಯ ಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಒಂದೆರಡು ಸನ್ನಿವೇಶಗಳಲ್ಲಿ ಬಂದರೂ, ನೆನಪಲ್ಲಿ ಉಳಿಯುತ್ತಾರೆ. 

ಡಿಕ್ಕಿ ಮಾಧವರಾವ್ ಮತ್ತು ಪಂಡರಿಬಾಯಿ - ಅಪ್ಪ ಮಗಳಾಗಿ 
ಈ ಚಿತ್ರ ರಾಜ್ ಮತ್ತು ಪಂಡರಿಬಾಯಿ ಅವರಿಗೆ ಎಷ್ಟು ಸಲ್ಲುತ್ತದೆಯೋ ಅಷ್ಟೇ ಭಾರ ಹೊತ್ತು ನಿಂತಿರುವುದು ಮೈನಾವತಿ ಮತ್ತು ಹನುಮಂತಾಚಾರ್ ಹಾಸ್ಯ ಪಾತ್ರಗಳು.  ಕಥೆಯ ಜೊತೆಯಲ್ಲಿಯೇ ಸಾಗುವ ಆಸೆ ಬುರುಕ, ಅವಕಾಶವಾದಿ ಕಿಲಾಡಿ ಪತಿ ಪತ್ನಿಯರ ಪಾತ್ರ ನಗಿಸುತ್ತದೆ.

ಮೈನಾವತಿ ಮತ್ತು ಹನುಮಂತಾಚಾರ್ - ಹಾಸ್ಯ ರಸದಲ್ಲಿ 
ಇಡೀ ಚಿತ್ರದ ಹೂರಣ ಕೆಲವು ಸಾಲಿನಲ್ಲಿ ನಿಂತಿದೆ. ಹಣ, ಅಧಿಕಾರ ಮತ್ತು ಅಂತಸ್ತಿನ ದರ್ಪದಲ್ಲಿ ಊರಿನ ಸಾಹುಕಾರ ಸಂತೋಬಾ, ದೇಣಿಗೆ ವಸೂಲಿ ಮಾಡಲು ಹಳ್ಳಿಯ ಹೊನ್ನನ ಮನೆಗೆ ಬರುತ್ತಾನೆ, ಮಳೆ ಬೆಳೆ ಇಲ್ಲದೆ, ದೇಣಿಗೆ ಕೊಡಲು ಸಾಧ್ಯವಿಲ್ಲ, ಬೆಳೆ ಬಂದ ತಕ್ಷಣ ಕೊಡುವುದಾಗಿ ಪರಿಪರಿಯಾಗಿ ಬೇಡಿಕೊಂಡರೂ,  ಅವರ ಮಾತನ್ನು ಕೇಳದೆ, ಮನೆಯಲ್ಲಿನ ದವಸ ಧಾನ್ಯವನ್ನು ಹೊತ್ತೊಯ್ಯಲು ತನ್ನ ಆಳುಗಳಿಗೆ ಅಪ್ಪಣೆ ಮಾಡುತ್ತಾನೆ ಸಂತೋಬಾ. ಈ ದೃಶ್ಯದಲ್ಲಿ ಮಕ್ಕಳು ತಿನ್ನುತ್ತಿದ್ದ ಅನ್ನದ ಮಡಿಕೆ ಅಚಾನಕ್ ಬಿದ್ದು, ತಿನ್ನುತ್ತಿದ್ದ ಅನ್ನವೆಲ್ಲ ಮಣ್ಣುಪಾಲಾಗುತ್ತದೆ. ಇದರಿಂದ ಕುಪಿತಗೊಂಡ ಹೊನ್ನನ ಪತ್ನಿ ಹೊನ್ನಿ, ಕಟುವಾಗಿ ಟೀಕಿಸುತ್ತಾ, "ನಿಮ್ಮ ಆಸ್ತಿಯೆಲ್ಲ ಮಣ್ಣಾಗಲಿ" ಎಂದು ಶಪಿಸುತ್ತಾಳೆ. 

ರಾಜ್ ಅವರ ಅಮೋಘ ಅಭಿನಯ - ಅಹಂ ಪಾತ್ರದಲ್ಲಿ 
ನಂತರದ ದೃಶ್ಯದಲ್ಲಿ, ಸಂತೋಬಾ ಅನ್ನ ಕಲೆಸುತ್ತಾ ಕೂತಾಗ, ಹೊನ್ನಿ ಹೇಳಿದ ಮಾತೆ ಮಾರ್ದನಿಯಾಗುತ್ತದೆ, ನೊಂದುಕೊಂಡ ಸಂತೋಬಾ ಊಟ ಮಾಡದೆ ತನ್ನ ಪತ್ನಿ ಹೇಮಾಳ ಬಳಿ ತನ್ನ ದುಗುಡವನ್ನು ಹೇಳಿಕೊಳ್ಳುತ್ತಾನೆ, ಹೆಂಡತಿ ಸಮಾಧಾನ ಮಾಡಿದರೂ ಸಂತೋಬಾನ ತಲೆ ಮೊಸರು ಗಡಿಗೆಯಾಗಿರುತ್ತದೆ. 

ತುಕಾರಾಂ ಅವರನ್ನು ಮನೆಗೆ ಕರೆತರುವೆ ಎಂದು ಹಠ ಹೊತ್ತ ಸಂತೋಬಾ 
ಸಂತ ತುಕಾರಾಂ ಅವರ ಕಥೆ ಕೇಳಲು ತನ್ನ ತಾಯಿ ಮತ್ತು ಪತ್ನಿ ಹೊರಟಾಗ, ಅವರನ್ನು ತಡೆದು, ಅವರನ್ನೇ ಇಲ್ಲಿ ಕರೆಸುತ್ತೇನೆ ಎನ್ನುತ್ತಾನೆ, ಆದರೆ ಅಸ್ತಿ ಅಂತಸ್ತು ಸಂಪತ್ತು ಇವುಗಳನ್ನು ತೃಣ ಸಮಾನ ಎನ್ನುವ ಸಂತರು ಇವನ ಆಜ್ಞೆಗೆ ಒಪ್ಪುವುದಿಲ್ಲ. ಸ್ವತಃ ಸಂತೋಬಾನೇ ಬಂದು ಕರೆದರೂ ಒಲ್ಲೆ ಎನ್ನುತ್ತಾರೆ, ಚಿನ್ನದ ಸರದ ಆಮೀಷ ತೋರಿದರೂ ಸಂತ ತುಕಾರಾಂ ಅವರು, "ನೀನು ಹೊರಗಿನಿಂದ ಧನಿಕ, ಆದರೆ ಒಳಗೆ ಕಡು ಬಡವ, ನಮಗೆ ಹೊನ್ನು ಮಣ್ಣು ಎರಡು ಒಂದೇ" ಎಂದು ಬುದ್ದಿವಾದ ಹೇಳುತ್ತಾರೆ. 

ಸಂತ ತುಕಾರಾಮರು ಮನೆಗೆ ಬರುವುದಿಲ್ಲ ಎಂದು ತಿಳಿದಾಗ ನೊಂದುಕೊಳ್ಳುವ ಹೇಮಾ, ಇದಕ್ಕಿಂತ ಮೊದಲು, ನಿತ್ಯದ ಪೂಜೆಯ ಸಮಯದಲ್ಲಿ ನಾಗರಹಾವು ಕಾಣಿಸಿಕೊಳ್ಳುವುದು, ಹೊನ್ನಿಯ ಶಾಪ ಎಲ್ಲವೂ ಆಕೆಯ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ವೈದ್ಯರ ಔಷದಿ ಕೆಲಸ ಮಾಡೋಲ್ಲ, ಆಗ ತನ್ನ ತಪ್ಪನ್ನು ಅರಿತ ಸಂತೋಬಾ ಸಂತ ತುಕಾರಾಂ ಅವರಿಗೆ ಶರಣಾಗುತ್ತಾನೆ ಮತ್ತು ಮನೆಗೆ ಕರೆ ತರುತ್ತಾನೆ. 

ಸಂತರ ದರ್ಶನದಿಂದ ಗುಣಮುಖಳಾದ ಹೇಮಾಳನ್ನು ಕಂಡು ಬದಲಾವಣೆಯ ಹಾದಿಗೆ ಸಂತೋಬಾ ಬರುತ್ತಾನೆ. ತನ್ನ ತಾಯಿ ಮತ್ತು ಮಡದಿ ತನ್ನ ಮಾವನ ಮನೆಗೆ ಹೋದಮೇಲೆ, ಇದ್ದ ಬದ್ದ ಆಸ್ತಿಯನ್ನು ಊರಿನ ಜನತೆಗೆ ಹಂಚಿ, ತಾನು ಭಗವತ್ ಸತ್ಯ ದರ್ಶನಕ್ಕೆ ದುರ್ಗಮ ಸ್ಥಳಕ್ಕೆ ತೆರಳುತ್ತಾನೆ.  ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯೆ, ತನ್ನ ಆರಾಧ್ಯ ದೈವ ಪಾಂಡುರಂಗನ ಸಾಕ್ಷಾತ್ಕಾರ ಪಡೆದುಕೊಂಡು ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳುತ್ತಾನೆ. 

ಸಂತ ತುಕಾರಾಂ ಅವರಿಂದ ಆಶೀರ್ವಾದ ಪಡೆವ ಸಂತೋಬಾ
ಕಥೆ, ಭಾವುಕತೆ, ಹಾಸ್ಯ, ಸಂಗೀತ, ಚುಟುಕು ಸಂಭಾಷಣೆ, ಸಂದೇಶ ಎಲ್ಲವನ್ನು ಹೊತ್ತು ತಂದಿರುವ ಈ ಚಿತ್ರ ಮನಸ್ಸಿಗೆ ತಂಪನ್ನೆರೆಯುತ್ತದೆ. 

ಇದು ಚಿತ್ರದ ತಿರುಳು. ಬದುಕಲ್ಲಿ ಹಣವೇ ಎಲ್ಲವೂ ಅಲ್ಲ, ಹಣವಿಲ್ಲದೆ ಏನೂ ಇಲ್ಲ ಎಂಬುದು ನಿಜವಾದರೂ, ಹಣವಿಲ್ಲದೆ, ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಂಡು, ಹಿಡಿದ ನೀತಿಯುಕ್ತ ಮಾರ್ಗವನ್ನು ಅನುಸರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.  ಹಣವಿದ್ದಾಗ ಅಹಂಕಾರವನ್ನು ತೊಡೆದುಹಾಕಿ, ನಂತರ ಗುರಿಯ ಕಡೆಗೆ ಅಹಂ ಅನ್ನು ದೂರ ಸರಿಸಿ ನಡೆಯಬೇಕು, ತಪ್ಪುಗಳನ್ನು ಒಪ್ಪಿಕೊಂಡು ಅದನ್ನು ಸರಿದಾರಿಗೆ ತಂದು ನಿಲ್ಲಿಸಬೇಕು, ಎಂಥಹುದೇ ಆಮೀಷಗಳು, ಅಡತಡೆಗಳು ಬಂದರೂ ಕೂಡ ಮೆಟ್ಟಿ ನಿಂತು ಗುರಿ ಸಾಧನೆಯ ಕಡೆಗೆ ಮನಸ್ಸು ಒಗ್ಗಿಸಿಕೊಂಡರೆ, ದೈವದ ಸಾಕ್ಷಾತ್ಕಾರ ಖಂಡಿತ. 


ರಾಜ್ ಅವರ ಮೂರನೇ ಚಿತ್ರವು ರತ್ನವಾಗಿ ಕರುನಾಡ ತಾಯಿಯ ಕೊರಳಲ್ಲಿ ಇರುವ ಹಾರಕ್ಕೆ ಇನ್ನೊಂದು ಅನರ್ಘ್ಯ ಮಣಿಯಾಗಿ ಸೇರಿಕೊಂಡ ಸಮಯವಿದು. 

ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.. ರಾಜ್ ಜೊತೆಯಲ್ಲಿ!!!